ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರಿಕ್ಕಾಶ್ಶೇರಿ ಮನ’ ಫೇವರಿಟ್‌ ತಾಣ

Last Updated 7 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಮಲಯಾಳಂ ಸಿನಿಮಾಗಳೆಂದರೆ ದೃಶ್ಯ ಕಾವ್ಯ. ಅಲ್ಲಿನ ಲೊಕೇಶನ್‌ಗಳು ಸದಾ ಅಚ್ಚರಿ ಮೂಡಿಸುತ್ತವೆ. ಅದರಲ್ಲಿಯೂ ತರವಾಡು ಮನೆಗಳು ಅಂದರೆ ಅದಕ್ಕೆ ಅದರದ್ದೇ ಆದ ಘನತೆ, ಗಾಂಭೀರ್ಯವಿರುತ್ತದೆ. ಮಲಯಾಳಂ ಸಿನಿಮಾದ ತರವಾಡು ಮನೆ ವರಿಕ್ಕಾಶ್ಶೇರಿ ಮನ (ನಂಬೂದಿರಿಗಳ ಮನೆ) ಎಂದರೆ ಅತಿಶಯೋಕ್ತಿ ಅಲ್ಲ. ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಾಲಂ ಬಳಿ ಮಣಿಶ್ಶೇರಿ ಎಂಬಲ್ಲಿದೆ ಈ ಬೃಹತ್ ಭವ್ಯ ಮನೆ. ಎವರ್‌ಗ್ರೀನ್ ಹಿಟ್ ಸಿನಿಮಾಗಳಾದ ಮೋಹನ್ ಲಾಲ್ ಅಭಿನಯದ ಆರಾಂ ತಂಬುರಾನ್, ದೇವಾಸುರ, ಮಾಡಂಬಿ, ಮಮ್ಮುಟ್ಟಿ ಅಭಿನಯದ ರಾಪ್ಪಕಲ್, ವಲ್ಯೇಟ್ಟನ್ ಮೊದಲಾದ ಸಿನಿಮಾಗಳ ಶೂಟಿಂಗ್ ನಡೆದದ್ದು ಇಲ್ಲಿಯೇ.

ಇದೇವರಿಕ್ಕಾಶ್ಶೇರಿ ಮನದ ಮೊಗಸಾಲೆಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ದೇವಾಸುರ ಸಿನಿಮಾದ ಮಂಗಲಶ್ಶೇರಿ ನೀಲಕಂಠನ್ ಮೀಸೆ ತಿರುವಿದ್ದು!.

ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಾಲಂ ನಗರದಿಂದ 5 ಕಿಮೀ ದೂರದಲ್ಲಿದೆ ಈ ಮನೆ. ಸಿನಿಮಾದವರಿಗೆ ಒಟ್ಟಪ್ಪಾಲಂ ಲೊಕೇಶನ್ ಇಷ್ಟವಾಗಲುಪ್ರಧಾನ ಕಾರಣವೂ ಇದೇ ಆಗಿದೆ.

ನಾಲು ಕೆಟ್ಟ್, ಎಟ್ಟ್ ಕೆಟ್ಟ್ (ವಾಸ್ತು ವೈವಿಧ್ಯದಿಂದ ಕೂಡಿದ ಸಾಂಪ್ರದಾಯಿಕ ಮನೆ)ಗಳು ಕೇರಳದಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತವೆ. ಅಂತಹ ಅತ್ಯಪೂರ್ವ ಮನೆಗಳಲ್ಲಿ ಒಂದಾಗಿದೆ ಈ ಮನೆ.

ಹಿನ್ನಲೆ ಏನು ?: ವರಿಕ್ಕುಮಂಚೇರಿ ಎಂಬ ಬ್ರಾಹ್ಮಣ ಕುಟುಂಬದ ರವಿ ನಂಬೂದಿರಿಪ್ಪಾಡ್ 1902ರಲ್ಲಿ ಈ ಮನೆ ನಿರ್ಮಿಸಿದ್ದರು. ಅಲ್ಲಿ ಸಿಗುವ ಕೆಂಪು ಕಲ್ಲಿನಿಂದ ನಿರ್ಮಿಸಲಾದ ಈ ಮನೆಯಲ್ಲಿ ಕಂಬ, ಮೇಲ್ಚಾವಣಿ ಎಲ್ಲವೂ ಮರದಿಂದಲೇ ಮಾಡಿದ್ದು. ಕಂಬಗಳ ಮೇಲೆ ಕೆತ್ತನೆ ಕಲೆಗಳನ್ನೂ ಕಾಣಬಹುದು. ಮನೆಯ ಆವರಣದಲ್ಲಿಯೇ ಶಿವ, ಕೃಷ್ಣ ಮತ್ತು ಅಯ್ಯಪ್ಪ ಸ್ವಾಮಿಯ ಗುಡಿಗಳೂ ಇವೆ.ಕ್ರಮೇಣ ವರಿಕ್ಕುಮಂಜೇರಿ ಎಂಬ ಹೆಸರು ವರಿಕ್ಕಾಶ್ಶೇರಿ ಆಯಿತು.

ಅಲ್ಲಿದ್ದ ಪುರಾತನ ಶೈಲಿಯ ಮನೆಗೆ ಮಾಡರ್ನ್ ಟಚ್ ನೀಡಿದ್ದು ಕೃಷ್ಣನ್ ತಂಬುರಾನ್ .ಶಿಲ್ಪಿ ತಂಬುರಾನ್ ಎಂದೇ ಹೆಸರುಗಳಿಸಿರುವ ಕೃಷ್ಣನ್ ಅವರು ಚೆನ್ನೈನಲ್ಲಿ ವಾಸ್ತು ಶಿಲ್ಪ ಕಲಿತಿದ್ದು, 1940ರಲ್ಲಿ ಮೊಗಸಾಲೆಯನ್ನು ನಿರ್ಮಿಸಿದ್ದರು. ದೊಡ್ಡ ದೊಡ್ಡ ಕೋಣೆಗಳಿರುವ ಈ ಮನೆಯಲ್ಲಿ ಗಾಳಿ ಬೆಳಕು ಯಥೇಚ್ಚವಾಗಿ ಸಿಗುವಂತೆದೊಡ್ಡ ದೊಡ್ಡ ಕಿಟಕಿಗಳನ್ನಿರಿಸಲಾಗಿದೆ. ಅಡುಗೆ ಮಾಡುವುದಕ್ಕೆ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವುದಕ್ಕೆ ಬೇರೆ ಬೇರೆ ಕೋಣೆಗಳಿವೆ. ವಿಶಾಲವಾದ ಪತ್ತಾಯಪ್ಪುರ, ಕಳಪ್ಪುರ ಎಂಬ ವಿಶೇಷ ಕೊಠಡಿಗಳಿರುವ ಇಲ್ಲಿ ಸುಂದರವಾದ ಕೊಳಗಳು ಇವೆ. ಮಹಿಳೆಯರ ಪ್ರಸವ ಶುಶ್ರೂಷೆಗಾಗಿರುವ ಕೋಣೆಗಳು, ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕ ಊಟದ ಮನೆಗಳು ಇಲ್ಲಿವೆ. 4 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಈ ಮನೆ ಮೂರು ಮಹಡಿಯದ್ದು. ವಿಶಾಲವಾದ ಮೊಗಸಾಲೆಯೇ ಇದರ ಹೈಲೈಟ್.

ಕ್ಯಾಮೆರಾ ಕಣ್ಣಲ್ಲಿ ವರಿಕ್ಕಾಶ್ಶೇರಿ ಮನ: 1987ರಲ್ಲಿ ಇಲ್ಲಿ ಚಿತ್ರೀಕರಣವಾದ ಮೊದಲ ಸಿನಿಮಾ ‘ತೀರ್ಥಂ’. ಆದರೆ ಈ ಲೊಕೇಶನ್ ಅಷ್ಟೊಂದು ಗಮನ ಸೆಳೆಯಲಿಲ್ಲ. 1993ರಲ್ಲಿ ಐ.ವಿ.ಶಶಿ ನಿರ್ದೇಶಿಸಿದ ‘ದೇವಾಸುರ’ ಸಿನಿಮಾದಲ್ಲಿ ಮೊಗಸಾಲೆಯಲ್ಲಿ ಕುಳಿತ ಮಂಗಲಶ್ಶೇರಿ ನೀಲಕಂಠನ್ ಎಂಬ ನಾಯಕ ಬೀಸಣಿಕೆ ಕೈಯಲ್ಲಿ ಹಿಡಿದು ಭಾನುಮತಿಯಲ್ಲಿ ನೃತ್ಯ ಮಾಡಲು ಆಜ್ಞಾಪಿಸುತ್ತಿರುವ ದೃಶ್ಯ ಸಿನಿಮಾ ಪ್ರೇಕ್ಷಕರು ಮರೆತಿಲ್ಲ. ನೀಲಕಂಠನ್‌ನ ಅವಮಾನ, ಬೆದರಿಕೆಗೆ ಮಣಿದು ನೃತ್ಯ ಮಾಡಿದ ಭಾನುಮತಿ ಕೊನೆಗೆ ಕಾಲ್ಗೆಜ್ಜೆಯನ್ನು ಎಸೆದು ಇನ್ನು ಮುಂದೆ ನೃತ್ಯ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿದ್ದು ಇದೇ ಮೊಗಸಾಲೆಯಲ್ಲಾಗಿತ್ತು. ನೀಲಕಂಠನ್ ಕಥಾಪಾತ್ರದ ಮೂಲಕ ಮೋಹನ್ಲಾಲ್ ಮತ್ತು ಭಾನುಮತಿ ಪಾತ್ರದ ಮೂಲಕ ರೇವತಿ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.

ದೇವಾಸುರ ಸಿನಿಮಾ ನಂತರ ವರಿಕ್ಕಾಶ್ಶೇರಿ ಮನ ನಿರ್ದೇಶಕರ ಇಷ್ಟ ಲೊಕೇಶನ್ ಆಗಿ ಬಿಟ್ಟಿತು. ನಿರ್ದೇಶಕಕಾಗಿ ಐ.ವಿ. ಶಶಿ ಮತ್ತು ಶಾಜಿ ಕೈಲಾಸ್ ಈ ಮನೆಯನ್ನು ತುಂಬಾ ಕಲಾತ್ಮಕವಾಗಿ ಬಳಸಿಕೊಂಡರು. ಮಲಯಾಳಂ ಮಾತ್ರವಲ್ಲ ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಯ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡವು. ಸುಮಾರು 170ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ಈ ತರವಾಡು ಮನೆ ಕಾಣಿಸಿಕೊಂಡಿದೆ.

ವಳ್ಳುವನಾಡ್ ಗ್ರಾಮದ ಸೌಂದರ್ಯಗಳನ್ನು ಕಟ್ಟಿ ಕೊಡಬೇಕಾದರೆ ನಿರ್ದೇಶಕರು ಒಟ್ಟಪಾಲಂ ಸುತ್ತುಮುತ್ತಲಿನ ಪ್ರದೇಶವನ್ನೇ ಆಯ್ಕೆ ಮಾಡುತ್ತಾರೆ. ಸಿನಿಮಾ ಮಾತ್ರವಲ್ಲ ಧಾರಾವಾಹಿಗಳ ಚಿತ್ರೀಕರಣವೂ ಇಲ್ಲಿ ನಡೆಯುತ್ತದೆ. ಒಂದೇ ಕಾಂಪೌಂಡ್‌ನಲ್ಲಿ ಮೂರು ಮನೆಗಳಿರುವುದರಿಂದ ಶೂಟಿಂಗ್‌ಗೆ ಪ್ರಶಸ್ತವಾದ ಸ್ಥಳ ಇದಾಗಿದೆ. ಪುರಾತನ ವಾಸ್ತುಶಿಲ್ಪ ಮತ್ತು ಕೇರಳದ ಪಾರಂಪರಿಕ ನಂಬೂದಿರಿ ಮನೆತನದ ಸಂಸ್ಕೃತಿ ಬಿಂಬಿಸುವ ಈ ಮನೆ ಪ್ರವಾಸಿತಾಣವೂ ಹೌದು. ಸಿನಿಮಾ ಚಿತ್ರೀಕರಣವಿಲ್ಲದ ದಿನಗಳಲ್ಲಿ ಮಾತ್ರ ಇಲ್ಲಿ ಪ್ರವಾಸಿಗರಿಗೆ ಅನುಮತಿಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT