ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UI Kannada Cinema | ಇದು ‘ಎಐ’ ವರ್ಲ್ಡ್‌ ಅಲ್ಲ ‘ಯುಐ’ ವರ್ಲ್ಡ್‌!

Published 8 ಜನವರಿ 2024, 14:11 IST
Last Updated 8 ಜನವರಿ 2024, 14:11 IST
ಅಕ್ಷರ ಗಾತ್ರ

‘ಯುಐ’ ಟೀಸರ್‌ನಲ್ಲಿ ಕತ್ತಲೆ ಲೋಕ ಸೃಷ್ಟಿಸಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದ ನಟ ಉಪೇಂದ್ರ ಕೊನೆಗೂ ಫಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಝಲಕ್‌ ಹಾಗೂ ಸಿನಿಮಾದೊಳಗಿನ ಉಪೇಂದ್ರನನ್ನು ಜನರಿಗೆ ಪರಿಚಯಿಸಿದ್ದಾರೆ.   

ನಟರಾದ ಶಿವರಾಜ್‌ಕುಮಾರ್‌ ಹಾಗೂ ಕಿಚ್ಚ ಸುದೀಪ್‌, ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್‌ ಅವರು ಸೋಮವಾರ(ಜ.8) ‘ಯುಐ’ ಸಿನಿಮಾದ ಫಸ್ಟ್‌ಲುಕ್‌ ಹಾಗೂ ಟೀಸರ್‌ ಬಿಡುಗಡೆಗೊಳಿಸಿದರು.

‘‘ಸಿನಿಮಾ ಬಗ್ಗೆ ಜನರೇ ಮಾತನಾಡಬೇಕು. ಮನುಷ್ಯ ತನ್ನ ಜೀವನದಲ್ಲಿ ಮೂರು ಹಂತಗಳನ್ನು ನೋಡುತ್ತಾನೆ. ‘ನಾನು ಸರಿ ಇದ್ದೇನೆ, ಪ್ರಪಂಚ ಸರಿ ಇಲ್ಲ’ ಎನ್ನುವ ಒಂದು ಹಂತ. ಆವಾಗ ಒಂದಿಷ್ಟು ಸಿನಿಮಾ ಮಾಡಿದೆ. ‘ನನ್ನಲ್ಲೇನೋ ಸಮಸ್ಯೆ ಇದೆ. ಪ್ರಪಂಚ ಸರಿಯಾಗಿದೆ’ ಎನ್ನುವ ಎರಡನೇ ಹಂತ. ಈವಾಗ ‘ನಾನೂ ಸರಿ ಇದ್ದೇನೆ. ಪ್ರಪಂಚವೂ ಸರಿಯಾಗಿದೆ’ ಎನ್ನುವ ಹಂತಕ್ಕೆ ಬಂದಿದ್ದೇನೆ. ಹೀಗಿರುವಾಗ ಸುಮ್ಮನೆ ನಟಿಸುತ್ತಾ ಸಾಗಿದೆ. ಆದರೂ ಒಂದು ಶಕ್ತಿ ನನ್ನಿಂದ ಈ ಸಿನಿಮಾ ಮಾಡಿಸಿದೆ. ಈ ಸಿನಿಮಾ ಮಾಡಿರುವುದೇ ಪ್ರೇಕ್ಷಕರು ಮಾತನಾಡಬೇಕು ಎಂದು. ‘ಯು’ ಎನ್ನುವುದು ‘ಐ’ ಆಗಬೇಕು. ಎಂದರೆ ‘ನೀವೆಲ್ಲರೂ ನಾನು ಆಗಬೇಕು’ ಅದೇ ಸಿನಿಮಾ’’ ಎಂದು ಸಿನಿಮಾದ ಆಳ ಅಗಲ ಬಿಚ್ಚಿಟ್ಟರು ಉಪೇಂದ್ರ.   

ನಟರಾದ ಉಪೇಂದ್ರ, ರವಿಶಂಕರ್‌, ಅಚ್ಯುತ್‌ಕುಮಾರ್‌, ಸಾಧುಕೋಕಿಲ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯದಂತಿದೆ ಟೀಸರ್‌. ಇಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ (ಎಐ) ವರ್ಲ್ಡ್‌ನಂತೆ ಉಪೇಂದ್ರ ಅವರು ತಮ್ಮ ‘ಯುಐ ವರ್ಲ್ಡ್‌’ ಸೃಷ್ಟಿಸಿದ್ದಾರೆ. ಈ ಲೋಕಕ್ಕೆ ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಹೊಸ ಸ್ಪರ್ಶ ನೀಡಿದೆ. ಎಂಟು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.  

‘10 ವರ್ಷ ಬಿಟ್ಟು ‘ಓಂ–2’ ಆಗಲಿ’: ‘ಓಂ–2 ಆಗಲಿ ಬಿಡಿ. ಮುಂದಿನ ವರ್ಷವೇ ಆಗಬೇಕೆಂದಿಲ್ಲ. ಇನ್ನೊಂದು ಹತ್ತು ವರ್ಷ ಬಿಟ್ಟು ಆಗಲಿ. ಶಿವಣ್ಣ ಹಾಗೆಯೇ ಇರುತ್ತಾನೆ’ ಎಂದು ಶಿವರಾಜ್‌ಕುಮಾರ್‌ ಅಭಿಮಾನಿಗಳ ನಿರೀಕ್ಷೆಗೆ ಉತ್ತರಿಸಿದರು. ಪ್ರತಿಯಾಗಿ ‘ನಿರೀಕ್ಷೆ ಎನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಆಗಬೇಕಿದ್ದ ಸಂದರ್ಭದಲ್ಲಿ ಓಂ–2 ಆಗುತ್ತದೆ’ ಎಂದು ಉಪೇಂದ್ರ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT