ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲೀಲಾ ಪ್ರಸಂಗ

Last Updated 31 ಜನವರಿ 2019, 19:30 IST
ಅಕ್ಷರ ಗಾತ್ರ

‘ಭರಾಟೆ’ ಚಿತ್ರದ ಮೊದಲ ದಿನದ ಶೂಟಿಂಗ್‌ ನಡೆದಿದ್ದು ರಾಜಸ್ಥಾನದಲ್ಲಿ. ಅಂದಿನ ಚಿತ್ರಣ ಇನ್ನೂ ಮನದಲ್ಲಿ ಹಸಿರಾಗಿದೆ. ನನ್ನೆದುರು ಶ್ರೀಮುರಳಿ ಸರ್‌ ಇದ್ರು. ಹಿಂದಿನ ರಾತ್ರಿ ನನ್ನಲ್ಲಿ ಆವರಿಸಿದ್ದ ಭಯ ಬೆಳಿಗ್ಗೆ ರೌದ್ರಾವತಾರ ತಾಳಿತ್ತು. ನಿರ್ದೇಶಕರು ಆ್ಯಕ್ಷನ್‌ ಹೇಳಿಯೇ ಬಿಟ್ಟರು. ನಾನು ಶ್ರೀಮುರಳಿ ಸರ್‌ ಮುಖ ನೋಡಲಿಲ್ಲ. ಅವರ ಕಿವಿ ನೋಡಿಕೊಂಡು ನಟಿಸಲು ಆರಂಭಿಸಿದೆ. ನನ್ನ ಆತಂಕ ಅರಿಯಲು ಅವರಿಗೆ ಬಹುಹೊತ್ತು ಬೇಕಾಗಲಿಲ್ಲ. ಅಂದು ಅವರು ತುಂಬಿದ ಧೈರ್ಯ ನನ್ನ ನಟನೆಯನ್ನು ಸುಲಭವಾಗಿಸಿದೆ’ ಎಂದು ಮನಃಪೂರ್ತಿ ನಕ್ಕರು ನಟಿ ಶ್ರೀಲೀಲಾ.

ಶ್ರೀಲೀಲಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಅಮ್ಮ ವೈದ್ಯೆ. ಅಪ್ಪ ಉದ್ಯಮಿ. ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಅವರಿಗೆ ಅವಕಾಶಗಳು ಲಭಿಸಿದ ಹಿಂದೆಯೂ ಒಂದು ಕುತೂಹಲದ ಕಥೆಯಿದೆ. ‘ಕೆಜಿಎಫ್‌’ ಖ್ಯಾತಿಯ ಭುವನ್‌ಗೌಡ ಅವರು ಶ್ರೀಲೀಲಾ ಕುಟುಂಬದ ಫೋಟೊಶೂಟ್‌ ಮಾಡಿದ್ದರಂತೆ. ಸಾಮಾಜಿಕ ಜಾಲತಾಣದಲ್ಲಿ ಆ ಛಾಯಾಚಿತ್ರಗಳನ್ನು ನೋಡಿದ ನಿರ್ದೇಶಕ ಎ.ಪಿ. ಅರ್ಜುನ್ ‘ಕಿಸ್‌’ ಚಿತ್ರಕ್ಕೆ ಈ ಹುಡುಗಿಯೇ ನಾಯಕಿಯಾಗಬೇಕೆಂದು ಅಪೇಕ್ಷೆಪಟ್ಟರಂತೆ. ಕೊನೆಗೆ, ಶ್ರೀಲೀಲಾ ಅವರ ಮನೆಗೆ ಹೋದರಂತೆ.

‘ಅರ್ಜುನ್‌ ಸರ್ ಅಮ್ಮನ ಬಳಿ ಕಥೆ ಹೇಳಿದರು. ಚಿತ್ರದ ಟೈಟಲ್‌ ‘ಕಿಸ್‌’ ಎಂದಾಕ್ಷಣ ಅಮ್ಮ ಅಕ್ಷರಶಃ ಬೆಚ್ಚಿಬಿದ್ದರು. ಇಂತಹ ಚಿತ್ರದಲ್ಲಿ ನನ್ನ ಮಗಳು ನಟಿಸುವುದು ಬೇಡವೆಂದರು. ಕೊನೆಗೆ, ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿಲ್ಲ ಎಂದು ಮನವರಿಕೆಯಾದ ನಂತರವೇ ಚಿತ್ರ ಒಪ್ಪಿಕೊಂಡಿದ್ದು. ರೊಮ್ಯಾಂಟಿಕ್‌ ಆದ ಪ್ರೇಮಕಥನ ಚಿತ್ರದಲ್ಲಿದೆ’ ಎಂದು ಮೊದಲ ಅವಕಾಶದ ಮೆಲುಕು ಹಾಕುತ್ತಾರೆ.

ಶ್ರೀಲೀಲಾ ಬಹುಮುಖ ಪ್ರತಿಭೆ. ಅವರು ವೇದಿಕೆ ಹತ್ತಿದ್ದು ಎಂಟನೇ ವಯಸ್ಸಿಗೆ. ನಟನೆ ಮಾತ್ರವಲ್ಲದೆ ಭರತನಾಟ್ಯ, ಬ್ಯಾಲೆ, ಈಜು, ಸ್ಕೇಟಿಂಗ್, ಹಾಕಿ, ಬಾಕ್ಸಿಂಗ್‌ ತರಬೇತಿ ಕೂಡ ಪಡೆದಿದ್ದಾರಂತೆ.

ಬಾಲ್ಯದಲ್ಲಿಯೇ ಅವರನ್ನು ಬಣ್ಣದಲೋಕ ಸೆಳೆಯಿತು. ಶಾಲಾ ಹಂತದಲ್ಲಿದ್ದಾಗಲೇ ಬಾಲನಟಿಯಾಗಿ ನಟಿಸುವ ಅವಕಾಶವೊಂದು ಅವರಿಗೆ ಲಭಿಸಿತ್ತು. ಆದರೆ, ಅವರ ಅಮ್ಮನಿಗೆ ಮಗಳು ತನ್ನಂತೆ ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕೆಂಬ ಆಸೆ. ಹಾಗಾಗಿ, ನಟನೆ ಕನಸಾಗಿಯೇ ಉಳಿದಿತ್ತು. ಆದರೆ, ‘ಕಿಸ್‌’ ಚಿತ್ರ ಅವರೊಳಗಿನ ಅಭಿನಯಕ್ಕೆ ವೇದಿಕೆ ಕಲ್ಪಿಸಿತು.

‘ಕಿಸ್‌’ ಪಾತ್ರದ ಬಗ್ಗೆ ಅವರಿಗೆ ನಿರೀಕ್ಷೆ ಹೆಚ್ಚಿದೆ. ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಣೆದಿರುವ ಲವ್‌ ಸ್ಟೋರಿ ಇದು. ಕೌಟುಂಬಿಕ ಕಥನವೂ ಇದೆ. ಎಲ್ಲ ವರ್ಗದ ಜನರಿಗೂ ಸಿನಿಮಾ ಇಷ್ಟವಾಗಲಿದೆ ಎನ್ನುವುದು ಶ್ರೀಲೀಲಾ ವಿಶ್ವಾಸ. ‘ನನ್ನ ಪಾತ್ರದ ಹೆಸರು ನಂದಿನಿ. ಚಂದನವನದಲ್ಲಿ ಈ ಹೆಸರಿನ ಪಾತ್ರಕ್ಕೆ ತನ್ನದೇ ಆದ ಮಹತ್ವವಿದೆ. ಎಲ್ಲರೊಳಗೂ ಒಬ್ಬಳು ನಂದಿ ಇರುತ್ತಾಳೆ. ಮುಗ್ಧ ಹುಡುಗಿಯಾಗಿ ನಟಿಸಿದ್ದೇನೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಮೊದಲ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿರುವ ಅವರು ‘ಭರಾಟೆ’ಯಲ್ಲಿ ಮೆಚ್ಯೂರ್‌ ಆದ ಪಾತ್ರದತ್ತ ಹೊರಳಿದ್ದಾರೆ. ಶ್ರೀಮುರಳಿ ಅವರೊಟ್ಟಿಗೆ ನಟಿಸಲು ಅವಕಾಶ ದೊರೆತ ವಿಷಯವನ್ನು ಅವರ ಅಮ್ಮ ಶ್ರೀಲೀಲಾಗೆ ಹೇಳಿದರಂತೆ. ಮೊದಲಿಗೆ ಅಮ್ಮನ ಮಾತಿನ ಮೇಲೆ ನಂಬಿಕೆಯೇ ಬರಲಿಲ್ಲವಂತೆ. ‘ಮತ್ತೆ ಮತ್ತೆ ಕೇಳಿ ಖಚಿತಪಡಿಸಿಕೊಂಡೆ’ ಎಂದು ನಕ್ಕರು.

‘ಶ್ರೀಮುರಳಿ ಸರ್ ಜೊತೆಗೆ ನಟಿಸುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಅವರು ತೆರೆಯ ಮೇಲೆ ಇದ್ದರೆ ನೋಡುಗರ ಕಣ್ಣು ಉಳಿದವರತ್ತ ಹೊರಳುವುದೇ ಇಲ್ಲ. ನನಗೆ ನಟನೆ ಕರಗತವಾಗಿಲ್ಲ. ಅಂಥ ಶ್ರೇಷ್ಠ ನಟನೊಟ್ಟಿಗೆ ನಟಿಸುವುದು ಹೇಗೆ ಎಂಬ ಆತಂಕ ನನ್ನನ್ನು ಕಾಡುತ್ತಲೇ ಇತ್ತು. ಚಿತ್ರದಲ್ಲಿ ಸವಾಲಿನ ಪಾತ್ರ ನನ್ನದು’ ಎಂದು ವಿವರಿಸುತ್ತಾರೆ.

ಮುಂದೆ ಎಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಇದೆ ಎಂದು ಪ್ರಶ್ನಿಸಿದರೆ, ‘ಗ್ಲಾಮರಸ್‌ ಪಾತ್ರಗಳಲ್ಲಿ ನಟಿಸುವುದಿಲ್ಲ. ನೋಡುಗರಿಗೆ ಪಾತ್ರ ಕನೆಕ್ಟ್‌ ಆಗಬೇಕು. ನನ್ನ ಪಾತ್ರ ಜನರಿಗೆ ತಲುಪಬೇಕು. ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಲು ಇಷ್ಟ’ ಎಂದು ಕಣ್ಣರಳಿಸುತ್ತಾರೆ.

ಬೆಳ್ಳಿತೆರೆಯ ಮೇಲೆ ಈಗಷ್ಟೇ ನೆಲೆಯೂರುತ್ತಿರುವ ಶ್ರೀಲೀಲಾಗೆ ಕಾಲಿವುಡ್‌, ಟಾಲಿವುಡ್‌ನಿಂದಲೂ ಅವಕಾಶದ ಬಾಗಿಲು ತೆರೆದಿದೆ. ಆದರೆ, ಸಿನಿಮಾಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ‘ನನಗೆ ಕನ್ನಡದಲ್ಲಿಯೂ ಅವಕಾಶಗಳು ಬರುತ್ತಿವೆ. ಆದರೆ, ಮೊದಲು ನನ್ನ ಅಮ್ಮನಿಗೆ ಕಥೆ ಇಷ್ಟವಾಗಬೇಕು. ಆ ನಂತರವೇ ನಾನು ಕಥೆ ಕೇಳುತ್ತೇನೆ. ಚಿತ್ರದಲ್ಲಿ ನನ್ನ ನಟನಾ ಕೌಶಲ ಅಭಿವ್ಯಕ್ತಿಪಡಿಸುವ ಅವಕಾಶ ಇರಬೇಕು. ಇದೇ ತಿಂಗಳು ಕಿಸ್‌ ಚಿತ್ರ ಬಿಡುಗಡೆಯಾಗಲಿದೆ. ಆ ನಂತರವಷ್ಟೇ ಅವಕಾಶಗಳ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ನಗು ಚೆಲ್ಲುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT