ಸಾಹೋ ರೇ... ಶಿವನಂದಿ

7

ಸಾಹೋ ರೇ... ಶಿವನಂದಿ

Published:
Updated:

ದರ್ಶನ್‌ ಅಭಿನಯದ ಹೊಸ ಚಿತ್ರ ‘ಯಜಮಾನ’ ತೆರೆಗೆ ಬರಲು ಸಜ್ಜಾಗಿದೆ. ವರ್ಷಾನಂತರ ದರ್ಶನ್‌ ಅವರನ್ನು ನಾಯಕನಾಗಿ ತೆರೆಯ ಮೇಲೆ ನೋಡಲು ಅವರ ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ ‘ಶಿವನಂದಿ’ ಹಾಡು ಕೂಡ ಹಲವು ದಾಖಲೆಗಳನ್ನು ಮುರಿಯುತ್ತ ಅಂತರ್ಜಾಲದಲ್ಲಿ ಡಮರುಗ ಬಾರಿಸುತ್ತಿದೆ. ಆ ಹಾಡಿಗೆ ಈಗಾಗಲೇ ಅರ್ಧ ಕೋಟಿಗೂ ಅಧಿಕ ವ್ಯೂಸ್‌ ಸಿಕ್ಕಿವೆ.

ಶಿವನಂದಿ ಹಾಡನ್ನು ಕೇಳಿದ ಹಲವರು ದರ್ಶನ್‌ಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೂ ‘ಸಾಹೋ ರೇ...’ ಅನ್ನುತ್ತಿದ್ದಾರೆ. ಈ ಹಾಡಿನಲ್ಲಿ ಅವರಿಗೆ ಬಾಹುಬಲಿಯ ಸಿನಿಮಾದ ‘ಸಾಹೋ ರೇ...’ ಹಾಡಿನ ಛಾಯೆ ಕಂಡು ಪುಲಕಿತರಾಗಿರುವುದೇ ಇದಕ್ಕೆ ಕಾರಣ. ಬಾಹುಬಲಿಯಂಥ ಸಿನಿಮಾ ಮಾಡಬೇಕು ಎನ್ನುವುದು ಗಾಂಧಿನಗರದ ದೊಡ್ಡ ಕನಸು. ಆ ಕನಸಿಗೆ ಪೂರ್ವ ಸಿದ್ಧತೆಯಾಗಿ ಬಾಹುಬಲಿ ಚಿತ್ರದ ಹಾಡಿನಂಥದ್ದೇ ಒಂದು ಹಾಡು ಮಾಡಿದ್ದಾರೆ ಎನ್ನುವುದು ಅವರ ವ್ಯಾಖ್ಯಾನ.

 


ಹರಿಕೃಷ್ಣ

ಹಾ, ಹಾಗೆಂದು ಹರಿಕೃಷ್ಣ ಬಾಹುಬಲಿ ಚಿತ್ರದ ಹಾಡನ್ನು ಯಥಾವತ್ತು ಇಲ್ಲಿ ಎತ್ತಿಕೊಂಡಿದ್ದಾರೆ ಎಂದುಕೊಳ್ಳಬೇಡಿ. ಖಂಡಿತ ಹಾಗೇನಿಲ್ಲ. ಎಲ್ಲೋ ಸೊಲ್ಲೊಂದರಲ್ಲಿ, ಕೋರಸ್‌ನಲ್ಲಿ ಆ ಪ್ರಭಾವ ಕಂಡರೆ ಅದನ್ನು ಸ್ಪೂರ್ತಿ ಅನ್ನಬೇಕೇ ಹೊರತು ಕಳ್ಳತನ ಅನ್ನುವುದು ಸರ್ವದಾ ಒಪ್ಪತಕ್ಕ ವಿಷಯ ಅಲ್ಲ. ಅಲ್ಲದೇ ಈ ಸಿನಿಮಾಗೆ ಹರಿಕೃಷ್ಣ ಬರೀ ಸಂಗೀತ ಸಂಯೋಜಕ ಅಲ್ಲ; ನಿರ್ದೇಶಕನೂ ಹೌದು. ಮೊದಲಿಗೆ ನಿರ್ದೇಶಕ ಎಂದು ಘೋಷಣೆಯಾಗಿದ್ದ ಪಿ. ಕುಮಾರ್‌ ಅವರಿಗಿಂತ ಎತ್ತರದಲ್ಲಿ ಹರಿಕೃಷ್ಣ ಹೆಸರು ರಾಜಾಜಿಸುತ್ತಿದೆ. (ಪಿ. ಕುಮಾರ್ ಬರೀ ಉತ್ಸವಮೂರ್ತಿ ಎಂಬ ಮಾತೂ ಇದೆ) ಒಂದು ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವುದೇ ಸುಲಭದ ಕೆಲಸ ಅಲ್ಲ. ಜತೆಗೆ ನಿರ್ದೇಶನದ ನೊಗವನ್ನೂ ಹೊತ್ತಿದ್ದಾರೆ ಎಂದ ಮೇಲೆ ಅವರಿಗಿರುವ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

‘ಹರಿಕೃಷ್ಣ ಪ್ರಾಮಾಣಿಕರು; ಬೇರೆಯವರ ಹಾಡಿನಿಂದ ಸ್ಪೂರ್ತಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ತಮ್ಮ ಹಳೆಯ ಹಾಡಿನಿಂದ ತಾವೇ ಸ್ಪೂರ್ತಿಗೊಂಡು ಹೊಸ ಹಾಡಿಗೆ ಸಂಗೀತ ಹೊಸೆಯುತ್ತಾರೆ’ ಎನ್ನುವುದು ಗಾಂಧಿನಗರದ ಗಾಳಿಕಟ್ಟೆಯಲ್ಲಿ ಕೂತವರ ಉಡಾಪೆ ಮಾತು(ಈ ಮಾತಿಗೆ ಪುರಾವೆ ಬೇಕಾದ್ರೆ ಇದೇ ಚಿತ್ರದ ಎರಡನೇ ಹಾಡು ಕೇಳಿಸಿಕೊಳ್ಳಿ ಎಂದೂ ಅವರು ಜುಲುಮೆ ಮಾಡುತ್ತಾರೆ). ಆದರೆ ಅವರ ಮಾತನ್ನು ಸುಳ್ಳಾಗಿಸಿರುವ ಹರಿಕೃಷ್ಣ ಬೇರೆ ಹಾಡುಗಳಿಂದಲೂ ಸ್ಪೂರ್ತಿಗೊಳ್ಳಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 

(ಕೃಪೆ: ಸುಧಾ, ಫೆ.7ರ ಸಂಚಿಕೆ)

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !