ಶಿವರಾಜ್‌ಕುಮಾರ್ ಎಂಬ ಹೆಸರಿನಲ್ಲೇ ಒಂದು ಶಕ್ತಿ ಇದೆ. ‘ಎನರ್ಜಿ ಅಂದ್ರೆ ಶಿವಣ್ಣ’ ಅನ್ನೋ ಮಾತು ಚಿತ್ರರಂಗದೊಳಗೆ ಕೇಳಿಬರುವುದು ಸಾಮಾನ್ಯ. 1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಾಯಕನಟರಾಗಿ ಕಾಲಿಟ್ಟ ಶಿವರಾಜ್‌ಕುಮಾರ್, ಸದ್ಯ, ಚಂದನವನದಲ್ಲಿ 38 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿದ್ದಾರೆ ‘ಕರುನಾಡ ಚಕ್ರವರ್ತಿ’. ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯಲ್ಲಿ ಅವರಿಗೆ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.