‘ಸ್ಲೋಲಿ ಸ್ಲೋಲಿ’ ರಾಂಧವನ ಹೊಸ ‘ಥಾಲಿ’

ಭಾನುವಾರ, ಮೇ 26, 2019
30 °C

‘ಸ್ಲೋಲಿ ಸ್ಲೋಲಿ’ ರಾಂಧವನ ಹೊಸ ‘ಥಾಲಿ’

Published:
Updated:
Prajavani

ನೀವು ಪಂಜಾಬಿ ಪಾಪ್‌ ಗೀತೆಗಳ ಆರಾಧಕರಾಗಿದ್ದರೆ ಗುರು ರಾಂಧವ ಎಂಬ ಮಾಂತ್ರಿಕ ಹಾಡುಗಾರ ಗೊತ್ತಿರಲೇಬೇಕು. ಹಳ್ಳಿಯಿಂದ ವಿದೇಶದ ಯಾವುದೋ ಗಲ್ಲಿಯವರೆಗೂ ಪಂಜಾಬಿ ಹಾಡುಗಳ ಸರದಾರನಾಗಿ ರಾಂಧವ ಆವರಿಸಿಕೊಂಡಿರುವ ಪರಿ ಅಂತಹುದು. ಲಾಹೋರ್, ಪಟೋಲಾ, ಹೈ ರೇಟೆಡ್‌ ಗಬ್ರು, ಸ್ಯೂಟ್‌, ಬನ್‌ ಜಾ ರಾಣಿ, ಮೇಡ್‌ ಇನ್‌ ಇಂಡಿಯಾ, ಇಷಾರೆ ತೇರೆ, ಫ್ಯಾಷನ್‌, ಡೌನ್‌ಟೌನ್‌... ತಾನೇ ಬರೆದು, ಸಂಗೀತ ಸಂಯೋಜಿಸಿ ದೇಸಿ ಸೊಗಡಿಗೆ ಫ್ಯೂಷನ್‌ ಮಸಾಲಾ ಬೆರೆಸಿ ಹಾಡುವ ಗುರುವಿಗೆ ಗುರುವೇ ಸಾಟಿ.

ಕೆಲವು ದಿನಗಳಿಂದೀಚೆ ರಾಂಧವ ಮತ್ತೆ ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಅವರದೇ ಸುದ್ದಿ, ‘ಸ್ಲೋಲಿ ಸ್ಲೋಲಿ’ ಎಂಬ ಪದಗಳದ್ದೇ ಸುನಾಮಿ! ಇದಕ್ಕೆ ಕಾರಣ ಅವರ ಹೊಸ ವಿಡಿಯೊ ಸಾಂಗ್‌ ‘ಸ್ಲೋ ಸ್ಲೋಲಿ’. ಇದರಲ್ಲಿ ಪಂಜಾಬಿ ಸೊಗಡು ಹುಡುಕಬೇಕು. ಯಾಕೆಂದರೆ ಈ ವಿಡಿಯೊದಲ್ಲಿ ಇಂಡಿಪಾಪ್‌ ಶೈಲಿಯಲ್ಲಿ ಮೂಡಿಬಂದಿರುವ ಒಂದು ಪಾರ್ಟಿ ಸಾಂಗ್‌ ಇದೆ. ಪಾರ್ಟಿಗಳಿಗೆ ಸ್ವಾಗತಗೀತೆಯಾಗಲು ಅರ್ಹವಾಗಿದೆ.

ಅಮೆರಿಕನ್‌ ರ‍್ಯಾಪರ್‌ ಪಿಟ್‌ಬುಲ್‌ ಜೊತೆಗೂಡಿ ರಾಂಧವ ಹೊರತಂದಿರುವ ವಿಡಿಯೊ ಆಲ್ಬಂ ಇದು. ಅಂತರರಾಷ್ಟ್ರೀಯ ಖ್ಯಾತಿ ಸ್ವರಸಾಮ್ರಾಟರೊಂದಿಗೆ ಕೈಜೋಡಿಸಿರುವುದು ಇದೇ ಮೊದಲಲ್ಲ. ಆದರೆ ಪೂರ್ಣ ಪ್ರಮಾಣದ ಸಹಭಾಗಿತ್ವದಲ್ಲಿ ಹೊರಬಂದಿರುವ ಆಲ್ಬಂ ‘ಸ್ಲೋಲಿ ಸ್ಲೋಲಿ’.

ಯೂ ಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಯಾಗಿರುವ ಹಾಡುಗಳ ವಿಡಿಯೊಗಳ ಸರದಾರನೆಂಬ ಹೆಗ್ಗಳಿಕೆ ರಾಂಧವ ಅವರದ್ದಾದರೆ, ಪಿಟ್‌ಬುಲ್‌, ‘ಮಿಸ್ಟರ್‌ ವರ್ಲ್ಡ್‌ವೈಡ್‌’ ಎಂಬ ಖ್ಯಾತಿಯವರು! ಅರ್ಮಾಂಡೊ ಕ್ರಿಶ್ಚಿಯನ್ ಪೆರೆಜ್‌ ಎಂಬುದು ಪಿಟ್‌ಬುಲ್‌ ಅವರ ಪೂರ್ಣ ಹೆಸರು.  

ಕುಂತಲ್ಲೇ ಕುಣಿಸುವ ಮೋಡಿಗಾರ

ಪಂಜಾಬಿನ ಪಕ್ಕಾ ದೇಸಿ ಸೊಗಡಿನ ಹಾಡುಗಳನ್ನು ಭಲ್ಲೇ ಭಲ್ಲೇ ಡಾನ್ಸ್‌ ಮಾಡುತ್ತಾ ರಾಂಧವ ಹಾಡುತ್ತಿದ್ದರೆ ಕೇಳುಗರು ಕುಣಿದು ಕುಪ್ಪಳಿಸಬೇಕು. ತಮ್ಮೂರಿನ ಹಾಡುಗಳ ಬಗ್ಗೆ ಈ ಮೋಡಿಗಾರನಿಗೆ ವಿಶೇಷ ಅಕ್ಕರೆ. ‘ನಮ್ಮ ಹಾಡುಗಳು ಜೀವಚೈತನ್ಯವನ್ನು ತುಂಬುವ ಟಾನಿಕ್‌’ ಎಂದು ಅಭಿಮಾನದಿಂದ ಹೇಳುತ್ತಾರೆ. ಯಾವುದೋ ಸಂದರ್ಭಕ್ಕೆ ಕಟ್ಟಿದ ಹಾಡು ಯಾವುದೇ ನೆಲದ ಯಾವುದೇ ವ್ಯಕ್ತಿಗೂ ಅನ್ವಯವಾಗುವುದು ಅಂದರೆ ಕನೆಕ್ಟ್‌ ಆಗುವುದು ಪಂಜಾಬ್‌ನ ಹಾಡುಗಳ ವಿಶೇಷ ಎಂಬುದು ಅವರು ಕೊಡುವ ಸಮರ್ಥನೆ.

ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ತನ್ನ ಹಾಡಿನ ಮೋಡಿಯಿಂದ ಕುಣಿಸಿದ್ದ ರಾಂಧವ ತನ್ನ ಕನಸಿನ ಹಿಂದಿ ಚಿತ್ರರಂಗ ಅಷ್ಟು ಸುಲಭವಾಗಿ ಬರಮಾಡಿಕೊಳ್ಳಲಿಲ್ಲ. 2017ರ ‘ಹಿಂದಿ ಮೀಡಿಯಂ’, ರಾಂಧವ ಹಾಡಿದ ಮೊದಲ ಹಿಂದಿ ಸಿನಿಮಾ. ಮುಂದಿನ ಅವಕಾಶ ಕೊಟ್ಟಿದ್ದು ಸಲ್ಮಾನ್‌  ಖಾನ್‌. 2018ರಲ್ಲಿ ತೆರೆ ಕಂಡ ‘ದಭಾಂಗ್‌’ನಲ್ಲಿ ರಾಂಧವ ಅವರ ಹಾಡುಗಳು ವಿಜೃಂಭಿಸಿದವು.

ಅತ್ಯಂತ ಜನಪ್ರಿಯ ಯೂ ಟ್ಯೂಬರ್ ಆಗಿರುವ ರಾಂಧವ ಹಾಡಿದ ‘ಲಾಹೋರ್‌’ ಹಾಡನ್ನು ಬರೋಬ್ಬರಿ 5 ಕೋಟಿ ಮಂದಿ ಆಲಿಸಿದ್ದಾರೆ!  ರಾಂಧವ ಯೂ ಟ್ಯೂಬ್‌ನಲ್ಲಿ ಹಾಡಿದ ಮೊದಲ ಹಾಡು ‘ಸೇಮ್‌ ಗರ್ಲ್‌’. 

ರಾಂಧವ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ಕಾಲೂರಲು ಕಾರಣರಾದವರು ಹಲವರು. ಮ್ಯೂಸಿಕ್ ಮೊಗಲ್‌ ಮತ್ತು ಟಿ ಸೀರೀಸ್‌ನ ನೆರವು ಸಿಗದೇ ಇದ್ದಿದ್ದರೆ ನನ್ನ ಹೆಸರು ದಾಖಲಾಗಲು ಸಾಧ್ಯವೇ ಇರಲಿಲ್ಲ ಎಂದು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ಎಂ.ಡಿ.ಭೂಷಣ್‌ ಕುಮಾರ್‌ ಈ ಸಂಗೀತ ಪಥಿಕನನ್ನು ಕೈಹಿಡಿದು ನಡೆಸಿದ ಹಿತೈಷಿ.

ದೇಸಿ ಪ್ರತಿಭೆಯೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವುದು ಸುಲಭದ ಮಾತಲ್ಲ. ಆದರೆ ಯಶಸ್ಸಿನ ಚುಂಗು ಹಿಡಿದು ಮುನ್ನುಗ್ಗುತ್ತಿರುವ ಗುರು ರಾಂಧವ ಅವರು ಬೆಳಗುತ್ತಿರುವುದು ತನ್ನ ಪ್ರತಿಭೆಯ ಪ್ರಭೆಯಿಂದ! ‘ಸ್ಲೋಲಿ ಸ್ಲೋಲಿ’ ಇನ್ನಷ್ಟು ಬೆಳೆಯಲಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !