ಸೋಮವಾರ, ಏಪ್ರಿಲ್ 6, 2020
19 °C

ನೋ ನಾರಾಯಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶ್ರೀ ಕೃಷ್ಣನಿಂದ ಶಾಪಕ್ಕೆ ಗುರಿಯಾಗುವ ನಾರದ ಭೂಲೋಕಕ್ಕೆ ಬರುತ್ತಾನೆ. ಭೂಲೋಕದಲ್ಲಿ ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮದುವೆ ಆದರೆ ಮಾತ್ರ, ನಾರದನಿಗೆ ಶಾಪ ವಿಮೋಚನೆ ಎಂದು ಶ್ರೀಕೃಷ್ಣ ಹೇಳಿರುತ್ತಾನೆ... ಇದು ಎಂ.ಜಿ. ಶ್ರೀನಿವಾಸ್ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರದ ಕಥೆಯ ಎಳೆ.

ನರನ ರೂಪದಲ್ಲಿ ಭೂಮಿಗೆ ಬರುವ ನಾರದನ ಅಪ್ಪನಿಗೆ ಪ್ರೀತಿ–ಪ್ರೇಮ ಅಂದರೆ ಆಗಿಬರುವುದಿಲ್ಲ. ಪ್ರೀತಿಸಿ ಮದುವೆ ಆಗದಿದ್ದರೆ ನರರೂಪಿ ನಾರದನಿಗೆ ಶಾಪ ವಿಮೋಚನೆ ಇಲ್ಲ! ಈ ಚಿತ್ರದಲ್ಲಿ ನರರೂಪಿ ನಾರದನ ತಂದೆಯ ಪಾತ್ರವನ್ನು ನಿಭಾಯಿಸುತ್ತಿರುವವರು ನಟ, ನಿರ್ದೇಶಕ ಎಸ್. ನಾರಾಯಣ್.

‘ಓಲ್ಡ್ ಮಾಂಕ್’ ಚಿತ್ರದ ಕಾರಣದಿಂದ ನಾರಾಯಣ್ ಅವರು ನಾಲ್ಕು ವರ್ಷಗಳ ನಂತರ ಹಿರಿತೆರೆಗಾಗಿ ಬಣ್ಣ ಹಚ್ಚಿದ್ದಾರೆ. ‘ಪಾರು ಧಾರಾವಾಹಿಯಲ್ಲಿ ನಾನು ಒಂದು ಒಳ್ಳೆಯ ಪಾತ್ರ ನಿಭಾಯಿಸುತ್ತಿದ್ದೇನೆ. ಅದನ್ನು ಕಂಡ ಶ್ರೀನಿವಾಸ್ ಅವರು ತಮ್ಮ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುವಂತೆ ಕೇಳಿದರು. ಅವರು ನಿರ್ದೇಶಿಸಿದ್ದ ಬೀರ್‌ಬಲ್‌ ಚಿತ್ರ ನೋಡಿದ್ದೆ. ಚೆನ್ನಾಗಿತ್ತು ಅದು. ಹಾಗೆಯೇ, ಓಲ್ಡ್‌ ಮಾಂಕ್ ಚಿತ್ರದ ಪಾತ್ರ ಇಷ್ಟವಾಯಿತು, ಒಪ್ಪಿಕೊಂಡೆ’ ಎಂದು ‘ಪ್ರಜಾಪ್ಲಸ್’ ಜೊತೆ ಮಾತನಾಡಿದ ನಾರಾಯಣ್ ವಿವರಿಸಿದರು.

‘ನಾನು ನಿಜ ಜೀವನದಲ್ಲಿ ಹೇಗಿರುತ್ತೇನೋ ಈ ಪಾತ್ರವೂ ಹಾಗೆಯೇ ಇದೆ. ಬಹಳ ಶಿಸ್ತಿನ ಪ್ರೊಫೆಸರ್ ಪಾತ್ರ ನನ್ನದು. ಪ್ರೀತಿ, ಪ್ರೇಮ ಎಂಬ ಭಾವನೆಗಳು ಎಲ್ಲರಿಗೂ ಬರುತ್ತವೆ. ಆದರೆ ಎಳೆ ವಯಸ್ಸಿನಲ್ಲಿ ದೇಶದ ಬಗ್ಗೆ ಕನಸು ಕಾಣಬೇಕು, ಪ್ರೀತಿ ಮಾಡುವುದೇ ಜೀವನ ಆಗಬಾರದು. ಮದುವೆ ಆದಮೇಲೂ ಪ್ರೀತಿ ಮಾಡಬಹುದು ಎಂದು ಹೇಳುವ ಪಾತ್ರ ನನ್ನದು. ಪ್ರೀತಿಗೆ ವಿರೋಧ ಮಾಡುತ್ತೇನೆ. ಚಿತ್ರದಲ್ಲಿ ಇದನ್ನು ಫನ್ನಿ ಆಗಿ ತೋರಿಸುತ್ತಾರೆ. ನನ್ನ ಪಾತ್ರ ಗಂಭೀರವಾದರೂ, ವೀಕ್ಷಕರಿಗೆ ಅದು ಮನರಂಜನೆ ನೀಡುತ್ತಿರುತ್ತದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು.

ನಾರಾಯಣ್ ಅವರ ಪಾತ್ರದ ಬಗ್ಗೆ ಒಂದು ಸಾಲಿನ ವಿವರ ನೀಡುವ ಶ್ರೀನಿವಾಸ್, ‘ಅವರು ಉಳಿದೆಲ್ಲ ವಿಚಾರಗಳಲ್ಲೂ ಯೆಸ್ ಎನ್ನುವ ನಾರಾಯಣ್. ಆದರೆ, ಪ್ರೀತಿ–ಪ್ರೇಮದ ವಿಚಾರದಲ್ಲಿ ಮಾತ್ರ ಅವರು ನೋ ನಾರಾಯಣ್’ ಎನ್ನುತ್ತಾರೆ.

ನಾರಾಯಣ್ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುವ ಇರಾದೆಯೊಂದಿಗೆ, ಚಿತ್ರದ ಸ್ಕ್ರಿಪ್ಟ್‌ ಸಿದ್ಧಪಡಿಸುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಶೀರ್ಷಿಕೆ, ಪಾತ್ರವರ್ಗ ಕುರಿತು ಈಗಲೇ ಏನೂ ಹೇಳಲಾಗದು ಎನ್ನುತ್ತಾರೆ ಅವರು. ಈ ವಿವರಗಳನ್ನು ಮೇ ತಿಂಗಳ ವೇಳೆಗೆ ಬಹಿರಂಗಪಡಿಸುವ ನಿರೀಕ್ಷೆ ಇದೆ.

ಓಲ್ಡ್ ಮಾಂಕ್ ಚಿತ್ರದಲ್ಲಿ ಶ್ರೀನಿವಾಸ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅದಿತಿ ಪ್ರಭುದೇವ ಅವರು ಇದರ ನಾಯಕಿ. ಈ ಚಿತ್ರಕ್ಕೆ ಪ್ರದೀಪ್ ಶರ್ಮ ಅವರು ಹಣ ಹೂಡಿಕೆ ಮಾಡಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸೌರಭ್ ವೈಭವ್ ಅವರು ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು