ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತನಾಗ್‌ ಸಂದರ್ಶನ: ಅನಂತ ಅಮೃತಯಾನ

Last Updated 3 ಸೆಪ್ಟೆಂಬರ್ 2022, 23:30 IST
ಅಕ್ಷರ ಗಾತ್ರ

ಕನ್ನಡದ ಬಹುಮುಖ ಪ್ರತಿಭೆಯ ನಟ ಅನಂತನಾಗ್‌ ಅವರು ಸೆ. 4ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬದುಕಿನ ಅಮೃತವರ್ಷದ ಸಂಭ್ರಮದಲ್ಲಿರುವ ಅವರೊಂದಿಗೆ ಒಂದು ಆಪ್ತ ಮಾತುಕತೆ.

75 ಎಂದರೆ ಒಮ್ಮೆ ಹಿಂದಿರುಗಿ, ಹಾಕಿದ ಹೆಜ್ಜೆಗಳನ್ನು ಮತ್ತೆ ಮೆಲುಕು ಹಾಕುವ ಸಮಯ...

ನಿಜ. ಸಾಮಾನ್ಯವಾಗಿ ಎಲ್ಲವನ್ನೂ ಹೇಗೆ ನೋಡುತ್ತೇನೋ ಅದೇ ದೃಷ್ಟಿಕೋನದಿಂದ ‘75’ ಎನ್ನುವ ಸಂಖ್ಯೆಯನ್ನೂ ನೋಡುತ್ತಿದ್ದೇನೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಭಗವಂತ ಅಷ್ಟು ಆಯುಷ್ಯ ಕೊಡುವುದಿಲ್ಲ. ನನಗೆ ಕೊಟ್ಟಿದ್ದಾನೆ. This year and now, today ಎನ್ನುತ್ತಾರಲ್ಲವೇ ಅದರಲ್ಲಿ ಹೆಚ್ಚು ನಂಬಿಕೆಯಿಟ್ಟು ನಾನಿರುತ್ತೇನೆ. ಹಿಂದೆ ನೋಡಿದರೂ ಸಾಮಾನ್ಯವಾಗಿಯೇ ನೋಡುತ್ತೇನೆಯೇ ವಿನಾ ಅದರಲ್ಲಿ ಯಾವುದೇ ವಿಶೇಷ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಭೂತ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಈ ಕ್ಷಣ, ಈ ದಿನದಲ್ಲಿ ಸಮಾಧಾನ, ಆನಂದದಿಂದ ಇರಲು ಪ್ರಯತ್ನಿಸುತ್ತೇನೆ.

ನನ್ನ ಜೀವನವೂ ಹೆಚ್ಚು ಕಡಿಮೆ ‘ಲಂಬೋದರ’ನಂತೆ! ಹೆಚ್ಚು ಖರ್ಚು ಮಾಡದೆ 74 ವರ್ಷ ಕಳೆದುಹೋಗಿವೆ. ನಾನು ಹೀಗೆ ಆಗಬೇಕು, ಹಾಗೆ ಮಾಡಬೇಕು ಎಂದು ಯೋಚಿಸಿದ, ಪ್ರಯತ್ನಿಸಿದ ಯಾವ ನಿರ್ಧಾರಗಳೂ ಯಶಸ್ವಿಯಾಗಲಿಲ್ಲ. ಹೀಗಾಗಿ ನನ್ನನ್ನು ನಾನು ಪ್ರವಾಹಕ್ಕೆ ಹಾಕಿಕೊಂಡೆ. ಭಗವಂತ ನಡೆಸಿದಂತೆ ಆಗಲಿ ಎಂದು. ಬದುಕಲ್ಲಿ ಈಜಿಕೊಂಡು ನೋಡಿದೆ. ಅದೇ ಹೆಚ್ಚು ಸೂಕ್ತ ಎನಿಸಿತು. 74 ವರ್ಷಗಳು ಕಳೆದುಹೋದವು, ಮುಂದಿನ ವರ್ಷ ಸಿನಿಮಾ ಪಯಣದಲ್ಲಿ 50 ವರ್ಷ. ಈ ದಿಕ್ಕಿನಲ್ಲಿ ಹೋಗಬೇಕು ಎಂದು ಪ್ರಯತ್ನಿಸಿ ಇವೆಲ್ಲ ಆಗಿದ್ದಲ್ಲ. ನಾನು ಪ್ರಯತ್ನಿಸಿದರೂ ಇವು ಸಾಧ್ಯವಾಗುತ್ತಿರಲಿಲ್ಲ.

ಕಾಸರಗೋಡಿನಿಂದ ಮುಂಬೈಯ ಪಯಣದ ಕುರಿತು...

ಬಾಲ್ಯದ ಮೊದಲ ಆರು ವರ್ಷ ಕಾಸರಗೋಡಿನ ಬಳಿಯ ಆನಂದಾಶ್ರಮದಲ್ಲಿ ಕಳೆದೆ. ತಂದೆ, ತಾಯಿಯೂ ಅಲ್ಲೇ ಇದ್ದರು. ಸ್ವಾಮಿ ರಾಮದಾಸ್‌ ಅವರ ಮೇಲ್ವಿಚಾರಣೆಯಲ್ಲಿ ಆಶ್ರಮ ನಡೆಯುತ್ತಿತ್ತು. ಚಿತ್ರಾಪುರ ಸಾರಸ್ವತರು ನಾವು. ಭಟ್ಕಳ ಸಮೀಪದ ಶಿರಾಲಿಯಲ್ಲಿನ ಚಿತ್ರಾಪುರ ಮಠದ ಗುರುಗಳು ಆನಂದಾಶ್ರಮಕ್ಕೆ ಬಂದು, ತಮ್ಮ ಮಠಕ್ಕೆ ಒಬ್ಬರು ಮೇಲ್ವಿಚಾರಕರು ಬೇಕಿತ್ತು ಎಂದಾಗ ರಾಮದಾಸರು ತಂದೆಯನ್ನೇ ಕರೆದುಕೊಂಡು ಹೋಗುವಂತೆ ತಿಳಿಸಿದರು. ಹೀಗಾಗಿ ನಾವು ಉಡುಪಿಗೆ ಸ್ಥಳಾಂತರಗೊಂಡೆವು. ಶಂಕರನೂ ಅಲ್ಲೇ ಹುಟ್ಟಿದ. ಹೊನ್ನಾವರದಲ್ಲಿ ನನ್ನ ಶಿಕ್ಷಣ ಮುಂದುವರಿಯಿತು. ಮುಂದಿನ ಓದಿಗೆ ತಂದೆಯವರು ನನ್ನನ್ನು ಮುಂಬೈಗೆ ಕಳುಹಿಸಿದರು. ಕಾನ್ವೆಂಟ್‌ನ ಇಂಗ್ಲಿಷ್‌ಗೆ ನಾನು ತಡವರಿಸಿದೆ. ಕ್ರಮೇಣ ಓದಿನಲ್ಲಿ ಆಸ್ಥೆ ಕಡಿಮೆಯಾಗಿ, 10ನೇ ತರಗತಿಯಲ್ಲಿ ಅನುತ್ತೀರ್ಣನಾದೆ. ವಿಜ್ಞಾನ, ಕಲಾ ವಿಭಾಗ ಹೀಗೆ ಎಲ್ಲ ಸ್ಟ್ರೀಮ್‌ಗಳಿಗೂ ಹೋದೆ.

ಚೀನಾ, ಪಾಕಿಸ್ತಾನದ ಯುದ್ಧದ ಬಳಿಕ ದೇಶಪ್ರೇಮದ ಅಲೆ ಎಲ್ಲೆಲ್ಲೂ ಎದ್ದಿತ್ತು. ಹೀಗಾಗಿ ವಾಯುಸೇನೆಗೆ ಸೇರಲು ಪ್ರಯತ್ನಿಸಿದೆ. ಆದರೆ ಎಡಗಣ್ಣಿನ ಸಮಸ್ಯೆಯಿಂದ ಅದು ಆಗಲಿಲ್ಲ. ನಂತರ ಭೂಸೇನೆ ಸೇರಲು ಹೋದರೆ, ನಿಗದಿತ ತೂಕವಿಲ್ಲದ ಕಾರಣ ಅಲ್ಲೂ ಆಗಲಿಲ್ಲ. ಆಸೆ ಈಡೇರುವುದಿಲ್ಲ ಎಂದು ತಂದೆಯವರಿಗೆ ಅನಿಸಿದಾಗ, ಕೆಲಸ ಮಾಡಿಕೊಂಡು ಓದು ಮುಂದುವರಿಸಲು ಸಲಹೆ ನೀಡಿದರು. ಅಷ್ಟರಲ್ಲಿ ರಂಗಭೂಮಿಯ ಪಯಣವೂ ಆರಂಭವಾಗಿತ್ತು. ಕೆಲಸ ಸಿಗಬಹುದೆಂದು ವಾಣಿಜ್ಯ ವಿಭಾಗಕ್ಕೆ ಸೇರಿ, ಓದಲು ಪ್ರಾರಂಭಿಸಿದೆ. ಈ ಐದು ವರ್ಷಗಳ ಅವಧಿಯಲ್ಲಿ ಕನ್ನಡ, ಕೊಂಕಣಿ, ಹಿಂದಿ, ಮರಾಠಿ ಭಾಷೆಯ 50ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದೆ. 1972ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ.

ವಾಣಿಜ್ಯ ನಗರಿಯಲ್ಲಿ ಶಂಕರ ಅವರ ಜತೆಗಿನ ಅನುಭವಗಳು ಹೇಗಿದ್ದವು?

ನಾನು ಮುಂಬೈಗೆ ಹೆಜ್ಜೆ ಇಟ್ಟಿದ್ದ ಎರಡು ವರ್ಷದ ಅಂತರದಲ್ಲಿ ಶಂಕರನೂ ಅಲ್ಲಿಗೆ ಬಂದಿದ್ದ. ನಾವು ಜತೆಯಲ್ಲೇ ಇದ್ದೆವು. ನಾನು ರಂಗಭೂಮಿಗೆ ಹೆಜ್ಜೆ ಇಟ್ಟಾಗ, ಆತ ತೆರೆಯ ಹಿಂದೆ ಕೆಲಸ ಮಾಡಿದ. ಒಂದೆರಡು ನಾಟಕಗಳಲ್ಲಿ ಪಾತ್ರಗಳನ್ನೂ ಮಾಡಿದ. ನನಗೂ ಶಂಕರನಿಗೂ ಆರು ವರ್ಷಗಳ ಅಂತರ. ಮುಂಬೈನಲ್ಲಿ ನಾನು ಆತನಿಗೆ ಅಣ್ಣ ಆಗಿದ್ದೆ ನಿಜ. ಆದರೆ ನಿಜವಾಗಿಯೂ ನಾನು ಆತನ ಪಾಲಕನಾಗಿದ್ದೆ.(ನಗುತ್ತಾ) ಸ್ವಲ್ಪ ಅಣ್ಣಾಗಿರಿ ಇತ್ತು! ಆತ ಚೆನ್ನಾಗಿ ಓದುತ್ತಿದ್ದ. ನನಗೆ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದ್ದು ಅನುಕೂಲವಾಯಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬ್ಯಾಂಕ್‌ನಲ್ಲಿ ಶಂಕರಗೂ ಅರೆಕಾಲಿಕ ಕೆಲಸ ಸಿಕ್ಕಿತು. ಶಂಕರನಿಗೆ ನಾಯಿಮರಿಗಳೆಂದರೆ ಇಷ್ಟ. ಮುಂಬೈನಲ್ಲಿ ನಾವಿದ್ದ ಮನೆಯೇ ಚಿಕ್ಕದಾಗಿತ್ತು. ಒಮ್ಮೆ ಶಂಕರ ಬೀದಿಬದಿಯ ನಾಯಿಮರಿಯೊಂದನ್ನು ಮನೆಗೆ ತಂದಿದ್ದ. ಮರುದಿನ ಆತ ಶಾಲೆಗೆ ಹೋದ ಬಳಿಕ ನಾನು ಅದನ್ನು ಮತ್ತೆ ಬಿಟ್ಟುಬಂದಿದ್ದೆ. ದೊಡ್ಡ ಮನೆ ತೆಗೆದುಕೊಂಡಾಗ ನಾಯಿ ಸಾಕೋಣ ಎಂದಿದ್ದೆ.

ಸಿನಿಮಾ ಬದುಕಿನಲ್ಲಿ ಕಂಡ ಸಂಕ್ರಮಣಗಳನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ನಾಟಕ ರಂಗದಲ್ಲೂ ಬದಲಾವಣೆಗಳನ್ನೂ ನೋಡುತ್ತಿದ್ದೆ. ಹೆಚ್ಚಾಗಿ ಮುಖ್ಯ ಪಾತ್ರಗಳು ಸಿಕ್ಕಿದ್ದರೂ ಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಬಹುಮುಖ ಪ್ರತಿಭೆಗೆ ಹೆಚ್ಚು ಒತ್ತು ಕೊಡಬೇಕು ಎಂದು ರಂಗಭೂಮಿಯ ಗುರುಗಳು ಹೇಳಿದ್ದರು. ಈ ಮಾರ್ಗದರ್ಶನವನ್ನು ಚಿತ್ರರಂಗದಲ್ಲೂ ಮುಂದುವರಿಸಿದೆ. ಹೀಗಾಗಿ ವಿಭಿನ್ನ ಪಾತ್ರಗಳನ್ನು ಹುಡುಕಿದೆ.

ರಂಗಭೂಮಿಯಲ್ಲಿ ಹಾಸ್ಯದಲ್ಲಿ ವಿಶೇಷ ತರಬೇತಿ ಸಿಕ್ಕಿತ್ತು. ಅದಕ್ಕೆ ತಕ್ಕಂತೆ ಫಣಿ ರಾಮಚಂದ್ರ ಅವರ ‘ಗಣೇಶ’ ಸರಣಿ ಸಿನಿಮಾ ಬಂದವು. ಖಳನಾಯಕನ ಪಾತ್ರವನ್ನೂ ಮಾಡಿದೆ. ಆದರೆ ಜನಕ್ಕೆ ಅದು ಇಷ್ಟವಾಗಲಿಲ್ಲ. ‘ಸಂಕಲ್ಪ’ ಸಿನಿಮಾ ಮಾಡುವಾಗ ನನಗೆ 23 ವರ್ಷ. ಐವತ್ತು ತಲುಪುತ್ತಿದ್ದ ಹಾಗೆಯೇ, ಪೋಷಕ ಪಾತ್ರಗಳಲ್ಲಿ ಬಹಳ ಪರಿಪಕ್ವವಾದ ಪಾತ್ರಗಳನ್ನು ಮಾಡುವ ಅವಕಾಶ ಇದೆ ಎಂದು ಅರಿತು ಅಂತಹ ಚಿತ್ರಕಥೆಗಳನ್ನು ಆಯ್ದುಕೊಂಡೆ.

ಕನ್ನಡದ ಬೇರು ನಿಮ್ಮನ್ನು ಹಿಡಿದಿಟ್ಟುಕೊಂಡಿತು ಅಲ್ಲವೇ?

ಹಲವು ಚಿತ್ರಗಳನ್ನು ಬೇರೆ ಭಾಷೆಗಳಲ್ಲಿ ಮಾಡಿದರೂ, ಕನ್ನಡದಲ್ಲಿನ ಪ್ರಯೋಗಾತ್ಮಕ ಪ್ರಯತ್ನಗಳು ನನ್ನನ್ನು ಹಿಡಿದಿಟ್ಟುಕೊಂಡವು. ಇಲ್ಲಿನ ಹಲವರು ನನಗೋಸ್ಕರವೇ ಕಥೆ ಬರೆಯಲು ಆರಂಭಿಸಿದರು. ಕೆ.ವಿ.ಜಯರಾಂ, ಕೆ.ವಿ.ರಾಜು, ದೊರೈ ಭಗವಾನ್‌ ಜತೆ, ಸುನೀಲ್‌ ಕುಮಾರ್‌ ದೇಸಾಯಿ, ಫಣಿ ರಾಮಚಂದ್ರ, ದಿನೇಶ್‌ ಬಾಬು, ಯೋಗರಾಜ್‌ ಭಟ್‌ ಅವರ ಸಿನಿಮಾಗಳಲ್ಲಿ ಭಿನ್ನಭಿನ್ನ ಪಾತ್ರಗಳನ್ನು ಮಾಡಿದೆ. ಬಹುಮುಖ ಪ್ರತಿಭೆಯ ಪಾತ್ರಗಳನ್ನು ಇವರು ನಿರ್ಮಿಸುತ್ತಿದ್ದರು. ಇಲ್ಲಿನ ನಿರ್ದೇಶಕರು, ನಿರ್ಮಾಪಕರು ನನ್ನನ್ನು ಚೆನ್ನಾಗಿ ಬೆಳೆಸಿದರು, ನೋಡಿಕೊಂಡರು.

ಇದೀಗ ನಾನು ಚಿತ್ರಕಥೆಯನ್ನು ನೋಡಿಕೊಂಡು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದು, ನನ್ನ ಪಾತ್ರವಷ್ಟೇ ಅಲ್ಲದೆ ಇಡೀ ಚಿತ್ರದಲ್ಲಿನ ಪಾತ್ರಗಳು ಯಾವುದೇ ಅಶ್ಲೀಲತೆ ಇಲ್ಲದೆ ಜೀವಂತಿಕೆಯಿಂದ ಕೂಡಿರಬೇಕು ಎನ್ನುವುದನ್ನು ಬಯಸುತ್ತೇನೆ. ಎಂಜಿನಿಯರಿಂಗ್‌ ಪೂರೈಸಿದ ಹಲವು ಯುವ ನಿರ್ದೇಶಕರು ನಮ್ಮ ನಡುವಿದ್ದಾರೆ. ಎಲ್ಲಿಂದ, ಯಾರು ಬಂದರು ಎನ್ನುವುದು ಮುಖ್ಯವಲ್ಲ. ಇವರು ಒಂದು ಚಿತ್ರಕ್ಕೆ ನಾಲ್ಕೈದು ವರ್ಷ ಮೀಸಲಿಡುತ್ತಾರೆ. ಅದ್ಭುತವಾದ ಕಥೆಯನ್ನು ಹೆಣೆಯುತ್ತಾರೆ. ನಿರ್ದೇಶಕ ಹೇಮಂತ್‌ ಎಂ.ರಾವ್‌ ಇಂತಹ ನಿರ್ದೇಶಕರ ಸಾಲಿನಲ್ಲಿ ಉಲ್ಲೇಖಾರ್ಹ. ಹೀಗಾಗಿ ಹೊಸಬರ ತಂಡದ ಜತೆಗೂ ನಾಲ್ಕೈದು ಸಿನಿಮಾ ಮಾಡುತ್ತಿದ್ದೇನೆ. ಕರಾವಳಿಯಲ್ಲಿ ಬೆಳೆದು ಮುಂಬೈಗೆ ಹೋದವನಿಗೆ ಇಲ್ಲಿನ ಪ್ರೀತಿ, ಆತ್ಮೀಯತೆ, ವಿಶ್ವಾಸ ಕೂಡಿಹಾಕಿದೆ. ಕನ್ನಡದಲ್ಲೇ ಓದಿ ಬೆಳೆದವನು ನಾನು. ಕನ್ನಡದ ಅಪಾರವಾದ ಪ್ರಭಾವ ನನ್ನ ಮೇಲಿದೆ.

ಅನಂತನಾಗ್‌ ಅವರನ್ನು ಬಹಳ ಕಾಡಿದ ಅವರದೇ ಸಿನಿಮಾ ಯಾವುದು?

ಪ್ರತಿಯೊಂದು ಪಾತ್ರದ ಹಿಂದೆ ಬಹಳ ಜನರ ಕೆಲಸವಿದೆ. ಹೀಗಾಗಿ ಭೇದಭಾವ ಮಾಡುವುದಿಲ್ಲ. ನಾವು ನಾಟಕದ ತಾಲೀಮು ಮಾಡುವಾಗ ಆ ಕಥೆ ಬರೆದ ಲೇಖಕರು ವೇದಿಕೆ ಮುಂದೆ ಕುಳಿತಿರುತ್ತಿದ್ದರು. ನಾವು ತಾಲೀಮು ವೇಳೆ ಕೊಂಚ ತಪ್ಪು ಮಾಡಿದರೂ ‘ಬಹಳ ಯೋಚನೆ ಮಾಡಿ ಆ ಸಾಲು ಬರೆದಿದ್ದೇನೆ. ದಯವಿಟ್ಟು ಅದನ್ನು ಸರಿಯಾಗಿ ಹೇಳು’ ಎಂದು ತಿದ್ದುತ್ತಿದ್ದರು. ಪ್ರತಿಯೊಂದು ಚಿತ್ರಕಥೆ ಹಿಂದೆ ಬಹಳ ಪರಿಶ್ರಮವಿದೆ. ಸಿನಿಮಾ ಮಾಡುವಾಗ ಪ್ರತೀ ಕಲಾವಿದನಿಗೂ ಹೊಣೆಗಾರಿಕೆ ಕ್ರಮೇಣ ಬರುತ್ತದೆ. ಹೀಗಾಗಿ ಸಿನಿಮಾಗಳ ನಡುವೆ ಆಯ್ಕೆ ತುಂಬಾ ಕಷ್ಟ. ಅದು ಫೇವರಿಟ್‌, ಇದು ಫೇವರಿಟ್‌ ಎನ್ನಲು ಸಾಧ್ಯವಿಲ್ಲ.

‘ಮುಂಗಾರು ಮಳೆ’ ಫಾರ್ಮ್‌ನಲ್ಲಿ ಇನ್ನೂ ಇದ್ದೀರಾ?

‘ಮುಂಗಾರು ಮಳೆ’ಗೂ ಮುನ್ನವೇ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಾನು ನಿಭಾಯಿಸಿದ್ದೆ. ಮುಂಗಾರು ಮಳೆ ನಂತರ ಹೆಚ್ಚು ಹೆಸರು ಬಂತು. ಪಾತ್ರಗಳಲ್ಲಿ ವೈವಿಧ್ಯ ಇದ್ದಾಗ ನಟನಿಗೆ ನಟನೆ ಸಲೀಸು. ಈಗ ಕೊಂಚ ನಿಧಾನವಾಗಿದ್ದೇನೆ. 75ನೇ ವರ್ಷಕ್ಕೆ ಕಾಲಿಡುತ್ತಿರುವಾಗ ನಾನೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇನ್ನು ಮುಂದೆ ಏನು ಮಾಡಬೇಕು? ಕೆಲಸ ಮಾಡಿದರೂ ಎಂಥ ಕೆಲಸ ಮಾಡಬೇಕು? 75ರ ಗಾಂಭೀರ್ಯ, ಘನತೆ ಅರಿತುಕೊಂಡು, ಯಾವುದು ಮಾಡಿದರೆ ಚೆಂದ, ಯಾವ ಪಾತ್ರ ಮಾಡದೇ ಇದ್ದರೆ ಒಳ್ಳೆಯದು ಎನ್ನುವ ಆಯ್ಕೆಯಲ್ಲಿ ಮತ್ತಷ್ಟು ಸೂಕ್ಷ್ಮವಾಗಬೇಕು.

ಕಣ್ಮುಂದೆಯೇ ಜನನ, ಮರಣವನ್ನು ನೋಡುತ್ತಿರುತ್ತೇವೆ. ತಮ್ಮ ಶಂಕರ 35ನೇ ವಯಸ್ಸಿಗೆ ನಿಧನನಾದ. ಮೊನ್ನೆ ಮೊನ್ನೆ ಅಪ್ಪು... ಇವೆಲ್ಲ ನಿಮಗೆ ಎಚ್ಚರ ಕೊಡುತ್ತವೆ. ಸಿನಿಮಾ ಬದುಕಲ್ಲ. ಬದುಕು ಸಿನಿಮಾ ಎಂದು. ಜೀವನ ಎನ್ನುವುದು ಹರಿಯುತ್ತಿರುತ್ತದೆ. ಅದರ ಒಂದು ಬೊಗಸೆ ತೆಗೆದು ಜನರಿಗೆ ತೋರಿಸುತ್ತೇವೆ. 74 ವಸಂತಗಳು ಮುಗಿದಾಗ ಅದರ ಕಡೆಯೂ ಗಮನ ಕೊಡಬೇಕಾಗುತ್ತದೆ. ಉದಾಹರಣೆಗೆ, ಆಶ್ರಮ, ಮಠದ ವಾತಾವರಣದಲ್ಲಿ ಬೆಳೆದ ನಾನು ನಾಟಕ, ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟಾಗ ಗುರುಗಳೂ ಆಶ್ಚರ್ಯಪಟ್ಟಿದ್ದರು. ಅವರಿಗೆ ಅನಿಸಿದ ಹಾಗೆ ನನಗೂ ಅನಿಸುತ್ತಾ ಬಂದಿದೆ. ಎಲ್ಲರೂ ಹೆಚ್ಚಾಗಿ ಪ್ರಪಂಚದಿಂದ ಪಾರಮಾರ್ಥಕ್ಕೆ ಹೋದರೆ, ನಾನು ಪಾರಮಾರ್ಥದಲ್ಲಿದ್ದವನು ಪ್ರಪಂಚಕ್ಕೆ ಹೋದೆ. ಜೀವನ ಒಂದು ಹಳಿಯಲ್ಲಿದೆ. ಅದರ ಹಿಂದೆಯೇ ಸಿನಿಮಾ ಇದೆ. ಇವುಗಳಲ್ಲಿ ಯಾವುದು ಮುಖ್ಯ ಅನ್ನುವುದನ್ನು ಆಯ್ದುಕೊಂಡು ಮುಂದಿನ ಹೆಜ್ಜೆ ಇಡಬೇಕು.

‘ಸಂಕಲ್ಪ’ ಅನಿರೀಕ್ಷಿತವಾಗಿತ್ತೇ?

1970ರ ದಶಕದಲ್ಲಿ ಕನ್ನಡದಲ್ಲಿ ‘ಸಂಸ್ಕಾರ’, ‘ವಂಶವೃಕ್ಷ’ ಹೀಗೆ ಕಾದಂಬರಿ ಆಧಾರಿತ ಹೊಸ ಅಲೆಯ ಚಿತ್ರಗಳು ಬಂದವು. ಗಿರೀಶ ಕಾರ್ನಾಡ, ಲಂಕೇಶ್‌, ಬಿ.ವಿ.ಕಾರಂತ, ಜಿ.ವಿ.ಅಯ್ಯರ್‌ ಮುಂತಾದವರ ಕಾಲವದು.
ವೈ.ಎನ್‌.ಕೃಷ್ಣಮೂರ್ತಿ, ಜಿ.ವಿ.ಅಯ್ಯರ್‌, ಗಿರೀಶ ಅವರು ಸೇರಿ, ನಂಜರಾಜ್‌ ಅರಸ್‌ ನಿರ್ದೇಶನದ ‘ಸಂಕಲ್ಪ’ದ ಅವಕಾಶ ನೀಡಿದರು. ನಂತರದಲ್ಲಿ ಜಿ.ವಿ.ಅಯ್ಯರ್‌ ಅವರ ‘ಹಂಸಗೀತೆ’ ಮಾಡಿದೆ. ಹಲವು ಕಲಾತ್ಮಕ ಚಿತ್ರಗಳನ್ನು ಕನ್ನಡದಲ್ಲಿ ಮಾಡಿದೆ. ಮುಂಬೈನಲ್ಲಿ ‘ಅಂಕುರ್‌’, ‘ನಿಶಾಂತ್‌’, ‘ಮಂಥನ್‌’ ಹೀಗೆ ಶ್ಯಾಮ್‌ ಬೆನೆಗಲ್‌ ಅವರ ಜತೆಗೆ ಸತತ ಆರು ಚಿತ್ರಗಳಲ್ಲಿ ನಟಿಸಿದೆ. ಇದಾದ ನಂತರದಲ್ಲಿ ‘ಬಯಲುದಾರಿ’, ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’ ಈ ರೀತಿ ಮೈನ್‌ಸ್ಟ್ರೀಮ್‌ ಸಿನಿಮಾ ಎಂದು ಏನು ಹೇಳುತ್ತಾರೋ ಅಂತಹ ಚಿತ್ರಗಳಲ್ಲಿ ಪಾತ್ರ ದೊರೆಯಿತು. ಹೀಗೆ ವೃತ್ತಿ ನಟನಾದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT