ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಬರ್ಟ್‌’ ಧ್ಯಾನದಲ್ಲಿ ‘ಪಂಚತಂತ್ರ’ ಬೆಡಗಿ

Last Updated 26 ಜನವರಿ 2020, 10:00 IST
ಅಕ್ಷರ ಗಾತ್ರ

ಯೋಗರಾಜ್‌ ಭಟ್ಟರ ‘ಪಂಚತಂತ್ರ’ ಸಿನಿಮಾದಲ್ಲಿ ಮೈಚಳಿ ಬಿಟ್ಟು ನಟಿಸಿ, ‘ಶೃಂಗಾರದ ಹೊಂಗೆ ಮರ’ ಏರಿ ಪ್ರೇಕ್ಷಕರನ್ನು ಸೀಟಿನ ತುತ್ತ ತುದಿಗೆ ತಂದು ಕೂರಿಸಿದ ಚೆಲುವೆ ಸೋನಲ್ ಮೊಂತೆರೋ. ಐದಾರು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸೋನಲ್‌ ಈಗ ಡಿ ಬಾಸ್‌ ಅಭಿನಯದ ‘ರಾಬರ್ಟ್‌’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

‘ಪಂಚತಂತ್ರ’ ಸಿನಿಮಾದ ಬಳಿಕ ಕರಾವಳಿ ಬೆಡಗಿ ಸೋನಲ್‌ ಮೊಂತೆರೋ ಅದೃಷ್ಟ ಖುಲಾಯಿಸಿದೆ. ಈಗ ಆಕೆಯ ಬೊಗಸೆ ತುಂಬ ಐದಾರು ಸಿನಿಮಾಗಳಿವೆ. ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿಯರ ಸಾಲಿನಲ್ಲಿ ಸೋನಲ್‌ ಕೂಡ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಹೊಸ ಸುದ್ದಿ ಏನೆಂದರೆ, ಬಾಕ್ಸ್‌ ಆಫೀಸ್‌ ಸುಲ್ತಾನ ದರ್ಶನ್‌ ತೂಗುದೀಪ ಅಭಿನಯದ ‘ರಾಬರ್ಟ್‌’ ಚಿತ್ರತಂಡಕ್ಕೆ ಸೋನಲ್‌ ಸೇರ್ಪಡೆಯಾಗಿದ್ದು, ಈ ಚಿತ್ರದಲ್ಲಿ ಅವರು ಮುಖ್ಯಪಾತ್ರವೊಂದನ್ನು ನಿರ್ವಹಿಸಿದ್ದಾರೆ.

‘ರಾಬರ್ಟ್‌ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಈಗಲೇ ಏನನ್ನೂ ಹೇಳುವಂತಿಲ್ಲ. ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಅವರು ಈ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಆದರೆ ಒಂದಂತೂ ನಿಜ, ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ತುಂಬ ಖುಷಿ ಇದೆ’ ಎಂದರು ಸೋನಲ್‌.

‘ಬುದ್ಧಿವಂತ 2’, ‘ಬನಾರಸ್‌’, ‘ತಲ್ವಾರ್‌ಪೇಟೆ’ ಸಿನಿಮಾಗಳಲ್ಲಿ ಸೋನಲ್‌ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಎಲ್ಲ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ‘ರಾಬರ್ಟ್‌’ ಚಿತ್ರದಲ್ಲಿನ ತನ್ನ ಪಾತ್ರದ ಚಿತ್ರೀಕರಣವನ್ನು ಪೂರೈಸಿರುವ ಸೋನಲ್‌, ಮೊದಲಬಾರಿಗೆ ಡಿ ಬಾಸ್‌ ಜತೆಗೆ ನಟಿಸಿದ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

‘ದರ್ಶನ್‌ ತೂಗುದೀಪ ಅವರೊಂದಿಗೆ ನಟಿಸಿದ್ದು ಒಂದು ಅದ್ಭುತ ಅನುಭವ. ಅವರು ಸೆಟ್‌ನಲ್ಲಿ ತುಂಬ ಸಪೋರ್ಟಿವ್‌ ಆಗಿ ಇದ್ದರು. ‘ರಾಬರ್ಟ್‌’ ಚಿತ್ರತಂಡದಲ್ಲಿ ಕಿರಿಯ ಹಾಗೂ ಹೊಸ ಕಲಾವಿದೆ ಅಂದರೆ ನಾನೊಬ್ಬಳೇ. ಅನುಭವಿ ನಟರು, ನಿರ್ದೇಶಕರು ಇದ್ದರೂ ಕೂಡ ಎಲ್ಲರೂ ನನ್ನನ್ನು ತುಂಬ ಪ್ರೀತಿಯಿಂದ ನಡೆಸಿಕೊಂಡರು. ಆತ್ಮೀಯತೆಯಿಂದ ನೋಡಿಕೊಂಡರು’ ಎಂದರು ಸೋನಲ್‌.

‘‘ನನ್ನ ಸಿನಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು ‘ಪಂಚತಂತ್ರ’ ಸಿನಿಮಾ. ಎಲ್ಲೇ ಹೋದರೂ ಜನ ಈಗಲೂ ನನ್ನನ್ನು ‘ಪಂಚತಂತ್ರ’ದ ಹುಡುಗಿ ಅಂತಲೇ ಗುರುತಿಸುತ್ತಾರೆ. ಸೋನಲ್‌ ಮೊಂತೆರೋ ಎಂಬ ನಟಿ ಇದ್ದಾಳೆ ಎಂದು ಸ್ಯಾಂಡಲ್‌ವುಡ್‌ಗೆ ತಿಳಿದಿದ್ದು ಕೂಡ ಆ ಚಿತ್ರದಿಂದಲೇ. ಅದೇರೀತಿ, ‘ರಾಬರ್ಟ್‌’ ಸಿನಿಮಾದಿಂದ ಕೂಡ ನನ್ನ ಚಿತ್ರಜೀವನಕ್ಕೆ ಒಳ್ಳೆ ಮೈಲೇಜ್‌ ಸಿಗಲಿದೆ’’ ಎಂದ ಅವರು, ‘ರಾಬರ್ಟ್‌’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೂ ಕೂಡ ‘ಪಂಚತಂತ್ರ’ ಚಿತ್ರತಂಡದಲ್ಲಿದ್ದ ಹರಿಪ್ರಸಾದ್‌ ಅವರಿಂದಲೇ ಎಂಬ ಮಾಹಿತಿ ನೀಡಿದರು.

‘ರಾಬರ್ಟ್‌ ಸಿನಿಮಾದಲ್ಲಿನ ನನ್ನ ಪಾತ್ರಕ್ಕೆ ಒಂದು ತೂಕವಿದೆ. ಚಿತ್ರ ವೀಕ್ಷಿಸಿ ಪ್ರೇಕ್ಷಕರು ಹೊರಬಂದ ನಂತರ ಆ ಪಾತ್ರದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಅದು ಮರೆತುಹೋಗುವಂತಹ ಪಾತ್ರ ಅಲ್ಲವೇ ಅಲ್ಲ’ ಎಂದರು.

ಸೋನಲ್‌ ಅಭಿನಯದ ‘ಡೆಮೊ ಪೀಸ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲೇ ಉತ್ತಮ ಅವಕಾಶಗಳು ಸಿಗುತ್ತಿರುವುದರಿಂದ ಚಂದನವನದಲ್ಲೇ ಗಟ್ಟಿಯಾಗಿ ನೆಲೆಯೂರುವ ಆಶಯ ಹೊಂದಿದ್ದಾರೆ ಸೋನಲ್‌. ಅವರ ಆಸೆಗೆ ನೀರೆರೆಯುವಂತೆ ಸಾಕಷ್ಟು ಅವಕಾಶಗಳೂ ಅರಸಿ ಬರುತ್ತಿರುವುದರಿಂದ ಸದ್ಯಕ್ಕೆ ಸೋನಲ್‌ ಸಿನಿಯಾನ ಮಜಬೂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT