ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದಗಜ’ದ ಮುರಳಿ ನಾದ

ಸಂದರ್ಶನ
Last Updated 12 ನವೆಂಬರ್ 2020, 16:55 IST
ಅಕ್ಷರ ಗಾತ್ರ

ನವೆಂಬರ್‌ ಕೊನೆಗೆ ಮತ್ತು ಡಿಸೆಂಬರ್‌ 17ರಂದು ಹೊಸ ಸರ್ಪ್ರೈಸ್‌ ಸುದ್ದಿ ಕೊಡುತ್ತೇನೆ. ಇನ್ನೊಂದಿಷ್ಟು ಒಳ್ಳೆಯ ಚಿತ್ರಗಳನ್ನು ಕೊಡಬೇಕು ಎಂಬ ಗುರಿ ಇಟ್ಟುಕೊಂಡೇ ಮುಂದುವರಿದಿದ್ದೇನೆ ಎನ್ನುವ ‘ಮದಗಜ’ ಶ್ರೀಮುರಳಿ ಹೊಸ ಭರವಸೆಯೊಂದಿಗೆ ‘ಪ್ರಜಾಪ್ಲಸ್‌’ನೊಂದಿಗೆ ಮಾತಿಗಿಳಿದರು. 24ನೇ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದ ಅವರ ಮಾತಿನ ಝಲಕ್‌ ಇಲ್ಲಿದೆ.

24 ಚಿತ್ರಗಳವರೆಗಿನ ಪ್ರಯಾಣ ಹೇಗಿತ್ತು?

ಹೌದು. ಒಂದು ದೊಡ್ಡ ಅನುಭವ. ಯಶಸ್ಸೂ ಸಿಕ್ಕಿದೆ. ‘ಚಂದ್ರಚಕೋರಿ’ ಎರಡು ವರ್ಷ ಕಾಲ ಪ್ರದರ್ಶನಗೊಂಡಿತು. ‘ಕಂಠಿ’ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿಯೂ ಬಂದಿತು. ಈ ದಾರಿಯಲ್ಲಿ ಒಳ್ಳೆಯವರು, ಕೆಟ್ಟವರು ಎಲ್ಲರನ್ನೂ ಕಂಡಿದ್ದೇನೆ. ಕಹಿ ಅನುಭವಗಳು ಆಗಿವೆ. ಅವೆಲ್ಲಾ ಊಟದಲ್ಲಿ ಸಿಹಿ–ಕಹಿ ಎಲ್ಲವೂ ಇರುತ್ತದಲ್ಲಾ ಹಾಗೆಯೇ.

ಖುಷಿಕೊಟ್ಟ ಪಾತ್ರಗಳು?

ಚಂದ್ರ ಚಕೋರಿ ಸಿನಿಮಾದಲ್ಲಿ ಪುಟ್ಟರಾಜು, ‘ಕಂಠಿ’ ಚಿತ್ರದ ಕಂಠಿ. ಪ್ರೀತಿಗಾಗಿ ಚಿತ್ರದ ಸಂಜಯ್‌. ‘ಉಗ್ರಂ’ನ ಅಗಸ್ತ್ಯ, ‘ರಥಾವರ’ದ ರಥಾವರಹೀಗೆ ಕೆಲವು ಪಾತ್ರಗಳನ್ನು ಎಂಜಾಯ್‌ ಮಾಡಿಕೊಂಡು ನಿರ್ವಹಿಸಿದ್ದೇನೆ.

ವೃತ್ತಿ ಬದುಕಿಗೆ ಕುಟುಂಬದವರ ಬೆಂಬಲ ಹೇಗಿದೆ?

ತುಂಬಾ ಇದೆ. ನಾವು ಇದ್ದುದರಲ್ಲಿ ಸರಳ ಜೀವನ ಮಾಡಿಕೊಂಡು ಬಾಳುವವರು. ನನ್ನ ತಂದೆಯವರು ಸಿನಿಮಾಕ್ಕಾಗಿ ಮಾತ್ರ ಅಲ್ಲ, ಬದುಕಿಗೆ ಬೇಕಾದ ಎಲ್ಲ ವಿದ್ಯೆಗಳನ್ನೂ ಕಲಿಸಿದರು. ಒಂದು ಒಳ್ಳೆಯ ತಯಾರಿ ಇತ್ತು. ಅಮ್ಮ ಕೂಡಾ ಚೆನ್ನಾಗಿ ಪೋಷಿಸಿದರು. ಅನ್ನ ಸಾರು, ತುಪ್ಪ, ಮೊಸರು, ಕೋಳಿ ಸಾರು... ಹೀಗೆ ದೈಹಿಕವಾಗಿಚೆನ್ನಾಗಿರಲು ಬೇಕಾದ್ದನ್ನೆಲ್ಲ ಮಾಡಿದರು. ಪತ್ನಿಯ ಬೆಂಬಲವೂ ತುಂಬಾ ಇದೆ. ಹೀಗೆ ಅದು ಹೇಳಿದರೆ ಮುಗಿಯದು.

ಅಣ್ಣ ವಿಜಯ ರಾಘವೇಂದ್ರ ಅವರ ಬೆಂಬಲ ಹೇಗಿದೆ?

ಬಾಲ್ಯದಿಂದಲೂ ಗೆಳೆತನದಿಂದಲೇ ಬೆಳೆದವರು. ಈಗಲೂ ಹಾಗೆಯೆ ಇದ್ದೇವೆ. ಸಣ್ಣ ಪುಟ್ಟ ವಿಷಯಕ್ಕೆಹುಸಿ ಜಗಳ ಇದ್ದೇ ಇದೆ. ಅದು ಇರಬೇಕು ಕೂಡಾ. ಅಣ್ಣ ನನಗೆ ಯಾವಾಗಲೂ ಬೆಂಬಲ ಕೊಡ್ತಿದ್ದಾನೆ.

ಚಿತ್ರರಂಗಕ್ಕೆ ಬರದಿದ್ದರೆ ಏನಾಗುತ್ತಿದ್ದಿರಿ?

ನಾನೊಬ್ಬ ದೊಡ್ಡ ಉದ್ಯಮಿ ಆಗಬೇಕು. ಸಮಾಜಕ್ಕೆ ಉಪಯೋಗ ಆಗುವಂತೆ ಬಾಳಬೇಕು ಅಂದುಕೊಂಡಿದ್ದೆ. ಕೃಷಿಯೂ ನನಗಿಷ್ಟ. ಅದರ ಬಗ್ಗೆಯೂ ಒಂದಿಷ್ಟು ಅಧ್ಯಯನ ಮಾಡುತ್ತಿದ್ದೇನೆ.

ಸಿನಿಮಾ ಪ್ರವೇಶ ಆಕಸ್ಮಿಕವೇ?

ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಈ ರೀತಿಯ ತಿರುವು ಬರುತ್ತದೆ. ಕಾಲೇಜು ದಿನಗಳಲ್ಲಿ ಹಾಡು, ನೃತ್ಯ, ನಾಟಕ ಎಲ್ಲದರಲ್ಲೂ ಮುಂದಿದ್ದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಕಡೆಯವರು ಕೇಳುತ್ತಾರಲ್ಲಾ, ಹುಡುಗ ಏನು ಮಾಡುತ್ತಾನೆ ಅಂತ. ಅದಕ್ಕೆ ಒಂದು ಉತ್ತರ ಕೊಡಬೇಕಿತ್ತು. ಹಾಗೆಯೇ ನನಗೆ ಇಷ್ಟವಿರುವ ಕೆಲಸವನ್ನೇ ಮಾಡಬೇಕು ಎನ್ನುವ ಉದ್ದೇಶವೂ ಇತ್ತು. ಹಾಗಾಗಿ ಚಿತ್ರರಂಗಕ್ಕೆ ಬಂದೆ. ಆ ಸಂದರ್ಭ ನನಗೆ ಅವಕಾಶ ಕೊಟ್ಟವರು ನಿರ್ಮಾಪಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿರ್ದೇಶಕ ಎಸ್‌.ನಾರಾಯಣ್‌.

ತುಂಬಾ ಬೇಸರವಾದದ್ದು?

ನನ್ನ ಮೊದಲ ಎರಡು ಸಿನಿಮಾಗಳು ತುಂಬಾ ಚೆನ್ನಾಗಿ ಹಿಟ್‌ ಆದವು. ಮೂರನೇ ಸಿನಿಮಾದಿಂದಸುಮಾರು 14 ಚಿತ್ರಗಳು ಅಷ್ಟೊಂದು ಯಶಸ್ವಿ ಆಗಲೇ ಇಲ್ಲ. ‘ಪ್ರೀತಿಗಾಗಿ’ ಸಿನಿಮಾ ಮಾತ್ರ 50 ದಿನ ಓಡಿತು. ನಮ್ಮ ಸಿನಿಮಾಗಳು ಅಭಿಮಾನಿಗಳಿಗೆ ಮುಟ್ಟದಿದ್ದಾಗ ನೋವೆನಿಸುತ್ತದೆ.

ಯಾರು ಈ ‘ಮದಗಜ’, ಹೇಗಿದ್ದಾನೆ?

‘ಮದಗಜ’ದ್ದು ತುಂಬಾ ಒಳ್ಳೆಯ ಪಾತ್ರ. ಕಥೆಯನ್ನು ಪ್ರೀತಿ, ಕುಟುಂಬ, ಜವಾಬ್ದಾರಿ ಇತ್ಯಾದಿಗಳ ಸುತ್ತ ಹೆಣೆದಿದ್ದಾರೆ. ಕರ್ನಾಟಕದ ಬೇರೆ ಬೇರೆ ಭಾಗ ಮತ್ತು ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕೋವಿಡ್‌ ಅನ್‌ಲಾಕ್‌ ಬಂದ ನಂತರ 25 ದಿನ ಮೈಸೂರಿನಲ್ಲಿ ಶೂಟಿಂಗ್‌ ಮಾಡಿದ್ದೇವೆ. ಇನ್ನು ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ. ಡಿಸೆಂಬರ್‌ ವೇಳೆಗೆ ಶೂಟಿಂಗ್‌ ಮುಗಿಯಬೇಕು. ಡಿಸೆಂಬರ್‌ 17ಕ್ಕೆ ಫಸ್ಟ್‌ಲುಕ್‌ ಬಿಡುಗಡೆ ಮಾಡ್ತೇವೆ. ಆಗ ನಿಮಗೆ ಒಂದು ಔಟ್‌ಲೈನ್‌ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT