ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡವ್: ‘ಸುಪ್ರಿಂ’ ನಿಲುವಿಗೆ ಭಿನ್ನ ಪ್ರತಿಕ್ರಿಯೆ

Last Updated 29 ಜನವರಿ 2021, 11:08 IST
ಅಕ್ಷರ ಗಾತ್ರ

ಮುಂಬೈ: ಪರದೆ ಮೇಲಿನ ಕಾಲ್ಪನಿಕ ಪಾತ್ರಗಳಿಗಾಗಿ ಅವುಗಳನ್ನು ನಿಭಾಯಿಸಿದ ನಟರನ್ನೇ ಹೊಣೆಯಾಗಿಸುವುದು ಆತಂಕಕಾರಿ ಬೆಳವಣಿಗೆ ಎಂದು ಚಲನಚಿತ್ರ ಕ್ಷೇತ್ರದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ಕ್ರಮದಿಂದ ರಕ್ಷಣೆ ಕೋರಿದ್ದ ‘ತಾಂಡವ್‘ ಚಿತ್ರತಂಡದ ಮನವಿ ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ‘ಅನ್ಯರ ಭಾವನೆಗಳಿಗೆ ಧಕ್ಕೆತರುವ ಪಾತ್ರಗಳಲ್ಲಿ ನಟಿಸಬಾರದು‌’ ಎಂಬ ಅಭಿಪ್ರಾಯ ಕುರಿತಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಅಮೆಜಾನ್‌ ಪ್ರೈಂ ವಿಡಿಯೊದಲ್ಲಿನ ಈ ಸರಣಿ ಕುರಿತ ಸುಪ್ರೀಂ ಕೋರ್ಟ್ ಆದೇಶದ ಹಿಂದೆಯೇ, ಸರಣಿಯಲ್ಲಿನ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

ನಿರ್ದೇಶಕ ಹನ್ಸಲ್ ಮೆಹ್ತಾ, ಸಾಹಿತಿ ಪ್ರೀತಿಶ್ ನಂದಿ, ನಟರಾದ ಕೊಂಕಣ್‌ ಸೆನ್ ಶರ್ಮಾ, ಗುಲ್ಷನ್‌ ದೇವಯ್ಯ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಕಲೆ ಮತ್ತು ಕಲಾವಿದರ ನಡುವಣ ಗೆರೆ ಮುಸುಕಾಗಿದೆ. ಅದರ ಪರಿಣಾಮವೂ ಕಾಣಲಿದೆ. ಪರದೆಯ ಮೇಲಿನ ಪಾತ್ರಗಳಿಗಾಗಿ ಆಯಾ ನಟರನ್ನು ಹೊಣೆಯಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್, ನಟ ಮೊಹಮ್ಮದ್ ಜೀಷನ್‌ ಅಯ್ಯೂಬ್ ಮತ್ತು ಇತರರಿಗೆ ವಿವಿಧ ಎಫ್‌ಐಆರ್‌ಗೆ ಸಂಬಂಧಿಸಿದ ಯಾವುದೇ ಕ್ರಮ ಜರುಗಿಸುವ ಕುರಿತು ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿತ್ತು.

ಕಲಾವಿದನಿಗೆ ತನ್ನ ಪಾತ್ರದ ಮೇಲೆ ಅಥವಾ ತನ್ನ ಸಂಭಾಷಣೆಯ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದು ಅಯ್ಯೂಬ್‌ ಪರ ವಕೀಲ ವಾದಿಸಿದ್ದರು. ‘ಆದರೆ, ನೀವು ಕಥೆ ಓದದೇ ಪಾತ್ರ ಒಪ್ಪಲಾಗದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಪಾತ್ರಗಳಲ್ಲಿ ನಟಿಸಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಈ ಅಭಿಪ್ರಾಯವನ್ನು ಎಚ್ಚರಿಕೆ ಎಂದೇ ವಿಶ್ಲೇಷಿಸಿರುವ ಹಲವು ಪ್ರಮುಖರು, ವಿವಿಧ ಪಾತ್ರಗಳನ್ನು ನಿಭಾಯಿಸಬೇಕಾದ ನಟರಿಗೆ ಈ ಬೆಳವಣಿಗೆ ಕಾನೂನು ಸಮಸ್ಯೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಟಿ ಕೊಂಕಣ್‌ ಸೆನ್ ಶರ್ಮಾ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಚಿತ್ರತಂಡದ ಬಹುತೇಕ ಎಲ್ಲ ನಟರು, ಸಿಬ್ಬಂದಿ ಚಿತ್ರಕತೆ ಓದಿರುತ್ತಾರೆ. ಎಲ್ಲರನ್ನು ಬಂಧಿಸಲಿ ಎಂದು ಹೇಳಿದ್ದಾರೆ.

ಚಿತ್ರಸಾಹಿತಿ ಮಯೂರ್ ಪುರಿ ಅವರು, ಕಾಲ್ಪನಿಕ ಪಾತ್ರಗಳಿಗೆ ನಟರನ್ನು ಹೊಣೆಯಾಗಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇನ್ನು ಮುಂದೆ ನಾವು ಏನಿದ್ದೇವೆಯೋ ಅಂಥ ಪಾತ್ರಗಳನ್ನೇ ಮಾಡಬೇಕು. ನಿರ್ದೇಶಕರೇ, ಚಿತ್ರಸಾಹಿತಿಗಳೇ, ನಿರ್ಮಾಪಕರೇ ಇನ್ನು ನೀವು ಪಾತ್ರಕ್ಕೆ ಸೂಕ್ತವಾದ ನಟರನ್ನೇ ಆಯ್ಕೆ ಮಾಡಿ’ ಎಂದು ಪುರಿ ಸಲಹೆ ಮಾಡಿದ್ದಾರೆ.

‌ಸುಪ್ರೀಂ ಕೋರ್ಟ್‌ ಆದೇಶ ಹಲವು ನಟರನ್ನು ಗೊಂದಲಕ್ಕೀಡು ಮಾಡಿದೆ ಎಂದು ನಟ ಗುಲ್ಷನ್ ದೇವಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT