ಗುರುವಾರ , ಡಿಸೆಂಬರ್ 12, 2019
25 °C

ಬೆಡಗಿ ಸ್ನೇಹಾಗಿದು ‘ಟೈಮ್‌ ಫಾರ್‌ ಲವ್‌’

Published:
Updated:
Prajavani

ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್‌ ಅವರನ್ನು ಹೋಲುವ ನಟಿ ಎಂದೇ ಭಾರತೀಯ ಚಿತ್ರರಂಗದ ಗಮನ ಸೆಳೆದ ಸುಂದರಿ ಸ್ನೇಹಾ ಉಲ್ಲಾಳ್‌ ಈಗ ಚಿತ್ರರಂಗದಿಂದ ದೂರವಿದ್ದರೂ ಸುದ್ದಿಯಾಗಿದ್ದಾರೆ. ಸಲ್ಮಾನ್ ಖಾನ್‌ ಜೊತೆ ‘ಲಕ್ಕಿ– ನೋ ಟೈಮ್‌ ಫಾರ್‌ ಲವ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸ್ನೇಹಾಗೆ ಕೊನೆಗೂ ಪ್ರೀತಿ ಪ್ರೇಮ ಪ್ರಣಯಕ್ಕೆ ಸಮಯ ಸಿಕ್ಕಿದೆ! 

ಈ ಸುಂದರಿ ಪ್ರೇಮಪಾಶಕ್ಕೆ ಬಿದ್ದಿರುವುದು ಅವಿ ಮಿತ್ತಲ್‌ ಎಂಬ ಸಮರಕಲೆ ಪ್ರವೀಣನೊಂದಿಗೆ. ಅವಿ ಮಿತ್ತಲ್‌, ಅಖಿಲ ಭಾರತ ಮಿಶ್ರ ಸಮರ ಕಲೆಗಳ ಸಂಘದ ಅಧ್ಯಕ್ಷ. ಕೆಲವರ್ಷಗಳಿಂದ ಸ್ನೇಹಿತರಾಗಿದ್ದ ಅವಿ ಮತ್ತು ಸ್ನೇಹಾ ಅವರ ಸ್ನೇಹ ಪ್ರೇಮಕ್ಕೆ ತಿರುಗಿದ್ದು ಇತ್ತೀಚೆಗೆ. ವರ್ಷಾಂತ್ಯದಲ್ಲಿ ವಿದೇಶ ಪ್ರವಾಸ ಹೋಗುವ ಸೆಲೆಬ್ರಿಟಿಗಳ ಪರಿಪಾಠದಂತೆ ಸ್ನೇಹಾ ಮತ್ತು ಅವಿ ಕೂಡಾ ಮಾಲ್ಡೀವ್ಸ್‌ನಲ್ಲಿ ‘ರಜಾ ದಿನ’ಗಳನ್ನು ಮಜಾವಾಗಿ ಕಳೆದುಬಂದಿದ್ದಾರೆ. ತಮ್ಮ ಸಂಬಂಧವನ್ನು ಈ ಜೋಡಿ ಗುಪ್ತವಾಗಿಯೇನೂ ಇರಿಸಿಲ್ಲ. ಮಾಲ್ಡೀವ್ಸ್‌ನ ರೊಮ್ಯಾಂಟಿಕ್‌ ಪ್ರವಾಸದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಮಸ್ಕತ್‌ನಲ್ಲಿ ಜನಿಸಿದ ಸ್ನೇಹಾ ತಂದೆ ಮಂಗಳೂರು ಮೂಲದವರು. ತಾಯಿ ಸಿಂಧಿ. ಒಮನ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುತ್ತಲೇ ಮುಂಬೈಗೆ ವಲಸೆ ಬಂದ ಕಾರಣ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಮುಂಬೈ ಮತ್ತು ದೆಹಲಿಯಲ್ಲಿ ಮುಗಿಯಿತು.

ಸೌಂದರ್ಯದ ಖನಿಯಂತಿದ್ದ ಸ್ನೇಹಾಳಿಗೆ ಶಾಲಾ ದಿನಗಳಲ್ಲೇ ‘ಐಶ್ವರ್ಯಾ ರೈ’ ಎಂದು ಸ್ನೇಹಿತರು ಛೇಡಿಸುತ್ತಿದ್ದರಂತೆ. ಅದು ಅವರಿಗೆ ಅಭಿಮಾನದ ಸಂಗತಿಯೂ. ಮಗಳು ನಟಿಯಾಗಲಿ ಎಂಬುದು ಹೆತ್ತವರ ಬಯಕೆಯೂ ಆಗಿತ್ತು. ಹಾಗಾಗಿ ಚಿತ್ರರಂಗದಲ್ಲಿ ಉತ್ತಮ ಎಂಟ್ರಿಗಾಗಿ ಕಾಯುತ್ತಿದ್ದರು. ಕೊನೆಗೂ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಾಯಕರಾಗಿದ್ದ ‘ಲಕ್ಕಿ–ನೋ ಟೈಮ್‌ ಫಾರ್‌ ಲವ್‌’ ಚಿತ್ರದ ಆಫರ್‌ ಬಂದಾಗ ಸ್ನೇಹಾಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು.

ಸಲ್ಲೂ ಬಾಯ್‌ ಜೊತೆಗಿನ ಈ ಚಿತ್ರದಲ್ಲಿ ಸ್ನೇಹಾ ಉತ್ತಮವಾಗಿಯೇ ನಟಿಸಿದರು. ಹಾಗಂತ ಆಕೆಗೆ ಹೊಸ ಚಿತ್ರಗಳ ಆಫರ್‌ಗಳು ಸರತಿಯಲ್ಲಿ ನಿಲ್ಲಲಿಲ್ಲ. ಇದೇ ವೇಳೆ ಸಲ್ಲೂ ಭಾಯ್‌ ಸಹೋದರ ಸೊಹೈಲ್‌ ಖಾನ್‌ ನಾಯಕತ್ವದ ‘ಆರ್ಯನ್‌’ನಲ್ಲಿ ನಟಿಸಿದರೂ ಚಿತ್ರ ಸೋತಿತು. ಆದರೂ, ಬಾಲಿವುಡ್‌ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್‌ ಅವರ ಪಡಿಯಚ್ಚಿನಂತಹ ನಟಿ ಎಂಬ ಹೆಗ್ಗಳಿಕೆ ಮಾತ್ರ ಅವರನ್ನು ತೆಲುಗಿನ ನಿರ್ದೇಶಕರು ಮತ್ತು ನಿರ್ಮಾಪಕರ ಗಮನ ಸೆಳೆಯುವಂತೆ ಮಾಡಿತು. ತೆಲುಗಿನ ಹಿಟ್‌ ಚಿತ್ರ ‘ಉಲ್ಲಾಸಂಗ ಉತ್ಸಾಹಂಗ’ ಸ್ನೇಹಾಗೆ ಹೆಸರು ತಂದುಕೊಟ್ಟಿತು. ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸ್ನೇಹಾ ಬೇಡಿಕೆಯ ನಟಿಯಾದರು. 

ಹೆಚ್ಚಾಗಿ ಹಿಂದಿ, ತೆಲುಗಗು ಚಿತ್ರರಂಗದಲ್ಲಿಯೇ ಬ್ಯುಸಿಯಾಗಿದ್ದ ಸ್ನೇಹಾ, 2011ರಲ್ಲಿ ಕನ್ನಡದ ‘ದೇವಿ’ ಸಿನಿಮಾದಲ್ಲಿ ಮಾತ್ರವಲ್ಲದೆ ಬಂಗಾಲಿ ಚಿತ್ರವೊಂದರಲ್ಲಿಯೂ ನಟಿಸಿದ್ದರು.

ಸ್ನೇಹಾ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಅವರ ಆರೋಗ್ಯ ಸಹಕರಿಸುತ್ತಿರಲಿಲ್ಲ. ಅರ್ಧ ಗಂಟೆ ನಿಂತು ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕೆಂದರೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ‘ಅಟೊ ಇಮ್ಯೂನ್‌ ಡಿಸಾರ್ಡರ್‌’ ಎಂಬ ಅಪರೂಪದ ಕಾಯಿಲೆ ಅವರನ್ನು ಬಾಧಿಸುತ್ತಿತ್ತು. ಹಾಗಾಗಿ ಆಫರ್‌ಗಳನ್ನೆಲ್ಲ ಕೈಚೆಲ್ಲಿ ಚಿಕಿತ್ಸೆಯತ್ತ ಗಮನ ಕೊಡಲೇಬೇಕಾಯಿತು. ಸ್ನೇಹಾ ಚಲನಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟರೂ ಅವರ ಸೌಂದರ್ಯ ಮತ್ತು ಪ್ರೌಢ ನಟನೆ ಹೊಸ ಆಫರ್‌ಗಳನ್ನು ನೀಡುತ್ತಲೇ ಬಂದವು. ಆದರೆ ಅದಕ್ಕೆ ಸಮ್ಮತಿ ನೀಡುವ ಉಮೇದು ಅವರಲ್ಲಿಲ್ಲ. 

ಸ್ನೇಹಾ, ಮಾಲ್ಡೀವ್ಸ್‌ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗಿನಿಂದಲೂ ಅಂತರ್‌ಜಾಲ ತಾಣಗಳಲ್ಲಿ ಅತಿ ಹೆಚ್ಚು ಚರ್ಚಿತ ಸೆಲೆಬ್ರಿಟಿಯಾಗಿದ್ದಾರೆ. 

ಅವಿ ಕೌಟುಂಬಿಕ ಸಮಾರಂಭಗಳಲ್ಲಿ ಸ್ನೇಹಾ ಕಾಯಂ ಆಹ್ವಾನಿತರಾಗಿರುತ್ತಾರೆ. ಹಾಗಾಗಿ ಎರಡೂ ಕುಟುಂಬಗಳಿಗೂ ಈ ಸಂಬಂಧದ ಅರಿವಿದೆ ಎಂದು ಅವರ ಆಪ್ತರು ಹೇಳುತ್ತಾರೆ.

ಅದೇನೆ ಇರಲಿ, ‘ನೋ ಟೈಮ್‌ ಫಾರ್‌ ಲವ್‌’ ಎಂದು ಚಲನಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಸ್ನೇಹಾ ಇದೀಗ ಟೈಮ್‌ ಫಾರ್‌ ಲವ್‌ ಎನ್ನುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು