ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವ ಯೋಗ ದಿನ’ದಲ್ಲಿ ಹುಡುಗೀರ ಕೊಬ್ಬು ಕರಗಲಿ!

Last Updated 20 ಜೂನ್ 2019, 19:30 IST
ಅಕ್ಷರ ಗಾತ್ರ

‘ಯೋಗ’ ಶುಭಾ ಪೂಂಜ ಫರ್ಮಾನು!

ಕರಾವಳಿ ಚೆಲುವೆ ಶುಭಾ ಪೂಂಜ ಯೋಗಪ್ರಿಯೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುವುದು ಅವರಿಗೆ ಎಷ್ಟು ಇಷ್ಟವೋ; ವಾರದಲ್ಲಿ ಎರಡು ದಿನ ಸತತವಾಗಿ 108 ಬಾರಿ ಸೂರ್ಯ ನಮಸ್ಕಾರ ಮಾಡಿ ಬೆವರಿಳಿಸುವುದೂ ಕೂಡ ದುಪ್ಪಟ್ಟು ಇಷ್ಟ. ಮುಖದ ಕಾಂತಿಗೆ ಯೋಗವೇ ‘ಫೇರ್‌ ಅಂಡ್‌ ಲವ್ಲಿ’ ಇದ್ದಂತೆ ಎನ್ನುವ ಶುಭಾ ಪೂಂಜ, ಭಾರತೀಯರೆಲ್ಲರೂ ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಬೇಕು ಎಂದು ಹೇಳುತ್ತಾರೆ.

‘ವಾರದಲ್ಲಿ ನಾಲ್ಕು ದಿನ ತಪ್ಪದೇ ಜಿಮ್‌ಗೆ ಹೋಗುತ್ತೇನೆ. ಇನ್ನೆರಡು ದಿನ ಮನೆಯಲ್ಲೇ ಯೋಗಾಭ್ಯಾಸ ಮಾಡುತ್ತೇನೆ. ಸೂರ್ಯ ನಮಸ್ಕಾರ ನನ್ನಿಷ್ಟದ ಆಸನ. ಮನೆಯಲ್ಲಿ ಯೋಗಾಭ್ಯಾಸ ಮಾಡುವ ಸಂದರ್ಭ ಏಕಕಾಲಕ್ಕೆ ತಪ್ಪದೇ 108 ಬಾರಿ ಸೂರ್ಯ ನಮಸ್ಕಾರ ಮಾಡುತ್ತೇನೆ’ ಎನ್ನುತ್ತಾರೆ ಶುಭಾ ಪೂಂಜ.

‘ಯೋಗ ಮಾಡುವುದರಿಂದ ನನ್ನ ದೇಹದ ಫಿಟ್‌ನೆಸ್‌ಗೆ ತುಂಬ ಅನುಕೂಲಕಾರಿಯಾಗಿದೆ. ವಾರದಲ್ಲಿ ಎರಡು ದಿನ ಹಾಗೂ ಶೂಟಿಂಗ್‌ ಸಂದರ್ಭದಲ್ಲಿ ಜಿಮ್‌ ಮಿಸ್‌ ಮಾಡಿದ ವೇಳೆ ಅಲ್ಲೇ ಯೋಗಾಭ್ಯಾಸ ಮಾಡುತ್ತೇನೆ. ಇದರಿಂದಾಗಿ ಇಡೀದಿನ ಲವಲವಿಕೆಯಿಂದ ಇರುವುದರ ಜತೆಗೆ ಮುಖದಲ್ಲಿ ಕಾಂತಿ ಹೊಮ್ಮುತ್ತದೆ. ಯೋಗ ಮಾಡುವುದರಿಂದ ತಿಂದದ್ದು ಚೆನ್ನಾಗಿ ಕರಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ದೇಹವನ್ನು ಫಿಟ್‌ ಆಗುವುದರ ಜತೆಗೆ ಮನಸ್ಸು ಚುರುಕಾಗಿರುತ್ತದೆ’ ಎನ್ನುತ್ತಾರೆ ಅವರು.

ಎಲ್ಲರೂ ನನ್ನನ್ನು ‘ನಿನ್ನ ಮುಖದ ಕಾಂತಿಯ ಹಿಂದಿರುವ ಗುಟ್ಟೇನು?’ ಎಂದು ಕೇಳಿತ್ತಿರುತ್ತಾರೆ. ‘ನನ್ನ ಮುಖದಲ್ಲಿ ಕಾಂತಿ ಚಿಮ್ಮುವುದಕ್ಕೆ ಮುಖ್ಯ ಕಾರಣವೇ ಯೋಗ. ತಿಂಗಳು ಅಥವಾ ಎರಡು ತಿಂಗಳು ಯೋಗ ಮಾಡುವುದನ್ನು ನಿಲ್ಲಿಸಿಬಿಟ್ಟಿರೆ ಖಂಡಿತವಾಗಿಯೂ ನನ್ನ ಮುಖ ಕಾಂತಿಹೀನಗೊಳ್ಳುತ್ತದೆ. ಇದು ನನ್ನ ಅರಿವಿಗೆ ಬಂದಿದೆ. ಹಾಗಾಗಿ ತಪ್ಪದೇ ಯೋಗ ಮಾಡುತ್ತೇನೆ’ ಎನ್ನುತ್ತಾರೆ ಶುಭಾ ಪೂಂಜ.

‘ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇರುವುದೆಲ್ಲವೂ ಶ್ರೇಷ್ಠವೇ. ನಮ್ಮ ಆಹಾರ ಪದ್ಧತಿ, ಯೋಗ ವಿಧಾನ ಯಾವುದೇ ಆದರೂ ಎಲ್ಲವೂ ವೈಜ್ಞಾನಿಕವಾಗಿ ರೂಪುಗೊಂಡಿರುವಂತಹದ್ದು. ಆದರೆ, ನಮ್ಮವರೇ ಅದರ ಮಹತ್ವವನ್ನು ಅರಿತುಕೊಂಡಿಲ್ಲ. ಉಪಯೋಗಿಸುತ್ತಿಲ್ಲ. ‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ಅನ್ಯದೇಶಗಳ ಪ್ರಭಾವಕ್ಕೆ ಒಳಗಾಗುತ್ತಿದ್ದೇವೆ. ಕೆಲಸದ ನೆಪ ಹೇಳುವ ಬದಲು, ಕುಳಿತಲ್ಲಿಯೇ ಪ್ರಾಣಾಯಾಮ ಮಾಡುವುದರಿಂದಲೂ ಕೂಡ ದೇಹ ಮತ್ತು ಮನಸ್ಸಿಗೆ ಸಾಕಷ್ಟು ಉಲ್ಲಾಸ ದೊರೆಯುತ್ತದೆ. ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ಕೊಟ್ಟ ಭಾರತೀಯರೆಲ್ಲರೂ ದಿನಕ್ಕೆ ಅರ್ಧ ಗಂಟೆಯಾದರೂ ಮನೆಯಲ್ಲಿ ಯೋಗಾಭ್ಯಾಸ ಮಾಡಲೇಬೇಕು’ ಎಂಬುದು ಶುಭಾ ಹೊರಡಿಸುವ ಫರ್ಮಾನು.

‘ಯೋಗಾ’ಭಿಮಾನಿ ನಿಮಿಕಾ ರತ್ನಾಕರ್‌

ಫ್ಯಾಷನ್‌ ಲೋಕದಿಂದ ಸಿನಿಮಾ ಕ್ಷೇತ್ರಕ್ಕೆ ಜಿಗಿದ ನಿಮಿಕಾ ರತ್ನಾಕರ್‌ ಕರಾವಳಿಯ ಕೀರ್ತಿ ಪತಾಕೆಯನ್ನು ವಿದೇಶದಲ್ಲೂ ಹಾರಿಸಿ ಬಂದವರು. ಈಗ ‘ರವಿಚಂದ್ರ’ ಸಿನಿಮಾದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೌತನ ಬುದ್ಧನ ಮಂದಸ್ಮಿತ ನಗುವನ್ನು ತುಳುಕಿಸುವ ಈ ಚೆಲುವೆಗೆ ಯೋಗವೆಂದರೆ ಪಂಚಪ್ರಾಣ. ಬಾಲ್ಯದ ಒಡನಾಡಿ.

‘ಯೋಗ ಮತ್ತು ಧ್ಯಾನ ಮೈ ಮನಸ್ಸಿಗೆ ಆರಾಮದಾಯಕ ಅನುಭೂತಿ ನೀಡುವ ಸಾಧನ. ಶೂಟಿಂಗ್‌ ಸಲುವಾಗಿ ಮುಂಬೈ, ಬೆಂಗಳೂರು ಅಂತೆಲ್ಲಾ ಓಡಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ಪ್ರತಿದಿನವೂ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದೂ ಅಲ್ಲದೇ ಕೆಲವೊಮ್ಮೆ ನನ್ನ ಪರ್ಸನಲ್‌ ಜಿಮ್‌ ಟ್ರೇನರ್‌ ಮತ್ತು ನನ್ನ ಸಮಯ ಹೊಂದಾಣಿಕೆ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಾನು ತಪ್ಪದೇ ಯೋಗಾಭ್ಯಾಸ ಮಾಡುತ್ತೇನೆ.

ನಾನು ಪ್ರೌಢಶಾಲಾ ವಿದ್ಯಾರ್ಥಿನಿ ಆಗಿದ್ದಾಗಿನಿಂದಲೂ ಯೋಗಪ್ರಿಯೆ. ಯೋಗಾಭ್ಯಾಸ ಮಾಡುವುದೆಂದರೆ ನನಗೆ ಖುಷಿ ಕೊಡುವ ವಿಚಾರ. ಓದು ಮುಗಿಸಿ, ಚಿತ್ರರಂಗಕ್ಕೆ ಬಂದ ನಂತರ ಜಿಮ್‌ಗೆ ಹೋಗುವುದನ್ನು ರೂಢಿಸಿಕೊಂಡೆ. ಒಮ್ಮೊಮ್ಮೆ ಇಡೀ ದಿನ ಶೂಟಿಂಗ್‌ ಇರುತ್ತದೆ. ಇಂತಹ ಸಂದರ್ಭದಲ್ಲಿ ಜಿಮ್‌ ಮಿಸ್‌ ಆಯ್ತು ಎಂಬ ಕಾರಣಕ್ಕೆ ದೇಹವನ್ನು ಆಲಸ್ಯದಿಂದ ಇರಿಸಿಕೊಳ್ಳುವುದಿಲ್ಲ. ಮನೆ ಅಥವಾ ಉಳಿದುಕೊಂಡಿರುವ ಹೋಟೆಲ್‌ ಕೋಣೆಯಲ್ಲಿಯೇ ಸೂರ್ಯ ನಮಸ್ಕಾರ ಮಾಡಿಬಿಡುತ್ತೇನೆ. ಸೂರ್ಯ ನಮಸ್ಕಾರ ಮಾಡುವುದರಿಂದ ಇಡೀ ದೇಹಕ್ಕೆ ಚೈತನ್ಯ ಲಭಿಸುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜಿಮ್‌ಗೆ ಹೋಗದ ದಿನದಂದು ಐದು ಬಾರಿ ಸೂರ್ಯ ನಮಸ್ಕಾರ ಮಾಡಿ ನನ್ನ ದಿನದ ವರ್ಕೌಟ್‌ ಅನ್ನು ಸರಿದೂಗಿಸಿಕೊಳ್ಳುತ್ತೇನೆ.

ಯೋಗ ಮಾಡುವುದರಿಂದ ದೀರ್ಘಕಾಲೀನ ಪ್ರಯೋಜನ ಪಡೆಯಬಹುದು ಎಂಬುದು ನನ್ನ ಅಭಿಪ್ರಾಯ. ಹೇಗೆಂದರೆ, ನಾವು ಪ್ರತಿನಿತ್ಯ ಜಿಮ್‌ನಲ್ಲಿ ಬೆವರಿಳಿಸಿ ದೇಹವನ್ನು ಫಿಟ್‌ ಆಗಿರಿಸಿಕೊಳ್ಳುತ್ತೇವೆ ನಿಜ. ಆದರೆ, ಒಂದೊಮ್ಮೆ ಜಿಮ್‌ ಸಖ್ಯ ತೊರೆದರೆ ನಮ್ಮ ದೇಹದ ತೂಕ ಗ್ಯಾರಂಟಿ ಹೆಚ್ಚುತ್ತದೆ. ಆದರೆ, ಯೋಗಾಭ್ಯಾಸದಿಂದ ಇಂತಹ ಯಾವುದೇ ಸಮಸ್ಯೆ ಇಲ್ಲ. ಯೋಗ ಬಿಟ್ಟರೂ ದಪ್ಪಗಾಗುವುದಿಲ್ಲ. ಆದರೆ, ಒಮ್ಮೆ ಯೋಗಕ್ಕೆ ಶರಣಾದರೆ ಅದನ್ನು ಬಿಡುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ನನ್ನ ಭಾವನೆ. ಯಾಕೆಂದರೆ, ನಾವು ಎಲ್ಲೆ ಇದ್ದರೂ ಅಲ್ಲೇ ಐದು ಬಾರಿ ಸೂರ್ಯನಮಸ್ಕಾರ ಮಾಡಿದರೂ ದೇಹ ಲವಲವಿಕೆಯಿಂದ ಇರುತ್ತದೆ. ಹಾಗಾಗಿ, ನಾನು ಯೋಗದ ದೊಡ್ಡ ಅಭಿಮಾನಿ’ ಎನ್ನುತ್ತಾರೆ ಕರಾವಳಿ ಚೆಲುವೆ ನಿಮಿಕಾ ರತ್ನಾಕರ್‌.

ಚೆಲುವು, ನಗುವಿನ ‘ಯೋಗಾಯೋಗ:ಮೇಘಶ್ರೀ

ಕರಾವಳಿ ಜತೆಗೆ ನಂಟಸ್ಥಿಕೆ ಹೊಂದಿರುವ ನಟಿ ಮೇಘಶ್ರೀ ಕನ್ನಡ, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಮುಖದಲ್ಲಿ ಲಾಸ್ಯವಾಡುವ ನಗುವಿಗೆ, ತುಟಿಬಟ್ಟಲಿನಿಂದ ತುಳುಕುವ ನಗೆಯ ಚೆಲುವಿನ ಹಿಂದೆ ‘ಯೋಗ’ ಕರಾಮತ್ತು ಇದೆಯಂತೆ.

‘ನಾನು ಯೋಗ ಕಲಿತಿದ್ದು ವಿಜಯವಾಡದಲ್ಲಿ. ಒಂದು ತಿಂಗಳು ಸತತವಾಗಿ ಯೋಗಾಭ್ಯಾಸ ಮಾಡಿದ್ದೆ. ಸಾಕಷ್ಟು ಆಸನಗಳನ್ನು ಕೂಡ ಕಲಿತಿದ್ದೇನೆ. ಚಿತ್ರರಂಗಕ್ಕೆ ಬಂದ ನಂತರವೂ ಯೋಗಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದೇನೆ.

ಸೂರ್ಯ ನಮಸ್ಕಾರ ನನ್ನ ಅಚ್ಚುಮೆಚ್ಚಿನ ಆಸನ. ಶೂಟಿಂಗ್‌ ಸಲುವಾಗಿ ಮಂಗಳೂರು, ಬೆಂಗಳೂರು, ಹೈದರಾಬಾದ್‌ ಅಂತೆಲ್ಲಾ ಓಡಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ನನ್ನ ಫಿಟ್‌ನೆಸ್‌ ಹಾಗೂ ಮನಸ್ಸಿನ ನೆಮ್ಮದಿಗೆ ನೆರವಾಗುವುದು ಯೋಗ. ‍ಪ್ರತಿನಿತ್ಯವೂ ತಪ್ಪದೇ 15 ಬಾರಿ ಯೋಗಾಭ್ಯಾಸ ಮಾಡುತ್ತೇನೆ. ಭಾರತೀಯರ ಯೋಗ ಕೊಡುಗೆ ನನ್ನ ದೇಹವನ್ನು ಫಿಟ್‌ ಆಗಿ ಇರಿಸುವುದರ ಜತೆಗೆ ಮನಸ್ಸನ್ನೂ ಲವಲವಿಕೆಯಿಂದ ಇರಿಸಿದೆ’ ಎನ್ನುತ್ತಾರೆ ಚೆಲುವೆ ಮೇಘಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT