ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender 2022 | ಈ ವರ್ಷದ ಬಾಲಿವುಡ್‌ನ ಟಾಪ್–5 ವಿವಾದಗಳು

ವಿವಾದಗಳು ಬಾಲಿವುಡ್‌ಗೆ ಹೊಸದೇನಲ್ಲ. ಈ ವರ್ಷ ಬಾಲಿವುಡ್‌ನಲ್ಲಿ ಸದ್ದು ಮಾಡಿದ ವಿವಾದಗಳಿವು
Last Updated 30 ಡಿಸೆಂಬರ್ 2022, 6:47 IST
ಅಕ್ಷರ ಗಾತ್ರ

ಎಲ್ಲಿ ಮನರಂಜನೆ ಇದೆಯೋ ಅಲ್ಲಿ ವಿವಾದಗಳು ಇರಲೇಬೇಕು. ಸಿನಿಮಾಗಳು, ಸಿನಿ ತಾರೆಗಳು ವಿವಾದದ ಬಾಯಿಗೆ ಸಿಕ್ಕು ಬಳಲುವುದು ಸಾಮಾನ್ಯವಾಗಿ ಬಿಟ್ಟಿದೆ. ಕೋವಿಡ್‌ ಹೊಡೆತದಿಂದ ತತ್ತರಿಸಿದ ಸಿನಿಮಾ ರಂಗಕ್ಕೆ 2022ನೇ ಇಸವಿ ಹೊಸ ಹುರುಪು ನೀಡಿತು. ಆದರೆ ಸಿನಿಮಾ ಹಾಗೂ ಸಿನಿ ತಾರೆಗಳ ಬೆನ್ನ ಹಿಂದೆಯೇ ವಿವಾದಗಳು ಬಂದವು. ಸಿನಿಮಾ ಪೋಸ್ಟರ್‌ ವಿವಾದ, ಗೀತೆ ವಿವಾದ, ನಟರ ಫೋಟೋ ವಿವಾದ, ಸಿನಿಮಾ ಬಾಯ್ಕಾಟ್‌ ಮುಂತಾದ ಎಲ್ಲಾ ‘ಪ್ರಹಸನ‘ಗಳು ಎಲ್ಲಾ ವರ್ಷದಂತೆ ಈ ವರ್ಷವೂ ಕೂಡ ಇದ್ದವು. ಅಂಥ ಪ್ರಮುಖ ಐದು ಬಾಲಿವುಡ್‌ ವಿವಾದಗಳು ಇಲ್ಲಿವೆ.


1. ಬಾಯ್ಕಾಟ್ ಲಾಲ್‌ ಸಿಂಗ್‌ ಛಡ್ಡಾ

ಮಿಸ್ಟರ್‌ ‍ಪರ್ಫೆಕ್ಟ್‌ ಖ್ಯಾತಿಯ ಆಮಿರ್‌ ಖಾನ್‌ ಹಾಗೂ ಕರೀನಾ ಕಪೂರ್‌ ನಟನೆಯ ‘ಲಾಲ್‌ ಸಿಂಗ್‌ ಛಡ್ಡಾ‘ ಬಿಡುಗಡೆಗೂ ಮುನ್ನ ಬಾಯ್ಕಾಟ್‌ ಬಿಸಿ ಎದುರಿಸಿತು. ಭಾರತೀಯ ಸೇನೆಗೆ ಅವಮಾನ ಮಾಡಿ, ಸೈನಿಕರ ಭಾವನೆಗಳಿಗೆ ಆಮಿರ್‌ ಖಾನ್‌ಗೆ ನೋವುಂಟು ಮಾಡಿದ್ದಾರೆ ಎನ್ನುವುದು ಸನಾತನ ರಕ್ಷಕ ಸೇನೆ ಹಾಗೂ ಹಿಂದುತ್ವ ‍ಪಡೆಗಳ ಆಕ್ರೋಶವಾಗಿತ್ತು. ಹೀಗಾಗಿ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಆರಂಭವಾಯ್ತು. ಬಳಿಕ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಹಿಂದೂಗಳ ಭಾವನೆಗೆ ಆಮಿರ್ ಖಾನ್‌ ನೋವುಂಟು ಮಾಡಿದ್ದಾರೆ ಎನ್ನುವ ಆಕ್ರೋಶದ ಮಾತುಗಳೂ ಕೇಳಿ ಬಂದವು. ಅವರ ಹಿಂದಿನ ಹೇಳಿಕೆಗಳನ್ನೆಲ್ಲಾ ಉಲ್ಲೇಖಿಸಿ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಪ್ರತಿಭಟನೆ ನಡೆದಿದ್ದವು.


2. ದಿ ಕಾಶ್ಮೀರ್‌ ಫೈಲ್ಸ್‌ ವಿವಾದ

ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌‘ ಸಿನಿಮಾ ಹಲವು ವಿಚಾರಗಳಿಗೆ 2022ರಲ್ಲಿ ಸುದ್ದಿ ಮಾಡಿತ್ತು. ಸಿನಿಮಾ ದ್ವೇಷ ಹರಡುತ್ತಿದೆ ಎಂದು ಒಂದು ವರ್ಗದ ಜನ ಹೇಳಿದರೆ, ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಬವಣೆಯನ್ನು ತೋರಿಸಲಾಗಿದೆ. ಇದು ಎಲ್ಲರೂ ನೋಡಬೇಕಾದ ಸಿನಿಮಾದ ಎಂದು ಇನ್ನೊಂದು ವರ್ಗ ವಾದ ಮಾಡಿತ್ತು. ಹಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿಯೂ ಲಭಿಸಿತ್ತು.

ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ(ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಯ್ತು. ಐಎಫ್‌ಎಫ್‌ಐ 2022ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಲ್ಯಾಪಿಡ್, ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡಿ ವಿಚಲಿತನಾಗಿದ್ದು, ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಯ್ತು. ಕೊನೆಗೆ ಲ್ಯಾಪಿಡ್‌ ಅವರು ಕ್ಷಮೆ ಯಾಚನೆ ಮಾಡಬೇಕಾಗಿ ಬಂತು.

3. ರಣವೀರ್‌ ಸಿಂಗ್‌ ಬೆತ್ತಲೆ ಫೋಟೋ ವಿವಾದ

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮ್ಯಾಗಜೀನ್ ಒಂದಕ್ಕೆ ಮಾಡಿದ್ದ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವಿವಾದಕ್ಕೆ ಗುರಿಯಾತ್ತು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನೆಲ್ಲೇ, ಸರ್ಕಾರೇತರ ಸಂಸ್ಥೆಯೊಂದು ಮುಂಬೈ ಚೆಂಬೂರು ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ವಿರುದ್ಧ ದೂರು ದಾಖಲಿಸಿತ್ತು. ರಣವೀರ್ ಸಿಂಗ್ ಅವರು ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗಿದ್ದರು. ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು.

4. ಜಾಕ್ವೆಲಿನ್‌ ಫೆರ್ನಾಂಡಿಸ್‌ ಹಾಗೂ ಚಂದ್ರಶೇಖರ್‌ ವಿವಾದ

ವಂಚನೆ ಆರೋಪ ಪ್ರಕರಣಲ್ಲಿ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಜತೆ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್ ಅವರು ನಂಟು ಹೊಂದಿದ್ದಾರೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಯ್ತು. ಸುಲಿಗೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳ ಮೂಲಕ ಸಂಗ್ರಹಿಸಲಾದ ಹಣದಿಂದ ಸುಕೇಶ್ ಚಂದ್ರಶೇಖರ್ ಅವರು, ಜಾಕ್ವೆಲಿನ್ ಅವರಿಗೆ ₹ 5.71 ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದರು ಎನ್ನುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್‌ ಅವರ ಮೇಲೆ ದೂರು ದಾಖಲಿಸಿಕೊಂಡು ವಿಚಾರಣೆಗೂ ಕರೆದಿತ್ತು. ಸದ್ಯ ಜಾಕ್ವೆಲಿನ್‌ ಅವರು ಜಾಮೀನು ಪಡೆದುಕೊಂಡಿದ್ದಾರೆ.

ಇದರ ಜತೆಗೆ, ಜಾಕ್ವೆಲಿನ್ ಅವರ ಕುಟುಂಬದ ಆತ್ಮೀಯರಿಗೆ ಅಂತರರಾಷ್ಟ್ರೀಯ ಹವಾಲ ಆಪರೇಟರ್ ಅವತಾರ್ ಸಿಂಗ್ ಕೊಚ್ಚಾರ್ ಮೂಲಕ ₹ 1.3 ಕೋಟಿ ಮೌಲ್ಯದ ಡಾಲರ್, ₹ 14 ಲಕ್ಷ ಮೌಲ್ಯದ ಆಸ್ಟ್ರೇಲಿಯಾದ ಡಾಲರ್ ಅನ್ನು ಸುಕೇಶ್ ನೀಡಿದ್ದರು ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿತ್ತು. ಇದೇ ಪ್ರಕರಣ ಸಂಬಂಧ ಜಾಕ್ವೆಲಿನ್ ಅವರನ್ನು 2-3 ಬಾರಿ ವಿಚಾರಣೆ ನಡೆಸಿರುವ ಇ.ಡಿ ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ಅವರ ₹ 7.27 ಕೋಟಿಯನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ.

5. ಬೇಷರಮ್‌ ರಂಗ್‌ ವಿವಾದ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಇರುವ ‘ಪಠಾಣ್‌’ ಚಿತ್ರಕ್ಕೆ ಬಿಡುಗಡೆಯ ಮುನ್ನವೇ ವಿರೋಧ ಕೇಳಿ ಬಂದಿದೆ. ಸಿನಿಮಾದ ‘ಬೇಷರಮ್ ರಂಗ್’ ವಿಡಿಯೊ ಹಾಡಿನಲ್ಲಿ, ದೀಪಿಕಾ ‍‍ಪಡುಕೋಣೆಯವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಹಿಂದುತ್ವ ಸಂಘಟನೆಗಳ ಕಣ್ಣು ಕೆಂಪು ಮಾಡಿದೆ.

ಹಾಡಿನ ಕೊನೆಯಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದಾರೆ. ಈ ಸನ್ನಿವೇಶ ಹಾಗೂ ಹಾಡಿಗೆ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದು ಹೆಸರಿಟ್ಟಿರುವುದು ಕೆಲವರನ್ನು ಕೆರಳಿಸಿದೆ. ‘ಹಿಂದೂ ಭಗವಾ ಧ್ವಜದ ಸಂಕೇತವಾದ ಕೇಸರಿ ಬಣ್ಣದ ಬಿಕಿನಿ ಧರಿಸಿ ಅದಕ್ಕೆ ಬೇಷರಮ್ ರಂಗ್ ಎಂದು ಹೆಸರಿಟ್ಟಿರುವುದು ಸರಿಯಲ್ಲ. ಈ ಚಿತ್ರವನ್ನು ಬಾಯ್ಕಾಟ್ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಚಿತ್ರ ಜನವರಿಯಲ್ಲಿ ತೆರೆ ಕಾಣದಲಿದ್ದು, ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ, ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ ಎನ್ನುವ ಬೆದರಿಕೆಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT