ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಡಿಎ– ಚಲನಚಿತ್ರ ಭಂಡಾರಕ್ಕೆ ಸಂಗ್ರಹಯೋಗ್ಯ ವಸ್ತು– ದಾಖಲೆ ಸಲ್ಲಿಸಿ’

ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಮನವಿ
Last Updated 10 ಅಕ್ಟೋಬರ್ 2020, 11:35 IST
ಅಕ್ಷರ ಗಾತ್ರ

ಬೆಂಗಳೂರು:ಕನ್ನಡ ಚಲನಚಿತ್ರಗಳ ಸಂಶೋಧನೆ ಮತ್ತು ಅಧ್ಯಯನ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಕಾಡೆಮಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ‘ಬಿಡಿಎ– ಚಲನಚಿತ್ರ ಭಂಡಾರ’ ಆರಂಭಿಸಿದೆ.

ರಾಜ್ಯದ ಚಲನಚಿತ್ರ ಸಂಸ್ಕೃತಿ ಸಂರಕ್ಷಿಸಲು ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಸಂಶೋಧನೆ ಉತ್ತೇಜಿಸಲು ಬಯಸುವವರು ತಮ್ಮಲ್ಲಿರುವ ಚಲನಚಿತ್ರಕ್ಕೆ ಸಂಬಂಧಿಸಿದ ಅಪರೂಪದ ಸಂಗ್ರಹಯೋಗ್ಯ ವಸ್ತುಗಳನ್ನು, ದಾಖಲೆಗಳನ್ನು ನೀಡುವಂತೆ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಚಲನಚಿತ್ರಕ್ಕೆ ಸಂಬಂಧಿತ ಎಲ್ಲ ಸಂಗ್ರಹಯೋಗ್ಯ ವಸ್ತುಗಳನ್ನು ಸಂಗ್ರಹಿಸುವುದು ಅಕಾಡೆಮಿಯ ಉದ್ದೇಶ. ಪುಣೆಯಲ್ಲಿರುವರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಮುಂಬೈಯಲ್ಲಿರುವ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ಸಂಗ್ರಹಾಲಯ ಮಾದರಿಯಲ್ಲಿ ಈ ಭಂಡಾರ ಕಾರ್ಯನಿರ್ವಹಿಸಲಿದೆ. ತಮ್ಮಲ್ಲಿ ಸಂಗ್ರಹ ಯೋಗ್ಯವಾದ ಅಪರೂಪದ ಕನ್ನಡ ಚಲನಚಿತ್ರಗಳ ಪ್ರಿಂಟ್‍ಗಳು, ಭಿತ್ತಿಪತ್ರಗಳು, ಹಾಡು ಮತ್ತು ಗೀತೆಗಳು, ಅಪ್ರಕಟಿತ ಪುಸ್ತಕಗಳು, ಚಿತ್ರಕಥೆ ಮತ್ತು ಸಂಭಾಷಣೆಗಳು, ಚಲನಚಿತ್ರ ಸಂಬಂಧಿತ ಪುಸ್ತಕಗಳು, ಕೊಡವ, ಕೊಂಕಣಿ, ಬಂಜಾರ, ತುಳು ಮತ್ತು ಬ್ಯಾರಿ ಸೇರಿ ರಾಜ್ಯದ ಇತರ ಭಾಷೆಗಳಲ್ಲಿ ತಯಾರಾದ ಚಲನಚಿತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನುಚಲನಚಿತ್ರ ಅಕಾಡೆಮಿಯ ಕಚೇರಿಗೆ ತಲುಪಿಸುವಂತೆ ಅವರು ವಿನಂತಿಸಿದ್ದಾರೆ.

ಚಲನಚಿತ್ರ ಭಂಡಾರ ಸ್ಥಾಪನೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒಪ್ಪಿಗೆ ನೀಡಿದ್ದು, ಚಲನಚಿತ್ರ ಭಂಡಾರಕ್ಕೆಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ₹1 ಕೋಟಿ ಅನುದಾನ ಒದಗಿಸಿದೆ. ನಗರದ ನಂದಿನಿ ಲೇಔಟ್‍ನಲ್ಲಿರುವ ಅಕಾಡೆಮಿ ಕಚೇರಿಯ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲ ಮಹಡಿಯಲ್ಲಿಈ ಭಂಡಾರ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಚಲನಚಿತ್ರ ಭಂಡಾರವನ್ನು ಸುಸಜ್ಜಿತಗೊಳಿಸಲು ಸಲಹಾ ಸಮಿತಿರಚಿಸಲಾಗಿದ್ದು, ಈ ಸಮಿತಿಯಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಹಿರಿಯ ಪತ್ರಕರ್ತ ಮುರುಳೀಧರ ಖಜಾನೆ, ಬೆಂಗಳೂರು ನಗರ ಇತಿಹಾಸಕಾರ ಸುರೇಶ್ ಮೂನ, ಕಲಾ ನಿರ್ದೇಶಕ ಅರುಣ್ ಸಾಗರ್, ಚಲನಚಿತ್ರ ನಿರ್ದೇಶಕ ಹಾಗೂ ಸಿನಿಮೊಟೋಗ್ರಾಫರ್ ಅಶೋಕ್ ಕಶ್ಶಪ್ ಇದ್ದಾರೆ.

ಕನ್ನಡದ ಹಾಗೂ ಜಗತ್ತಿನ ಎಲ್ಲಾ ಭಾಷೆಗಳ ಶ್ರೇಷ್ಠ ಚಲನಚಿತ್ರಗಳನ್ನು ಸಂಗ್ರಹಿಸಿ ಅವುಗಳನ್ನುಡಿಜಿಟಲೀಕರಣಗೊಳಿಸಿ, ಆಸಕ್ತರು, ಸಂಶೋಧಕರು ಅವುಗಳನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಾಗುವುದು. ಇದಕ್ಕಾಗಿ ಚಲನಚಿತ್ರ ಪ್ರಿಂಟ್‍ಗಳು, ಬೀಟಾ ಪ್ರತಿಗಳು, ಪ್ರಚಾರದ ಸ್ಥಿರಚಿತ್ರಗಳು, ಹಾಡುಗಳ ಪುಸ್ತಕಗಳು, ಕರಪತ್ರಗಳು, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪುಸ್ತಕಗಳು, ಸ್ಥಿರಚಿತ್ರಗಳು ಸೇರಿದಂತೆ ರಾಜ್ಯದ ಚಲನಚಿತ್ರ ಸಂಸ್ಕೃತಿಗೆ ಸಂಬಂಧಿಸಿದಂತೆ ಸಿಗುವ ಎಲ್ಲ ಸಂಗ್ರಹ ಯೋಗ್ಯ ವಸ್ತುಗಳನ್ನು ಈ ಭಂಡಾರಕ್ಕೆ ತಲುಪಿಸಬಹುದು. ಹೆಚ್ಚಿನ ಮಾಹಿತಿಗೆದೂರವಾಣಿ080 23493410/ 23493441 ಅಥವಾ ಮೊಬೈಲ್‌ 9449322102, 9448734847, 9742572100 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT