ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೈವಾ–170: ಜ್ಞಾನವೇಲ್‌ ಚಿತ್ರದಲ್ಲಿ ನಟಿಸದಂತೆ ರಜನಿಗೆ ಅಭಿಮಾನಿಗಳ X ಅಭಿಯಾನ

Published 6 ಅಕ್ಟೋಬರ್ 2023, 13:00 IST
Last Updated 6 ಅಕ್ಟೋಬರ್ 2023, 13:00 IST
ಅಕ್ಷರ ಗಾತ್ರ

ಚೆನ್ನೈ: ‘ಜೈಭೀಮ್ ಚಿತ್ರದ ನಿರ್ದೇಶಕ ಟಿ.ಜಿ.ಜ್ಞಾನವೇಲ್ ಅವರ ಚಿತ್ರದಲ್ಲಿ ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್ ನಟಿಸಿದರೆ, ಅವರ ಚಿತ್ರಗಳನ್ನು ಬಹಿಷ್ಕರಿಸಲಾಗುವುದು’ ಎಂಬ ಹೇಳಿಕೆ ಮೈಕ್ರೊ ಬ್ಲಾಗಿಂಗ್ ವೇದಿಕೆ ‘ಎಕ್ಸ್‌‘ನಲ್ಲಿ ಟ್ರೆಂಡ್ ಆಗಿದೆ.

#VanniyarsBoycottRajinikanth #VanniyarsBoycottGnanavel  #VanniyarsBoycottLyca

ಈ ಕುರಿತ ಹ್ಯಾಷ್‌ಟ್ಯಾಗ್‌ಗಳು ಈಗ ತಮಿಳು ಸಿನಿ ಪ್ರಿಯರ ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಸೂರ್ಯ ನಟನೆಯ, ಜ್ಞಾನವೇಲ್ ನಿರ್ದೇಶನದ ಜೈಭೀಮ್‌ ಚಿತ್ರದಲ್ಲಿ ಕೆಲ ಸಮುದಾಯಗಳ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ತೋರಿಸಲಾಗಿದೆ. ಇದೀಗ ರಜನಿಕಾಂತ್ ಅವರು ಜ್ಞಾನವೇಲ್‌ ಜೊತೆ ಕೈಜೋಡಿಸಿದರೆ ಅವರ ಚಿತ್ರಗಳನ್ನೂ ಬಹಿಷ್ಕರಿಸಲಾಗುವುದು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವನ್ನಿಯಾರ್ ಸಮುದಾಯವನ್ನು ಅವಮಾನಿಸಿ ಕ್ಷಮೆ ಕೇಳದ ನಿರ್ದೇಶಕ ಜ್ಞಾನವೇಲ್ ಮಾಡಿದ ಎಲ್ಲಾ ಸಿನಿಮಾಗಳನ್ನು ಕಡೆಗಣಿಸೋಣ‘ ಎಂದು ಕೆಲವರು ಹೇಳಿದ್ದಾರೆ.

ಜೈಭೀಮ್ ಚಿತ್ರದ ಯಶಸ್ಸಿನ ನಂತರ ಜ್ಞಾನವೇಲ್ ಅವರು ತಲೈವಾ–170 ಎಂಬ ಚಿತ್ರದ ನಿರ್ದೇಶನ ಆರಂಭಿಸಿದ್ದಾರೆ. ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ರಜನಿಕಾಂತ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿತ್ತು. ಸದ್ಯ ಮೊದಲ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದೆ. 

ಪೊಲೀಸ್ ಅಧಿಕಾರಿಯ ನೈಜ ಕಥೆಯನ್ನು ಆಧರಿಸಿದ ಚಿತ್ರ ಇದು ಎನ್ನಲಾಗಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಷೇರಾ ವಿಜಯನ್ ಪ್ರಮುಖ ಪಾತ್ರದಲ್ಲಿದ್ದಾರೆ. ಅರವಿಂದ ರವಿಚಂದರ್‌ ಅವರ ಸಂಗೀತ, ಛಾಯಾಗ್ರಹಣದಲ್ಲಿ ಆರ್. ಕಾಥಿರ್ ಕೆಲಸ ಮಾಡುತ್ತಿದ್ದಾರೆ.

ಎಕ್ಸ್‌ನಲ್ಲಿ ಹರಿದಾಡುತ್ತಿರುವ ಚಿತ್ರ ಬಹಿಷ್ಕಾರದ ಅಭಿಯಾನ ತಲೈವಾ–170ಗೆ ಆರಂಭಿಕ ಆಘಾತ ನೀಡಿದೆ. ಈ ಅಭಿಯಾನದ ಕುರಿತು ರಜನಿಕಾಂತ್ ಅವರು ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಎದುರುನೋಡುತ್ತಿದ್ದೇವೆ ಎಂದೂ ಕೆಲವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT