ಗುರುವಾರ , ಆಗಸ್ಟ್ 13, 2020
25 °C

ಆಟಿಸಂನಿಂದ ಮಾಡೆಲಿಂಗ್‌ವರೆಗೆ!

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಎರಡು ವರ್ಷದ ಮಗನಿಗೆ ಆಟಿಸಂ ಇದೆ ಎಂದು ಮನೋವೈದ್ಯರು ಹೇಳಿದಾಗ, ಆ ತಾಯಿಗೆ ಎದೆ ಬಿರಿದಂತಾಯಿತು. ಆದರೆ, ಆ ಸಂಕಟವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ, ಮಗನನ್ನು ಕಾಳಜಿಯಿಂದ ಬೆಳೆಸಿದರು. ಅವನಲ್ಲಿರುವ ರೂಪದರ್ಶಿಯಾಗುವ ಗುಣ ಗುರುತಿಸಿ, ತರಬೇತಿ ಕೊಡಿಸಿ, ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವಂತೆ ಮಾಡಿದರು. ತಾವೇ ತರಬೇತಿ ನೀಡಿದರು. ಪರಿಣಾಮ ಆಟಿಸಂನಿಂದ ಬಳಲುತ್ತಿದ್ದ ಮಗ ಈಗ ಮಾಡೆಲ್ ಆಗಿದ್ದಾರೆ!

ಹೌದು, ಡೆಹ್ರಾಡೂನ್‌ನ ಪ್ರಣವ್ ಬಕ್ಷಿ, ಇಂಥ ಆಟಿಸಂ ಅನ್ನೇ ಗೆದ್ದು, ಮಾಡೆಲ್‌ ಆಗಿದ್ದಾರೆ. ಬಣ್ಣ ಬಣ್ಣದ ಉಡುಗೆ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಅವರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ, ‘ತಾನೊಬ್ಬ ಮಾಡೆಲ್ ಆಗಬೇಕು’ ಎಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರಣವ್ ಅವರ ಮಾಡೆಲಿಂಗ್‌ ಫೋಟೊ ಇನ್ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಪ್ರಣವ್ ಹುಟ್ಟಿದ್ದು 2000ರಲ್ಲಿ. ಹಾಲುಗೆನ್ನೆಯ ಮುದ್ದು ಮಗುವನ್ನು ಹೆತ್ತ ಪೋಷಕರ ಆನಂದಕ್ಕೆ ಮಿತಿ ಇರಲಿಲ್ಲ. ಮಗ ಎರಡು ವರ್ಷದವನಿದ್ದಾಗ, ಆತನ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಗುರುತಿಸಿದರು ಪೋಷಕರು. ತಕ್ಷಣ ಮನೊವೈದ್ಯರ ಬಳಿ ತೋರಿಸಿದಾಗ ಆಟಿಸಂ ಸಮಸ್ಯೆ ಇರುವುದು ಗೊತ್ತಾಯಿತು. ಅಂದಿನಿಂದ ಅತಿ ಕಾಳಜಿ ವಹಿಸಿ ನೋಡಿಕೊಂಡರು.

ಒಂದು ದಿನ ಪ್ರಣವ್ ತಾಯಿ ಅನುಪಮಾ ಅವರು ಯಾವುದೋ ಮಾಲ್‌ ಹೋಗಿದ್ದರು. ಅಲ್ಲಿ ಮಕ್ಕಳಿಗಾಗಿ ರ‍್ಯಾಂಪ್ ವಾಕ್ ಏರ್ಪಡಿಸಲಾಗಿತ್ತು. ಝಗಮಗಿಸುವ ಬೆಳಕಿನ ಚಿತ್ತಾರ ಮತ್ತು ಆ ವಾತಾವರಣ ಪ್ರಣವ್‌ಗೆ ಹೊಸ ಲೋಕವನ್ನು ಪರಿಚಯಿಸಿತು. ತಾನೂ ಅವರಂತೆಯೇ ಅಂದವಾಗಿ ನಡೆಯಬೇಕು ಅಂದುಕೊಂಡು, ತಾಯಿ ಮುಂದೆ ನಡೆದು ತೋರಿಸಿದ. ಮಗನ ಆಸೆ ಗಮನಿಸಿದ ಅನುಪಮಾ ಅವರು ಮನೆಯಲ್ಲಿ ಅಂತಹ ವಾತಾವರಣ ಸೃಷ್ಟಿಸಿ ಪ್ರಣವ್‌ನನ್ನು ರ‍್ಯಾಂಪ್‌ ಮೇಲೆ ನಡೆಸಿದರು. ಆ ವಿಡಿಯೊವನ್ನು ಪದೇ ಪದೇ ಅವನಿಗೆ ತೋರಿಸುತ್ತಿದ್ದರೆ, ಪ್ರಣವ್ ಖುಷಿಯಿಂದ ಕೇಕೆ ಹಾಕುತ್ತಿದ್ದ. ಆಗಲೇ ಅವರು ಪ್ರಣವ್‌ನನ್ನು ಮಾಡೆಲ್ ಮಾಡಬೇಕು ಎಂದು ನಿರ್ಧರಿಸಿದರು.

ಮಗನಿಗೆ ತರಬೇತಿ ಕೊಡಿಸಿದರು. ನಂತರ ಹಲವು ಸಂಸ್ಥೆಗಳಿಗೆ ಪತ್ರ ಬರೆದು, ನನ್ನ ಮಗನಿಗೆ ಮಾಡೆಲಿಂಗ್‌ಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಎಲ್ಲಿಂದಲೂ ಪ್ರತಿಕ್ರಿಯೆ ಸಿಗಲಿಲ್ಲ. ಕೆಲವು ಸಂಸ್ಥೆಗಳಂತೂ ಅವಕಾಶ ಇಲ್ಲವೆಂದೇ ತಿಳಿಸಿದವು. ಆದರೂ ಅನುಪಮಾ ಪಟ್ಟು ಬಿಡದೆ ಪ್ರಯತ್ನ ಮುಂದುವರಿಸಿದರು.

ದೆಹಲಿಯಲ್ಲಿ ನಿಂಜಾಸ್‌ ಮಾಡೆಲಿಂಗ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿರುವ ನಿಂಜಾ ಸಿಂಗ್ ಅವರು ಪ್ರಣವ್ ಫೋಟೊಗಳನ್ನು ನೋಡಿ ಒಮ್ಮೆ ಭೇಟಿಯಾಗುವಂತೆ ಹೇಳಿದರು. ಹಲವು ಫೋಟೊ ಶೂಟ್‌ಗಳನ್ನು ನಡೆಸಿದರು. ನಂತರ ಪ್ರಣವ್‌ಗೆ
ಮಾಡೆಲಿಂಗ್ ಅವಕಾಶ ನೀಡಿದರು. ಈಗ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

‘ಪ್ರಣವ್‌ ಬಾಡಿ ಲಾಂಗ್ವೇಜ್‌ ಮಾಡೆಲಿಂಗ್‌ಗೆ ಒಪ್ಪುತ್ತದೆ. ನೋಡುವುದಕ್ಕೂ ಸ್ಫುರದ್ರೂಪಿ, ಹೀಗಾಗಿಯೇ ಪ್ರಣವ್‌ಗೆ ಅವಕಾಶ ನೀಡಿದೆ’ ಎನ್ನುತ್ತಾರೆ ನಿಂಜಾ ಸಿಂಗ್.

‘ಡೌನ್‌ಸಿಂಡ್ರೊಮ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ಸ್ಟುವರ್ಟ್‌ ಟರ್ನರಿಂಗ್ ನ್ಯೂಯಾರ್ಕ್‌ ಫ್ಯಾಷನ್ ವೀಕ್‌, ಪ್ಯಾರಿಸ್ ಫ್ಯಾಷನ್ ವೀಕ್, ಲಂಡನ್ ಫ್ಯಾಷನ್ ವೀಕ್ ಸೇರಿದಂತೆ ಹಲವು ಮಾಡೆಲಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಪ್ರಣವ್‌ನನ್ನು ನೋಡಿದಾಗ ಅವರೆಲ್ಲ ನನ್ನ ಕಣ್ಣೆದುರು ಬಂದರು. ಹೀಗಾಗಿ ಪ್ರಣವ್‌ಗೆ ಅವಕಾಶ ನೀಡಿದೆ’ ಎನ್ನುತ್ತಾರೆ ನಿಂಜಾ.

ವಿಟಿಲಿಗೊ (ತೊನ್ನು) ಸಮಸ್ಯೆಯಿಂದ ಬಳಲುತ್ತಿದ್ದ ವಿನ್ನಿ ಹ್ಯಾರ್ಲೊ ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಸೈ ಎನಿಸಿಕೊಂಡರು. ಪ್ರಣವ್ ದೇಶದ ಸೂಪರ್‌ ಮಾಡೆಲ್‌ಗಳಲ್ಲಿ ಒಬ್ಬನಾಗಿ ಗುರುತಿಸಿಕೊಳ್ಳಬೇಕು ಎಂಬ ಹಾರೈಕೆ ನಿಂಜಾ ಅವರದ್ದು.

ಪ್ರಸ್ತುತ ನಿಂಜಾ ಸಿಂಗ್‌ ಸಂಸ್ಥೆಯೊಂದಿಗೆ ಹಲವು ವಿದೇಶಿ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಪ್ರಣವ್ ಪ್ರತಿಷ್ಠಿತ ಯುಎಸ್ ಪೊಲೊ, ಯುನೈಟೆಡ್ ಕಲರ್ಸ್ ಆಫ್ ಬೆನಿಟಿನ್‌ನಂತ ಬ್ರಾಂಡೆಡ್ ದಿರಿಸುಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ತಾಯಿ ಮಗನನ್ನು ರೂಪದರ್ಶಿ ಮಾಡಬೇಕೆಂಬ ಕಂಡ ಕನಸು ನನಸಾಗಿದೆ.

**

ಕನಸು ನನಸಾಗಿಸಿಕೊಂಡಿದ್ದು...

ಸುಂದರ ರೂಪ, ನೀಳ ಕಾಯ, ಆಕರ್ಷಕ ಮೈಕಟ್ಟು ಹೊಂದಿದ್ದ ಪ್ರಣವ್‌ಗೆ ಶೇ 40ರಷ್ಟು ಆಟಿಸಂ ಲಕ್ಷಣಗಳಿವೆ ಎಂದು ವೈದ್ಯರು ದೃಢಪಡಿಸಿದ್ದರು. ಇದಲ್ಲದೇ ‘ಎಕೊಲಲಿಯಾ’ ಮತ್ತು ಉದ್ವೇಗ (ಆಂಕ್ಸೈಟಿ) ಎಂಬ ಮತ್ತೆರಡು ಮಾನಸಿಕ ಸಮಸ್ಯೆಗಳೂ ಕಾಡುತ್ತಿದ್ದವು. ಹೇಳಿದ ಮಾತುಗಳನ್ನೇ ಪದೇ ಪದೇ ಹೇಳುವುದು ಎಕೊಲಲಿಯಾ ಈ ರೋಗದ ಲಕ್ಷಣ. ಈ ಸಮಸ್ಯೆಗಳು ಕಾಡುತ್ತಿದ್ದರೂ ಮಾಡೆಲ್ ಆಗಬೇಕು ಎಂಬ ಬಯಕೆಯನ್ನು ಪ್ರಣವ್ ಸಾಕಾರಗೊಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು