ನವದೆಹಲಿ: ಬಿಡುಗಡೆಯಾದ ಮೊದಲ ವಾರವೇ ಬಾಲಿವುಡ್‌ನ ‘ಸ್ತ್ರೀ–2’ ಚಿತ್ರವು ವಿಶ್ವದಾದ್ಯಂತ ₹400 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಅಮರ್ ಕೌಶಿಕ್ ನಿರ್ದೇಶನದ, ಮದ್ದೋಕ್ ಫಿಲ್ಮ್ಸ್ ನಿರ್ಮಾಣ ಮಾಡಿರುವ ಹಿಂದಿ ಚಿತ್ರವು ಆಗಸ್ಟ್ 15ರಂದು ‘ಖೇಲ್ ಖೇಲ್ ಮೇನ್’, ‘ವೇದಾ’ ಚಿತ್ರಗಳ ಜೊತೆ ತೆರೆಕಂಡಿತ್ತು.
2018ರಲ್ಲಿ ತೆರೆ ಕಂಡ ‘ಸ್ತ್ರೀ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಸ್ತ್ರೀ–2’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮತ್ತು ಅಪರ್‌ಶಕ್ತಿ ಖುರಾನಾ ಇದ್ದಾರೆ.
ಚಿತ್ರವು ಭಾರತದಲ್ಲಿ ₹342 ಕೋಟಿ ಮತ್ತು ವಿದೇಶದಲ್ಲಿ ₹59 ಕೋಟಿ ಗಳಿಕೆ ಕಂಡಿದೆ ಎಂದು ಮದ್ದೋಕ್ ಫಿಲ್ಮ್ಸ್ ಹೇಳಿದೆ.
ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ನಿವ್ವಳ ₹289.6 ಕೋಟಿ ಎಂದು ಚಿತ್ರ ನಿರ್ಮಾಣ ಸಂಸ್ಥೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
'ಬ್ಲಾಕ್ ಬಸ್ಟರ್ ಸಕ್ಸಸ್ ಸಿಕ್ಕಿರುವ ಈ ವಾರ ನಮ್ಮ ಪಾಲಿಗೆ ಅಚ್ಚರಿಕರ ವಾರವಾಗಿದ್ದು, ಪ್ರೇಕ್ಷಕರೇ ನಿಮ್ಮ ಪ್ರೀತಿಗೆ ಧನ್ಯವಾದ’ಎಂದು ಚಿತ್ರ ನಿರ್ಮಾಕರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಸ್ತ್ರೀ–2’ ಚಿತ್ರವು ಹಾರರ್ ಕಾಮಿಡಿ ಕಥಾಹಂದರವನ್ನು ಹೊಂದಿದೆ. ನಟಿ ತಮನ್ನಾ ನೃತ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಆನ್‌ಲೈನ್‌ನಲ್ಲಿ ಟ್ರೆಂಡ್ ಆಗಿದೆ.