ಚಂದನವನಕ್ಕೆ ಯುವರಾಜನ ಆಗಮನ...

7

ಚಂದನವನಕ್ಕೆ ಯುವರಾಜನ ಆಗಮನ...

Published:
Updated:
Prajavani

ವರನಟ ರಾಜಕುಮಾರ್ ಕುಟುಂಬದ ಮೂರನೇ ಪೀಳಿಗೆಯ ವಿನಯ ರಾಜ್‌ಕುಮಾರ್ ಆಗಲೇ ನಾಯಕನಾಗಿ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಹಿರಿಯ ಮಗನಾದ ವಿನಯ್‌ ನಟಿಸಿರುವ ‘ಅನಂತು ವರ್ಸಸ್‌ ನುಸ್ರತ್‌’ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಅಣ್ಣ ತೆರೆಯ ಮೇಲೆ ಮಿಂಚುತ್ತಿರುವಾಗಲೇ ತಮ್ಮ ಯುವರಾಜ್‌ಕುಮಾರ್‌ ತೆರೆ ಹಿಂದೆ ಸಿನಿಮಾ ನಿರ್ಮಾಣ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗುರು ರಾಜ್‌ಕುಮಾರ್ ಆಗಿದ್ದ ಅವರು ಯುವರಾಜನಾಗಿ ಹೆಸರು ಬದಲಾಯಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವೂ ನಡೆದಿತ್ತು.

ಇದೀಗ ಯುವರಾಜ್‌ಕುಮಾರ್‌ ತೆರೆಯ ಮೇಲೂ ಮಿಂಚುವುದಕ್ಕೆ ಸನ್ನದ್ಧಗೊಂಡಿದ್ದಾರೆ. ‘ದೊಡ್ಮನೆ’ಯ ಹಿನ್ನೆಲೆ ಇದ್ದರೂ ಸಿದ್ಧತೆ ಇಲ್ಲದೆ ಬೆಳ್ಳಿತೆರೆಗೆ ಬರಬಾರದು ಎಂಬುದು ಅವರ ನಿಲುವು. ಹಾಗಾಗಿ ನಾಯಕ ನಟನಾಗಲು ಅಗತ್ಯವಿರುವ ಫೈಟ್, ಡಾನ್ಸ್‌ಗಳ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಪುನೀತ್ ರಾಜ್‌ಕುಮಾರ್‌ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಐಟಿ ದಾಳಿಯ ಒತ್ತಡದ ನಡುವೆಯೂ ಪುನೀತ್ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಜತೆಗೆ ಇನ್ನೊಂದು ವಿಶೇಷವೂ ಆ ಕಾರ್ಯಕ್ರಮದಲ್ಲಿ ನಡೆಯಿತು. ಅದು ಯುವರಾಜ್‌ಕುಮಾರ್ ಡಾನ್ಸ್‌ ಪರ್ಫಾರ್ಮೆನ್ಸ್‌.

‘ನಟಸಾರ್ವಭೌಮ’ನ ವೇದಿಕೆ ವರನಟನ ಮೊಮ್ಮಗನ ನೃತ್ಯಕೌಶಲದ ಪ್ರಸ್ತುತಿಗೂ ಸಾಕ್ಷಿಯಾಯಿತು. ಈ ಮೂಲಕ ತಾನು ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದೇನೆ ಎನ್ನುವುದನ್ನು ಯುವರಾಜ್‌ಕುಮಾರ್ ಸಾಬೀತುಗೊಳಿಸಿದ್ದಾರೆ. ಸದ್ಯದಲ್ಲಿಯೇ ಕ್ಯಾಮೆರಾಗೆ ಮುಖಾಮುಖಿಯಾಗುವ ಸೂಚನೆಯನ್ನೂ ನೀಡಿದ್ದಾರೆ.

‘ನಟಸಾರ್ವಭೌಮ’ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ನೃತ್ಯ ಮಾಡಲಿದ್ದೇನೆ ಎಂದು ಯುವರಾಜ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೇಳಿಕೊಂಡಿದ್ದರು. ಕಾರ್ಯಕ್ರಮ ಮುಗಿದ ಮೇಲೆಯೂ ತನ್ನ ನೃತ್ಯದ ಬಗ್ಗೆ ವ್ಯಕ್ತವಾದ ಮೆಚ್ಚುಗೆಗೆ ಕೃತಜ್ಞತೆ ಅರ್ಪಿಸಿದ್ದಾರೆ.

‘ನಿಮ್ಮೆಲ್ಲರ ಪ್ರೀತಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು. ಹುಬ್ಬಳ್ಳಿ ಮಂದಿ ಹಾಗೂ ನಮ್ಮ ಎಲ್ಲಾ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರ. ಇನ್ನಷ್ಟು ಸಿನಿಮಾಗಳು ಸದ್ಯದಲ್ಲಿಯೇ ಬರಲಿವೆ’ ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಣ್ಣನ ಮಗನ ನೃತ್ಯ ಚಮತ್ಕಾರಕ್ಕೆ ಪುನೀತ್ ಕೂಡ ಫಿದಾ ಆಗಿದ್ದಾರೆ. ಮೆಚ್ಚುಗೆಯಿಂದ ತಾವೂ ಯುವರಾಜನ ಜತೆಗೆ ಒಂದೆರಡು ಸ್ಟೆಪ್‌ ಹಾಕಿದ್ದಾರೆ.

ವಿನಯ ರಾಜಕುಮಾರ್ ಮೂರು ಸಿನಿಮಾಗಳು ಬಿಡುಗಡೆಯಾದರೂ ಯಶಸ್ಸು ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಇದೆ. ಯುವರಾಜನ ಅದೃಷ್ಟ ಹೇಗಿದೆ ಎನ್ನುವುದನ್ನು ಕಾದುನೋಡಬೇಕಷ್ಟೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !