ಶನಿವಾರ, ಆಗಸ್ಟ್ 13, 2022
26 °C
‘ಸುತ್ತೂರು ಶ್ರೀ ಮಠ- ಗುರುಪರಂಪರೆ’ ಅನಿಮೇಷನ್ ಚಿತ್ರ, ಸ್ಥಳೀಯ ಪ್ರತಿಭೆಗಳ ಕಾರ್ಯಕ್ಕೆ ಶ್ಲಾಘನೆ

PV Web Exclusive | ವಿಶ್ವದರ್ಜೆ ಅನಿಮೇಷನ್‌ ಚಿತ್ರ ರೂಪಿಸಿದ ತಂತ್ರಜ್ಞರು

ಎನ್. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

prajavni

ಹಾಲಿವುಡ್ ಚಿತ್ರಗಳಿಗೆ ಅನಿಮೇಷನ್, ಗ್ರಾಫಿಕ್ಸ್ ಮಾಡಿಕೊಡುವ ತಂತ್ರಜ್ಞರು ಬೆಂಗಳೂರಿನಲ್ಲಿ ಸಾಕಷ್ಟಿದ್ದಾರೆ. ಅನಿಮೇಷನ್ ಸಂಸ್ಥೆಗಳೂ ಇವೆ. ಆದರೆ, ಮೈಸೂರಿನಲ್ಲಿ ಅನಿಮೇಷನ್ ತಂತ್ರಜ್ಞರ ಸಂಖ್ಯೆ ತೀರಾ ವಿರಳ. ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳ ಕೊರತೆಯ ನಡುವೆಯೂ ‘ಶೂನ್ಯೇಕ ಸಲೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆಯು ‘ಸುತ್ತೂರು ಶ್ರೀ ಮಠ– ಗುರುಪರಂಪರೆ’ ಎಂಬ ಅನಿಮೇಷನ್ ಚಿತ್ರವನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ರೂಪಿಸುವ ಮೂಲಕ ಗಮನ ಸೆಳೆದಿದೆ.

ಸುಮಾರು ಸಾವಿರ ವರ್ಷಗಳ ಹಿಂದೆ ಆದಿಗುರು ಶಿವರಾತ್ರಿ ಸ್ವಾಮೀಜಿಯಿಂದ ಸುತ್ತೂರಿನಲ್ಲಿ ಸ್ಥಾಪಿತವಾದ ‘ಸುತ್ತೂರು ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠ’ವು ತ್ರಿವಿಧ ದಾಸೋಹಗಳ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಾ ಬಂದಿದೆ. ಈ ಮಠದ ಪರಂಪರೆ, ಇತಿಹಾಸ, ಮಠದ ಆಶಯ ಹಾಗೂ ಧಾರ್ಮಿಕ ಪಥದಲ್ಲಿನ ಸಾಮಾಜಿಕ ಚಿಂತನೆಗಳನ್ನು ಎಲ್ಲ ತಲೆಮಾರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ‘ಶ್ರೀ ಸುತ್ತೂರು ಮಠ- ಗುರುಪರಂಪರೆ’ (ಕನ್ನಡ ಭಾಷೆ) ಹಾಗೂ ‘The Heritage of Sri Sutturu Math’ (ಇಂಗ್ಲಿಷ್ ಭಾಷೆ) ಎಂಬ ಅನಿಮೇಷನ್ ಚಿತ್ರವನ್ನು ನಿರ್ಮಿಸಲಾಗಿದೆ. ‘ಶೂನ್ಯೇಕ ಸಲೂಷನ್ಸ್ ಪ್ರೈವೇಟ್ ಲಿಮಿಟೆಡ್’ನ ಸಂಸ್ಥಾಪಕ ಅಬ್ದುಲ್ ಕರೀಮ್ ಈ ಚಿತ್ರದ ನಿರ್ದೇಶಕರು.

ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯುಳ್ಳ ಮಹಾಪುರುಷರ ಜೀವನ- ಸಾಧನೆಯನ್ನು ಅನಿಮೇಷನ್ ರೂಪದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ಸ್ವಾಮೀಜಿಗಳ ಜೀವನವನ್ನು ಹೆಚ್ಚು ವೈಭವೀಕರಿಸದೆ ನೈಜವಾಗಿ ಕಟ್ಟಿಕೊಡುವ ಸವಾಲು ನಿರ್ದೇಶಕರು ಹಾಗೂ ತಂತ್ರಜ್ಞರ ಮುಂದೆ ಇರುತ್ತದೆ. ಇಂತಹ ಸವಾಲನ್ನು ಅಬ್ದುಲ್ ಕರೀಮ್ ಹಾಗೂ ಅವರ ತಂಡದವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಸುತ್ತೂರು ಮಠದ ಗುರುಪರಂಪರೆ ಬಗ್ಗೆ ಅನಿಮೇಷನ್ ಚಿತ್ರ ನಿರ್ಮಿಸಲು ಜೆ.ಎಸ್.ಎಸ್ ಸಂಸ್ಥೆಯು ನಿರ್ಧರಿಸಿತ್ತು. ಸುತ್ತೂರು ಮಠದ ಗುರುಪರಂಪರೆಯಲ್ಲಿ 24 ಸ್ವಾಮೀಜಿಗಳು ಬರುತ್ತಾರೆ. ಆದಿಗುರು ಶಿವರಾತ್ರಿ ಸ್ವಾಮೀಜಿಯಿಂದ ಹಿಡಿದು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ (23ನೇ ಸ್ವಾಮೀಜಿ) ಹಾಗೂ 24ನೇ ಸ್ವಾಮೀಜಿಯಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿವರೆಗಿನ ಜೀವನ– ಸಾಧನೆಯ ಬಗ್ಗೆ ಸ್ಕ್ರಿಪ್ಟ್ ಮಾಡಬೇಕಿತ್ತು. ಇದಕ್ಕಾಗಿ ಜೆ.ಎಸ್.ಎಸ್ ಸಂಸ್ಥೆಯು ವಿದ್ವಾಂಸರು, ಸಾಹಿತಿಗಳು ಹಾಗೂ ಆಡಳಿತಾಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿಯನ್ನೂ ರಚನೆ ಮಾಡಿತ್ತು. ಸಮಿತಿಯು ಅನೇಕ ಹಂತಗಳಲ್ಲಿ ಚರ್ಚಿಸಿ ಚಿತ್ರಕಥೆಯನ್ನು ಸಿದ್ಧಪಡಿಸಿತ್ತು.


ಸುತ್ತೂರು ಮಠದ ಸಂಸ್ಥಾಪಕರಾದ ಆದಿಗುರು ಶಿವರಾತ್ರಿ ಸ್ವಾಮೀಜಿಯ ಮಾಡೆಲಿಂಗ್‌ ಹಾಗೂ ಟೆಕ್ಸ್ಚರಿಂಗ್‌ ಮಾಡಿರುವುದು

ಈ ಚಿತ್ರಕಥೆಯನ್ನು ಅನಿಮೇಷನ್ ರೂಪದಲ್ಲಿ ಅಳವಡಿಸುವ ಹೊಣೆಯನ್ನು ಹೊತ್ತ ಶೂನ್ಯೇಕ ಸಲೂಷನ್ ಸ್ಟುಡಿಯೊದವರು ಸುತ್ತೂರು ಮಠದ ದಾಖಲೆಗಳು, ವಿವಿಧ ಗ್ರಂಥಗಳು, ಚಿತ್ರಗಳು, ವಿಡಿಯೊಗಳು, ಮಠದ ವಸ್ತುಸಂಗ್ರಹಾಲಯದಲ್ಲಿ ಸಿಕ್ಕ ಮಠದ ಮಾದರಿಗಳನ್ನು (ಮಿನಿಯೇಚರ್‌) ಅಭ್ಯಾಸ ಮಾಡಿದ್ದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಜೆ.ಎಸ್.ಎಸ್. ಸಂಸ್ಥೆಯ ತಜ್ಞರ ಸಮಿತಿಯ ಸಲಹೆ ಸೂಚನೆ ಪಡೆದು ಅನಿಮೇಷನ್ ಚಿತ್ರವನ್ನು ರೂಪಿಸಲಾಗಿದೆ. ಚಿತ್ರಕಥೆ, ವಿನ್ಯಾಸ, ನಿರ್ಮಾಣ, ತಾಂತ್ರಿಕ ಅನುಷ್ಠಾನ, ಸಂಗೀತ, ಡಬ್ಬಿಂಗ್ ಸೇರಿದಂತೆ ಎಲ್ಲ ಹಂತದ ಕೆಲಸಗಳೂ ಮೈಸೂರಿನ ಸ್ಟುಡಿಯೊದಲ್ಲೇ ಆಗಿರುವುದು ಈ ಚಿತ್ರದ ಹೆಗ್ಗಳಿಕೆ. ಅಂತರರಾಷ್ಟ್ರೀಯ ಗುಣಮಟ್ಟದ 3ಡಿ ಅನಿಮೇಷನ್‌ನಲ್ಲಿ ಮೂಡಿಬಂದ ‘ಸುತ್ತೂರು ಶ್ರೀಮಠ– ಗುರುಪರಂಪರೆ’ ಚಿತ್ರವು ರಾಜ್ಯದಲ್ಲೇ ಪ್ರಥಮ ಎಂದರೆ ತಪ್ಪಾಗಲಾರದು.

ನಾಲ್ಕು ವರ್ಷಗಳ ಶ್ರಮ
‘ಮಠದ ಬಗ್ಗೆ ಅನಿಮೇಷನ್ ಚಿತ್ರ ಮಾಡುವಂತೆ 2014ರಲ್ಲಿ ನನಗೆ ಆಹ್ವಾನ ಬಂತು. ಆರಂಭದಲ್ಲಿ ಇದನ್ನು 5ರಿಂದ 10 ನಿಮಿಷದ ಅನಿಮೇಷನ್ ಚಿತ್ರ ಮಾಡುವ ಆಲೋಚನೆಯಲ್ಲಿ ಜೆ.ಎಸ್.ಎಸ್ ಸಂಸ್ಥೆ ಇತ್ತು. ಸಂಸ್ಥೆಯ ತಜ್ಞರು ನೀಡಿದ್ದ ಸ್ಕ್ರಿಪ್ಟ್ ಒಂದೂವರೆ ಗಂಟೆಗೆ ಆಗುವಷ್ಟು ಇತ್ತು. ಅದನ್ನು 30 ನಿಮಿಷಕ್ಕೆ ಬರುವಂತೆ ಮಾಡಬೇಕಿತ್ತು. ಈ ಸ್ಕ್ರಿಪ್ಟ್ 2018ರ ಆಗಸ್ಟ್‌ನಲ್ಲಿ ನಮ್ಮ ಕೈ ಸೇರಿತ್ತು. ಅಲ್ಲಿಂದ ನಮ್ಮ ಕೆಲಸ ಶುರುವಾಗಿತ್ತು’ ಎನ್ನುತ್ತಾರೆ ಅಬ್ದುಲ್ ಕರೀಮ್.

‘ಸುತ್ತೂರು ಮಠದ ಪರಂಪರೆ ಒಂದು ಸಾವಿರ ವರ್ಷಗಳದ್ದು. ಅದನ್ನು ಅರ್ಧ ಗಂಟೆಯ ದೃಶ್ಯರೂಪಕ್ಕಿಳಿಸುವ ಸವಾಲು ನಮ್ಮ ಮೇಲಿತ್ತು. ಅಲ್ಲದೆ, ಇದರಲ್ಲಿ ತಮಿಳುನಾಡಿನ ರಾಜೇಂದ್ರ ಚೋಳ ಹಾಗೂ ತಲಕಾಡಿನ ಗಂಗರ ರಾಜ 4ನೇ ರಾಚಮಲ್ಲ ಅವರ ಯುದ್ಧದ ಸನ್ನಿವೇಶಗಳೂ ಬರುತ್ತವೆ. ಪ್ರಮುಖ ಸ್ವಾಮೀಜಿಗಳ ಹಾವಭಾವ, ನಡಿಗೆ, ಉಡುಗೆ-ತೊಡುಗೆ, ಅವರು ಬಳಸಿದ್ದ ಪೂಜಾ ಪರಿಕರ ಹೀಗೆ... ಎಲ್ಲವನ್ನೂ ನೈಜವಾಗಿ ಚಿತ್ರಿಸಬೇಕಿತ್ತು. ಅಲ್ಲದೆ, ಇದರಲ್ಲಿ ಮೈಸೂರಿನ ಅರಮನೆ, ಸುತ್ತೂರು ಗದ್ದಿಗೆ, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳು, ರಾಮನಗರ ಬೆಟ್ಟ ಸೇರಿದಂತೆ ಅನೇಕ ಕಟ್ಟಡ ಹಾಗೂ ಭೂದೃಶ್ಯಗಳೂ ಬರುತ್ತವೆ. ಅವುಗಳನ್ನೂ ನೈಜತೆಗೆ ಚ್ಯುತಿ ಬಾರದಂತೆ ರೂಪಿಸಬೇಕಿತ್ತು. ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತಿದ್ದೇವೆ’ ಎಂದು ಅವರು ವಿಶ್ವಾಸದಿಂದ ನುಡಿಯುತ್ತಾರೆ.

‘ನಮ್ಮ ತಂಡದಲ್ಲಿ ಮೈಸೂರಿನ ಅದರಲ್ಲೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವ ತಂತ್ರಜ್ಞರು ಇದ್ದಾರೆ. ಅವರ ಕೌಶಲಕ್ಕೆ ಕನ್ನಡಿ ಹಿಡಿದಂತೆ ಈ ಚಿತ್ರ ಮೂಡಿಬಂದಿದೆ. ಮೈಸೂರು ಅನಿಮೇಷನ್‌ ಹಬ್‌ ಆಗಬೇಕು ಎಂಬುದು ನನ್ನ ಕನಸು’ ಎನ್ನುತ್ತಾರೆ ಕರೀಮ್.

ಅನಿಮೇಷನ್ ಚಿತ್ರ ಹೇಗೆ ರೂಪುಗೊಳ್ಳುತ್ತದೆ?
‘ಯಾವುದೇ ಅನಿಮೇಷನ್ ಚಿತ್ರ ರೂಪುಗೊಳ್ಳಬೇಕಾದರೆ ಅನೇಕ ವಿಭಾಗಗಳಲ್ಲಿ ಹತ್ತಾರು ತಂತ್ರಜ್ಞರು ಕೆಲಸ ಮಾಡಬೇಕಾಗುತ್ತದೆ. ಈ ಚಿತ್ರಕ್ಕೆ 25 ತಂತ್ರಜ್ಞರು ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಚಿತ್ರಕಥೆಗೆ ತಕ್ಕಂತೆ ಡಿಜಿಟಲ್ ಸ್ಟೋರಿ ಬೋರ್ಡ್ ಸಿದ್ಧಪಡಿಸಲಾಗುತ್ತದೆ. ಆಯಾ ಕಥೆಗೆ ಅನುಸಾರವಾಗಿ ರೇಖಾಚಿತ್ರಗಳನ್ನು ಬಿಡಿಸಬೇಕಾಗುತ್ತದೆ. ಈ ಕಥೆಗೆ 500ರಿಂದ 600 ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಬಳಿಕ, ಕಥಾವಸ್ತುವಿನ ಪಾತ್ರಧಾರಿಗಳ ಮಾದರಿ ಚಿತ್ರಗಳನ್ನು (ಮಾಡೆಲಿಂಗ್) ಕಲಾವಿದರು ರೂಪಿಸುತ್ತಾರೆ. ಅದಕ್ಕೆ ಕಣ್ಣು, ಬಾಯಿ, ಕಾಲು, ಕೈ ಆಡಿಸುವಂತೆ ಚಲನೆಯ ರೂಪ ನೀಡುವುದನ್ನು ರಿಗ್ಗಿಂಗ್ ಎನ್ನುತ್ತಾರೆ. ರಿಗ್ಗಿಂಗ್ ಆದ ಬಳಿಕ ಮುಖ, ಕೈಕಾಲುಗಳಿಗೆ ಬಣ್ಣ ತುಂಬುವ ಕೆಲಸವನ್ನು ಟೆಕ್ಸ್ಚರಿಂಗ್ ಕಲಾವಿದರು ಮಾಡುತ್ತಾರೆ. ಉಡುಪು ಹೇಗಿರಬೇಕು ಎಂಬುದನ್ನು ಕ್ಲಾತಿಂಗ್ ವಿಭಾಗದವರು ನೋಡಿಕೊಳ್ಳುತ್ತಾರೆ. ಆನಂತರ ಇವುಗಳನ್ನು ಅನಿಮೇಷನ್‌ ವಿಭಾಗಕ್ಕೆ ಕಳುಹಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ಅಬ್ದುಲ್ ಕರೀಮ್.

‘ಯಾವುದೇ ಚಿತ್ರವು ಚಲನ ಸ್ಥಿತಿಗೆ ಬರಬೇಕಾದರೆ ಒಂದು ಸೆಕೆಂಡಿಗೆ 24 ಫ್ರೇಂಗಳು ಇರಬೇಕಾಗುತ್ತದೆ. ಹೀಗಾಗಿ, ಅನಿಮೇಷನ್ ವಿಭಾಗಕ್ಕೆ ಬರುವ ಚಿತ್ರಗಳನ್ನು 24 ಫ್ರೇಂಗಳಾಗಿ ರೂಪಿಸಬೇಕಾಗುತ್ತದೆ. ಇದು ಸವಾಲಿನ ಕೆಲಸವೂ ಹೌದು. ಮೋಷನ್ ಕ್ಯಾಪ್ಚರ್ ಎಂಬ ತಂತ್ರಾಂಶವನ್ನು ಬಳಸಿ ಅನಿಮೇಷನ್ ಮಾಡಬಹುದಾದರೂ ಅದಕ್ಕೆ ಹೆಚ್ಚಿನ ವೆಚ್ಚವಾಗುತ್ತದೆ. ಬಜೆಟ್ ದೃಷ್ಟಿಯಿಂದ ನಾವು ಕೈನೆಕ್ಟ್ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿದ್ದೇವೆ. ವ್ಯಕ್ತಿಯೊಬ್ಬರು ಪಾತ್ರಧಾರಿಯಾಗಿ ನಟಿಸುತ್ತಾರೆ. ಈ ಚಲನೆಯನ್ನು ಅನಿಮೇಟರ್‌ಗಳ ಪಾತ್ರಕ್ಕೆ ಅಳವಡಿಸಲಾಗುತ್ತದೆ. ಜೊತೆಗೆ ಕ್ಯಾಮೆರಾದ ಕೋನಗಳನ್ನೂ ತಂತ್ರಾಂಶಗಳ ಸಹಾಯದಿಂದ ನಿಗದಿಪಡಿಸಲಾಗುತ್ತದೆ. ದೃಶ್ಯಕ್ಕೆ ತಕ್ಕಂತೆ ಬೆಳಕಿನ ವಿನ್ಯಾಸವನ್ನೂ ಮಾಡಲಾಗುತ್ತದೆ. ಕಲರ್ ಕರೆಕ್ಷನ್, ಕಲರ್ ಗ್ರೇಡಿಂಗ್ ಆದ ಬಳಿಕ ಸಂಗೀತ, ಡಬ್ಬಿಂಗ್ ಕೆಲಸ ಪೂರ್ಣ ಮಾಡಲಾಗುತ್ತದೆ. ಕೊನೆಗೆ ಅನಿಮೇಷನ್ ಚಿತ್ರ ಸಿದ್ಧವಾಗುತ್ತದೆ’ ಎಂದು ಹೇಳುತ್ತಾರೆ ಕರೀಮ್.

ಅಬ್ದುಲ್‌ ಕರೀಮ್‌ ಅವರ ಮೊ.ಸಂ. 7892399080.


ಚಿತ್ರದ ನಿರ್ದೇಶಕ ಅಬ್ದುಲ್‌ ಕರೀಮ್‌

ಈ ಚಿತ್ರಕ್ಕೆ ದುಡಿದ ತಂತ್ರಜ್ಞರು
ಹರಿಕಾವ್ಯ (ಸಂಗೀತ), ದಿನಿ ವಿರಾಟ್ (ಸಂಕಲನ), ಹೇಮಂತ್ ಕುಮಾರ್ ಕೆ.ಎಸ್. (ವಿಎಫ್‌ಎಕ್ಸ್- ಟೆಕ್ಸ್ಚರ್), ಪೃಥ್ವಿರಾಜ್ ನಾಯಕ್ ಆರ್, ಸುಮನ್ ಬಿ (3ಡಿ ಮಾಡೆಲ್ಸ್), ಸೌಗಂಧ್‌ ನಕ್ಕರಿಕೆ, ಶಿವಶಂಕರ್ ಡಿ.ಎಸ್, ಸತೀಶ್ ಆರ್, ಧೀರಜ್ ಕಿರಣ್ (ರಿಗ್ಗಿಂಗ್), ಸುನಿಲ್ ಕುಮಾರ್, ಚರಣ್, ರಾಜನ್, ಪಾಪಣ್ಣ, ಮಂಜು (ಅನಿಮೇಷನ್ ವಿಭಾಗ), ಪ್ರಸನ್ನ ಕುಮಾರ್, ರೋಹಿತ್, ಪನ್ನಗ.

ಜೆಎಸ್‌ಎಸ್‌ ಸಂಸ್ಥೆಯ ತಜ್ಞರ ಸಮಿತಿ ಸದಸ್ಯರು
ಪ್ರೊ.ಮೊರಬದ ಮಲ್ಲಿಕಾರ್ಜುನ, ಆರ್.ಎಸ್. ಪೂರ್ಣಾನಂದ, ಟಿ.ಪಿ.ಪ್ರಭುಸ್ವಾಮಿ, ಎಸ್.ಎಂ.ಜಂಬುಕೇಶ್ವರ್, ಪ್ರೊ.ಮಲೆಯೂರು ಗುರುಸ್ವಾಮಿ, ಜಿ.ಎಲ್.ತ್ರಿಪುರಾಂತಕ, ಡಾ.ನಂದೀಶ್ ಹಂಚೆ, ಬಿ.ಎನ್.ನಿಜಲಿಂಗಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು