ಶನಿವಾರ, ಜನವರಿ 18, 2020
21 °C

ಪ್ರೀತಿಯ ಸನಿಹಕೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಿನ್ನ ಸನಿಹಕೆ’ – ಸೂರಜ್‌ಗೌಡ ಮತ್ತು ಧನ್ಯಾ ರಾಮ್‌ಕುಮಾರ್‌ ನಟನೆಯ ಚಿತ್ರ. ಈ ಸಿನಿಮಾ ಮೂಲಕ ರಾಜ್‌ಕುಮಾರ್‌ ಕುಟುಂಬದ ಧನ್ಯಾ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ಇದು. ಈಗಾಗಲೇ, ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಒಂದು ಸಾಹಸ ದೃಶ್ಯ ಮತ್ತು ಹಾಡಿನ ಚಿತ್ರೀಕರಣವನ್ನಷ್ಟೇ ಚಿತ್ರತಂಡ ಬಾಕಿ ಉಳಿಸಿಕೊಂಡಿದೆ.

ಸೂರಜ್‌ಗೌಡ ಅವರೇ ಕಥೆ ಹೊಸೆದಿದ್ದಾರೆ. ಮೊದಲಿಗೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸುಮನ್‌ ಜಾದೂಗಾರ್. ಆದರೆ, ಅವರು ಅಪಘಾತಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಿರ್ದೇಶನದ ಹೊಣೆಯನ್ನು ಸೂರಜ್‌ಗೌಡ ಅವರೇ ಪೂರ್ಣಗೊಳಿಸಿದ್ದಾರಂತೆ. ‘ಸೂರಜ್‌ ಚೆನ್ನಾಗಿಯೇ ನಿರ್ದೇಶನ ಮಾಡಿದ್ದಾರೆ. ಅವರಿಗೆ ನಾನು ಬೆಂಬಲವಾಗಿ ನಿಂತಿದ್ದೇನೆ’ ಎಂಬುದು ಸುಮನ್‌ ಜಾದೂಗಾರ್ ಅವರ ಸ್ಪಷ್ಟನೆ.

ಎರಡು ಸಣ್ಣ ಪಟ್ಟಣಗಳಿಂದ ಹುಡುಗ ಮತ್ತು ಹುಡುಗಿ ಮೆಟ್ರೋಪಾಲಿಟನ್‌ ಸಿಟಿಗೆ ಬರುತ್ತಾರೆ. ಇಬ್ಬರ ನಡುವೆ ಸ್ನೇಹ ಮಾಡುತ್ತದೆ. ಅದು ಪ್ರೀತಿಗೆ ತಿರುಗುತ್ತದೆ. ಅವರಿಬ್ಬರ ಕುಟುಂಬದ ಸ್ಥಿತಿಗತಿ ಹೇಗೆ ಅವರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೇ ಈ ಚಿತ್ರದ ತಿರುಳು.

ಇದು ಫ್ಯಾಂಟಸಿ ಕಥೆಯಲ್ಲ. ಕಾಮಿಡಿ, ರೊಮ್ಯಾಂಟಿಕ್‌, ಪ್ರೀತಿ ಇದರಲ್ಲಿದೆ. ನಮ್ಮ ಸುತ್ತಮುತ್ತ ನಡೆಯುವ ಕಥೆ ಇದಾಗಿದೆ. ಕಥೆಯಲ್ಲಿ ಹೊಸತನವಿದೆ ಎನ್ನುವುದು ಚಿತ್ರತಂಡದ ವಿವರಣೆ.

ಧನ್ಯಾ ರಾಮ್‌ಕುಮಾರ್‌ ಫನ್‌ ಲವಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮದುವೆಯ ಮಮತೆಯ ಕರೆಯೋಲೆ’, ‘ಕಹಿ’, ‘ಸಿಲಿಕಾನ್‌ ಸಿಟಿ’ ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿರುವ ಸೂರಜ್‌ ಇದರಲ್ಲೂ ವೈವಿಧ್ಯಮಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರದ ನಾಲ್ಕು ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣವಿದೆ.

ಪ್ರವೀಣ್‌ಕುಮಾರ್‌ ಜಿ. ಸಂಭಾಷಣೆ ಬರೆದಿದ್ದಾರೆ. ಸುರೇಶ್‌ ಆರುಮುಗಂ ಅವರ ಸಂಕಲನವಿದೆ. ವೈಟ್‌ ಅಂಡ್‌ ಗ್ರೇ ಪಿಕ್ಚರ್ಸ್‌ನಡಿ ಅಕ್ಷಯ್‌ ರಾಜಶೇಖರ್‌ ಮತ್ತು ರಂಗನಾಥ್‌ ಕುಡ್ಲಿ ಬಂಡವಾಳ ಹೂಡಿದ್ದಾರೆ.

ಮಂಜುನಾಥ್‌ ಹೆಗಡೆ, ಚಿತ್ಕಲಾ ಬಿರಾದಾರ್‌, ಅರುಣಾ ಬಾಲರಾಜ್‌ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)