ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊನ್ನಿಯನ್‌ ಸೆಲ್ವನ್‌–2’ ಸಿನಿಮಾ ವಿಮರ್ಶೆ: ಎಲ್ಲವ ಚೆಂದಗಾಣಿಸುವ ಉಮೇದು

Published 29 ಏಪ್ರಿಲ್ 2023, 8:19 IST
Last Updated 29 ಏಪ್ರಿಲ್ 2023, 8:19 IST
ಅಕ್ಷರ ಗಾತ್ರ

ಚಿತ್ರ: ಪೊನ್ನಿಯಿನ್ ಸೆಲ್ವನ್ 2 (ತಮಿಳು–ಕನ್ನಡಕ್ಕೆ ಡಬ್ ಆದ ಆವೃತ್ತಿ)‌‌

ನಿರ್ಮಾಣ: ಮಣಿರತ್ನಂ, ಸುಭಾಸ್ಕರನ್ ಅಲ್ಲಿರಾಜಾ

ನಿರ್ದೇಶನ: ಮಣಿರತ್ನಂ

ತಾರಾಗಣ: ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಶಾ, ಶೋಭಿತಾ ಧುಲಿಪಾಲ, ಜಯರಾಂ, ಐಶ್ವರ್ಯಾ ಲಕ್ಷ್ಮಿ, ಶರತ್‌ಕುಮಾರ್, ಪ್ರಭು, ಪಾರ್ತಿಬನ್, ಕಿಶೋರ್‌ಕುಮಾರ್, ನಾಸಿರ್, ಪ್ರಕಾಶ್ ರೈ

ಕಲ್ಕಿ ಕೃಷ್ಣಮೂರ್ತಿ ಬರೆದಿದ್ದ ಕಾದಂಬರಿಯನ್ನು ಆಧರಿಸಿದ ‘ಪೊನ್ನಿಯಿನ್ ಸೆಲ್ವನ್‌’ನ ಎರಡನೇ ಕಂತಿನ ಸಿನಿಮಾ ರೂಪದರ್ಶಿಗಳಿಗೆಲ್ಲ ಚೆಂದದ ಒಡವೆ–ವಸ್ತ್ರ ತೊಡಿಸಿ ಬೆಳಕಿನ ಮಳೆಯಲ್ಲಿ ಮೀಯಿಸಿದಂತೆ ಭಾಸವಾಗುತ್ತದೆ. ಭಾವದ ಗೆರೆಗಳಿಗೆಲ್ಲ ಮಣಿರತ್ನಂ ಎಷ್ಟೋ ಕಡೆ ಇಸ್ತ್ರಿ ಹಾಕಿಬಿಟ್ಟಿದ್ದಾರೆ. ತಂತ್ರಜ್ಞಾನದ ಸವಲತ್ತುಗಳ ಬಳಕೆ ಮುಂದಾದಾಗ ಕಥಾವಲ್ಲರಿಯ ಸೂಕ್ಷ್ಮಗಳೂ ಮೇಕಪ್‌ನಲ್ಲಿ ಮುಚ್ಚಿಹೋಗುವುದು ಕಲಾವಂತಿಕೆಯ ದೃಷ್ಟಿಯಿಂದ ಸಮಂಜಸವಲ್ಲ.

ಚೋಳರು ಹಾಗೂ ಪಾಂಡ್ಯರ ನಡುವಿನ ತಿಕ್ಕಾಟದ ಕಥನ ಕುತೂಹಲವನ್ನು ಒಳಗೊಂಡ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’. ಮೊದಲ ಭಾಗದಲ್ಲಿ ನಿರ್ದೇಶಕ ಮಣಿರತ್ನಂ ಪಾತ್ರಗಳಿಗೆ ಪ್ರವೇಶಿಕೆಯೊಂದನ್ನು ದಕ್ಕಿಸಿಕೊಟ್ಟಿದ್ದರು. ಚಕಚಕನೆ ಸಾಗುವ ಸಿನಿಮಾ, ಕಾರ್ತಿ ಲವಲವಿಕೆಯ ಚಲನಶೀಲತೆಯಿಂದ, ಐಶ್ವರ್ಯಾ ಸೌಂದರ್ಯದಿಂದ ಹಿಡಿದಿಟ್ಟುಕೊಂಡಿತ್ತು. ಎರಡನೇ ಭಾಗದಲ್ಲಿ ಆ ಗತಿ ಇಲ್ಲವಾಗಿದೆ. ನಿರೂಪಣೆಯಲ್ಲೇ ಮಣಿರತ್ನಂ ಕಾದಂಬರಿಯನ್ನೂ ಮೀರಿದ ಸೃಜನಶೀಲ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದಾರೆ.

‘ರಾಜ ಸುಳ್ಳು ಹೇಳುವುದಿಲ್ಲ’ ಎಂದು ಒಂದು ಪಾತ್ರ ಹೇಳಿದಾಗ, ‘ರಾಜ ಸುಳ್ಳು ಹೇಳಿದರೆ ಅದು ರಾಜಕೀಯವಾಗುತ್ತದೆ’ ಎಂದು ಇನ್ನೊಂದು ಪಾತ್ರ ಪ್ರತಿಕ್ರಿಯಿಸುತ್ತದೆ. ಈ ಸಿನಿಮಾದ ಹೆಣಿಗೆಯಲ್ಲೂ ಒಂದು ಅನುಕೂಲಸಿಂಧು ರಾಜಕಾರಣವಿದೆ. ಚೋಳರು ದಲಿತರನ್ನು ಮೆಟ್ಟಿ ಸಾಮ್ರಾಜ್ಯ ವಿಸ್ತರಿಸಿಕೊಂಡ ಇತಿಹಾಸವಿದೆ. ಆ ಅಂಶದ ಗೊಡವೆಗೆ ಮಣಿರತ್ನಂ ಹೋಗುವುದಿಲ್ಲ. ಅವರು ಸೃಜನಾತ್ಮಕವಾಗಿ ಸಿನಿಮಾವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡುವ ಸಾಧ್ಯತೆ ಇದುವೇ ಆಗಿತ್ತೆಂಬ ವಾದ ಒಪ್ಪಲು ದಟ್ಟವಾಗಿ ಕಾರಣಗಳು ಸಿಗುತ್ತವೆ.

ರವಿವರ್ಮನ್ ಕ್ಯಾಮೆರಾ ಎಲ್ಲವನ್ನೂ ಚೆಂದಗಾಣಿಸುವ ಬೆಳಕು–ನೆರಳಿನ ಆಟವಾಡಿದ್ದಾರೆ. ಸೌಂದರ್ಯಪ್ರಜ್ಞೆಯ ಮುಚ್ಚಟೆ ಯಾವ ಮಟ್ಟಕ್ಕೆ ಇದೆಯೆಂದರೆ, ಗಂಭೀರವಾಗಿ ಗಾಯಗೊಂಡ ಪೊನ್ನಿಯಿನ್ ಸೆಲ್ವನ್‌ನನ್ನು ನೋಡಿದಾಗ ಕರುಣ ರಸವೇ ಉಕ್ಕುವುದಿಲ್ಲ. ಮೊದಲ ಭಾಗದಲ್ಲಿ ಬೆಳಕಿನ ಆಟದಿಂದಲೇ ಸ್ನಿಗ್ಧ ಸೌಂದರ್ಯ ತುಳುಕಿಸಿದ್ದ ಐಶ್ವರ್ಯಾ ಎರಡನೇ ಭಾಗದಲ್ಲಿ ಮಳಿಗೆಯ ಮುಂದೆ ನಿಲ್ಲಿಸಿದ ಬೊಂಬೆಯಂತೆ ಕಾಣುತ್ತಾರೆ. ತಿರುವಿಗೆ ಕಾರಣವಾಗಬಲ್ಲ ಸನ್ನಿವೇಶಗಳಲ್ಲೂ ಅವರ ಅಭಿನಯದಲ್ಲಿ ಭಾವದ ಗೆರೆಗಳಿಗೆ ಹುಡುಕಬೇಕು. ಆದರೂ ಅದರು ಎಷ್ಟು ಚೆಂದವಿದ್ದಾರಲ್ಲವೆ ಎಂಬ ಅನುಭವವನ್ನು ದೃಶ್ಯಗಳು ಮನಸ್ಸಿಗೆ ಇಳಿಸುತ್ತವೆ. ತ್ರಿಶಾ ಬಂದು ಹೋಗುವ ದೃಶ್ಯಗಳ ಭಾವದ ಸ್ಥಿತಿಯೂ ಹೀಗೆಯೇ ಇದೆ. ‌

ಕಾರ್ತಿ ಹಾಗೂ ತ್ರಿಶಾ ನಡುವಿನ ಒಂದು ಸನ್ನಿವೇಶ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕಾರ್ತಿ, ಕತ್ತಿ ಹಿಡಿದ ತ್ರಿಶಾ ಎದುರು ಬದಿರಾಗುತ್ತಾರೆ. ಕಾರ್ತಿ ಮೆಲ್ಲಗೆ ಕತ್ತಿಯ ಮೇಲೆ ಕೈಗಳನ್ನು ಮುಂದಕ್ಕೆ ಸರಿಸುತ್ತಾ, ತ್ರಿಶಾ ಅವರ ಕೈಗಳನ್ನು ಹಿಡಿಯುತ್ತಾ ಉಸಿರು ತಾಕುವಷ್ಟು ಹತ್ತಿರಾಗುತ್ತಾರೆ. ಇದು ಸಾವಧಾನದ ದೃಶ್ಯ. ಇಂತಹ ಶಾಟ್‌ಗಳ ಸಂಖ್ಯೆ ಸಿನಿಮಾದಲ್ಲಿ ಇನ್ನೂ ಹೆಚ್ಚಾಗಿದ್ದಿದ್ದರೆ ಚೆನ್ನಾಗಿತ್ತು. ಕೊನೆಯಲ್ಲಿ ಯುದ್ಧದ ಸನ್ನಿವೇಶ ರೋಚಕವಾದೀತು ಎಂಬ ನಿರೀಕ್ಷೆಯನ್ನೂ ಮಣಿರತ್ನಂ ಈಡೇರಿಸುವುದಿಲ್ಲ.

ಕಾರ್ತಿ, ವಿಕ್ರಂ, ಐಶ್ವರ್ಯಾ, ತ್ರಿಶಾ, ಜಯಂ ರವಿ ಎಲ್ಲರ ಅಭಿನಯಕ್ಕೆ ಅಂಕ ಕೊಡುವುದಕ್ಕಿಂತ ಅವರ ಚೆಂದ ಮೆಚ್ಚಿಕೊಳ್ಳಬೇಕು. ‘ಗೇಮ್ ಆಫ್ ಥ್ರೋನ್ಸ್‌’ ತರಹದ ಇಂಗ್ಲಿಷ್‌ ಸರಣಿಯ ತಾಂತ್ರಿಕತೆ, ವೇಗದ ಪರಿಣಾಮ ದೇಸಿ ಚಿತ್ರಗಳ ಮೇಲೂ ಆಗುತ್ತಿರುವುದಕ್ಕೆ ಇದು ಉದಾಹರಣೆ.

ಕೊರತೆಗಳ ನಡುವೆಯೂ ದೊಡ್ಡದೊಂದು ವಸ್ತುವನ್ನು ಮಣಿರತ್ನಂ ನಿಭಾಯಿಸಿರುವ ರೀತಿಯಲ್ಲಿ ಅಧ್ಯಯನಕ್ಕೆ ಯೋಗ್ಯವಾದ ಅನೇಕ ಸಂಗತಿಗಳಿವೆ. ಎ.ಆರ್. ರೆಹಮಾನ್ ಸ್ವರದ ಮೇಲಿನ ಹಿಡಿತ ಅಲ್ಲಲ್ಲಿ ಶ್ರಾವ್ಯವೆನಿಸಿದರೂ ಹಾಡುಗಳು ಎಲ್ಲೋ ಗಾಳಿಯಲ್ಲಿ ತೇಲಿಹೋದಂತೆ ಅನಿಸುತ್ತವೆ. ಕನ್ನಡಕ್ಕೆ ಡಬ್‌ ಮಾಡಿರುವ ರೀತಿ ಅಚ್ಚುಕಟ್ಟಾಗಿರುವುದೂ ಗಮನಾರ್ಹ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT