ಬುಧವಾರ, ಆಗಸ್ಟ್ 10, 2022
21 °C

‘ಪುರ್‌ಸೋತ್‌ ರಾಮ’ನಿಗೂ ತಪ್ಪಲಿಲ್ಲ ಪೈರಸಿ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಶುಕ್ರವಾರ ವಾರವಷ್ಟೇ ಬಿಡುಗಡೆಯಾದ ಕಾಮಿಡಿ ಮತ್ತು ರೊಮ್ಯಾಂಟಿಕ್‌ ಕಥಾಹಂದರ ಚಿತ್ರ ‘ಪುರ್‌ಸೋತ್‌ ರಾಮ’ ಚಿತ್ರ ಕೂಡ ಪೈರಸಿ ಹಾವಳಿಗೆ ತುತ್ತಾಗಿದೆ.

ಸಿನಿಮಾ ರಂಗವನ್ನು ಕಾಡುತ್ತಿರುವ ಪೈರಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ರಾಜ್ಯ ಸರ್ಕಾರ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ನಟಿ, ನಿರ್ಮಾಪಕಿ ಮಾನಸಾ ಒತ್ತಾಯಿಸಿದ್ದಾರೆ.

ತಮ್ಮ ನಟನೆ ಮತ್ತು ನಿರ್ಮಾಣದ ‘ಪುರ್‌ಸೋತ್‌ ರಾಮ’ ಚಿತ್ರವನ್ನು ಚಿತ್ರಮಂದಿರದಲ್ಲಿ ಕದ್ದು ಪೈರಸಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಈ ಸಂಬಂಧ ಸೈಬರ್‌ ಪೊಲೀಸ್‌ ಠಾಣೆಗೂ ದೂರು ನೀಡಿದ್ದಾರೆ.

ಚಿತ್ರತಂಡದೊಂದಿಗೆ ಸೋಮವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಾನಸಾ, ಪೈರಸಿ ಕಾಪಿಯನ್ನು ಅಳಿಸಲು ಸೈಬರ್‌ ಅಪರಾಧ ಪತ್ತೆ ವಿಭಾಗದ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಪೈರಸಿ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಭಾನುವಾರದ ವೇಳೆಗೆ ಈ ಪೈರಸಿಯಾದ ಈ ಚಿತ್ರವನ್ನು ಯೂಟ್ಯೂಬ್‌ ಮತ್ತು ಟೆಲಿಗ್ರಾಂನಲ್ಲಿ ಸುಮಾರು 8 ಸಾವಿರ ಬಾರಿ ಡೌನ್‌ಲೋಡ್‌ ಆಗಿದೆ. ಇದನ್ನು ಸಂಪೂರ್ಣ ಅಳಿಸಿ ಹಾಕದಿದ್ದರೆ ನಮ್ಮ ಚಿತ್ರವು ಚಿತ್ರಮಂದಿರದಲ್ಲಿ ಇದ್ದರೂ ಪ್ರಯೋಜನವಾಗುವುದಿಲ್ಲ ಎಂದು ಅವರು ಬೇಸರ ತೋಡಿಕೊಂಡರು.

ಸಿನಿಮಾ ಮಾಡಿದವರು, ಪೈರಸಿ ಸಮಸ್ಯೆ ಹಾವಳಿಯಿಂದಾಗಿ ಪೊಲೀಸ್‌ ಠಾಣೆಗೆ ದೂರು ನೀಡಿ ಕೋರ್ಟು ಕಚೇರಿ ಅಲೆಯುವ ಪರಿಸ್ಥಿತಿ ಬಂದೊದಗಿದೆ. ಸಿನಿಮಾ ನಿರ್ಮಿಸಿ, ಬಿಡುಗಡೆ ಮಾಡುವುದೋ ಒಂದು ಸವಾಲು. ಅದರ ನಡುವೆ ಇಂತಹ ಸಮಸ್ಯೆಗಳನ್ನು ಚಿತ್ರೋದ್ಯಮಿಗಳು ಎದುರಿಸಬೇಕಾಗಿದೆ. ಪೈರಸಿ ನಡೆಸುವವರಿಗೆ ಕನಿಷ್ಠ ಹತ್ತು ವರ್ಷವಾದರೂ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕಾಯ್ದೆ ಬಂದರೆ ಪೈರಸಿ ಮಾಡಲು ಕಿಡಿಗೇಡಿಗಳು ಅಂಜಬಹುದು. ನಿರ್ಮಾಪಕರು ಸಿನಿಮಾ ಮಾಡಿ ಆತಂಕದಲ್ಲಿ ದಿನದೂಡುವ ಸ್ಥಿತಿ ಇರಬಾರದು, ಸಿನಿಮಾ ಬಿಡುಗಡೆ ಮಾಡಿ ಮನೆಯಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳುವ ವಾತಾವರಣ ನಿರ್ಮಿಸಬೇಕು ಎಂದಿದ್ದಾರೆ ಮಾನಸಾ.

‘ಪುರ್‌ಸೋತ್‌ ರಾಮ’ ಚಿತ್ರದಲ್ಲಿ ಹಾಸ್ಯ ನಟರಾದ ರವಿಶಂಕರ್‌ ಗೌಡ, ಶಿವರಾಜ್‌ ಕೆ.ಆರ್‌.ಪೇಟೆ ಬಣ್ಣ ಹಚ್ಚಿದ್ದಾರೆ. ರಿತಿಕ್‌ ಸರು ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೆ ಮಾನಸಾ ಬಂಡವಾಳ ಹೂಡುವ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು