ಹೈದರಾಬಾದ್: ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ (ಕೋರಿಯೋಗ್ರಾಫರ್) ಜಾನಿ ಮಾಸ್ಟರ್ ಅಲಿಯಾಸ್ ಶೇಕ್ ಜಾನಿ ಬಾಷಾ ವಿರುದ್ಧ ಹೈದರಾಬಾದ್‌ನಲ್ಲಿ ಸೆ.16ರಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಹೈದರಾಬಾದ್ ಹೊರವಲಯದ ನರ್ಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಜಾನಿ ಮಾಸ್ಟರ್ ಚಿತ್ರವೊಂದರ ಹೊರಾಂಗಣ ಶೂಟಿಂಗ್ ವೇಳೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಯುವತಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನರ್ಸಿಂಗಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೂರಾರು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಿಗೆ ಕೋರಿಯೋಗ್ರಫಿ ಮಾಡಿರುವ ಜಾನಿ, ಜನಸೇನಾ ಪಕ್ಷದ ಕಾರ್ಯಕರ್ತರು ಹೌದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಸೇನಾದ ವಕ್ತಾರರು, ಪ್ರಕರಣ ದಾಖಲಾಗಿರುವುದರಿಂದ ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಜಾನಿ ಮಾಸ್ಟರ್ ಪುಷ್ಪ ಚಿತ್ರದ ‘ಶ್ರೀವಲ್ಲಿ’, ಅಲಾ ವೆಂಕಟಪುರದಲು ಚಿತ್ರದ ‘ಬುಟ್ಟ ಬೊಮ್ಮ’, ಪುನೀತ್ ರಾಜಕುಮಾರ್ ಅವರ ರಾಜಕುಮಾರ ಚಿತ್ರದ ‘ಅಪ್ಪು ಡ್ಯಾನ್ಸ್’ ಸೇರಿಂದತೆ ಅನೇಕ ಹಿಟ್ ಹಾಡುಗಳಿಗೆ ನೃತನಿರ್ದೇಶನ ಮಾಡಿದ್ದಾರೆ.