ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರತಂಡಕ್ಕೇ ಕಥೆ ಗೊತ್ತಿಲ್ಲ!

ದೇಸಾಯಿ ಸಸ್ಪೆನ್ಸ್‌
Last Updated 25 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಕಾಫಿ ತೋಟದ ನಡುವಿನ ಒಂಟಿ ಮನೆ. ಮನೆಯ ಎರಡೂ ದಿಕ್ಕಿಗೆ ಕೊರಕಲು. ನೆಲಕೆ ಬಟ್ಟೆ ಹೊಲಿದಂತೆ ಹಸಿರು. ಎತ್ತರೆತ್ತರ ಮರದ ಚೂಪು ಎಲೆಗಳ ನಡುವಿನಿಂದ ಹಾದು ತಳ ತಲುಪಲು ಹರಸಾಹಸಪಡುತ್ತಿರುವ ರವಿಯ ಎಳೆಯ ಕಿರಣಗಳು... ಮಳೆಗಾಲದ ಗಾಯಗಳನ್ನೆಲ್ಲ ಮಾಯಿಸಿಕೊಳ್ಳಲು ಬಿಸಿಲಿಗೆ ಮೈಯೊಡ್ಡಿ ನಿಂತಂತಿದ್ದ ಆ ತೋಟದ ಮನೆಯ ನೆತ್ತಿಯ ಮೇಲಿಂದ ಕೂಗಿಬಂತೊಂದು ಹೆಣ್ಣಿನ ಚೀತ್ಕಾರ... ‘ಆದಿತ್ಯಾ... ನಾನ್ ಇಲ್ಲಿದೀನಿ... ಇಲ್ನೋಡು... ಇಲ್ಲಿ’. ಕತ್ತೆತ್ತಿ ನೋಡಿದರೆ ಮನೆಯ ಮೇಲುಮಹಡಿಯ ಗಾಜಿನ ಕಿಟಕಿಯಾಚೆ ಹುಡುಗಿಯೊಬ್ಬಳು ಕೈ ಬೀಸಿ ಆಕ್ರಂದಿಸುತ್ತಿದ್ದಾಳೆ. ತನ್ನ ಇರುವನ್ನು ತಿಳಿಸಲಿಕ್ಕೋಸ್ಕರವೇ ಚೀರುತ್ತಿದ್ದಾಳೆ. ಅವಳ ಕಣ್ಣುಗಳಲ್ಲಿ ಮರಣದ ಭಯವಿದೆ. ಬೀಸುತ್ತಿರುವ ಕೈಗಳಲ್ಲಿ ನೆತ್ತರ ಕಲೆಯಿದೆ. ಮುಖ ಬಾಡಿದೆ...

‘ಕಟ್’ ಎಂಬೊಂದು ಶಬ್ದ ಮೊಳಗುತ್ತಿದ್ದ ಹಾಗೆ ಅವಳ ಚೀತ್ಕಾರ ಒಮ್ಮಿಂದೊಮ್ಮೆಲೇ ನಿಂತಿತು. ದುಗುಡ ತುಂಬಿದ ಮುಖದ ಮೇಲೆ ನಿರಾಳ ಭಾವ ನೆಲೆನಿಂತಿತು. ‘ಎಕ್ಸಲೆಂಟ್’ ದೂರದಲ್ಲಿ ನಿಂತು ನೋಡುತ್ತಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಬಾಯಿಂದ ಉದ್ಘಾರ ಹೊರಬಿತ್ತು.

ಅದು ಮಡಿಕೇರಿ ಸಮೀಪದ ಒಂದು ಕಾಪಿ ಎಸ್ಟೇಟ್‌. ಅಲ್ಲಿ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾದ ಕ್ಲ್ಯಮ್ಯಾಕ್ಸ್‌ ಚಿತ್ರೀಕರಣ ನಡೆಯುತ್ತಿತ್ತು. ಈ ಚಿತ್ರಕರಣವನ್ನು ಅನುಭವವನ್ನು ಹಂಚಿಕೊಳ್ಳಲಿಕ್ಕಾಗಿ ಪತ್ರಕರ್ತರನ್ನು ಸ್ಥಳಕ್ಕೇ ಕರೆಸಿಕೊಂಡಿದ್ದರು ದೇಸಾಯಿ.

ಮೈಗೆ ಗೋಣಿಚೀಲ ಸುತ್ತಿಕೊಂಡು ನೇತಾಡುತ್ತ ನಾಯಕಿ ಮನೆಯ ಮೇಲಿಂದ ಕೆಳಗೆ ಇಳಿಯುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಧನ್ಸಿಕಾ ಹೆಂಚಿನ ಮೇಲೆ ನಿರ್ಭಯವಾಗಿ ಸ್ಟಂಟ್ ಮಾಡುತ್ತಿದ್ದರು. ನಾಯಕ ಠಾಕೂರ್ ಅನೂಪ್ ಸಿಂಗ್ ಮತ್ತು ಖಳನಟ ಕಬೀರ್ ಕೂಡ ರಕ್ತಸಿಕ್ತ ಉಡುಪಿನೊಟ್ಟಿಗೆ ಎವೆಯಿಕ್ಕದೆ ಮನೆಯತ್ತಲೇ ನೋಡುತ್ತಿದ್ದರು.

ಬೆಳಿಗ್ಗೆ ಹೀಗೆ ಮುಖಾಮುಖಿಯಾದ ‘ಉದ್ಘರ್ಷ’ ಚಿತ್ರತಂಡ ಅಂದೇ ಸಂಜೆ ಪತ್ರಕರ್ತರಿಗೆ ಎದುರಾಗಿದ್ದು ಬೇರೆಯೇ ರೂಪದಲ್ಲಿ. ಸಮೀಪದ ರೆಸಾರ್ಟ್‌ ಒಂದರಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಗೆ ಬಂದ ಧನ್ಸಿಕಾ ಹೊಳೆಯುವ ಉಡುಪಿನಲ್ಲಿ ಮಿಂಚುತ್ತಿದ್ದರು. ಅನೂಪ್ ಮುಖದಲ್ಲಿಯೂ ರಕ್ತದ ಕಲೆಗಳು ಹೋಗಿ ನಸುನಗು ಮಿನುಗುತ್ತಿತ್ತು. ದೇಸಾಯಿ ಉತ್ಸಾಹದಿಂದಲೇ ಸಿನಿಮಾದ ಕುರಿತು ಮಾತು ಆರಂಭಿಸಿದರು.

ಸಂಘರ್ಷದ ಕಥನ:

‘ಉದ್ಘರ್ಷದಲ್ಲಿ ನಟಿಸಿದ್ದ ಮುಖ್ಯ ಪಾತ್ರಧಾರಿಗಳೆಲ್ಲ ಅಲ್ಲಿದ್ದರು. ಆದರೆ ಯಾರಿಗೂ ಇಡೀ ಚಿತ್ರದ ಕಥೆ ಗೊತ್ತಿರಲಿಲ್ಲ. ತಮ್ಮ ಪಾತ್ರದ ಕುರಿತೂ ಅವರು ಹೆಸರಿನಾಚೆಗೆ ಇನ್ನೇನನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಪ್ರೇಕ್ಷಕರಿಗೆ ಚಿತ್ರದಲ್ಲಿ ಸಸ್ಪೆನ್ಸ್ ಇಡುವುದು ಸರಿ, ಆದರೆ ದೇಸಾಯಿ ಚಿತ್ರತಂಡದವರಿಗೇ ಸಸ್ಪೆನ್ಸ್‌ ಇಟ್ಟಿದ್ದಾರಂತೆ! ಅಂದರೆ ಎಲ್ಲ ಕಲಾವಿದರಿಗೂ ಅವರ ಪಾತ್ರದ ಬಗ್ಗೆ ವಿವರವಾಗಿ ಹೇಳಿ, ಸಿನಿಮಾದ ಉಳಿದ ಪಾತ್ರಗಳು, ಸನ್ನಿವೇಶಗಳನ್ನು ಗುಟ್ಟಾಗಿ ಇಟ್ಟಿದ್ದಾರೆ.

‘ಬೇರೆ ಬೇರೆ ನದಿಗಳು ಹರಿದು ಕೊನೆಗೆ ಸಮುದ್ರಕ್ಕೆ ಬಂದು ಸೇರುತ್ತವಲ್ಲ ಹಾಗೆಯೇ ಇದು. ಬೇರೆ ಬೇರೆ ಪಾತ್ರಗಳು ಹೇಗ್ಹೇಗೋ ಹರಿದುಬಂದು ಕ್ಲ್ಯಮ್ಯಾಕ್ಸ್‌ನಲ್ಲಿ ಒಂದು ಕಡೆಗೆ ಸೇರುತ್ತವೆ’ ಎಂದು ಗುಟ್ಟು ಉಳಿಸಿಕೊಂಡೇ ಕುತೂಹಲದ ಒಗ್ಗರಣೆ ಹಾಕಿದರು ಅವರು.

ಹೈದರಾಬಾದ್ ಮತ್ತು ಕೇರಳಗಳಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸಿ ಕಳೆದ 60 ದಿನಗಳಿಂದ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಸುತ್ತಿದೆ ಚಿತ್ರತಂಡ. ಈಗ ಮಡಿಕೇರಿಯಲ್ಲಿ ನಾಶವಾಗಿರುವ ಎಷ್ಟೋ ಸುಂದರ ಪ್ರದೇಶಗಳು ಚಿತ್ರದಲ್ಲಿ ಹಿಂದಿನ ರೂಪದಲ್ಲಿಯೇ ಸೆರೆಯಾಗಿವೆಯಂತೆ.

‘ತುಂಬ ದಿನಗಳ ನಂತರ ಒಂದು ಸಸ್ಪೆನ್ಸ್‌ ಥ್ರಿಲ್ಲರ್ ಕಥೆಯನ್ನು ಕೈಗೆತ್ತಿಕೊಂಡಿದ್ದೇನೆ. ಇದು ಹೊಸ ಪೀಳಿಗೆಗೆ ಇಷ್ಟವಾಗುವಂಥ ಆ್ಯಕ್ಷನ್ ಈ ಚಿತ್ರದಲ್ಲಿದೆ. ಲೊಕೇಶನ್ ನೋಡಿ ಅದಕ್ಕೆ ಅನ್ವಯಿಸುವ ಹಾಗೆ ಸ್ಕ್ರಿಪ್ಟ್ ಬರೆದಿದ್ದೇನೆ. ಆ ಪಾತ್ರಕ್ಕೆ ಹೊಂದಿಕೊಳ್ಳುವಂಥ ಕಲಾವಿದರೂ ಸಿಕ್ಕಿದ್ದಾರೆ’ ಎಂದು ದೇಸಾಯಿ.

‘ಉದ್ಘರ್ಷ ಎಂದರೆ ಸಂಘರ್ಷ. ಈ ಚಿತ್ರದ ಎಲ್ಲ ಪಾತ್ರಗಳ ನಡುವೆ ಒಂದು ತಿಕ್ಕಾಟ ಇದೆ. ಚಿತ್ರಕಥೆಯೇ ಇಲ್ಲಿ ಮುಖ್ಯ. ರೀರೆಕಾರ್ಡಿಂಗ್‌ಗೂ ಅಷ್ಟೇ ಮಹತ್ವ ಇದೆ. ಮುಂಬೈನ ಸುಜಯ್ ಚೌಧರಿ ರೀರೆಕಾರ್ಡಿಂಗ್ ಮಾಡುತ್ತಿದ್ದಾರೆ’ ಎಂದೂ ಮಾಹಿತಿ ನೀಡಿದರು.

ಬೆಂಗಳೂರಿನ ರೆಸಾರ್ಟ್‌ ಒಂದರಲ್ಲಿ ಮಧ್ಯರಾತ್ರಿ ಶುರುವಾಗುವ ಕಥೆ ಶ್ರೀರಂಗಪಟ್ಟಣ, ಹುಣಸೂರು ಹಾದು ಮಡಿಕೇರಿಗೆ ಬಂದು ತಲುಪುವಷ್ಟರಲ್ಲಿ ಬೆಳಗಾಗುತ್ತದೆ. ಅದು ಮಧ್ಯಂತರ. ಒಂದೇ ದಿನದಲ್ಲಿ ನಡೆಯುವ ಮರ್ಡರ್ ಮಿಸ್ಟರಿ ಕಥೆಯನ್ನು ಉಸಿರುಬಿಗಿಹಿಡಿದು ನೋಡುವಷ್ಟು ಬಿಗಿಯಾಗಿ ಹೆಣೆಯುವ ಪ್ರಯತ್ನದಲ್ಲಿದ್ದಾರೆ ನಿರ್ದೇಶಕರು.

ದೇವರಾಜ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಪ್ರತಿ ಸಿನಿಮಾವೂ ನನ್ನ ಬದುಕಿನ ಹೊಸ ಅಧ್ಯಾಯ. ಆದರೆ ಉದ್ಘರ್ಷಕ್ಕೆ ಬೇರೆಯದೇ ಮಹತ್ವ ಇದೆ. ಯಾಕೆಂದರೆ ಈ ಚಿತ್ರದಲ್ಲಿ ನಾನು ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದೇನೆ.‌ನಾಯಕನಾಗಿ ನಟಿಸಿರುವ ಕಷ್ಟ ಗೊತ್ತಾಗುತ್ತಿದೆ’ ಎಂದರು ನಾಯಕ ಠಾಕೂರ್ ಅನೂಪ್ ಸಿಂಗ್. ದೇಸಾಯಿ ಅವರ ಸಿನಿಮಾ ಪ್ರೀತಿ ನೋಡಿ ಧನ್ಸಿಕಾ ಈಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಂತೆ. ಇನ್ನೋರ್ವ ನಟಿ ತಾನ್ಯಾ ಹೋಪ್, ತಾವು ಕನ್ನಡದವರು ಎಂದು ಹೇಳಿಕೊಳ್ಳುತ್ತಲೇ ಇಂಗ್ಲಿಷಿನಲ್ಲಿ ಮಾತಿಗೆ ಶುರುವಿಟ್ಟರು. ‘ಈ ಚಿತ್ರದಲ್ಲಿ ನಾನು ಕರಿಷ್ಮಾ ಎಂಬ ಮಾಡರ್ನ್‌ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇಣೆ. ಮುಖ್ಯ ಕಥೆ ಒಂದು ಕಡೆ ನಡೆಯುತ್ತಿರುತ್ತದೆ. ನಾನು ಅದು ಹೇಗೋ ಆ ಕಥೆಯೊಳಗೆ ಸಿಕ್ಕಿಹಾಕಿಕೊಳ್ಳುತ್ತೇನೆ. ಹೇಗೆ ಎಂಬುದನ್ನು ತೆರೆಯ ಮೇಲೆಯೇ ನೋಡಿ’ ಎಂದರು.

ಕಬೀರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ ಅವರೂ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜತೆಗೆ ನಿರ್ದೇಶಕರನ್ನು ಹಾಡಿ ಹೊಗಳಿದರು. ಪಿ. ರಾಜನ್ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT