ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | 5 ಕಥೆಗಳ ಸಮ್ಮಿಲನ ‘ಪೆಂಟಗನ್‌’

Last Updated 7 ಏಪ್ರಿಲ್ 2023, 11:19 IST
ಅಕ್ಷರ ಗಾತ್ರ

ಕನ್ನಡದಲ್ಲಿ ಆಂಥಾಲಜಿ ಪ್ರಕಾರದ ಸಿನಿಮಾಗಳು ಕಡಿಮೆ. ಒಂದು ಗಟ್ಟಿಯಾದ ಕಥೆಗೆ ಬೆಸೆದುಕೊಳ್ಳುವ ಬಿಡಿಬಿಡಿ ಚಿತ್ರಗಳು ಬಂದಿದ್ದು ವಿರಳ. 5–6 ಕಿರುಚಿತ್ರ ಒಟ್ಟಾಗಿಸಿ ಆಂಥಾಲಜಿ ಎಂದು ಕರೆಸಿಕೊಂಡವೇ ಹೆಚ್ಚು. ಗುರು ದೇಶಪಾಂಡೆ ನಿರ್ದೇಶನದ ‘ಪೆಂಟಗನ್‌’ಚಿತ್ರವನ್ನು ಅದೇ ವಿಭಾಗಕ್ಕೆ ಸೇರಿಸಬಹುದು.

ಇಲ್ಲಿ 5 ಭಿನ್ನ ಕಥೆಗಳಿವೆ. ಆದರೆ ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿಲ್ಲ ಅಥವಾ ಎಲ್ಲವನ್ನೂ ಒಂದೇ ಸೂತ್ರದಲ್ಲಿ ಬೆಸೆಯಬಲ್ಲ ಯಾವ ಅಂಶವೂ ಇಲ್ಲ. ಎಲ್ಲ ಕಿರುಚಿತ್ರಗಳಲ್ಲಿನ ಸಾಮಾನ್ಯ ಸಂಗತಿಯೆಂದರೆ, ಚಿತ್ರ ಸಾವಿನೊಂದಿಗೆ ಅಂತ್ಯವಾಗುತ್ತದೆ ಮತ್ತು ಮುಂದಿನ ಚಿತ್ರದ ಪ್ರಾರಂಭದಲ್ಲಿ ಕಾಗೆ ಹಾರಿಕೊಂಡು ಹೋಗುತ್ತದೆ! ಕಥೆಗೆ ಸಂಬಂಧ ಬೆಸೆಯುವ ಕಾಗೆ ಗ್ರಾಫಿಕ್ಸ್‌ ಕೂಡ ಇನ್ನಷ್ಟು ಸುಧಾರಿಸಬಹುದಿತ್ತು.

ಚಿತ್ರ ಪ್ರಾರಂಭವಾಗುವುದೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹೊರಡುವ ಹುಡುಗನಿಂದ. ಈ ಕಥೆಯಲ್ಲಿ ಪ್ರಮೋದ್‌ ಶೆಟ್ಟಿ ಹೊರತುಪಡಿಸಿ ಉಳಿದೆಲ್ಲ ನಟರು ನಟನೆಯಲ್ಲಿ ಸಾಕಷ್ಟು ಪಳಗಬೇಕಿತ್ತು. ಚಂದ್ರಮೋಹನ್ ಇದನ್ನು ನಿರ್ದೇಶಿಸಿದ್ದಾರೆ.

'ಶಿವಾಜಿ ಸುರತ್ಕಲ್' ಸಿನಿಮಾ ಖ್ಯಾತಿಯ ಆಕಾಶ್ ಶ್ರೀವತ್ಸ ‘ಮೈಸೂರು ಪಾಕ್‌’ ಎಂಬ ಚಿತ್ರದ ಎರಡನೇ ಕಥೆ ನಿರ್ದೇಶಿಸಿದ್ದಾರೆ. ಬಹಳ ಸುಧಾರಣೆ ಕಾಣಬೇಕಿದ್ದ ಕಥೆಯಿದು. ವೈಜನಾಥ್‌ ಬಿರಾದಾರ್‌ ಹಾಗೂ ಮೊಮ್ಮಗಳ ನಟನೆ ಹೊರತುಪಡಿಸಿ ಈ ಕಥೆಯ ಉಳಿದೆಲ್ಲ ಅಂಶಗಳು ಚಿತ್ರದ ಮೇಲಿದ್ದ ಭರವಸೆಯನ್ನು ಕಡಿಮೆ ಮಾಡಿಬಿಡುತ್ತದೆ.

ಪ್ರೇಕ್ಷಕ ಎರಡು ಕಥೆ ನೋಡಿ ಸುಧಾರಿಸಿಕೊಳ್ಳುವ ಹೊತ್ತಿಗೆ ಶುರುವಾಗುವುದು ಇಂದಿನ ನಗ್ನ ವಿಡಿಯೊ ಕರೆಗಳ ಹಿಂದಿನ ಜಗತ್ತನ್ನು ಅನಾವರಣಗೊಳಿಸುವ ಕಥೆ. ರಾಘು ಶಿವಮೊಗ್ಗ ನಿರ್ದೇಶನದ ಈ ಕಥೆ ತಾಂತ್ರಿಕವಾಗಿ, ನಟನೆಯಿಂದ ಉತ್ತಮವಾಗಿದೆ. ಕುಟುಂಬ ಕುಳಿತು ನೋಡಲು ಸ್ವಲ್ಪ ಮುಜಗರವೆನಿಸುವ ದೃಶ್ಯಗಳಿದ್ದರೂ, ಅದರ ಹಿಂದೊಂದು ಉತ್ತಮ ಸಂದೇಶವಿದೆ. ನಗಿಸುವ ಮಾತುಗಳಿವೆ. ತನೀಷಾ ತಾಪಂಡ ಪಾತ್ರಕ್ಕೆ ಅಗತ್ಯಕ್ಕಿಂತ ತುಸು ಹೆಚ್ಚೇ ಬೋಲ್ಡ್‌ ಆಗಿ ನಟಿಸಿದಂತೆ ಭಾಸವಾಗುತ್ತಿದೆ. ಪ್ರಕಾಶ್ ಬೆಳವಾಡಿ ಇನ್‌ಸ್ಟೆಕ್ಟರ್‌ ಆಗಿ ಅಬ್ಬರಿಸಿದ್ದಾರೆ.

ಜಾತಿ ಸಮಸ್ಯೆ ಸುತ್ತ ಹೆಣೆದಿರುವ ನಾಲ್ಕನೇ ಕಥೆಯನ್ನು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ರವಿಶಂಕರ್, ಪ್ರೀತಿಕಾ ಮುಖ್ಯಭೂಮಿಕೆಯಲ್ಲಿರುವ ಕಥೆ ಸಿನಿಮಾವೊಂದು ಒಂದು ಸಿನಿಮೀಯ ಹಂತಕ್ಕೆ ತಂದು ನಿಲ್ಲಿಸುತ್ತದೆ.

ಚಿತ್ರತಂಡದ ನಾಯಕ, ನಿರ್ಮಾಪಕ ಗುರು ದೇಶಪಾಂಡೆ ಕನ್ನಡಪರ ಹೋರಾಟಗಾರರ ಕುರಿತಾದ ಕೊನೆಯ ಕಥೆಯನ್ನು ನಿರ್ದೇಶಿಸಿದ್ದಾರೆ. ಸಮಾಜದಲ್ಲಿನ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳ ಸುತ್ತ ಹೆಣೆದಿರುವ ಕಥೆ ಉಳಿದೆಲ್ಲ ಕಥೆಗಳಿಂತ ಎಲ್ಲ ರೀತಿಯಲ್ಲಿಯೂ ಉತ್ತಮವಾಗಿದೆ. ಕಿಶೋರ್ ಮತ್ತು ಪೃಥ್ವಿ ಅಂಬಾರ್ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಛಾಯಾಗ್ರಾಹಕರ ಕೆಲಸ ಅಚ್ಚುಕಟ್ಟಾಗಿದೆ. ಆದಾಗ್ಯೂ ಮೊದಲ ಎರಡು ಕಥೆಗಳಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿತ್ತು. ಪ್ರಮೋದ್‌ ಶೆಟ್ಟಿ ಪ್ರವೇಶ ದೃಶ್ಯದ ಹೊರತಾಗಿ ಮೊದಲಿನ ಎರಡು ಕಥೆಗಳ ಬೇರೆ ದೃಶ್ಯಗಳು ಕಣ್ಣಿಗೆ ಕಟ್ಟುವುದಿಲ್ಲ. ರಾಘು ಶಿವಮೊಗ್ಗ ಕಥೆಗೆ ಅಗತ್ಯ ಸನ್ನಿವೇಶ ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಇಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT