ಕೆಜಿಎಫ್‌ಗೆ ಯಶ್ ಹೀರೊ, ಯಶ್‌ಗೆ ಇನ್ನೊಬ್ಬ ಹೀರೊ!

7

ಕೆಜಿಎಫ್‌ಗೆ ಯಶ್ ಹೀರೊ, ಯಶ್‌ಗೆ ಇನ್ನೊಬ್ಬ ಹೀರೊ!

Published:
Updated:

ಕನ್ನಡಿಗನೊಬ್ಬ ನಿರ್ಮಿಸಿರುವ ಅತಿ ದೊಡ್ಡ ಸಿನಿಮಾ ಎಂದು ಹೇಳಿಕೊಂಡಿರುವ ‘ಕೆಜಿಎಫ್‌’ಗೆ ಹೀರೊ ಯಶ್. ಆದರೆ ಯಶ್ ಪಾಲಿಗೆ ಹೀರೊ, ಈ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು. ಈ ವಿಷಯವನ್ನು ಯಶ್ ಅವರು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.

‘ಇಷ್ಟು ದೊಡ್ಡ ಸಿನಿಮಾ ಮಾಡುವ ಆಲೋಚನೆಯನ್ನು ನಾಲ್ಕು ವರ್ಷಗಳ ಹಿಂದೆಯೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದು ಬಹಳ ದೊಡ್ಡದು. ನಮ್ಮನ್ನೆಲ್ಲ ಇಷ್ಟು ದೊಡ್ಡ ರೀತಿಯಲ್ಲಿ ನಿಮ್ಮೆದುರು ತೋರಿಸುತ್ತಿರುವುದು ವಿಜಯ್’ ಎಂದರು ಯಶ್. ನಿರ್ಮಾಪಕರ ಬಗ್ಗೆ ಇಷ್ಟು ಹೇಳಿದ ಯಶ್ ನಿರ್ದೇಶಕ ಪ್ರಶಾಂತ್ ನೀಲ್ ಅವರತ್ತ ತಮ್ಮ ದೃಷ್ಟಿ ತಿರುಗಿಸಿದರು.

‘ಪ್ರಶಾಂತ್ ಅವರಲ್ಲಿ ಅದ್ಭುತ ಪ್ರತಿಭೆ ಇದೆ. ಅವರು ಹಾಲಿವುಡ್ ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ನನ್ನ ಬಯಕೆ. ಭಾರತೀಯ ಸಿನಿಮಾ ರಂಗ ಪ್ರಶಾಂತ್ ಅವರನ್ನು ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ. ನಮ್ಮ ಸಾಮರ್ಥ್ಯ ಏನು ಎಂಬುದನ್ನು ಕೆಜಿಎಫ್‌ ಚಿತ್ರ ಎಲ್ಲರಿಗೂ ತೋರಿಸಲಿದೆ’ ಎಂದರು.

ಒಂದಿದ್ದದ್ದು ಐದಾಯಿತು

ಕೆಜಿಎಫ್‌ ಚಿತ್ರವನ್ನು ಐದು ಭಾಷೆಗಳಲ್ಲಿ ಮಾಡಬೇಕು ಎನ್ನುವ ಉದ್ದೇಶ ಪ್ರಶಾಂತ್‌ ಅವರಿಗೆ ಆರಂಭದಲ್ಲಿ ಇರಲಿಲ್ಲ. ಆದರೆ, ಕನ್ನಡದಲ್ಲಿ ಸಿದ್ಧವಾದ ಚಿತ್ರವನ್ನು ವೀಕ್ಷಿಸಿದ ನಿರ್ಮಾಪಕ ವಿಜಯ್ ಹಾಗೂ ಯಶ್, ಈ ಸಿನಿಮಾ ಐದು ಭಾಷೆಗಳಲ್ಲಿ ತಯಾರಾಗಬೇಕು ಎಂದು ತೀರ್ಮಾನಿಸಿದರು.

‘ಸಿನಿಮಾದಲ್ಲಿರುವ ಭವ್ಯತೆಯನ್ನು ಕಂಡ ವಿಜಯ್, ಅದಕ್ಕಾಗಿ ಮಾಡುವ ಹೂಡಿಕೆ ದೊಡ್ಡದೇನೂ ಅಲ್ಲ ಎಂದು ಭಾವಿಸಿದರು. ಅವರ ಕಾರಣದಿಂದಾಗಿಯೇ ಚಿತ್ರ ಇಂದು ಐದು ಭಾಷೆಗಳಲ್ಲಿ ತಯಾರಾಗಿದೆ’ ಎಂದರು ಪ್ರಶಾಂತ್.

ಹೆಚ್ಚು ಮಾತು ಆಡಲ್ಲ...

‘ಈ ಚಿತ್ರವನ್ನು ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಯನ್ನಾಗಿಸುವ ಇರಾದೆ ಇದೆಯೇ’ ಎಂಬ ಪ್ರಶ್ನೆ ಯಶ್ ಅವರಿಗೆ ಎದುರಾಯಿತು.

‘ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವ ಕೆಲಸ ಮಾಡುವುದಿಲ್ಲ. ಹೆಚ್ಚು ಮಾತು ಕೂಡ ಆಡುವುದಿಲ್ಲ. ಜನ ಈ ಸಿನಿಮಾ ವೀಕ್ಷಿಸಬೇಕು. ಅವರೇ ಇದರ ಬಗ್ಗೆ ತೀರ್ಮಾನ ಮಾಡಬೇಕು’ ಎಂದು ಉತ್ತರಿಸಿದರು.

ಅಂಬಿಗೆ ಖುಷಿ

ಕೆಜಿಎಫ್‌ ಟ್ರೇಲರ್‌ ವೀಕ್ಷಿಸಿ ಖುಷಿಪಟ್ಟ ಹಿರಿಯ ನಟ ಅಂಬರೀಷ್, ‘ಚಿತ್ರದ ಶೀರ್ಷಿಕೆ ನೋಡಿಯೇ ಹಲವರು ಸಿನಿಮಾದಲ್ಲಿ ಏನಿದೆ ಎಂಬುದನ್ನು ಹೇಳುತ್ತಾರೆ. ಕೆಜಿಎಫ್‌ ಎಂದ ತಕ್ಷಣ ಕೋಲಾರದ ಚಿನ್ನದ ಗಣಿಯ ನೆನಪಾಗುತ್ತದೆ. ಈ ಚಿತ್ರದ ಶೀರ್ಷಿಕೆಯು ಜನರಲ್ಲಿ ಕುತೂಹಲ ಹುಟ್ಟಿಸುವಂತೆ ಇದೆ’ ಎಂದರು.

‘ತಮಿಳಿನ ಒಂದು ಸಿನಿಮಾಕ್ಕೆ ಐದು ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಕನ್ನಡದಲ್ಲಿ ಐದು ಕೋಟಿ ರೂಪಾಯಿಯಲ್ಲಿ ಐದು ಸಿನಿಮಾ ಮಾಡಲಾಗುತ್ತದೆ. ಹೀಗಿದೆ ಕನ್ನಡ ಸಿನಿಮಾ ಮಾರುಕಟ್ಟೆಯ ಸ್ಥಿತಿ. ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಣೆ ಆಗಬೇಕು’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !