ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸಿನಿಮಾಪೇಟೆಯಲಿ ಕನ್ನಡದ ಮೊದಲ ಹೆಜ್ಜೆಗಳು

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಇದೇನು ಶಾಶ್ವತ ಶೈಶವಾವಸ್ಥೆಯೇ ? ಕನ್ನಡ ಸಿನಿಮಾ ವಿಶ್ವ ಮಾರುಕಟ್ಟೆಯಲ್ಲಿ ತನಗೊಂದು ಅಸ್ತಿತ್ವ ಗಿಟ್ಟಿಸಿಕೊಂಡಿದೆಯೆ? ಕನ್ನಡ ಸಂಘಗಳ ಭಾವನಾತ್ಮಕ ಬೆಂಬಲದಲ್ಲಿ ಮಾತ್ರ ಬದುಕುತ್ತಿದೆಯೆ? ಇತರೆ ಭಾಷೆಗಳಂತೆ ವ್ಯಾವಹಾರಿಕ ನೆಲೆಗಟ್ಟಿನಲ್ಲಿ ವೃತ್ತಿಪರ ಪ್ರದರ್ಶನ ಕಾಣುವುದು ಯಾವಾಗ? ಅಧಿಕ ಸಂಖ್ಯೆಯ ಕನ್ನಡಿಗರಿರುವ ದೇಶಗಳಲ್ಲೂ ಅವರು ಸುಸಂಘಟಿತರಾಗಿಲ್ಲ ಏಕೆ? ಮುಂದೆ ನಿಂತವರ ಅತ್ಯುತ್ಸಾಹ – ಆದರೆ ಹಿಂದೆ ಬರುವ ಉತ್ಸಾಹಿಗಳ ಸಂಖ್ಯೆ ಬಹಳ ಕ್ಷೀಣ ಎಂಬ ಪರಿಸ್ಥಿತಿ ಬದಲಾಗುವುದು ಯಾವಾಗ? ಕಳೆದ ಮೂವತ್ತು ವರ್ಷಗಳಿಂದ ನಾನಾ ಅವತಾರಗಳ ಮೂಲಕ ವಿಶ್ವ ಸುತ್ತುವ ನನಗೆ ಎದುರಾದ ಪ್ರಶ್ನೆಗಳಿವು. ಉತ್ತರಗಳ ಹುಡುಕಾಟವೇ ಈ ಲೇಖನ.

ಅದು ತೊಂಬತ್ತರ ದಶಕ. ಬೇಸಗೆಯ ರಜೆಯಲ್ಲಿ ಅಮೆರಿಕಾಗೆ ಹೊರಟಿದ್ದೆ. ಆಗ ನನ್ನ ಪತ್ನಿ ಶೋಭಾ, ಸ್ಯಾನ್‌ಹುಸೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ‘ಅಮೆರಿಕನ್ನಡ’ ಪತ್ರಿಕೆ ನಡೆಸುತ್ತಿದ್ದ ಎಸ್.ಕೆ. ಹರಿಹರೇಶ್ವರ ‘‘ಬರುವಾಗ ಕೊಟ್ರೇಶಿ ಕನಸು ಫಿಲ್ಮ್ ತನ್ನಿ. ಕೆಲವೆಡೆ ಪ್ರದರ್ಶನಕ್ಕೆ ಪ್ರಯತ್ನಿಸೋಣ’’ ಎಂದರು.

ಅವರ ಒತ್ತಾಸೆಯಂತೆ ಫಿಲ್ಮ್ ಪ್ರಿಂಟ್ ಜತೆ ಹೋದೆ. ಬೆರಳೆಣಿಕೆ  ಪ್ರದರ್ಶನಗ­ಳಾದುವು. ಹೀಗೆ ಆರಂಭಗೊಂಡ ಕನ್ನಡ ಚಿತ್ರಗಳ ವಿಶ್ವಮಾರುಕಟ್ಟೆಯ ನನ್ನ ಶೋಧ ವ್ಯಾಪಕವೂ ವಿಸ್ತಾರವೂ ಆದದ್ದು ‘ಅಮೆರಿಕಾ! ಅಮೆರಿಕಾ!!’ ಚಿತ್ರದ ಮೂಲಕ. ಅಕ್ಟೋಬರ್ 11, 1997ರ ಶನಿವಾರದಂದು ನ್ಯೂಯಾರ್ಕ್‌ನಿಂದ ಆರಂಭವಾಗಿ ಸತತವಾಗಿ ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಮೂರು ತಿಂಗಳು ಪೂರ್ವಪಶ್ಚಿಮ, ದಕ್ಷಿಣೋತ್ತರವಾಗಿ, ದೊಡ್ಡ–ಚಿಕ್ಕ ನಗರಗಳೆನ್ನದೆ 30ಕ್ಕೂ ಹೆಚ್ಚು ಭರ್ಜರಿ ಪ್ರದರ್ಶನ ಕಂಡಿತು. ‘ಅನಿವಾಸಿ ಕನ್ನಡಿಗ’ ಕನ್ನಡ ಚಿತ್ರಗಳಿಗೆ ಕಾತರಿಸುತ್ತಿದ್ದ ಕಾಲ ಅದು.

ವಾಷಿಂಗ್‌ಟನ್ ಡಿ.ಸಿ.ಯ ‘ಕಾವೇರಿ ಕನ್ನಡ ಕೂಟ’ದ ಆಗಿನ ಅಧ್ಯಕ್ಷೆ ಶಶಿಕಲಾ ಚಂದ್ರಶೇಖರ್ ಅವರು ಆಸಕ್ತಿಯಿಂದ ಎಲ್ಲ ಕನ್ನಡ ಕೂಟಗಳ ಸಂಪರ್ಕ ಸಾಧಿಸಿ ಪ್ರದರ್ಶನದ ವೇಳಾಪಟ್ಟಿ ತಯಾರಿಸಿದರು. ಯಾವ ಯಾವ ಊರುಗಳಲ್ಲಿ ಎಷ್ಟು ಕನ್ನಡಿಗರಿದ್ದಾರೆ, ಎಲ್ಲಿ ಸಕ್ರಿಯ ಕನ್ನಡ ಸಂಘಗಳಿವೆ, ಉತ್ಸಾಹಿ ನಾಯಕರಾರು ಇತ್ಯಾದಿ ಮಾಹಿತಿಯನ್ನು ‘ವಾಣಿಜ್ಯ ಮಂಡಳಿ’ಗೆ ನೀಡಿದೆ. ವಿದೇಶಿ ಮಾರುಕಟ್ಟೆಯ ಶೋಧವನ್ನು ಹೇಗೆ ವೈಜ್ಞಾನಿಕವಾಗಿ, ವ್ಯವಹಾರಿಕವಾಗಿ ಮುಂದುವರಿಸಿಕೊಂಡು ಹೋಗಬಹುದೆಂಬ ವಿಸ್ತೃತ ವರದಿ ಅದು.

ಏಕಗವಾಕ್ಷಿ ಯೋಜನೆಯಡಿಯಲ್ಲಿ, ವ್ಯವಸ್ಥಿತವಾಗಿ, ಆಯ್ದ ಚಲನಚಿತ್ರಗಳನ್ನು ನಿಯತವಾಗಿ ಪ್ರದರ್ಶನಕ್ಕೆ ಕಳುಹಿಸಬೇಕೆನ್ನುವುದು ನನ್ನ ಆಶಯವಾಗಿತ್ತು. ಮೊನ್ನೆ ಮೊನ್ನೆ ‘ಇಷ್ಟಕಾಮ್ಯ’ದೊಂದಿಗೆ ಐರೋಪ್ಯ ದೇಶಗಳಿಗೆ ಹೋದಾಗ ಆ ಫ್ಲ್ಯಾಶ್‌ಬ್ಯಾಕ್ ನೆನಪಾಯಿತು. 35 ಕೇಜಿ ತೂಕದ ಫಿಲ್ಮ್ ಪ್ರಿಂಟ್‌ ಅನ್ನು ನನ್ನ ಲಗ್ಗೇಜಿನ ಭಾಗವಾಗಿ ಹೊತ್ತುಕೊಂಡು ಹೋದಾಗ ಆ ದೈತ್ಯ ಪ್ರಿಂಟನ್ನು ಎತ್ತುವಾಗ ಕಸ್ಟಮ್ಸ್‌ನ ಬಿಳಿ ಹುಡುಗಿಯರು ‘ಇದು ತುಂಬಾ ಕಷ್ಟವಲ್ಲವೆ?’ ಎನ್ನುತ್ತಿದ್ದರು. ‘ಕನ್ನಡದಲ್ಲಿ ಸಿನಿಮಾ ಮಾಡುವುದಕ್ಕೆ ಹೋಲಿಸಿದರೆ ಇದೇ ತುಂಬಾ ಸುಲಭ’ ಎನ್ನುತ್ತಿದ್ದೆ.

ಆಗ ದೊಡ್ಡ ಟ್ರಂಕಿನಲ್ಲಿ ಸಿನಿಮಾ ರೀಲುಗಳು! ಈಗ ಜೇಬಿನಲ್ಲಿಟ್ಟುಕೊಂಡು ಹೋಗಬಹುದಾದ ‘ಡಿಸಿಪಿ ಫೈಲ್ಸ್’ ಒಳಗೊಂಡ ಪುಟಾಣಿ ಹಾರ್ಡ್ ಡಿಸ್ಕ್. ನೋಡಲು–ಕೇಳಲು ಎಲ್ಲ ಸರಳವಾದಂತಿದೆ. ಆದರೆ ಇತರ ಭಾಷೆಗಳ ಮಾರುಕಟ್ಟೆ ವಿಸ್ತಾರ ನೋಡಿದರೆ, ಬೆಳೆಯುತ್ತಿರುವ ಜನಸಂಖ್ಯೆ ಅನುಪಾತಕ್ಕೆ ಹೋಲಿಸಿದರೆ ಕನ್ನಡವಿನ್ನೂ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. 

ಅಮೆರಿಕಾದಂಥ ಬೃಹತ್‌ದೇಶದಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುವ ಸಾಹಸಿಗಳು ಹಲವರು. ತೊಂಬತ್ತರ ದಶಕದಲ್ಲಿ ಪ್ರಸಾದ್ ಎಂಬ ಹಿರಿಯರು ಕೆಲವು ವರ್ಷ ಈ ಸಾಹಸ ಮಾಡಿದರು. ಲಾಸ್ ಏಂಜಲ್ಸ್‌ನ ವಲ್ಲೀಶ್ ಶಾಸ್ತ್ರಿ ‘ಸಿನಿಮಾ ಕ್ಲಬ್’ ಮೂಲಕ ಕನ್ನಡ ಸಿನಿಮಾಗಳನ್ನು ಕೆಲವು ವರ್ಷ ತೋರಿಸಿದರು.

ಇದೀಗ ಕನ್ನಡ ಸಂಘಗಳ ಸಹಯೋಗದಲ್ಲಿ ಕನ್ನಡ ಸಿನಿಮಾಗಳನ್ನು ತೋರಿಸುತ್ತಿರುವ ಮಿತ್ರದ್ವಯರೆಂದರೆ ‘ಕಸ್ತೂರಿ ಮೀಡಿಯಾ’ದ ಗೋವರ್ಧನ್ (ಗೋಪಿ) ಮತ್ತು ಅಟ್ಲಾಂಟ ನಾಗೇಂದ್ರ. ಇವರಿಬ್ಬರ ಸಾಹಸ ಸ್ತುತ್ಯರ್ಹವಾದುದು. ಒಂದು ನಿರಾಶಾದಾಯಕ ಪರಿಸ್ಥಿತಿಯಲ್ಲೂ ಕನ್ನಡ ಚಿತ್ರಗಳನ್ನು ಮೂಲೆಮೂಲೆಗಳಲ್ಲಿ ತೋರಿಸಲು ಯತ್ನಿಸುತ್ತಿದ್ದಾರೆ. ಅಟ್ಲಾಂಟ ನಾಗೇಂದ್ರ ಕನ್ನಡ ಮತ್ತು ಹಿಂದಿಯಲ್ಲೂ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗ ಗೋಪಿ ಕೂಡಾ ಚಿತ್ರ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

ಹಾಲಿವುಡ್ ಅಥವಾ ಹಿಂದಿ ಚಿತ್ರಗಳಂತೆ ವೃತ್ತಿಪರ ನೆಲೆಯಲ್ಲಿ ಕನ್ನಡ ಚಿತ್ರಗಳು ಏಕೆ ಬಿಡುಗಡೆಯಾಗಬಾರದು? ಆಸೆ ಏನೋ ಸರಿಯೆ, ಆದರೆ ಪ್ರೇಕ್ಷಕರೆಲ್ಲಿ? ತುಂಬಾ ಯಶಸ್ವಿಯಾದ ಚಿತ್ರಗಳಿಗೆ ಮಾತ್ರ ಇಂಥ ಸೌಭಾಗ್ಯ. ಅನೂಪ್ ಭಂಡಾರಿಯವರ ‘ರಂಗಿತರಂಗ’ ವಿಶ್ವ ಮಾರುಕಟ್ಟೆಯ ವಿಜಯದ ಬಾಗಿಲು ತೆರೆಯಿತು. ‘ಜಾಲಿ ಹಿಟ್ಸ್’ ಸಂಸ್ಥೆಯ ಅಜಯ್ ರೆಡ್ಡಿ, ರವಿಕಶ್ಯಪ್, ಸತೀಶ್ ಶಾಸ್ತ್ರಿ – ಈ ಮಿತ್ರತ್ರಯರು ‘ರಂಗಿತರಂಗ’ವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಿದರು. ‘ರಾಜರಥ’ವನ್ನು ನಿರ್ಮಿಸುತ್ತಿರುವವರೂ ಇವರೇ. ಇದೊಂದು ಪ್ರಶಂಸಾರ್ಹ ಬೆಳವಣಿಗೆ. ‘ರಾಜರಥ’ವೂ ‘ರಂಗಿತರಂಗ’ದಂತೆಯೇ ಯಶಸ್ವಿಯಾಗಲಿ. ಕರ್ನಾಟಕದಲ್ಲಿ ಯಶಸ್ವಿಯಾದ ಚಿತ್ರಗಳನ್ನಷ್ಟೇ ಇವರು ಅಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ದೊಡ್ಡ ಯಶಸ್ಸು ಕಾಣದ ಸದಭಿರುಚಿಯ ಚಿತ್ರಗಳಿಗೆ ಕನ್ನಡ ಸಂಘಗಳ ಸಹಯೋಗದ ಅವಲಂಬನೆ ಅನಿವಾರ್ಯ.

ಯೂರೋಪ್ ದೇಶಗಳಲ್ಲಿ ಹೆಚ್ಚು ಕನ್ನಡಿಗರಿರುವುದು ಇಂಗ್ಲೆಂಡ್‌ನಲ್ಲಿ. ಮೊದಲ ತಲೆಮಾರಿನ ಹಿರಿಯ ವಲಸಿಗರು ಕನ್ನಡ ಬಳಗವನ್ನೂ ಕಳೆದೊಂದು ದಶಕದಲ್ಲಿ ಹೋದ ಟೆಕ್ಕಿಗಳು ‘ಕನ್ನಡಿಗರು ಯುಕೆ’ (ಕೆಯುಕೆ)ಯನ್ನೂ ಸ್ಥಾಪಿಸಿದ್ದಾರೆ. ಪ್ರಸ್ತುತ ಎರಡು ವರ್ಷಕ್ಕೆ ಅಧ್ಯಕ್ಷರಾಗಿರುವವರು ಗಣಪತಿ ಭಟ್. ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಿನಿಮಾವನ್ನೂ ಸಮಾನ ಪ್ರೀತಿಯಿಂದ ಕೊಂಡೊಯ್ಯುತ್ತಿದ್ದಾರೆ.

ಅವರೊಟ್ಟಿಗೆ ದೊಡ್ಡದೊಂದು ಉತ್ಸಾಹಿ ಪಡೆಯೇ ಇದೆ. ಅನಿಲ್‌ಕುಮಾರ್ ಕೊಂಡೆಬೆಟ್ಟು, ವಿನಯ್ ರಾವ್, ವಿವೇಕ್ ಹೆಗ್ಡೆ, ವಿರೂಪಾಕ್ಷ ಪ್ರಸಾದ್, ಅರುಣ್ ರಾಘವೇಂದ್ರ, ವಿಜೇಂದ್ರ, ರಾಜೇಶ್, ಸೂರ್ಯಪ್ರಕಾಶ್ ಶಾಸ್ತ್ರಿ, ಬಸವರಾಜ ದೇವಶೆಟ್ಟಿ ಇವರೆಲ್ಲಾ ಇಂಗ್ಲೆಂಡಿನ ಕನ್ನಡದ ಕಟ್ಟಾಳುಗಳು. ಯಾವುದೇ ಲಾಭಾಕಾಂಕ್ಷೆ ಇಲ್ಲದೆ ಕನ್ನಡ ಪ್ರೀತಿಯಿಂದ ಮಾಡುವ ಇವರ ಶ್ರಮ ಪ್ರಶಂಸನೀಯ. ಇಂಗ್ಲೆಂಡ್‌ನಲ್ಲಿ ಕನ್ನಡ ಸಿನಿಮಾ ತೋರಿಸುವುದಕ್ಕೆ ಇರುವ ಸವಾಲುಗಳೇನು? ಭಟ್ಟರು ಹೇಳುವಂತೆ ‘‘ಇಲ್ಲಿ ಚದುರಿಹೋಗಿರುವ ಕನ್ನಡಿಗರಿಗೆ ಹತ್ತಾರು ಪುಟ್ಟ ಪ್ರದರ್ಶನಗಳನ್ನು ನಡೆಸಬೇಕು. ಬಾಡಿಗೆ ದುಬಾರಿ. ಕನಿಷ್ಠ 100 ಮಂದಿ ಪ್ರೇಕ್ಷಕರಾದರೂ ಬರದಿದ್ದರೆ ನಿರ್ಮಾಪಕರಿಗೆ ಏನೂ ಉಳಿಯುವುದಿಲ್ಲ.

ಮೊದಲೆಲ್ಲ ಮೂರು ತಿಂಗಳಿಗೊಂದು ಸಿನಿಮಾ ತಂದು ತೋರಿಸುತ್ತಿದ್ದೆವು. ಈಗ ಕೆಲವರು ಕಲಾವಿದರು, ನಿರ್ಮಾಪಕರೊಂದಿಗಿನ ವೈಯಕ್ತಿಕ ಸ್ನೇಹ, ವರ್ಚಸ್ಸಿನಿಂದ ವಾರಕ್ಕೆ ಒಂದರಂತೆ ಸಿನಿಮಾಗಳನ್ನು ತಂದು ತೋರಿಸುತ್ತಾರೆ. ನಾವು ಕನ್ನಡ ಸಿನಿಮಾ ಸಂಸ್ಕೃತಿಯನ್ನು ಹರಡಬೇಕೆಂಬ ಏಕೈಕ ಆಸೆಯಿಂದ ಕನ್ನಡ ಸಂಘದ ಚಟುವಟಿಕೆಗಳ ಭಾಗವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’’. ಸದಸ್ಯರ ಮಾಹಿತಿಯನ್ನು ಕನ್ನಡ ಸಂಘ ಒದಗಿಸುತ್ತದೆ.

ಆ ಸದಸ್ಯರನ್ನೆಲ್ಲಾ ಸಾಮಾಜಿಕ ಜಾಲ ತಾಣಗಳ ಮೂಲಕ ತಲಪಬೇಕು. ಆದರೆ ಎಷ್ಟೋ ಮಂದಿ ಕನ್ನಡಿಗರು ಕನ್ನಡ ಸಂಘಗಳ ಸದಸ್ಯರೇ ಆಗಿರುವುದಿಲ್ಲ. ಕರ್ನಾಟಕದಲ್ಲಿ ಯಶಸ್ವಿಯಾದ, ದೊಡ್ಡ ತಾರಾಗಣದ ಚಿತ್ರಗಳನ್ನೂ ಕೆಲವೊಮ್ಮೆ ವಿದೇಶದ ಕನ್ನಡಿಗ ತಿರಸ್ಕರಿಸುವುದುಂಟು. ೫೦೦೦ ಮಂದಿ ಇರಬಹುದಾದ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವುದು ಕಷ್ಟ. ಆದ್ದರಿಂದಲೇ ಅವರು ‘ಕಮ್ಯುನಿಟಿ ಸಿನಿಮಾ ಗ್ರೂಪ್’ ಮಾಡಿಕೊಂಡು ಸಮುದಾಯಕ್ಕೆ ಸೀಮಿತವಾದ ಸಾಂಸ್ಕೃತಿಕ ಚಟುವಟಿಕೆಯ ಹೆಸರಿನಲ್ಲಿ ಅಲ್ಲಲ್ಲಿ ಚಿಕ್ಕ ಗುಂಪುಗಳಿಗೆ ಕಮ್ಯುನಿಟಿ ಹಾಲ್, ಶಾಲೆಗಳ ಲೈಬ್ರರಿಯಲ್ಲಿ ಸಿನಿಮಾ ತೋರಿಸುವುದುಂಟು. ಇದಕ್ಕಿರುವ ಸಮಸ್ಯೆ ಎಂದರೆ ಉತ್ತಮ ದರ್ಜೆಯ ಡಿವಿಡಿ (ಬ್ಲೂ ರೇ) ಬೇಕಾಗುತ್ತದೆ. ಪೈರಸಿಯ ಭಯ. ಚಿತ್ರದ ಪ್ರತಿನಿಧಿ ಇಲ್ಲದಿದ್ದರೆ ಈ ರಿಸ್ಕು ತೆಗೆದುಕೊಳ್ಳುವುದು ಕಷ್ಟ.

ಇಂಗ್ಲೆಂಡಿನಲ್ಲಿ ಹತ್ತಾರು ಸಂಘಟನೆಗಳಿವೆ. ‘ಸಂಭ್ರಮ’, ‘ಮಾಂಚೆಸ್ಟರ್ ಕನ್ನಡಿಗರು’, ‘ನಾರ್ತ್ ಈಸ್ಟ್ ಕನ್ನಡ ಕೂಟ’, ‘ಸ್ಕಾಟ್‌ಲ್ಯಾಂಡ್ ಕನ್ನಡ ಸಂಘ’, ‘ಉತ್ತರ ಐರ್ಲೆಂಡ್ ಕನ್ನಡ ಬಳಗ’, ‘ಕನ್ನಡ ಎನ್‌ತೂಸಿಯಾಸ್ಸ್ಟ್ ವೇಲ್ಸ್’, ‘ಡಾರ್‌ಸೆಟ್ ಕನ್ನಡ ಬಳಗ’, ‘ಕೇಂಬ್ರಿಡ್ಜ್ ಕನ್ನಡ ಸಂಘ’ ಹೀಗೆ... ಈ ಎಲ್ಲವುಗಳ ಜತೆಯೂ ಸಮನ್ವಯ ಸಾಧಿಸಿ ಕನ್ನಡ ಸಿನಿಮಾಗಳನ್ನು ಇಡೀ ಇಂಗ್ಲೆಂಡಿನಲ್ಲಿ ಗಣಪತಿ ಭಟ್ ಮತ್ತು ಗೆಳೆಯರು ಪ್ರದರ್ಶಿಸುತ್ತಾರೆ.

‘ಕನ್ನಡಿಗರುಯುಕೆ’ ಅಲ್ಲದೆ ‘ಸ್ಯಾಂಡಲ್‌ವುಡ್‌ಯುಕೆ ಮೂವೀಸ್’, ‘ಸ್ಯಾಂಡಲ್‌ವುಡ್ ಹಾಲೆಂಡ್’ ಸಂಸ್ಥೆಗಳೂ ಯುರೋಪಿನಲ್ಲಿ ಸಕ್ರಿಯವಾಗಿವೆ. ಹಾಲೆಂಡ್‌ನಲ್ಲಿರುವ ಸತೀಶ್ ಶಾಸ್ತ್ರಿ ಕನ್ನಡ ಚಿತ್ರಗಳ ಪ್ರದರ್ಶನ ಮಾಡುತ್ತಾರೆ. ಹಾಗೆಯೇ ಅನ್ನಪೂರ್ಣ ಎಂಬ ಹೆಣ್ಣು ಮಗಳು ಸ್ವಿಟ್ಜರ್‌ಲೆಂಡಿನಲ್ಲಿ. ಇಂಗ್ಲೆಂಡ್‌ನ ನಂತರದ ಸ್ಥಾನ ಜರ್ಮನಿಗೆ. ಫ್ರಾಂಕ್‌ಫರ್ಟ್, ಮ್ಯೂನಿಕ್, ಬರ್ಲಿನ್, ಹ್ಯಾಂಬರ್ಗ್ ಮುಖ್ಯವಾದ ನಗರಗಳು. ಫ್ರಾಂಕ್‌ಫರ್ಟ್‌ನಲ್ಲಿರುವ ವಿಶ್ವನಾಥ್ ಬಾಳೆಕಾಯಿ ಕ್ರಿಯಾಶೀಲ ಕನ್ನಡ ಸಿನಿಮಾ ಪ್ರದರ್ಶಕ. ಸಿನಿಮೋತ್ಸವಗಳನ್ನೂ ಏರ್ಪಡಿಸುತ್ತಾರೆ. ಮರಾಠಿ, ಮಲೆಯಾಳಂ, ಪಂಜಾಬಿ ಚಿತ್ರಗಳನ್ನೂ ಪ್ರದರ್ಶಿಸಿದ್ದಾರೆ.

ವಿಶ್ವನಾಥ್ ಜತೆಗೆ ಕೈ ಜೋಡಿಸಿರುವ ದರ್ಶನ್, ಬಾಲ, ಶ್ರೀಲಕ್ಷ್ಮಿ, ಶಶಿಕಿರಣ್, ವಿಜಯಕುಮಾರ್, ಗಿರೀಶ್ ರಾಜು ಮುಂತಾದ ಉತ್ಸಾಹಿ ಕನ್ನಡ ಸೇನೆ ಇಲ್ಲಿದೆ. ಮ್ಯೂನಿಕ್‌ನಲ್ಲಿಯೂ ಕನ್ನಡ ಪ್ರೀತಿಯ ಟೆಕ್ಕಿಗಳ ಗುಂಪಿದೆ. ಕನ್ನಡ ಸಿನಿಮಾ ಪ್ರದರ್ಶಿಸುವ ಸೋಮನಾಥಗೌಡ ಪಾಟೀಲ, ನವೀನ್ ಉಳ್ಳಿಕಾಶಿ, ಹೇಮಂತ್, ಸಚಿನ್, ರಂಜಿತ್‌ಗೌಡ ಇವರೆಲ್ಲರೂ ಅಭಿನಂದನಾರ್ಹರು. ‘‘ಬರ್ಲಿನ್‌ನಲ್ಲಿ ನಾನೂ ನನ್ನ ಮಿತ್ರ ಮಿಥುನ್ ಕಾಡಪ್ಪ ಸೇರಿ ‘ರಂಗಿತರಂಗ’ ತರಿಸಿ ಒಂದು ಯಶಸ್ವೀ ಪ್ರದರ್ಶನ ಕಂಡೆವು.

ಅದೇ ಉತ್ಸಾಹದಲ್ಲಿ ‘ರಿಕ್ಕಿ’ ತರಿಸಿದೆವು. ನಷ್ಟವಾಯಿತು. ‘ಬರ್ಲಿನ್ ಕನ್ನಡ ಬಳಗ’ ಎಂದು ಫೇಸ್‌ಬುಕ್ ಪೇಜ್ ಮಾಡಿಕೊಂಡಿದ್ದೇವೆ. ಈ ಬರ್ಲಿನ್ ನಗರದಲ್ಲಿ ಕನ್ನಡಿಗರು ಎಲ್ಲೆಲ್ಲಿ ಅಡಗಿದ್ದಾರೋ ಸಂಘಟಿಸುವುದೇ ದುಸ್ತರ’’ ಎನ್ನುತ್ತಾರೆ, ರಿಸರ್ಚ್ ವಿದ್ಯಾರ್ಥಿಯಾಗಿರುವ ಬಾಗಲಕೋಟೆಯ ಸಂತೋಷ್ ಮುದಿಗೌಡರ್. ಭಾರತೀಯ ಸಿನಿಮಾಗಳನ್ನು ನೋಡುವ ಜರ್ಮನ್ನರೂ ಇದ್ದಾರೆ. ‘ಇಷ್ಟಕಾಮ್ಯ’ ಪ್ರದರ್ಶನಕ್ಕೆ ಬಂದಿದ್ದ ಯಾನಾ ಎಂಬ ಮಹಿಳೆಯ ಕುತೂಹಲ, ಅಧ್ಯಯನಶೀಲತೆ ಮತ್ತು ಸಿನಿಮಾಸಕ್ತಿಯನ್ನು ನೋಡಿ ಅಚ್ಚರಿಯಾಯಿತು. ಭಿನ್ನವಾದ ಭಾರತೀಯ ಸಿನಿಮಾಗಳನ್ನು ಜರ್ಮನ್ನರು ಇಷ್ಟಪಡುತ್ತಾರೆ.

ವೆಬ್‌ಸೈಟ್‌ನಿಂದ ನನ್ನ ಎಲ್ಲ ಚಿತ್ರಗಳ ಸಾರಾಂಶ, ಅವುಗಳ ಭಿನ್ನ ಕಥಾವಸ್ತುವನ್ನು ಆಕೆ ಓದಿಕೊಂಡು ಬಂದಿದ್ದರು. ‘ಇಷ್ಟಕಾಮ್ಯ’ದ ನಾಯಕಿಯ ಸ್ವಚ್ಛತೆಯ ಗೀಳಿನ ಚಿತ್ರಣ ಜಾಗತಿಕವಾಗಿ ಒಂದು ಅನನ್ಯವಾದ ಪ್ರಯತ್ನ ಎಂದರು. ‘‘ನಮ್ಮೂರಿಗೆ ಬಂದ ಮೊದಲ ನಿರ್ದೇಶಕರು ನೀವು’’ ಎಂದು ಪ್ರೀತಿಯಿಂದ ಬರಮಾಡಿಕೊಂಡವರು ‘ಪ್ಯಾರಿಸ್ ಕನ್ನಡ ಬಳಗ’ದ ಕೃಷ್ಣ ಶಿವಲಿಂಗಯ್ಯ ಮತ್ತು ರವಿ ಮಟ್ಟಿ. ಫ್ರೆಂಚ್ ಭಾಷೆಯ ಚಿತ್ರಗಳಲ್ಲೂ ಅಭಿನಯಿಸುವ ನನ್ನ ಶಿಷ್ಯೋತ್ತಮ ರವಿ ಮಟ್ಟಿಗೆ ಕನ್ನಡವೆಂದರೆ ಪಂಚಪ್ರಾಣ. ಗಮನಾರ್ಹ ಸಂಖ್ಯೆಯಲ್ಲಿದ್ದರೂ ಮೋಹಕ ನಗರ ಪ್ಯಾರಿಸ್‌ನ ಕನ್ನಡಿಗರು ಸುಸಂಘಟಿತರಾಗಿಲ್ಲ.

ಕೊಲ್ಲಿ ರಾಷ್ಟ್ರಗಳ ಕತೆಯೇ ಬೇರೆ. ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿ ಹತ್ತೇ ಸಿನಿಮಾ ಪ್ರದರ್ಶನಗೊಂಡಿರುವುದು. ಈ ಪ್ರಾಂತ್ಯದ ಕನ್ನಡಿಗರ ಸಂಖ್ಯೆ ಹತ್ತಿರ ಹತ್ತಿರ ಒಂದು ಲಕ್ಷ. ಆದರೆ ಅವರ ಆದ್ಯತೆ ಸಿನಿಮಾ ಅಲ್ಲ. ದೀಪಕ್ ಹೇಳುವಂತೆ ‘ಬಬ್ರುವಾಹನ’ಕ್ಕೂ ನಿರೀಕ್ಷಿತ ಜನ ಬರಲಿಲ್ಲ. ದುಬೈ, ಅಬುದಾಭಿ, ಶಾರ್ಜಾ, ಕುವೈತ್‌ಗಳಲ್ಲಿ ಎರಡೆರಡು ಷೋಗಳಾದರೆ ಪುಣ್ಯ. ಅರೇಬಿಕ್ ಸಬ್‌ಟೈಟಲ್ ಮತ್ತು ಸ್ಥಳೀಯ ಸೆನ್ಸಾರ್ – ಇವೆರಡಕ್ಕೂ ಒಂದು ಲಕ್ಷ ಖರ್ಚಾಗುತ್ತದೆ. ಉದ್ಯಮಿ ಸರ್ವೋತ್ತಮ ಶೆಟ್ಟಿ ಕನ್ನಡದ ಕಾರ್ಯಕ್ರಮಗಳಿಗೆ ಬಹಳ ಪ್ರೋತ್ಸಾಹ ಕೊಡುತ್ತಾರೆ. ತೆಲುಗು ಭಾಷಿಕ ಮನೋಹರ್ ಕೂಡಾ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ.

ಆಸ್ಟ್ರೇಲಿಯಾದಲ್ಲಿ 10 ಸಾವಿರ ಕನ್ನಡಿಗರಿರಬಹುದು ಎಂಬುದು ಒಂದು ಅಂದಾಜು. ಅದರಲ್ಲಿ ಹೆಚ್ಚಿನವರು ಸಿಡ್ನಿ, ಮೆಲ್‌ಬರ್ನ್‌ಗಳಲ್ಲಿದ್ದಾರೆ. ಇಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುವ ಉತ್ಸಾಹಿ ತರುಣರೆಂದರೆ ಶ್ರೀನಿವಾಸ ರಾಜು, ಪ್ರವೀಣ್‌ಗೌಡ ಮತ್ತು ರೂಪೇಶ್. ಇವರು ನ್ಯೂಜಿಲ್ಯಾಂಡ್, ಸಿಂಗಪುರ, ಕೌಲಾಲಂಪುರ, ಟೋಕಿಯೋ, ಥಾಯ್‌ಲ್ಯಾಂಡ್‌ಗಳಲ್ಲಿಯೂ ಪ್ರದರ್ಶನ ಮಾಡಲು ಯತ್ನಿಸುತ್ತಾರೆ.

ಕರ್ನಾಟಕದಲ್ಲೂ ಆಸ್ಟ್ರೇಲಿಯಾದಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಬೇಕೆಂಬುದು ಶ್ರೀನಿವಾಸ ರಾಜುಗಿರುವ ಹಟ. ಆದರೆ ಇದು ನಾನಾ ಕಾರಣಕ್ಕೆ ಅಸಂಭವ. ಇಲ್ಲಿ ಚಿತ್ರ ಚೆನ್ನಾಗಿದೆ ಎಂಬ ಸುದ್ದಿ ತಲುಪಿದ ಮೇಲೆಯೇ ಅಲ್ಲಿನ ಪ್ರೇಕ್ಷಕ ನೋಡಿ ಮೆಚ್ಚುವುದು. ಇಲ್ಲಿ ನಾನು ದಾಖಲಿಸದೆ ಇರುವ ಅನೇಕ ಎಲೆಮರೆಯ ಕಾಯಿಗಳು ವಿಶ್ವಾದ್ಯಂತ ಚಿಕ್ಕದೊಡ್ಡ ಊರುಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುತ್ತ ಪ್ರೋತ್ಸಾಹಿಸುತ್ತ ಇದ್ದಾರೆ. ಪ್ರಾತಿನಿಧಿಕವಾಗಿ ಮುಂಬೈನ ‘ಮಾತುಂಗ ಕನ್ನಡ ಸಂಘ’, ‘ಮೈಸೂರು ಅಸೊಸಿಯೇಶನ್’, ಗೋವಾದ ‘ಕನ್ನಡ ಸಂಘ’, ದೆಹಲಿ ‘ಕರ್ನಾಟಕ ಸಂಘ’ಗಳನ್ನು ಹೆಸರಿಸಬಹುದು.

ವಿಶ್ವ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುತ್ತಿರುವ ಹವ್ಯಾಸಿ ಪ್ರದರ್ಶಕರ ಅನಿಸಿಕೆಗಳು:
1. ನಾವೆಲ್ಲ ವೃತ್ತಿಯಿಂದ ಪ್ರದರ್ಶಕರಲ್ಲ. ಬೇರೆ ಬೇರೆ ಉದ್ಯೋಗ ಮಾಡಿಕೊಂಡು ಕನ್ನಡ ಪ್ರೀತಿಯಿಂದ ಈ ಕೆಲಸ ಮಾಡುತ್ತಿದ್ದೇವೆ.

2. ‘ರಂಗಿತರಂಗ’ದ ಮಾನದಂಡ ಇರಿಸಿಕೊಂಡು ನಮ್ಮಿಂದ ಮುಂಗಡ ಹಣ ಕೇಳಬೇಡಿ. ವಿಶ್ವಮಾರುಕಟ್ಟೆ
ಯನ್ನು ಒಂದು ಏರಿಯಾ ಎಂದು ಪರಿಗಣಿಸಬೇಡಿ. ಕನ್ನಡ ಸಿನಿಮಾ ಬೆಳೆಸುವ ಪ್ರಯೋಗಶಾಲೆ ಎಂದು ಭಾವಿಸಿ ಉಚಿತವಾಗಿ ಚಿತ್ರಗಳನ್ನು ಕಳುಹಿಸಿಕೊಡಿ. ಇಲ್ಲಿ ಎಲ್ಲವೂ ಆನ್‌ಲೈನ್. ಖರ್ಚು ಕಳೆದು ಉಳಿದದ್ದನ್ನು ನಿರ್ಮಾಪಕರಿಗೆ ಪ್ರಾಮಾಣಿಕವಾಗಿ ಕಳುಹಿಸುತ್ತೇವೆ.

3. ವಿದೇಶೀ ಮಾರುಕಟ್ಟೆಯ ಬಗ್ಗೆ ಉತ್ಪ್ರೇಕ್ಷೆ, ಸುಳ್ಳುಗಳು ಬಹಳ ಇವೆ. ಒಂದು ಕೋಟಿ ಸಂಪಾದಿಸಿತು ಎಂದು ಹೇಳಿಕೊಳ್ಳುವ ಚಿತ್ರ ಹತ್ತು ಲಕ್ಷ ಕೂಡಾ ಗಳಿಸಿರುವುದಿಲ್ಲ. ಕರ್ನಾಟಕದಲ್ಲಿ ನಿರ್ಮಾಪಕ–ವಿತರಕರು ಪ್ರಚಾರಕ್ಕಾಗಿ ಹೇಳಿಕೊಳ್ಳುವ ಉತ್ಪ್ರೇಕ್ಷಿತ ಅಂಕಿ ಅಂಶಗಳನ್ನೇ ಇಲ್ಲಿಗೂ ಅನ್ವಯಿಸಬೇಡಿ.

4. ಇಲ್ಲಿ ಬಾಡಿಗೆ ದುಬಾರಿ. ಬಹಳಷ್ಟು ಚಿತ್ರಗಳಿಗೆ ಬಾಡಿಗೆ ಕೂಡಾ ಬರುವುದಿಲ್ಲ. ಸ್ಥಳೀಯ ಸೆನ್ಸಾರ್ ಮಾಡಿಸಲು ಹಣ ತೆರಬೇಕು. (ಇಂಗ್ಲೆಂಡ್‌ನಲ್ಲಿ 1 ನಿಮಿಷಕ್ಕೆ 10 ಪೌಂಡು) ಬಹಳ ಸಲ ನಷ್ಟವಾಗುತ್ತದೆ. ಹಣ ಗಳಿಸುವ ಚಿತ್ರಗಳು ಬಹಳ ಅಪರೂಪ. ಗಳಿಸಿದರೂ ಅದು ತೀರಾ ನಗಣ್ಯವಾದ ಮೊತ್ತ.

5. ಇಲ್ಲಿನ ಕೆಲವು ಕನ್ನಡಿಗರಿಗೆ ಕನ್ನಡ ಸಿನಿಮಾಗಳೆಂದರೆ ಉಪೇಕ್ಷೆ. ಡಿನ್ನರ್, ಲಂಚ್ ಮುಂತಾದ ಆಮಿಷ
ಗಳನ್ನೊಡ್ಡಿ ಸಿನಿಮಾಕ್ಕೆ ಕರೆಯಬೇಕಾಗುತ್ತದೆ. ‘ಕಬಾಲಿ’ಗೆ ನಲವತ್ತು ಡಾಲರ್ ತೆರುವ ಕನ್ನಡಿಗ, ಕನ್ನಡ ಸಿನಿಮಾಗೆ ಹತ್ತು ಡಾಲರ್ ಕೊಡಲು ಹಿಂದೆ ಮುಂದೆ ನೋಡುತ್ತಾನೆ.

6. ಕರ್ನಾಟಕದಿಂದ ಕಲಾವಿದರು, ನಿರ್ದೇಶಕರು ಪ್ರದರ್ಶನಕ್ಕೆ ಬಂದರೆ ಜನರನ್ನು ಆಕರ್ಷಿಸಲು ಅನುಕೂಲ. ಯಶ್, ಶಿವಣ್ಣ, ಪುನೀತ್, ವಿಜಯ ಸೂರ್ಯ, ರಕ್ಷಿತ್ ಶೆಟ್ಟಿ ಕೆಲವು ಪ್ರದರ್ಶನಗಳಿಗೆ ಬಂದು ಹೋಗಿದ್ದಾರೆ.

7. ಕಷ್ಟಪಟ್ಟು ಪ್ರದರ್ಶನ ಗೊತ್ತು ಪಡಿಸಿದರೆ ಅದನ್ನು ಹಾಳು ಮಾಡಲು ಅದೇ ದಿನ ಬೇರೆ ಸಿನಿಮಾ ಹಾಕುವ, ಔತಣವೇರ್ಪಡಿಸುವ ಹೀನಾಯ ಸ್ಪರ್ಧೆಯೂ ಇದೆ. ಕನ್ನಡಿಗರೇ ಕನ್ನಡಿಗರ ಶತ್ರುಗಳಾಗುತ್ತಾರೆ. ಚೆನ್ನಾಗಿರುವ ಚಿತ್ರಕ್ಕೂ ಸಾಮಾಜಿಕ ಜಾಲ ತಾಣಗಳಲ್ಲಿ ಕೆಟ್ಟ ವಿಮರ್ಶೆ ಬರೆದು ಕೊಲ್ಲಲು ಯತ್ನಿಸುತ್ತಾರೆ. ನಮ್ಮಗಳ ನಡುವೆಯೂ ಒಗ್ಗಟ್ಟಿಲ್ಲ.

ತಮ್ಮ ‘ಯುಟರ್ನ್’ ಚಿತ್ರವನ್ನು ‘ನೆಟ್‌ಫ್ಲಿಕ್ಸ್‌’ಗೆ ಮಾರಿ ವಿಶ್ವಮಾರುಕಟ್ಟೆ ತಲಪಿರುವ ಪವನ್ ಹೀಗನ್ನುತ್ತಾರೆ: ‘‘ಕನ್ನಡ ಪ್ರೇಕ್ಷಕ ಬಹಳ ಪ್ರಬುದ್ಧ. ಅವನು ಸಿನಿಮಾ ಆನಂದಿಸಲು ಬರುವುದಿಲ್ಲ; ವಿಮರ್ಶಿಸಲು ಬರುತ್ತಾನೆ. ಇತರೆ ಭಾಷೆಗಳವರು ತಮ್ಮನ್ನು ತಾವು ಚಿತ್ರಕ್ಕೆ ಒಪ್ಪಿಸಿಕೊಂಡು ಆನಂದಿಸಲು ಬರುತ್ತಾರೆ. ನಮ್ಮಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕ್ರಿಯೆ ಬಹಳ. ಬೇರೆಯವರು ಚೆನ್ನಾಗಿದೆ ಎಂದ ಮೇಲೆ ಒಪ್ಪುತ್ತಾರೆ.

ಇಪ್ಪತ್ತೈದು ಸಾವಿರ ಜನ ಶಾಶ್ವತ ಚಂದಾದಾರರಾದರೂ ಸಾಕು – ಕನ್ನಡಕ್ಕೆ ಒಳ್ಳೆಯ ವಿದೇಶಿ ಮಾರುಕಟ್ಟೆ ಸೃಷ್ಟಿಸಬಹುದು. ಕನ್ನಡ ಚಿತ್ರಗಳನ್ನು ಉಳಿಸುವ ಬಗ್ಗೆ ನಾವು ಗೆಳೆಯರೆಲ್ಲ ಆನ್‌ಲೈನ್‌ನಲ್ಲಿ ಚರ್ಚೆ ಹಾಕಿದ್ದೆವು. ಹತ್ತು ಸಾವಿರ ಜನ ಮಾತ್ರ ಅದನ್ನು ನೋಡಿದ್ದರು. ‘ಹುಚ್ಚ ವೆಂಕಟ್’ ಪ್ರೇಕ್ಷಕನನ್ನು ಬಾಯಿಗೆ ಬಂದಂತೆ ಬೈದದ್ದನ್ನು ನಾಲ್ಕು ಲಕ್ಷ ಜನ ನೋಡಿ ಆನಂದಿಸಿದ್ದರು. ಇದು ನಮ್ಮ ಸದ್ಯದ ಸ್ಥಿತಿ!’’.

ಕನ್ನಡ ಚಿತ್ರಗಳನ್ನು ಕರ್ನಾಟಕದ ಆಚೆಗೆ, ವಿಶ್ವದೆಲ್ಲೆಡೆ ವೈಜ್ಞಾನಿಕವಾಗಿ ವ್ಯವಹಾರಿಕವಾಗಿ ತಲಪಿಸಬೇಕಾದ್ದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ. ಅದಕ್ಕೆ ಇಲ್ಲಿನ ಉದ್ಯಮ, ಅಲ್ಲಿನ ಪ್ರದರ್ಶನ ವ್ಯವಸ್ಥೆ, ಕನ್ನಡ ಸಂಘಟನೆಗಳು, ಮುಖ್ಯವಾಗಿ ಕನ್ನಡ ಅನಿವಾಸಿ ಪ್ರೇಕ್ಷಕ ಒಟ್ಟಾಗಿ ಚಿಂತನೆ ನಡೆಸಬೇಕಿದೆ. ಜಾಗತಿಕ ನೆಲೆಯಲ್ಲಿ ಸಮಾನಾಸಕ್ತರೆಲ್ಲ ಒಂದಾಗಬೇಕಿದೆ. ಒಂದು ನೀತಿ ಸಂಹಿತೆ ರೂಪಿಸಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT