ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕ ₹ 18 ಲಕ್ಷ ಪ್ಯಾಕೇಜ್ ವೇತನದ ಕೆಲಸ ಕೈಚೆಲ್ಲಿದ ವಿರಾಟನ ‘ಕಿಸ್‌’

Last Updated 19 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸುವ ವಿರಾಟ್‌ ಕೊಹ್ಲಿಯಂತೆ, ಸಿನಿಮಾದಲ್ಲಿ ಯಶಸ್ಸಿನ ಸೆಂಚುರಿ ಬಾರಿಸುವ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟಿದ್ದಾರೆ ಮೈಸೂರಿನ ಯುವ ನಟ ವಿರಾಟ್‌. ಹೆತ್ತವರು ಇವರಿಗೆ ಇಟ್ಟ ಹೆಸರು ಕಾರ್ತಿಕ್‌ ಎಸ್‌. ಕುಮಾರ್‌. ಚಿತ್ರರಂಗದಲ್ಲಿ ನೆಲೆ ಮತ್ತು ಯಶಸ್ಸು ಕಾಣಲೆಂದು ಈ ನಟನಿಗೆ ಚಾಮುಂಡಿಯ ಭಂಟನ ಹೆಸರನ್ನೇ ಇಟ್ಟಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್‌. ವಿರಾಟ್‌ಓದಿದ್ದು ಎಂಜಿನಿಯರಿಂಗ್‌. ಅವರನ್ನುಸೆಳೆದಿದ್ದು ಮಾತ್ರ ಬಣ್ಣದ ಬದುಕು.

‘ಅದ್ದೂರಿ’, ‘ಐರಾವತ’, ‘ರಾಟೆ’, ‘ಅಂಬಾರಿ’ ಚಿತ್ರಗಳ ಖ್ಯಾತಿಯ ಅರ್ಜುನ್‌ ನಿರ್ದೇಶನದ ‘ಕಿಸ್‌’ ಸಿನಿಮಾ ಮೂಲಕ ಈ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.‌ ಚಿತ್ರದ ಟೀಸರ್ ನೋಡಿದ ನಟ ಯಶ್‌, ‘ಈತ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಆಸ್ತಿಯಾಗುತ್ತಾನೆ’ ಎನ್ನುವ ಮೆಚ್ಚುಗೆಯ ಮಾತು ಹೇಳಿರುವುದು ವಿರಾಟ್‌ ಅವರ ಹುಮ್ಮಸ್ಸನ್ನು ಹೆಚ್ಚಿಸಿದೆ.

‘ಕಿಸ್‌’ ಚಿತ್ರ ಇದೇ 27ರಂದು ತೆರೆಗೆ ಬರುತ್ತಿದ್ದು, ತಮ್ಮ ಬಣ್ಣದ ಬದುಕಿನ ಬಗ್ಗೆ ಹಲವು ಸಂಗತಿಗಳನ್ನು ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡಿದ್ದಾರೆ.

ಕೈತುಂಬಾ ವೇತನದ ಉದ್ಯೋಗ ಬಿಟ್ಟು ಸಿನಿಮಾಕ್ಕೆ ಬಂದಿದ್ದು ಏಕೆ?
ಎಂಜಿನಿಯರಿಂಗ್‌ ಮುಗಿಯುವಷ್ಟರಲ್ಲೇ ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ವಾರ್ಷಿಕ ₹ 18 ಲಕ್ಷ ಪ್ಯಾಕೇಜ್‌ ವೇತನದ ಉದ್ಯೋಗ ಸಿಕ್ಕಿತ್ತು. ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಕೆಲಸ ಮಾಡುವ ಅವಕಾಶವನ್ನು ನಟನೆಯ ಆಸಕ್ತಿಯಿಂದಾಗಿ ಕೈಚೆಲ್ಲಿದೆ. ಇದು ನನ್ನ ಹೆತ್ತವರಿಗೂ ಕೊಂಚ ಬೇಸರ ಮೂಡಿಸಿದ್ದು ಸುಳ್ಳಲ್ಲ. ರೋಬೊಟಿಕ್ಸ್‌ ಕುರಿತ ವಿಶೇಷ ಕೋರ್ಸ್‌ನ ಅಧ್ಯಯನಕ್ಕಾಗಿ ದೆಹಲಿಯ ಐಐಟಿ ಸೇರಿದ್ದೆ. ಪ್ರಾಜೆಕ್ಟ್‌ ಸಿದ್ಧಪಡಿಸಿ ಸಲ್ಲಿಸಬೇಕಾಗಿದ್ದ ಅಂತಿಮ ಹಂತದಲ್ಲಿ ನನ್ನೊಳಗೆ ಆರಂಭದ ಆಸಕ್ತಿ ಕಾಣಿಸಲಿಲ್ಲ. ಅದನ್ನು ಕೈಬಿಟ್ಟು ಸಿನಿಮಾ ರಂಗಕ್ಕೆ ಬಂದೆ.

ನೀವು ಬಣ್ಣದ ಲೋಕದ ಸೆಳೆತಕ್ಕೆ ಸಿಲುಕಿದ್ದು ಯಾವಾಗ?
ಚಿಕ್ಕವನಿದ್ದಾಗ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ನಾನು ನಟನಾಗಬೇಕೆಂಬ ಆಸೆ ಚಿಗುರೊಡೆದಿದ್ದು ಆಗಲೇ. ಶಾಲೆಯಲ್ಲಿ ಶಿಕ್ಷಕರು ನೀನು ಮುಂದೆ ಏನಾಗುತ್ತೀಯಾ ಎಂದಾಗ ‘ಹೀರೊ ಆಗುತ್ತೇನೆ’ ಎಂದು ಥಟ್ಟನೆ ಉತ್ತರಿಸುತ್ತಿದ್ದೆ. ಆಗ ಎಲ್ಲರೂ ನಗುತ್ತಿದ್ದರು. ಚೆನ್ನಾಗಿ ಡಾನ್ಸ್ ಮಾಡುತ್ತಿದ್ದೆ.ಡಾನ್ಸ್‌ನಲ್ಲಿದ್ದ ಆಸಕ್ತಿ, ರಂಗಭೂಮಿ ಬಗೆಗಿನ ಒಲವು ನನ್ನೊಳಗಿನ ನಟನೆಯ ಕನಸನ್ನು ಜೀವಂತವಾಗಿಟ್ಟಿತ್ತು. ಎಂಜಿನಿಯರಿಂಗ್‌ ಓದುವ ವೇಳೆಗೆ ಅದು ಹೆಮ್ಮರವಾಯಿತು. ಆಗ ಕಿರುತೆರೆ, ಹಿರಿತೆರೆಯತ್ತ ಮುಖ ಮಾಡಿದೆ.

ಸಿನಿಯಾನದ ಆರಂಭದಲ್ಲಿ ಏನಾದರೂ ಸಿದ್ಧತೆ ಮಾಡಿಕೊಂಡಿದ್ದಿರಾ?
ಅಂತಿಮ ವರ್ಷದ ಬಿ.ಇಯಲ್ಲಿರುವಾಗಲೇ ನಟನಾಗಬೇಕೆಂಬ ಆಸಕ್ತಿಯಿಂದ ರಂಗಾಯಣ ಸೇರಿಕೊಂಡಿದ್ದೆ. ರಂಗಾಯಣ ನನಗೆ ಎರಡನೇ ಮನೆಯಾಗಿತ್ತು. ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಸುರೇಶ್‌ ಬಾಬು ಅವರ ನಿರ್ದೇಶನದಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನನಗೆ ಸಿನಿಮಾ ಹೊಸದು. ನಾನು ಹೇಗೆ ಡೈನಾಮಿಕ್‌ ಆಗಿರಬೇಕೆನ್ನುವುದನ್ನು, ಹೇಗೆ ನಟಿಸಬೇಕೆನ್ನುವುದನ್ನು ಅರ್ಜುನ್‌ ಸರ್‌ ಹೇಳಿಕೊಟ್ಟಿದ್ದಾರೆ. ಜತೆಗೆ ಶಿವಣ್ಣ, ಪುನೀತ್‌ ಸರ್‌, ಯಶ್‌ ಸರ್‌, ಧ್ರುವ ಸರ್‌ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ.

ಚೊಚ್ಚಲುಸಿನಿಮಾ ‘ಕಿಸ್‌’ನಿಂದ ನಿಮ್ಮ ನಿರೀಕ್ಷೆಗಳೇನು?
ಎದ್ದರೂ, ಕುಳಿತರೂ, ಮಲಗಿದರೂ ‘ಕಿಸ್‌’ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದರಲ್ಲಿ ನನ್ನ ಕನಸುಗಳೂ ಇವೆ. ಪ್ರತಿಕ್ಷಣವೂ ‘ಕಿಸ್‌’ ಸಕ್ಸಸ್‌ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಒಳ್ಳೆಯ ಫಲಿತಾಂಶ ಬಂದರೆ ಅಷ್ಟೇ ಸಾಕು.ಈ ಸಿನಿಮಾ ಅಮ್ಮ ಮಾಡಿದ ಹೋಳಿಗೆಯಂತಿದೆ. ಆರನೇ ವರ್ಷದಿಂದ ಅರವತ್ತು ವರ್ಷದವರೆಗಿನ ಎಲ್ಲರೂ ನೋಡಬಹುದು.

ಈ ಚಿತ್ರದಲ್ಲಿ ನಟನೆಗೆ ಅವಕಾಶ ಸಿಕ್ಕ ಹಿನ್ನೆಲೆ ಬಗ್ಗೆ ಹೇಳಿ...
ಸೀರಿಯಲ್‌ನಲ್ಲಿ ನಟಿಸಿದ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಒಂದು ವರ್ಷದಿಂದ ಅಲೆಯುತ್ತಿದ್ದೆ. ‘ಅದ್ದೂರಿ’ ಸಿನಿಮಾ ನೋಡಿದ ಮೇಲೆ ಅರ್ಜುನ್‌ ಸರ್‌ ಜತೆಗೆ ಸಿನಿಮಾ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದೆ. ನಲವತ್ತೈದುಬಾರಿ ಅವರನ್ನು ಭೇಟಿ ಮಾಡಿ ಅವಕಾಶ ಕೇಳಲು ಅವರ ಮನೆಗೆ ಹೋಗಿದ್ದೆ. ಅವರತಾಯಿ ನನಗೆ ನಟನೆಗೆ ಅವಕಾಶ ಕೊಡಿಸಿದರು.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ...
ಪಾತ್ರದ ಹೆಸರು ಅರ್ಜುನ. ಆಡಿ ಕಾರು, ಸೂಪರ್‌ ಬೈಕ್‌ ಬಳಸುವ ತುಂಬಾ ಶ್ರೀಮಂತ ಯುವಕನ ಪಾತ್ರವದು. ಆತ ಪ್ರೀತಿಗಾಗಿ ಪ್ರಾಣ ಬೇಕಾದರೂ ಕೊಡುತ್ತಾನೆ. ಅದೇ ಗಾಂಚಾಲಿ ತೋರಿಸುವವರಿಗೆ ಆಟಿಟ್ಯೂಡ್‌ ತೋರಿಸುತ್ತಾನೆ. ಆಟಿಟ್ಯೂಡ್‌ಗೆ ಇವನೇ ಬ್ರ್ಯಾಂಡ್‌ ಎನ್ನುವಂತಿದೆ ನನ್ನ ಪಾತ್ರ.

ಸಿನಿಮಾದ ಟೈಟಲ್‌ ಕೇಳಿದ ತಕ್ಷಣ ಏನೋ ಒಂದು ಭಾವನೆಯಲ್ಲಿ ಕಿಸ್ಸಾ ಎನ್ನುತ್ತಿದ್ದವರು ಹಾಡುಗಳನ್ನು ಕೇಳಿ, ಟ್ರೇಲರ್‌ ನೋಡಿದಮೇಲೆ ಆಶ್ಚರ್ಯಪಟ್ಟಿದ್ದಾರೆ. ಸಿನಿಮಾದಲ್ಲಿ ಅಶ್ಲೀಲತೆ ಇಲ್ಲ. ಪರಿಶುದ್ಧ ಪ್ರೇಮ ಇದರಲ್ಲಿದೆ.

ತೆರೆಯ ಮೇಲೆ ನಿಮ್ಮ ಮತ್ತು ಶ್ರೀಲೀಲಾ ಕೆಮಿಸ್ಟ್ರಿ ಹೇಗಿದೆ?
ಶ್ರೀಲೀಲಾ ಕ್ಯೂಟಾಗಿ, ಬಬ್ಲಿಯಾಗಿ ನಟಿಸಿದ್ದಾರೆ. ಚಿತ್ರೀಕರಣದ ಆರಂಭಕ್ಕೂ ಮೊದಲು ವರ್ಕ್‌ಶಾಪ್‌ ಮಾಡಿ ತರಬೇತಿ ನೀಡಿದ್ದರು. ಹಾಗಾಗಿ ನಮಗೆ ನಟನೆ ಹೊಸತು ಎನಿಸಲಿಲ್ಲ. ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ತಾಲೀಮು ನಡೆಸುತ್ತಿದ್ದೆವು. ಎಲ್ಲಿಯೂ ರೀಟೇಕ್‌ ತೆಗೆದುಕೊಳ್ಳಲಿಲ್ಲ. ಲೀಲಾಜಾಲವಾಗಿ ನಟಿಸಿದ್ದೇವೆ.

ನಿಮ್ಮ ಮುಂದಿನ ಯೋಜನೆಗಳೇನು?
ಸದ್ಯಕ್ಕೆ ನನ್ನ ಮುಂದಿರುವುದು ‘ಕಿಸ್‌’ ಚಿತ್ರವಷ್ಟೇ.ಇದು ಮುಗಿಯುವವರೆಗೆ ಹೊಸ ಪ್ರಾಜೆಕ್ಟ್‌ಒಪ್ಪಿಕೊಳ್ಳಲ್ಲ. ಮುಂದೆ ಒಳ್ಳೊಳ್ಳೆಯ ಸಿನಿಮಾ ಮಾಡಬೇಕೆಂಬ ಕನಸುಗಳಂತೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT