ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್‌ ರಾಜ್‌ಕುಮಾರ್ ಹೊಸ ಸಿನಿಮಾ: ಹುಟ್ಟಿದೂರು ಕಾಡಿದಾಗ ‘ಗ್ರಾಮಾಯಣ’

ಟೀಸರ್ ಮಾತು
ಅಕ್ಷರ ಗಾತ್ರ

ರಾಘವೇಂದ್ರ ರಾಜ್‌ಕುಮಾರ್‌ ಅವರ ಹಿರಿಯ ಪುತ್ರ ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರದ ಟೀಸರ್‌ ಹೊರ ಬಂದಿದೆ. ಈ ಚಿತ್ರದಲ್ಲಿ ವಿನಯ್‌ ಅವರದ್ದುಪಕ್ಕಾ ಹಳ್ಳಿಹೈದನ ಪಾತ್ರ. ಅವರ ಜನ್ಮ ದಿನದ ಪ್ರಯುಕ್ತ ಚಿತ್ರತಂಡ ಪಿಆರ್‌ಕೆ ಪ್ರೊಡಕ್ಷನ್ ಮೂಲಕ‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದೆ.‌ಚಿತ್ರದಲ್ಲಿ ಏನೋ ಹೊಸತು, ವಿಶೇಷತೆ ಇರಲಿದೆ ಎನ್ನುವ ಸಿನಿರಸಿಕರ ಕುತೂಹಲವನ್ನು ಹೆಚ್ಚಿಸುವಂತಿದೆ ಈ ಟೀಸರ್‌.

ರಂಗಭೂಮಿ ಹಿನ್ನೆಲೆಯ ದೇವನೂರು ಚಂದ್ರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಬಿಟ್ಟುಬಂದ ಊರು ಕಾಡುತ್ತಿದ್ದಾಗ ಹುಟ್ಟಿದ ಕತೆಯೇ ‘ಗ್ರಾಮಾಯಣ’ ಎಂದು ದೇವನೂರು ಚಂದ್ರು ‘ಸಿನಿಮಾ ಪುರವಣಿ’ಯೊಂದಿಗೆ ಮಾತು ಆರಂಭಿಸಿದರು.

‘ಈ ಕಥೆಗೆ ಹತ್ತು ವರ್ಷಗಳ ಹಿಂದೆಯೇ ತಯಾರಿ ಮಾಡಿಕೊಂಡಿದ್ದೆ. ‘ಮುಂಗಾರು ಮಳೆ’ ಸಿನಿಮಾ ಹವಾ ಎಬ್ಬಿಸಿದಾಗಲೇ ಇಂಥದ್ದೊಂದು ಸಿನಿಮಾ ಮಾಡುವ ಸಂಕಲ್ಪ ಮೂಡಿತ್ತು. ವಿನಯ್‌ ರಾಜ್‌ಕುಮಾರ್‌ ಅವರ ‘ಅನಂತು ವರ್ಸಸ್‌ ನುಸ್ರತ್’‌ ಚಿತ್ರದ ಶೂಟಿಂಗ್‌ ವೇಳೆ ನನ್ನ ‘ಗ್ರಾಮಾಯಣ’ದ ಕಥೆಯನ್ನು ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಮಂಗಳ‌ಮ್ಮ ಅವರಿಗೆ ಹೇಳಿದ್ದೆ. ಇಡೀ ಕುಟುಂಬ ಕಥೆಯನ್ನು ಐದಾರು ಬಾರಿ ಕೇಳಿಸಿಕೊಂಡು, ಕಥೆಯ ಸೊಗಡು ಅರ್ಥ ಮಾಡಿಕೊಂಡರು. ಚಿತ್ರ ಮಾಡಲು ಹಸಿರು ನಿಶಾನೆ ತೋರಿದರು. ಜತೆಗೆ ಅವರೇ ನಿರ್ಮಾಪಕರನ್ನು ಹುಡುಕಿಕೊಟ್ಟರು’ ಎಂದು ಚಂದ್ರು ಮಾತು ವಿಸ್ತರಿಸಿದರು.

ಚಂದ್ರು ‘ಅಭಿನಯ ತರಂಗ’ ರಂಗಭೂಮಿ ತಂಡದಿಂದ ಬಂದವರು. ನಟ, ರಂಗಕರ್ಮಿ ಬೆಳವಾಡಿ ಪ್ರಕಾಶ್‌ ಅವರ ನೆಚ್ಚಿನ ಶಿಷ್ಯ. ನಿರ್ದೇಶಕರಾದ ದಿವಂಗತ ತುಷಾರ್‌ ರಂಗನಾಥ್‌, ಎ.ಪಿ. ಅರ್ಜುನ್‌ ಅವರ ಗರಡಿಯಲ್ಲಿ ಪಳಗಿದ್ದಾರೆ. ‘ಮಳೆಯಲಿ ಜೊತೆಯಲಿ’, ‘ಅದ್ಧೂರಿ’, ‘ಸಕ್ಕರೆ’ ಚಿತ್ರಗಳಲ್ಲಿ ಸಹ ನಿರ್ದೇಶನದ ಕುಸುರಿಕಲೆ ಸಿದ್ಧಿಸಿಕೊಂಡಿರುವ ಅನುಭವಿ.ನಿರ್ದೇಶನದ ಜತೆಗೆಕಥೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ಹೊತ್ತಿದ್ದಾರೆ. ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ, ಅರಸೀಕೆರೆ ಭಾಗದ ಪಕ್ಕಾ ಲೋಕಲ್‌ ಭಾಷೆಯನ್ನೇ ಸಂಭಾಷಣೆಯಲ್ಲಿ ಉಳಿಸಿಕೊಂಡಿದ್ದೇನೆ. ಹಳ್ಳಿಸೊಗಡಿನ ಗಂಧ ಈ ಚಿತ್ರದಲ್ಲಿ ಎದ್ದು ಕಾಣಿಸಲಿದೆ ಎನ್ನುವ ಮಾತು ಸೇರಿಸಿದರು.

ಬದುಕು ಕಟ್ಟಿಕೊಳ್ಳಲು ಮಾತೆತ್ತಿದರೆ ಬೆಂಗಳೂರಿನಂತ ದೊಡ್ಡ ನಗರಗಳ ಕನಸು ಕಾಣುವ ಹಳ್ಳಿಹುಡುಗರಿಗೆ ನಾವು ಇದ್ದಲ್ಲಿಯೇ ಏನು ಮಾಡಬಹುದು ಎನ್ನುವುದನ್ನು ‘ಗ್ರಾಮಾಯಣ’ ತೋರಿಸಲಿದೆ. ವೃತ್ತಿ, ಬದುಕಿನ ಅನಿವಾರ್ಯತೆಗೆ ಹುಟ್ಟೂರು ತೊರೆದು ದೂರದ ಊರು ಸೇರಿದವರಿಗೆ ಮತ್ತೆ ಹುಟ್ಟೂರನ್ನು ಇದು ಕಾಡಿಸುವುದು ಖರೆ ಎನ್ನುವುದು ಚಂದ್ರು ಅವರ ವಿಶ್ವಾಸದ ಮಾತು.

ಚಿಕ್ಕಮಗಳೂರು ಮತ್ತು ಹಾಸನ ಗಡಿಭಾಗದಲ್ಲಿ ನಡೆಯುವ ಕಥೆ ಇದು. ಪ್ರತಿ ಪಾತ್ರವು, ಸನ್ನಿವೇಶವೂ ಜನರಿಗೆ ತಾಕುತ್ತದೆ. ನಮ್ಮ ನೆಲದ ಬದುಕು, ಸಂಸ್ಕೃತಿ, ಆಚರಣೆ, ರಾಜಕಾರಣವನ್ನು ಕಥೆಗೆ ಒಗ್ಗಿಸಿ ಗಂಭೀರ ವಿಷಯಗಳನ್ನು ಕಮರ್ಶಿಯಲ್‌ ದೃಷ್ಟಿಕೋನದಲ್ಲಿ ಹೇಳಲು ಯತ್ನಿಸಿದ್ದೇನೆ. 28 ದಿನಗಳ ಕಾಲ ಚಿತ್ರೀಕರಣ ನಡೆದಿದೆ. 50 ದಿನಗಳ ಚಿತ್ರೀಕರಣ ಬಾಕಿ ಇದೆ.ಕೊರೊನಾ ಲಾಕ್‌ಡೌನ್‌ ಮುಗಿದ ತಕ್ಷಣ ಶೂಟಿಂಗ್‌ ಒಂದೇ ಹಂತದಲ್ಲಿ ಮುಗಿಸಲಿದ್ದೇವೆ ಎನ್ನುತ್ತಾರೆ ಅವರು.

ವಿನಯ್‌ ರಾಜ್‌ಕುಮಾರ್‌‌ ಹಳ್ಳಿ ರೈತನ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಬಿಡುವಿನ ನಂತರ ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ’ದ ಮೂಲಕ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.ವಿನಯ್‌ಗೆ ಜೋಡಿಯಾಗಿಅಮೃತಾ ಅಯ್ಯರ್‌ ನಟಿಸುತ್ತಿದ್ದಾರೆ. ತಮಿಳಿನ ‘ಪಡೈ ವೀರನ್‌’, ‘ಬಿಗಿಲ್‌’ ಚಿತ್ರದ ತೆಂಡ್ರಲ್‌ ಪಾತ್ರದಲ್ಲಿ ಮಿಂಚಿರುವ ಅಮೃತಾ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆಅಡಿ ಇಡುತ್ತಿದ್ದಾರೆ. ಇವರು ಬೆಂಗಳೂರಿನವರೇ.

ಎನ್.ಎಲ್.ಎನ್. ಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಲೂಸಿಯಾ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ದೇಸಿ ಸೊಗಡಿನ ಸಂಗೀತ ನೀಡಿದ್ದಾರೆ.ಛಾಯಾಗ್ರಹಣ, ಅಭಿಷೇಕ್‌ ಜಿ. ಕಾಸರಗೋಡು, ಸಂಕಲನ ಮನು ಶೇಡಗರ್‌ ಅವರದ್ದು.ತಾರಾಗಣದಲ್ಲಿ ನಟಿ, ನಿರೂಪಕಿ ಅಪರ್ಣಾ, ಶ್ರೀನಿವಾಸ ಪ್ರಭು, ಸಂಪತ್‌ ಮೈತ್ರೆಯ, ಸೀತಾ ಕೋಟೆ, ಮಂಜುನಾಥ ಹೆಗಡೆ,ಕಡೂರು ಧರ್ಮಣ್ಣ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT