ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶದ ಬೆಳಕಿನಾಸೆಯಲ್ಲಿ...

Last Updated 31 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ರಾಜಾಹುಲಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದು ಹಳೆಯ ಸುದ್ದಿ. ಆ ಚಿತ್ರದಲ್ಲಿ ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಟ ಸಿಕ್ಕಂತಾಗಿದೆ. ‘ರಾಜಾಹುಲಿ’ ಚಿತ್ರದಲ್ಲಿ ನಾಯಕ ಯಶ್‌ನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರ್ಷ ಆ ಪ್ರತಿಭೆ.

ಕನ್ನಡ ಚಿತ್ರರಂಗಕ್ಕೆ ಹರ್ಷ ಅವರ ಪ್ರವೇಶವಾಗಿದ್ದು ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ. ಈ ಚಿತ್ರದ ಯಶಸ್ಸು ಅವರ ಬಣ್ಣದ ಬದುಕಿಗೆ ಹೊಸ ದಿಕ್ಕು ನೀಡಿತು. ಒಟ್ಟೊಟ್ಟಿಗೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅವಕಾಶದ ಬಾಗಿಲುಗಳು ತೆರೆದವು.

ರೇಣು ನಿರ್ದೇಶನದ ‘ಶಬ್ದಮಣಿ’ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಅಭಿನಯಿಸಿ ಹೆಚ್ಚಿನ ಮನ್ನಣೆ ಪಡೆದರು. ಈ ಚಿತ್ರಕ್ಕೆ 2011ನೇ ಸಾಲಿನ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಹ ಸಿಕ್ಕಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನ ಕಂಡಿದೆ.

ಸದ್ಯ ‘ನಿನ್ನೊಲುಮೆಯಿಂದಲೆ’ ಮತ್ತು ‘ಅಶ್ವಿನಿ ನಕ್ಷತ್ರ’ ಧಾರಾವಾಹಿಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ರಾಜಾಹುಲಿ’ ನಿರ್ದೇಶಕ ಗುರುದೇಶಪಾಂಡೆ ಅವರು ತೆಲುಗಿನ ‘ದೂಕುಡು’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಅದರಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ.

‘ನಿನ್ನೊಲುಮೆಯಿಂದಲೆ’ ಧಾರಾವಾಹಿ ನಿರ್ದೇಶಕ ವಿನು ಬಳಂಜ ಅವರ ಗರಡಿಯಲ್ಲಿ ನಟನೆಯ ಕೌಶಲಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
ತಂದೆ ಪ್ರಕಾಶ್ ರೇಷ್ಮೆ ಇಲಾಖೆಯಲ್ಲಿ ಉಪ ನಿರ್ದೇಶಕರಾದರೆ, ತಾಯಿ ವಿಮಲಾ ಗೃಹಿಣಿ. ಸಹೋದರ ತವನ್ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ರಾಜಾಜಿನಗರದಲ್ಲಿ ವಾಸವಾಗಿರುವ ಹರ್ಷ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿ ಪ್ರಸಕ್ತ ಸಾಲಿನಲ್ಲಿ ಎಂ.ಬಿ.ಎ.ಗೆ ಪ್ರವೇಶ ಪಡೆದಿದ್ದಾರೆ.

ನಟನಾಗುವ ಆಸೆಯಿಂದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಫೋಟೊ ಕಳುಹಿಸಿ, ಅವಕಾಶ ಸಿಗದೆ ಬಿಬಿಎಂಪಿ ಕಡೆಯಿಂದ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ನಿರ್ಮಾಪಕ ಕೃಷ್ಣಪ್ಪ ತಮಗೆ ಅವಕಾಶ ಕೊಟ್ಟರು ಎಂದು ನೆನೆಯುತ್ತಾರೆ.

ನಟನೆಗೆ ಸಂಬಂಧಿಸಿದಂತೆ ಒಂದು ವರ್ಷದ ಡಿಪ್ಲೊಮಾ ಪಡೆದಿದ್ದು, ಈಗಾಗಲೇ ಒಂಬತ್ತು ಸಿನಿಮಾ, ಎರಡು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ ಅನುಭವವಿದೆ.

ಅಭಿನಯದಲ್ಲಿ ಅಣ್ಣಾವ್ರು ಸ್ಫೂರ್ತಿ ಎನ್ನುವ ಇವರು ನಟನೆಯಲ್ಲಿ ಹೊಸತನಕ್ಕೆ ಆಮೀರ್ ಖಾನ್, ಸೂರ್ಯ, ಮಹೇಶ್ ಬಾಬು ಸಿನಿಮಾಗಳನ್ನು
ಹೆಚ್ಚು ವೀಕ್ಷಿಸುತ್ತಾರಂತೆ.

ಡಾನ್ಸ್ ನನಗೆ ದೇವರು ಕೊಟ್ಟ ಕಲೆ ಎನ್ನುವ ಇವರು, ಶಾಲಾ ದಿನಗಳಲ್ಲೇ  ಉದಯ ಟಿವಿಯ ‘ಡಾನ್ಸ್ ಡಾನ್ಸ್‌’, ಈ ಟಿವಿಯ ‘ಹಾಕು ಹೆಜ್ಜೆ ಹಾಕು’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದಿರುವುದನ್ನು ನೆನಪಿಸಿಕೊಂಡರು.

ಕನ್ನಡದಲ್ಲಿ ತಯಾರಾಗುತ್ತಿರುವ ‘ದೂಕುಡು’ ಚಿತ್ರದಲ್ಲಿ ಅಪ್ಪು ಸ್ನೇಹಿತನಾಗಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಹರ್ಷ ಕಾಣಿಸಿಕೊಳ್ಳಲಿದ್ದಾರಂತೆ.
ನಟನೆಯಷ್ಟೇ ಅಲ್ಲದೆ ಕರಾಟೆಯಲ್ಲೂ ಅವರು ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ದೇಹವನ್ನು ದಣಿಸಲು ದಿನಕ್ಕೆರಡು ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತಾರೆ.
ಸಂಜೆ ತಪ್ಪದೆ ವಾಕ್ ಮಾಡುತ್ತಾರೆ. ಹಣ್ಣಿನ ರಸ ಹೆಚ್ಚಾಗಿ ಕುಡಿಯುವ ಇವರು ಚಪಾತಿ, ಮುದ್ದೆ ಪ್ರಿಯರು. ದಿನಕ್ಕೆ 200 ಗ್ರಾಂ ಚಿಕನ್, 10 ಮೊಟ್ಟೆ ಬೇಕೇಬೇಕು ಎನ್ನುತ್ತಾರೆ. ಇದು ಅವರ ಫಿಟ್‌ನೆಸ್‌ ಗುಟ್ಟು.

ಯಾವ ರೀತಿಯ ಪಾತ್ರಗಳಲ್ಲಿ ಅಭಿನಯಿಸಲು ಬಯಸುತ್ತೀರಿ ಎಂದರೆ ಹರ್ಷ ಉತ್ತರಿಸುವುದು ಹೀಗೆ: ‘ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವುದಷ್ಟೇ ನನ್ನ ಗುರಿ. ನನ್ನ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಬೇಕು. ‘ರಂಗೀಲಾ’ ಹಿಂದಿ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸಿದಂತಹ ಪಾತ್ರ ಮಾಡಬೇಕೆಂಬ ಆಸೆ ಇದೆ’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT