ಗುಣಮಟ್ಟದಲ್ಲಿ ಹಾಗೂ ರಿಚ್‌ನೆಸ್‌ನಲ್ಲಿ ಈ ಸಿನಿಮಾ ಉತ್ಕೃಷ್ಟವಾಗಿ ಮೂಡಿಬಂದಿದೆ. ಒಂದು ಕಂಪನಿಯ ಮುಖ್ಯಸ್ಥನಾಗಿರುವ ಹೀರೊ, ಆತನ ಐಷಾರಾಮಿ ಮನೆ, ಜೀವನ, ದಿನನಿತ್ಯ ಸೀರೆ, ಕುರ್ತಾ, ಒಡವೆ ಧರಿಸಿಕೊಂಡೇ ಇರುವ ಮನೆಮಂದಿ ಹೀಗೆ ತೆಲುಗು ಸಿನಿಮಾಗಳಲ್ಲಿ ಕಂಡುಬರುತ್ತಿದ್ದ ರಿಚ್‌ನೆಸ್ ಈ ಸಿನಿಮಾದಲ್ಲಿದೆ. ಇದಕ್ಕಷ್ಟೇ ಒತ್ತು ನೀಡಿರುವಂತೆಯೂ ಕಾಣುತ್ತದೆ. ಸಿನಿಮಾದ ಕಥೆ ಹೀಗೇ ಸಾಗಲಿದೆ ಎನ್ನುವುದನ್ನು ಆರಂಭದಲ್ಲೇ ಊಹಿಸಬಹುದಾಗಿದೆ. ಕಥೆಗೆ ಪೂರಕವಾಗಿ ಪಾತ್ರಗಳನ್ನು ಸೃಷ್ಟಿಸುವುದರ ಬದಲು ಕೂಡುಕುಟುಂಬ ಎನ್ನುವ ಕಾರಣಕ್ಕೆ ಹೆಚ್ಚಿನ ಪಾತ್ರಗಳನ್ನು ತುಂಬಲಾಗಿದೆ. ಅವುಗಳಿಗೆ ಕಥೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವೂ ಇಲ್ಲ. ರಂಗಾಯಣ ರಘು ಅವರು ನಿರ್ವಹಿಸಿದ ‘ಬೂಮ್‌ದೇವ್ರು’ ಎನ್ನುವ ಪಾತ್ರದ ಪೋಷಣೆ ತರ್ಕಕ್ಕೆ ಸಿಗುವುದಿಲ್ಲ. ತೆಲುಗು ಸಿನಿಮಾಗಳ ಪ್ರಭಾವಕ್ಕೆ ಸಾಕ್ಷ್ಯವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೃಶ್ಯಗಳು ಸಿಗುತ್ತವೆ. ನಾನ್–ಲೀನಿಯರ್ ಮಾದರಿಯಲ್ಲಿ ಕಥೆ ಹೇಳುತ್ತಾ ಸಾಗಿದ್ದಾರೆ ನಿರ್ದೇಶಕರು. ಇದು ಕೆಲವೆಡೆ ಗೊಂದಲವನ್ನೂ ಮೂಡಿಸಿದೆ.