ಶನಿವಾರ, ಅಕ್ಟೋಬರ್ 31, 2020
24 °C

‘ಶಂಭೋ ಶಿವ ಶಂಕರ’ನ ಸಸ್ಪೆನ್ಸ್‌ ಕಥಾನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರೇಕ್ಷಕರನ್ನು ಸೆಳೆಯಲು ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾಗಳಿಗೆ ಆಕರ್ಷಕ ಶೀರ್ಷಿಕೆ ಇಡುವುದು ಸರ್ವೇ ಸಾಮಾನ್ಯ. ಚಂದನವನದಲ್ಲಿ ಈಗಾಗಲೇ ಇಂತಹ ಪ್ರಯೋಗಗಳು ಸಾಕಷ್ಟು ನಡೆದಿವೆ. ಅಘನ್ಯ ಪಿಕ್ಚರ್ಸ್ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ‘ಶಂಭೋ ಶಿವ ಶಂಕರ’ ಎಂಬ ಟೈಟಲ್‌ ಇಡಲಾಗಿದೆ. ಇತ್ತೀಚೆಗೆ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಇದರ ಮುಹೂರ್ತ ನೆರವೇರಿತು.

ಈ ಟೈಟಲ್‌ ಕೇಳಿದಾಕ್ಷಣ ಇದೊಂದು ಶಿವನ ಚರಿತ್ರೆ ಕುರಿತು ನಿರ್ಮಿಸುತ್ತಿರುವ ಚಿತ್ರ ಎನಿಸುವುದು ಸಹಜ. ಆದರೆ ಶಂಭೋ, ಶಿವ, ಶಂಕರ ಎಂಬ ಮೂರು ಪಾತ್ರಗಳ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆಯಂತೆ.

ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶಂಕರ್ ಕೋನಮಾನಹಳ್ಳಿ. ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ‘ಜೋಡಿಹಕ್ಕಿ’ ಧಾರಾವಾಹಿ ನಿರ್ದೇಶಿಸಿರುವ ಅವರು ಹಿರಿತೆರೆಯಲ್ಲಿ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗವನ್ನೂ ಅವರೇ ಹೊತ್ತಿದ್ದಾರೆ.

‘ಇದೊಂದು ಸಸ್ಪೆನ್ಸ್ ಕಥಾಹಂದರ ಹೊಂದಿರುವ ಚಿತ್ರ. ಜನರಿಗೆ ರಂಜನೆ ಉಣಬಡಿಸುವುದಷ್ಟೇ ನನ್ನ ಕೆಲಸ’ ಎಂದ ಅವರು, ಕಥೆಯ ಎಳೆ ಬಗ್ಗೆ ಗುಟ್ಟು ಬಿಟ್ಟು ಕೊಡಲಿಲ್ಲ.

ಶಂಭು ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರದಲ್ಲಿ ರೋಹಿತ್ ನಟಿಸಲಿದ್ದಾರೆ. ಅಂದಹಾಗೆ ಈ ಮೂವರಿಗೂ ಒಬ್ಬಳೇ ಹೀರೊಯಿನ್. ‘ಪಂಚತಂತ್ರ’ ಚಿತ್ರದ ಖ್ಯಾತಿಯ ಸೋನಾಲ್‌ ಮಾಂತೆರೊ ಇದರ ನಾಯಕಿ. ‘ಚಿತ್ರದಲ್ಲಿ ಮೂವರು ನಾಯಕರ ಪಾತ್ರಕ್ಕೆ ಇರುವಷ್ಟೇ ಪ್ರಾಧಾನ್ಯ ನನ್ನ ‍ಪಾತ್ರಕ್ಕೂ ಇದೆ’ ಎಂದರು ಸೋನಾಲ್‌.

ತನ್ನ ಸ್ನೇಹಿತನಾದ ಅಭಯ್‌ ಪುನೀತ್‌ ಅವರಿಗಾಗಿಯೇ ವರ್ತೂರು ಮಂಜು ಇದಕ್ಕೆ ಬಂಡವಾಳ ಹೂಡಿದ್ದಾರಂತೆ. ‘ಸ್ನೇಹಿತನಿಗಾಗಿ ಸಿನಿಮಾ ನಿರ್ಮಿಸುವ ಆಸೆ ಹೊಂದಿದ್ದೆ. ಅಭಯ್ ಮೂಲಕ ನಿರ್ದೇಶಕ ಶಂಕರ್ ಅವರ ಪರಿಚಯವಾಯಿತು. ಅವರು ನಿರೂಪಿಸಿದ ಕಥೆಯೂ ಇಷ್ಟವಾಯಿತು. ಹಾಗಾಗಿ, ಬಂಡವಾಳ ಹೂಡಲು ನಿರ್ಧರಿಸಿದೆ’ ಎಂದು ಮಾಹಿತಿ ಹಂಚಿಕೊಂಡರು.

ಚಿತ್ರದ ಮೂರು ಹಾಡುಗಳಿಗೆ ಹಿತನ್ ಸಂಗೀತ ನೀಡಲಿದ್ದಾರೆ. ನಟರಾಜ್ ಮುದ್ದಾಲ ಅವರ ಛಾಯಾಗ್ರಹಣವಿದೆ. ಕಲೈ ನೃತ್ಯ ನಿರ್ದೇಶಿಸಿದ್ದಾರೆ. ವೆಂಕಟೇಶ್ ಯುಡಿವಿ ಸಂಕಲನ ನಿರ್ವಹಿಸಿದ್ದಾರೆ. ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ನಟರಾದ ‘ಡಾಲಿ’ ಖ್ಯಾತಿಯ ಧನಂಜಯ್ ಹಾಗೂ ವಸಿಷ್ಠ ಸಿಂಹ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು