ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಫಿಆಸ್ಕರ್‌ಗೆ ಹೋಗುವಷ್ಟು ಚೆಂದವೇ?

Last Updated 25 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಅನುರಾಗ್ ಬಸು ನಿರ್ದೇಶನದ `ಬರ್ಫಿ~ ಚಿತ್ರ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಆಸ್ಕರ್ ಪ್ರಶಸ್ತಿಯ ವಿದೇಶಿ ವಿಭಾಗದಲ್ಲಿ ಪ್ರವೇಶ ಪಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪ್ರತಿವರ್ಷವೂ ಆಸ್ಕರ್ ಪ್ರಶಸ್ತಿಯ ಆಯ್ಕೆಗಿಂತಲೂ ಪ್ರವೇಶ ಪಡೆಯುವ ಚಿತ್ರಗಳೇ ಚರ್ಚೆಗೆ ಗ್ರಾಸವಾಗುತ್ತವೆ. ಈ ಹಿಂದೆ `ಜೀನ್ಸ್~ `ಪಹೇಲಿ~, `ಲಗಾನ್~ ಪ್ರವೇಶ ಪಡೆದಾಗಲೂ ಇದೇ ಬಗೆಯ ಚರ್ಚೆಗಳಾಗಿದ್ದವು.

ಆಸ್ಕರ್ ಸ್ಪರ್ಧೆಯ ಪ್ರವೇಶ ಪಡೆಯಲು ಆ ಚಿತ್ರದಲ್ಲಿ ಭಾರತೀಯ ಬದುಕಿನ ಚಿತ್ರಣವಿರಬೇಕು ಎಂಬುದು ಅಲಿಖಿತ ನಿಯಮ. ಆದರೆ `ಬರ್ಫಿ~ ನಿಜವಾಗಿಯೂ ಈ ಅರ್ಹತೆ ಪಡೆದಿದೆಯೇ ಎಂಬುದೇ ಈಗ ಚರ್ಚೆಯ ವಿಷಯವಾಗಿದೆ.

ಈ ವರ್ಷ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ತನ್ನ ಆಯ್ಕೆಯನ್ನು ಪ್ರಕಟಿಸುವ ಮುನ್ನ, `ಬರ್ಫಿ~ ಉತ್ತಮ ಚಿತ್ರ ಎಂಬ ಪ್ರಶಂಸೆ ಎಲ್ಲೆಡೆಯಿಂದಲೂ ಕೇಳಿಬಂದಿತ್ತು. ಆದರೆ ಈ ನಿರ್ಧಾರ ಪ್ರಕಟವಾದ ನಂತರ ಪ್ರಶಂಸೆ ಮಾಡಿದವರಲ್ಲಿಯೇ ಹಲವರು, ಇದು `ಆಸ್ಕರ್~ಗೆ ಹೋಗುವಂಥದ್ದಲ್ಲ ಎಂದೂ ಹೇಳಿದರು.

ಹಾಗಿದ್ದಲ್ಲಿ `ಆಸ್ಕರ್~ಗೆ ಆಯ್ಕೆ ಮಾಡುವ ಮಾನದಂಡ ಏನಾಗಿರಬೇಕು? ಕೇವಲ ಉತ್ತಮ ಸಿನಿಮಾ ಆಗಿರಬೇಕೆ ಅಥವಾ ಭಾರತೀಯ ಸಮಾಜವನ್ನು ಪ್ರತಿನಿಧಿಸುತ್ತಿರಬೇಕೆ? ಸಂಸ್ಕೃತಿಯನ್ನು ಬಿಂಬಿಸಲೇಬೇಕೆ? ಹಾಗಿದ್ದಲ್ಲಿ `ಬರ್ಫಿ~ಯಲ್ಲಿರುವ ಕೊರತೆಯಾದರೂ ಏನು? ಭಾರತೀಯ ಸಾಂಸ್ಕೃತಿಕ ಲೋಕದ ಛಾಯೆಯೇ ಅದರಲ್ಲಿ ಇಲ್ಲ ಎನ್ನುವುದು ರಾಷ್ಟ್ರ ಪ್ರಶಸ್ತಿ ವಿಜೇತ ಅಭಯ್ ಸಿಂಹ ಅವರ ಅಭಿಪ್ರಾಯವಾಗಿದೆ.

`ನಿಸ್ಸಂಶಯವಾಗಿಯೂ `ಬರ್ಫಿ~ ವಿಭಿನ್ನವಾದ, ಉತ್ತಮ ಚಲನಚಿತ್ರವಾಗಿದೆ. ಆದರೆ ಅದು ಭಾರತವನ್ನು ಪ್ರತಿನಿಧಿಸುವಂಥ ಚಿತ್ರವಾಗಿಲ್ಲವೆಂದೇ ನನ್ನ ಅನಿಸಿಕೆ. ಈ ಚಿತ್ರ ನೋಡುವಾಗ ಹಾಲಿವುಡ್ ಚಿತ್ರದ ಛಾಯೆಯನ್ನು ಕಾಣಬಹುದಾಗಿದೆ. ಇಡೀ ಚಿತ್ರದಲ್ಲಿ ಭಾರತೀಯ ಸಮಾಜವನ್ನು ಅಥವಾ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ಅಂಶಗಳಿಲ್ಲ. ಇನ್ನೂ ಹಲವಾರು ಪ್ರಾದೇಶಿಕ ಚಿತ್ರಗಳಿವೆ.

ಅವು `ಬರ್ಫಿ~ಗೆ ಹೋಲಿಸಿದ್ದಲ್ಲಿ ಬುಪಾಲು ಉತ್ತಮ ಆಯ್ಕೆಯಾಗಬಹುದಾದ ಸಾಮರ್ಥ್ಯ ಹೊಂದಿವೆ. ದುರದೃಷ್ಟವೆಂದರೆ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಲಾಬಿ ನಡೆಯುತ್ತದೆ. ಹಾಗಾಗಿ ಉತ್ತಮ ಚಿತ್ರಗಳಿಗೆ ಮನ್ನಣೆ ದೊರೆಯುವುದೇ ಕಠಿಣವಾಗಿದೆ~ ಎಂದೂ ಹೇಳುತ್ತಾರೆ.

ವೃತ್ತಿನಿರತ ಗ್ಲೆನ್ ಇದಕ್ಕಿಂತ ಭಿನ್ನವಾಗಿ ಯೋಚಿಸುತ್ತಾರೆ. `ಬರ್ಫಿ ಉತ್ತಮ ಆಯ್ಕೆಯಾಗಿದೆ. ಈ ಚಿತ್ರದಲ್ಲಿ ಅಂಗವಿಕಲರು ತಮ್ಮ ಬದುಕನ್ನು ಅನುಭವಿಸುವ ರೀತಿಯನ್ನು ಚಿತ್ರಿಸಲಾಗಿದೆ. ಬದುಕಿನ ಮೌಲ್ಯಗಳನ್ನು ತಿಳಿಸಲಾಗಿದೆ. ಯಾವುದೇ ಕೊರತೆಗಳಿರದಂತೆ, ನೋವುಗಳಿರದೆ, ಬದುಕನ್ನು ಆನಂದಿಸುವ ಬಗೆಯನ್ನು ತೋರಿಸಲಾಗಿದೆ.
 
ಅವರ ವಿಭಿನ್ನ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಗೌರವಿಸುವಂತೆ ಮಾಡುತ್ತದೆ. ಸಾಮಾನ್ಯರು ಅವರನ್ನು ಅಂಗವಿಕಲರೆಂದೇ ಪರಿಗಣಿಸುವ ವಿಧವನ್ನೂ ಹೇಳಿದೆ ಹಾಗಾಗಿ ವಿಭಿನ್ನ ರೀತಿಯ ಯೋಚನಾ ಸರಣಿಯೊಂದು ಈ ಚಿತ್ರದಲ್ಲಿದೆ. ಹಾಗಾಗಿ ಆಸ್ಕರ್‌ಗೆ ಪ್ರವೇಶ ಪಡೆಯುವ ಅರ್ಹತೆ ಹೊಂದಿದೆ~ಎನ್ನುವುದು ಗ್ಲೆನ್ ವಾದ.

ಸೇಂಟ್ ಜೋಸೆಫ್ಸ್ ಕಲಾ ಹಾಗೂ ವಿಜ್ಞಾನ ಶಾಲೆಯ ವಿದ್ಯಾರ್ಥಿನಿ ಡಿನೈಸ್ ಹೇಳುವುದು ಹೀಗೆ: `ಚಿತ್ರಗಳ ಆಯ್ಕೆ ಕೇವಲ ಕತೆಯಿಂದಲೇ ಮಾಡಬೇಕಾಗಿಲ್ಲ. ನಟನೆಯನ್ನೂ ಪರಿಗಣಿಸಬೇಕು. ರಣಬೀರ್ ಕಪೂರ್ ನಟನೆ ಶ್ಲಾಘನೀಯವಾಗಿದೆ. ಈ ಚಿತ್ರ ವಿಶ್ವಕ್ಕೆಲ್ಲ, ಭಾರತದಲ್ಲೂ ವಿಭಿನ್ನವಾದ ಉತ್ತಮ ಚಿತ್ರಗಳು ಆಗುತ್ತವೆ ಎಂದು ತೋರಿಸುವ ಸಾಮರ್ಥ್ಯ ಇದೆ.~

ನಟಿ ಮೇಘನಾ ಸಹ ಈ ಮಾತಿಗೆ ತಮ್ಮ ಒಪ್ಪಿಗೆ ಸೂಚಿಸುತ್ತಾರೆ. ಅವರ ಪ್ರಕಾರ `ಈ ವರ್ಷ ನೋಡಿರುವ ಚಿತ್ರಗಳಲ್ಲಿ `ಬರ್ಫಿ~ ಅತ್ಯುತ್ತಮವಾದ ಚಿತ್ರವಾಗಿದೆ. ಕೆಲವು ದೃಶ್ಯಗಳನ್ನು ನೋಡಿದಾಗ, ಬೇರೆ ಚಿತ್ರಗಳಿಂದ ಪ್ರೇರಣೆ ಪಡೆದಿವೆ ಎಂದೆನಿಸುವುದು ಸತ್ಯವಾದರೂ ಈ ಚಿತ್ರ ಭಿನ್ನವಾಗಿದೆ~ ಎನ್ನುತ್ತಾರೆ ಅವರು.

ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಹ ಈ ಚಿತ್ರದ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. `ಹೌದು, ಚಿತ್ರವನ್ನು ನೋಡುವಾಗ ಪಾಶ್ಚಾತ್ಯ ಪ್ರಭಾವ ಇರುವುದು ಗೊತ್ತಾಗುತ್ತದೆ. ಆದರೆ ಅದೆಷ್ಟು ಹಾಲಿವುಡ್ ಚಿತ್ರಗಳು, ಜಪಾನಿ ಹಾಗೂ ಕೊರಿಯನ್ ಚಿತ್ರಗಳಿಂದ ಪ್ರೇರಣೆ ಪಡೆದಿರುತ್ತವೆ.

ಆ ಬಗ್ಗೆ ಮಾತ್ರ ಯಾವುದೇ ಚರ್ಚೆಯೇ ಆಗುವುದಿಲ್ಲವಲ್ಲ. ಈ ಚಿತ್ರ ಬಾಕ್ಸ್ ಆಫೀಸಿನಲ್ಲಿಯೂ ಚೆನ್ನಾಗಿ ಮಾಡುತ್ತಿದೆ. ಜನರನ್ನೂ ಸೆಳೆಯುತ್ತಿದೆ. ಒಂದು ಸಂಕೀರ್ಣವಾದ ವಿಷಯವನ್ನು ಸುಂದರವಾದ ರೀತಿಯಲ್ಲಿ ನಿಭಾಯಿಸಿದೆ. ಆಸ್ಕರ್‌ಗೆ ಪ್ರವೇಶ ಪಡೆಯುವ ಸಾಮರ್ಥ್ಯ ಇದೆ~ ಎನ್ನುತ್ತಾರೆ ಅವರು.

`ಬರ್ಫಿ~ ಅಂತಿಮ ಸ್ಪರ್ಧಿಯ ಸಾಲಿನಲ್ಲಿ ಪ್ರವೇಶ ಪಡೆಯುವುದೇ ಎಂಬುದಕ್ಕೆ ಸಮಯವೇ ಉತ್ತರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT