ಭಾನುವಾರ, ಮಾರ್ಚ್ 26, 2023
23 °C
ನಟಿಯರಾದ ತಮನ್ನಾ, ಕಾಜಲ್‌, ರಕುಲ್‌ ಪ್ರೀತ್‌ ಸಿಂಗ್‌ ಅವರ ಕಥೆ–ವ್ಯಥೆ

ಈ ಸ್ಟಾರ್‌ ನಟಿಯರಿಗೆ ಹೊಸ ನಟರ ಮೇಲೆ ಮೋಹವೇಕೆ?

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

Prajavani

ವಯಸ್ಸಾದಂತೆ ಸ್ಟಾರ್ ನಟಿಯರಿಗೆ ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾಗುವುದು ಅಲಿಖಿತ ನಿಯಮ. ಕೆಲವರು ನಾಯಕಿಯ ಪಾತ್ರದಿಂದ ಪೋಷಕ ಪಾತ್ರಕ್ಕೆ ಸೀಮಿತರಾಗುತ್ತಾರೆ. ಮತ್ತೆ ಕೆಲವು ನಟಿಯರು ಮದುವೆಯಾಗಿ ಬೆಳ್ಳಿತೆರೆಯಿಂದಲೇ ದೂರ ಸರಿದು ಬಿಡುತ್ತಾರೆ. ಕೆಲವರಿಗೆ ಕೊನೆ ಕೊನೆಗೆ ಅಮ್ಮನ ಪಾತ್ರದಿಂದ ಹಿಡಿದು ಅಜ್ಜಿ ಪಾತ್ರಕ್ಕೂ ಬಡ್ತಿ ಸಿಕ್ಕಿ ಬಿಡುತ್ತದೆ. ಈ ನಡುವೆ ಸ್ಟಾರ್‌ ನಟರ ತಾಯಿಯ ಪಾತ್ರಕ್ಕಷ್ಟೇ ಸೀಮಿತಗೊಂಡವರು ಇದ್ದಾರೆ. ಆದರೆ, ನಟನೆಯ ಮೇಲೆ ಕಡುಮೋಹ ಹೊಂದಿದವರು ಎಂತಹ ಪಾತ್ರ ನೀಡಿದರೂ ನಟಿಸಲು ಸಿದ್ಧರಿರುತ್ತಾರೆ.

ನಟರಿಗೆ ವಯಸ್ಸಿನ ಮಾತು ಅನ್ವಯಿಸದು. ಹೆಣ್ಣಿನ ಮೂಲಕವೇ ಪರದೆ ಮೇಲೆ ಆ್ಯಕ್ಷನ್, ಥ್ರಿಲ್ಲರ್‌, ರೊಮ್ಯಾಂಟಿಕ್‌ ಕಥೆಗಳನ್ನು ದಾಟಿಸುವ ನಿರ್ದೇಶಕರು ಮತ್ತು ನಿರ್ಮಾಪಕರು 30 ವರ್ಷ ದಾಟಿದ ನಟಿಯರಲ್ಲಿ ನಟನೆಯ ಕೌಶಲವಿದ್ದರೂ ಅವರ ಮೇಲೆ (ಕೆಲವು ನಟಿಯರಿಗೆ ಈ ಮಾತು ಅನ್ವಯಿಸದು) ಅವಜ್ಞೆ ಏಕೆ ತಳೆಯುತ್ತಾರೆ ಎಂಬುದು ನಿಗೂಢ.

ಕೆಲವು ಜನಪ್ರಿಯ ನಟಿಯರು ತಮ್ಮ ಪ್ರಭಾವಳಿಯಿಂದ ಹೊರಬಂದು ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಾರೆ. ಆ ಮೂಲಕ ಬೆಳ್ಳಿತೆರೆಯಲ್ಲಿ ದೀರ್ಘಕಾಲ ಉಳಿಯುವುದು ಅವರ ಹೆಬ್ಬಯಕೆ. ಆದರೆ, ದಶಕದ ಹಿಂದೆ ಸ್ಟಾರ್‌ ನಟರ ಜೊತೆಗೆ ಸೊಂಟ ಬಳುಕಿಸಿದ್ದ ಸ್ಟಾರ್‌ ನಟಿಯರು ಈಗ ಅಸ್ತಿತ್ವದ ಉಳಿವಿಗಾಗಿ ಹೊಸ ನಟರ ಸಿನಿಮಾಗಳಲ್ಲೂ ನಟಿಸಲು ಮುಂದಾಗುತ್ತಿರುವುದು ಹೊಸ ಬೆಳವಣಿಗೆ.

ನಟಿ ತಮನ್ನಾ ಭಾಟಿಯಾ ಅವರ ಹೆಸರು ಕೇಳದವರು ಕಡಿಮೆ. ‘ಬಾಹುಬಲಿ’ ಸರಣಿ ಸಿನಿಮಾಗಳಲ್ಲಿ ಆಕೆಯ ಮನೋಜ್ಞ ನಟನೆಗೆ ಮನಸೋಲದವರು ವಿರಳ. ದಶಕದ ಹಿಂದೆ ಹಿಂದಿ, ತೆಲುಗು, ತಮಿಳಿನ ಸ್ಟಾರ್‌ ನಟರ ಜೊತೆಗೆ ಬಣ್ಣ ಹಚ್ಚಿದ್ದು ಆಕೆಯ ಹೆಗ್ಗಳಿಕೆ. ಈಗ ಆಕೆಯದ್ದು ಅವಕಾಶಕ್ಕಾಗಿ ಹುಡುಕಾಟ ನಡೆಸುವ ಸ್ಥಿತಿ. ಈಗ ಅವರು ಸತ್ಯದೇವ್‌ ನಟನೆಯ ತೆಲುಗಿನ ‘ಗುರ್ತುಂಡ ಸೀತಾಕಾಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕನ್ನಡದ ‘ಲವ್‌ ಮಾಕ್ಟೇಲ್’ ಚಿತ್ರದ ರಿಮೇಕ್‌. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಕನ್ನಡದ ‘ಮೈನಾ’ ಚಿತ್ರದ ಖ್ಯಾತಿಯ ನಾಗಶೇಖರ್‌.

ನಟಿ ರಕುಲ್ ಪ್ರೀತ್‌ ಸಿಂಗ್‌ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಟ ಸಾಯಿ ಧರ್ಮತೇಜ್‌ ಅವರ ಸಹೋದರ ವೈಷ್ಣಬ್‌ ತೇಜ್‌ ನಟನೆಯ ತೆಲುಗಿನ ‘ಕೃಷ್ಣ’ ಸಿನಿಮಾದಲ್ಲಿ ಆಕೆ ನಟಿಸಲು ಒಪ್ಪಿದ್ದಾರೆ. ದಶಕದ ಹಿಂದೆ ಟಾಲಿವುಡ್‌ನ ಅನಭಿಷಕ್ತ ರಾಣಿಯಾಗಿ ಮೆರೆದಿದ್ದವರು ನಟಿ ಕಾಜಲ್‌ ಅಗರ್‌ವಾಲ್. ಆಕೆ ಕೂಡ ಬೆಲ್ಲಮಕೊಂಡ ಶ್ರೀನಿವಾಸ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಉಂಟು.

ತಮನ್ನಾ, ಕಾಜಲ್‌, ರಕುಲ್‌ ಇನ್ನೂ ಹಸೆಮಣೆ ಏರಿಲ್ಲ. ಆದರೆ, ಚಿತ್ರರಂಗದಲ್ಲಿ ದೀರ್ಘಕಾಲ ಉಳಿಯಬೇಕೆಂಬುದು ಅವರ ಮಹದಾಸೆ. ಮತ್ತೊಂದೆಡೆ ಸ್ಟಾರ್ ನಟರು ತಮ್ಮ ಸಿನಿಮಾಗಳಿಗೆ ಈ ನಟಿಯರನ್ನು ಪರಿಗಣಿಸುತ್ತಿಲ್ಲ. ಅವರದ್ದು ಹೊಸ ನಟಿಯರಿಗೆ ಮಣೆ ಹಾಕುವ ಸಂಪ್ರದಾಯ. ಹೊಸ ಹೀರೊಯಿನ್‌ಗಳು ಸಿಗದಿದ್ದ ಪಕ್ಷದಲ್ಲಿ ಮಾತ್ರವೇ ಈ ನಟಿಯರಿಗೆ ಅವಕಾಶ ನೀಡುತ್ತಿದ್ದಾರೆ.

ಹೊಸ ನಟರು ಸಾಕಷ್ಟು ತಯಾರಿ ಮಾಡಿಕೊಂಡೇ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅವರು ಪ್ರಯೋಗಕ್ಕೂ ಒಗ್ಗಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಯುವಜನರನ್ನು ಆಕರ್ಷಿಸುವಂತಹ ಕಥೆಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿಯೇ, ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲೂ ಜೋರಾಗಿ ಸದ್ದು ಮಾಡುತ್ತಿವೆ. 

ಇಂತಹ ಹೊಸ ನಟರ ಸಿನಿಮಾಗಳಲ್ಲಿ ನಟಿಸಿದರೆ ಯಂಗರ್‌ ಜನರೇಷನ್‌ಗೂ ಹತ್ತಿರವಾಗಬಹುದು ಎಂಬುದು ತಮನ್ನಾ, ರಕುಲ್‌, ಕಾಜಲ್‌ ಅವರಂತಹ ನಟಿಯರ ಎಣಿಕೆ. ಹೊಸ ನಟರಿಗೆ ನಾಯಕಿಯರಾದರೆ ಸಂಭಾವನೆ ಕಡಿಮೆಯಾಗಬಹುದು; ಆದರೆ ಬೇಡಿಕೆ ಕಡಿಮೆಯಾಗುವುದಿಲ್ಲ. ಸಿನಿಮಾ ಗೆದ್ದರೆ ಸಂಭಾವನೆಯ ಗ್ರಾಫ್‌ ಕೂಡ ಏರಿಕೆಯಾಗುತ್ತದೆ. ಜೊತೆಗೆ, ಚಿತ್ರರಂಗದಲ್ಲಿ ದೀರ್ಘಕಾಲ ಉಳಿಯಬಹುದು ಎಂಬುದು ಅವರ ಲೆಕ್ಕಾಚಾರ.

ಹಾಗಾಗಿಯೇ, ಕಡಿಮೆ ಸಂಭಾವನೆ ಲಭಿಸಿದರೂ ನಟಿಯರಾದ ಇಲಿಯಾನ ಡಿಕ್ರೂಸ್‌, ಹನ್ಸಿಕಾ ಮೋಟ್ವಾನಿ, ತ್ರಿಷಾ ಕೃಷ್ಣನ್‌ ಹೊಸ ನಟರ ಜೊತೆಗೆ ನಟಿಸಲು ಹಾತೊರೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು