ಮಂಗಳವಾರ, ಫೆಬ್ರವರಿ 18, 2020
16 °C
ಸೃಜನ್‌ ಲೋಕೇಶ್‌ ಯಶಸ್ಸಿನ ಗುಟ್ಟು ವಾಕಿಂಗ್‌

ಸೃಜನ್ ಲೋಕೇಶ್ ಫಿಟ್‌ನೆಸ್ ಮಂತ್ರ: ನಡೆ ಮುಂದೆ ನಡೆ ಮುಂದೆ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಒತ್ತಡ, ಒತ್ತಡ... ಕ್ಷೇತ್ರ ಯಾವುದೇ ಇರಲಿ ಒತ್ತಡದಿಂದ ತಪ್ಪಿಸಿಕೊಳ್ಳಲಾಗದು. ಆದರೆ, ಮನಸ್ಸು ಮಾಡಿದರೆ ಅದನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಳ್ಳಬಹುದು ಎನ್ನುತ್ತಾರೆ ಬೆಳ್ಳಿತೆರೆ ಮತ್ತು ಕಿರುತೆರೆಯ ಜನಪ್ರಿಯ ನಟ ಸೃಜನ್ ಲೋಕೇಶ್.

ಅವರ ಸದೃಢ ಮೈಕಟ್ಟು ಮತ್ತು ಕ್ರಿಯಾಶೀಲತೆಯ ಹಿಂದಿರುವ ಗುಟ್ಟು ನಡಿಗೆ (ವಾಕಿಂಗ್). ನಡೆ, ನಡೆ, ನಡೆ... ಎಷ್ಟು ಸಾಧ್ಯವೋ ಅಷ್ಟು ನಡೆಯುವುದೇ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇರುವ ರಹದಾರಿ. ನಡಿಗೆ ನಮ್ಮ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಸದೃಢವಾಗಿಡಬಲ್ಲದು ಎಂಬುದು ಸೃಜನ್ ಕಂಡುಕೊಂಡಿರುವ ಸತ್ಯ.

‘ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಹಲವು ಉದ್ಯಾನಗಳಿವೆ. ನಿತ್ಯವೂ ಒಂದಲ್ಲ ಒಂದು ಉದ್ಯಾನದಲ್ಲಿ ಬೆಳ್ಳಂಬೆಳಿಗ್ಗೆಯೇ ಚುಮು ಚುಮು ಚಳಿಯಲ್ಲಿ ಹಿತವಾದ ಸಂಗೀತ ಕೇಳುತ್ತಾ ವಾಕಿಂಗ್ ಮಾಡುವುದೇ ನನ್ನ ಫಿಟ್‌ನೆಸ್‌ ಗುಟ್ಟು’ ಅನ್ನುತ್ತಾರೆ ಸೃಜನ್.

ನಡೆಯುವಾಗ ಸಾಧ್ಯವಾದಷ್ಟೂ ನಿಮ್ಮ ಚಿಂತೆ, ಯೋಚನೆಗಳನ್ನು ಬದಿಗಿರಿಸಿ. ನಿಮ್ಮ ಉಸಿರಾಟ ಮತ್ತು ಹೆಜ್ಜೆಗಳತ್ತ ಮಾತ್ರ ಗಮನವಿರಿಸಿ, ಹಿತವಾದ ಸಂಗೀತ ಕೇಳುತ್ತಾ ನಡೆಯಿರಿ. ಇದು ನಿಮ್ಮ ಮನದಲ್ಲಿರುವ ಒತ್ತಡವನ್ನು ಶಮನಗೊಳಿಸಿ, ಮನಸು ನಿರಾಳವಾಗುವಂತೆ ಮಾಡುತ್ತದೆ ಎನ್ನುವುದು ಅವರ ಅನುಭವದ ಮಾತು.

ಅನ್ನ ಬಿಡೋದರಲ್ಲಿ ನಂಬಿಕೆ ಇಲ್ಲ!

ಡಯೆಟ್ ಅನ್ನುವ ಕಾನ್ಸೆಪ್ಟ್ ಶುರುವಾಗಿರೋದು ಈಗ್ಗೆ ಹತ್ತು–ಹದಿನೈದು ವರ್ಷಗಳ ಹಿಂದೆ. ಅದಕ್ಕೂ ಮುನ್ನ ಬಹುತೇಕರು ಊಟದಲ್ಲಿ ಅನ್ನ ಸೇವಿಸುವುದನ್ನು ಬಿಟ್ಟಿರಲಿಲ್ಲ. ಏಷ್ಯಾ ಖಂಡದಲ್ಲಿರುವ ಜನರ ಆರೋಗ್ಯ ಮತ್ತು ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಹಿರಿಯರು ಆಹಾರ ಪದ್ಧತಿ ರೂಪಿಸಿದ್ದಾರೆ. ಡಯೆಟ್ ಹೆಸರಿನಲ್ಲಿ ಅನ್ನ ಬಿಡುವುದರಲ್ಲಿ ಅರ್ಥವಿಲ್ಲ ಅನ್ನುವುದು ಸೃಜನ್ ಮನದಾಳದ ಮಾತು. ‘ನಮ್ಮ ಹಿರಿಯರು ಏನೇನು ದವಸ–ಧಾನ್ಯಗಳನ್ನು ಆಹಾರದಲ್ಲಿ ಬಳಸುತ್ತಿದ್ದರೋ ನಾನೂ ಅವುಗಳನ್ನೆಲ್ಲಾ ಸೇವಿಸುತ್ತೇನೆ.

ಅಕ್ಕಿ, ರಾಗಿ, ನವಧಾನ್ಯಗಳು, ಚಿಕನ್, ಮೀನು–ಮೊಟ್ಟೆ ಇವೆಲ್ಲಾ ನನ್ನ ಡಯೆಟ್‌ನಲ್ಲಿ ಕಾಯಂ ಸ್ಥಾನ ಪಡೆದಿವೆ. ಸಮತೋಲಿತ ಆಹಾರದಿಂದ ಆರೋಗ್ಯ ಚೆನ್ನಾಗಿರುತ್ತದೆ ಅನ್ನೋದು ನನ್ನ ನಂಬಿಕೆ. ಚಾಟ್ಸ್ ತಿನ್ನುವ ಅಭ್ಯಾಸವಿದೆಯಾದರೂ ಮನೆಯಲ್ಲಿ ಮಾಡಿರುವ ಅಡುಗೆಗೇ ಆದ್ಯತೆ. ಪಾನಿಪೂರಿ ಇತ್ಯಾದಿಗಳನ್ನು ಮನೆಯಲ್ಲಿಯೇ ಮಾಡ್ತಾರೆ. ಹಾಗಾಗಿ, ಹೊರಗೆ ತಿನ್ನುವ ಅಭ್ಯಾಸವಿಲ್ಲ. ಬೆಳಗಿನ ಉಪಾಹಾರಕ್ಕೂ ಮುನ್ನ ನಿತ್ಯವೂ ಒಂದಲ್ಲ ಒಂದು ಹಣ್ಣಿನ ರಸ ಕುಡಿಯತ್ತೇನೆ. ಅರಿಶಿಣದ ಪುಡಿಗೆ ನೆಲ್ಲಿಕಾಯಿ ಪುಡಿ ಸೇರಿಸಿ ಜ್ಯೂಸ್ ರೀತಿ ಕುಡಿಯುತ್ತೇನೆ ಎಂದು ತಮ್ಮ ಡಯೆಟ್ ಚಾರ್ಟ್ ಬಿಚ್ಚಿಡುತ್ತಾರೆ ಅವರು. 

ವರ್ಕೌಟ್ ತಪ್ಪಿಸೋಲ್ಲ!

ವಾರದಲ್ಲಿ ಐದು ದಿನ ಜಿಮ್‌ನಲ್ಲಿ ವರ್ಕೌಟ್ ಮಾಡ್ತೀನಿ. ಎಷ್ಟೇ ಕಷ್ಟವಾದರೂ ವರ್ಕೌಟ್ ಮಾತ್ರ ತಪ್ಪಿಸೋಲ್ಲ. ಮೊಬೈಲ್ ಬಂದ ಮೇಲೆ ಬಹುತೇಕರು ಅದರಲ್ಲಿಯೇ ಕಾಲ ಕಳೆಯುತ್ತೇವೆ. ದೈಹಿಕ ಕಸರತ್ತು ಇಲ್ಲವಾಗಿದೆ. ಹಾಗಾಗಿ, ದೈಹಿಕ ಕಸರತ್ತು ಬೇಡುವ ಯಾವುದೇ ಕೆಲಸವನ್ನೂ ನಾನು ಮುಂದೂಡುವುದಿಲ್ಲ. ಜಿಮ್‌ನಲ್ಲಿ ಎಸಿ ವಾತಾವರಣದಲ್ಲಿ ವರ್ಕೌಟ್ ಮಾಡುವುದಕ್ಕಿಂತ ಉದ್ಯಾನಗಳಲ್ಲಿ ವಾಕಿಂಗ್ ಮಾಡುವುದೇ ನನಗಿಷ್ಟ. ದಿನಕ್ಕೆ ಹತ್ತರಿಂದ ಹನ್ನೆರಡು ಸಾವಿರದಷ್ಟು ಹೆಜ್ಜೆಗಳನ್ನು ತಪ್ಪದೇ ಹಾಕುತ್ತೇನೆ.

ಒತ್ತಡ ನಿವಾರಣೆಗೆ ಕಾರ್ಟೂನ್, ಮಂತ್ರ!

ಒತ್ತಡವಿಲ್ಲದ ಬದುಕಿಲ್ಲ. ಸಿನಿಮಾ, ಕಿರುತೆರೆ, ನಮ್ಮ ಸಂಸ್ಥೆ ಹೀಗೆ ಎಲ್ಲದರ ಒತ್ತಡ ನನಗೂ ಇದೆ. ಆದರೆ, ಅದನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡಿದ್ದೇನೆ. ಈಗಲೂ ನಾನು ಟಿ.ವಿಯಲ್ಲಿ ಬರುವ ಕಾರ್ಟೂನ್‌ಗಳನ್ನು ನೋಡ್ತೀನಿ. ಮಕ್ಕಳು ಹೇಗೆ ಎಂಜಾಯ್ ಮಾಡ್ತಾರೋ ನಾನೂ ಹಾಗೇ ಮಾಡ್ತೀನಿ. ಅದು ನನ್ನ ಒತ್ತಡ ನಿವಾರಣೆಗೆ ಸಹಕಾರಿ. ಮಲಗುವ ಮುನ್ನ ಕೆಲ ಮಂತ್ರಗಳು ಮತ್ತು ಇಂಪಾದ ಹಾಡುಗಳನ್ನು ಕೇಳಿಕೊಂಡು ಮಲಗ್ತೀನಿ. ಇದರಿಂದ ಮೈಮನಸಿನ ದಣಿವು ನಿವಾರಣೆಯಾಗಿ, ಒಳ್ಳೆಯ ನಿದ್ದೆ ಬರುತ್ತದೆ. ನಿದ್ದೆ ಚೆನ್ನಾಗಿ ಮಾಡಿದ್ರೆ ಆರೋಗ್ಯವೂ ಚೆನ್ನಾಗಿರುತ್ತೆ ಅಂತ ಅರ್ಥ.

ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ನಾನು ವಾಹನ ಓಡಿಸುವುದಿಲ್ಲ. ಬೇರೆಯವರಿಗೆ ಡ್ರೈವ್ ಮಾಡಲು ಬಿಟ್ಟು ದಟ್ಟಣೆಯ ಆ ಸಮಯದಲ್ಲಿ ಸಾಧ್ಯವಾದಷ್ಟು ನಿದ್ದೆ ಮಾಡ್ತೀನಿ ಎಂದು ಮಾತು ಮುಗಿಸಿದರು ಸೃಜನ್.

ನಡಿಗೆಯಿಂದಾಗುವ ಪ್ರಯೋಜನಗಳು

1  ದೇಹದ ತೂಕ ಇಳಿಸಬಯಸುವವರಿಗೆ ನಡಿಗೆ ನೆರವಾಗುತ್ತದೆ. ತೂಕ ಇಳಿಕೆಯ ಸಂದರ್ಭದಲ್ಲಿ ಸ್ನಾಯುಗಳ ಮೇಲಾಗುವ ಏರಿಳಿತಗಳ ಸಮರ್ಪಕ ನಿರ್ವಹಣೆಯ ಜೊತೆಗೆ ದೇಹದಲ್ಲಿನ ಚಯಾಪಚಯಕ್ಕೂ ನಡಿಗೆ ಸಹಾಯ ಮಾಡುತ್ತದೆ. 

2  ಕ್ಯಾಲೊರಿ ಕಡಿಮೆ ಮಾಡಿಕೊಳ್ಳಲು ನಡಿಗೆ ಉತ್ತಮ ವ್ಯಾಯಾಮ. ಇದರಿಂದ ದೇಹ ತೂಕ ಕಡಿಮೆಯಾಗುವುದಲ್ಲದೇ, ತೂಕ ನಿರ್ವಹಣೆಯೂ ಸಮರ್ಪಕವಾಗುತ್ತದೆ. 

3  ದಿನದ ಅಂತ್ಯದಲ್ಲಿನ ಕೆಲಸ ದಣಿವಿನ ನಿವಾರಣೆಗೆ ನಡಿಗೆ ಸಹಾಯಕ. ಒತ್ತಡದ ಮಟ್ಟ ಕಡಿಮೆ ಮಾಡಿ, ಚಿಂತೆಗಳನ್ನು ದೂರ ಮಾಡುವ ಶಕ್ತಿ ನಡಿಗೆಗಿದೆ. 

4  ಪ್ರತಿನಿತ್ಯ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನಡೆಯುವುದು ಹೃದಯದ ಆರೋಗ್ಯಕ್ಕೆ ಹಿತ.

5  ನಿಯಮಿತವಾಗಿರುವ ದೈಹಿಕ ಚಟುವಟಿಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನಡಿಗೆಯು ದೈನಂದಿನ ದಿನಚರಿಯಲ್ಲಿ ಸೇರಿಸಬಹುದಾದ ಸರಳ ವ್ಯಾಯಾಮ. ಮಧುಮೇಹದ ಮಟ್ಟವನ್ನು ನಿರ್ವಹಿಸಲು ನಡಿಗೆ ಸಹಕಾರಿ. 

6  ನಿತ್ಯದ ನಡಿಗೆಯಿಂದಾಗಿ ಮೊಣಕಾಲು, ಕೀಲುಗಳಲ್ಲಿರುವ ಸ್ನಾಯುಗಳು ಬಲ ಪಡೆದುಕೊಳ್ಳುತ್ತವೆ.  ರೋಗನಿರೋಧಕ ಶಕ್ತಿ ಹೆಚ್ಚಿಸಲು ನಡಿಗೆಯು ಉತ್ತಮ ವ್ಯಾಯಾಮ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು