ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುವ ಕಥನದ ಗೊಂದಲ ಮಾರ್ಗ

Last Updated 2 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಿತ್ರ: ನಿಶ್ಶಬ್ದಂ (ತೆಲುಗು, ಅಮೆಜಾನ್ ಪ್ರೈಮ್ ರಿಲೀಸ್)

ನಿರ್ಮಾಣ: ಕೋನಾ ವೆಂಕಟ್, ಟಿ.ಜಿ. ವಿಶ್ವಪ್ರಸಾದ್

ನಿರ್ದೇಶನ: ಹೇಮಂತ್ ಮಧುಕರ್

ತಾರಾಗಣ: ಅನುಷ್ಕಾ ಶೆಟ್ಟಿ, ಅಂಜಲಿ, ಮಾಧವನ್, ಮೈಕಲ್ ಮ್ಯಾಡ್‌ಸನ್, ಸುಬ್ಬರಾಜು, ಶಾಲಿನಿ ಪಾಂಡೆ

‘ಥ್ರಿಲ್ಲರ್‌’ ಪ್ರಕಾರದ ಸಿನಿಮಾ ತನ್ನ ಹಳೆಯದ್ದೇ ಟೆಂಪ್ಲೇಟ್‌ನಿಂದ ಹೊರಬಂದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲೇ ಸರಿ. ಯಾಕೆಂದರೆ, ಅದರ ಹಲವು ಮಾದರಿಗಳು ಹಾಗೂ ಪ್ರಯೋಗಗಳನ್ನು ಈಗಾಗಲೇ ನೋಡಿಯಾಗಿದೆ. ಕೊಲೆಯೊಂದು ಸಂಭವಿಸಿ, ಅದನ್ನು ಮಾಡಿದವರು ಯಾರು ಎಂಬ ಊಹೆಯನ್ನು ಪ್ರೇಕ್ಷಕರ ತಲೆಗೆ ತುರುಕಿ, ಆಮೇಲೆ ಅದಕ್ಕೆ ಪೂರಕವಾದ ಚಿತ್ರಕಥೆಯನ್ನು ತೋರಿಸುವುದು ಕೌಶಲ. ‘ನಿಶ್ಶಬ್ದಂ’ ಇಂಥ ಕೌಶಲದ ವಿಷಯದಲ್ಲಿ ಹೀನಾಯವಾಗಿ ಸೋತಿದೆ. ಚಿತ್ರಕಥನ ಹೇಳುವ ಕ್ರಮವಂತೂ ಚರ್ವಿತ ಚರ್ವಣ.

ಸಾಕ್ಷಿ ಚಿತ್ರದ ನಾಯಕಿ. ಅವಳಿಗೆ ಶ್ರವಣದೋಷ. ಮಾತೂ ಬಾರದು. ಪೇಂಟರ್ ಆದ ಅವಳು ಆಂಟನಿ ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾಳೆ. ಅಮೆರಿಕದ ಸಿಯಾಟೆಲ್‌ನ ಜನಪ್ರಿಯ ಸಂಗೀತಗಾರನಾದ ಅವನು ಭೂತದ ಬಂಗಲೆಯೊಂದರಲ್ಲಿ ಕೊಲೆಯಾಗುತ್ತಾನೆ. ಅಲ್ಲಿಗೆ ಸಾಕ್ಷಿಯೇ ಅವಳನ್ನು ಕರೆದೊಯ್ದಿರುತ್ತಾಳೆ. ಈ ಕೊಲೆ ಪ್ರಕರಣದ ತನಿಖೆಗೆ ಇಳಿಯುವ ಮಹಿಳಾ ಪೊಲೀಸ್ ಅಧಿಕಾರಿ ಮಹಾ ಇಡೀ ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾಳೆ. ಪ್ರಮುಖ ಪಾತ್ರಗಳ ದೃಷ್ಟಿಕೋನದಲ್ಲಿ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಒಂದೊಂದೇ ಕುತೂಹಲದ ಕಥೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆಂಟನಿ ಸತ್ತಿದ್ದು ಯಾರಿಂದ ಎನ್ನುವ ಸತ್ಯ ಬಯಲಾಗುವುದು ಕೊನೆಯಲ್ಲಿ.

ಶ್ಯಾನಿಯೆಲ್ ಡಿಯೊ ಕ್ಯಾಮೆರಾ ಚಿತ್ರದ ಪ್ರತಿ ಶಾಟ್‌ ಅನ್ನು ಚೆಂದ ಮಾಡಿ ತೋರಿಸಿದೆ. ಗೋಪಿ ಸುಂದರ್ ಹಾಗೂ ವಿಶ್ವಜಿತ್ ಜಯಂಕರ್ ನೀಡಿರುವ ಹಿನ್ನೆಲೆ ಸಂಗೀತ ಹಳಸಲು. ಮೊದಲ ಒಂದು ಗಂಟೆ ಸಿನಿಮಾ ವಿಪರೀತ ತೆವಳುತ್ತದೆ. ಮನಸ್ಸಿನಲ್ಲಿ ಒಂದು ಭಾವ ಮಡುಗಟ್ಟುವ ಹೊತ್ತಿಗೆ ಮತ್ತೊಂದು ಅದನ್ನು ಚಿಂದಿ ಮಾಡಿಬಿಡುತ್ತದೆ. ಪೊಲೀಸ್ ಅಧಿಕಾರಿಯಾಗಿ ಹಾಲಿವುಡ್ ನಟ ಮೈಕಲ್ ಮ್ಯಾಡ್‌ಸನ್ ಡಬ್‌ ಮಾಡಿರುವ ರೀತಿ ರೇಜಿಗೆ ಹುಟ್ಟಿಸುತ್ತದೆ.

ಅನುಷ್ಕಾ ಅಭಿನಯ ಚೆನ್ನಾಗಿದೆಯಾದರೂ ಅವರ ಪಾತ್ರದ ಬರವಣಿಗೆಯಲ್ಲೇ ಹಲವು ಲೋಪಗಳಿವೆ. ಅಮೆರಿಕದಲ್ಲಿಯೇ ಹುಟ್ಟಿ ಬೆಳೆದ ಅವರಿಗೆ ಇಂಗ್ಲಿಷ್‌ ಮಾತನ್ನು ತೆಲುಗಿಗೆ ಅಮೆರಿಕನ್ನಳೇ ತರ್ಜುಮೆ ಮಾಡುವುದನ್ನು ತಮಾಷೆಯಾಗಿ ಸ್ವೀಕರಿಸಬೇಕು. ಮಾಧವನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸೋಜಿಗ. ಪೊಲೀಸ್ ಪಾತ್ರಧಾರಿ ಅಂಜಲಿ ಅಭಿನಯ ತೀರಾ ಸಪ್ಪೆ. ಸುಬ್ಬರಾಜು, ಶಾಲಿನಿ ಪಾಂಡೆ ಇಬ್ಬರ ಪಾತ್ರಗಳಿಗೂ ಸ್ಪಷ್ಟ ಚಹರೆಗಳೇ ಇಲ್ಲ.

ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರಕಥೆ ಬರೆಯುತ್ತಾ ಸಿಕ್ಕುಗಳನ್ನು ಮೂಡಿಸಲು ಹೊರಟಿರುವ ನಿರ್ದೇಶಕ ಹೇಮಂತ್ ಮಧುಕರ್ ಖುದ್ದು ಗೊಂದಲಕ್ಕೆ ಸಿಲುಕಿರುವುದಕ್ಕೆ ಸಿನಿಮಾದಲ್ಲಿ ದಟ್ಟವಾಗಿ ಉದಾಹರಣೆಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT