ಭಾನುವಾರ, ಸೆಪ್ಟೆಂಬರ್ 26, 2021
21 °C
ಮಸೂದೆಯ ಕರಡು ಪ್ರಕಟ: ಜುಲೈ 2ರೊಳಗೆ ಆಕ್ಷೇಪ ಸಲ್ಲಿಕೆಗೆ ಅವಕಾಶ

ಸಿನಿಮಾಟೊಗ್ರಾಫ್‌ –1952ರ ಕಾಯ್ದೆ ತಿದ್ದುಪಡಿಗೆ ಪ್ರಸ್ತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಲನಚಿತ್ರ ವೀಕ್ಷಣೆಗೆ ವಯಸ್ಸಿನ ಪರಿಮಿತಿ, ಚಲನಚಿತ್ರವನ್ನು ನಕಲು ಅಥವಾ ಪೈರಸಿ ಮಾಡಿದವರಿಗೆ ಜೈಲುಶಿಕ್ಷೆ ಮತ್ತು ದಂಡ ವಿಧಿಸುವುದು ಹಾಗೂ ಈಗಾಗಲೇ ಪ್ರಮಾಣೀಕರಿಸಿದ ಚಿತ್ರಗಳನ್ನು ಪುನರ್ ಪರಿಶೀಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಿನಿಮಾಟೊಗ್ರಾಫ್ ಕಾಯ್ದೆ–1952 ತಿದ್ದುಪಡಿಗೆ ಮುಂದಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಿನಿಮಾಟೊಗ್ರಾಫ್ (ತಿದ್ದುಪಡಿ) ಕಾಯ್ದೆ 2021 ಮಸೂದೆಯ ಕರಡನ್ನು ಸಾರ್ವಜನಿಕ ವಲಯದಲ್ಲಿ ಹಾಕಿದ್ದು, ಜುಲೈ 2ರೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಕೋರಿದೆ.

ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳಲ್ಲಿ ‘ಸಾರ್ವಜನಿಕ ಪ್ರದರ್ಶನಕ್ಕೆ ನಿರ್ಬಂಧ ವಿಧಿಸದಿರುವುದು’ ಎನ್ನುವ ಅಂಶದ ಬಗ್ಗೆಯೂ ಚರ್ಚಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ ಯು/ಎ ವರ್ಗವನ್ನು (ಪೋಷಕರ ಮಾರ್ಗದರ್ಶನದಲ್ಲಿ) ಯು/ಎ 7+, ಯು/ಎ 13+ ಮತ್ತು ಯು/ಎ 16+ ಎಂದು ವಿಂಗಡಿಸಲಾಗಿದೆ.

ಪ್ರಸ್ತುತ ಯು/ಎ ವಿಭಾಗದಲ್ಲಿ ಸಾರ್ವಜನಿಕ ವೀಕ್ಷಣೆಗೆ ನಿಷೇಧವಲ್ಲದ ಚಲನಚಿತ್ರಗಳನ್ನು 12 ವರ್ಷ ವಯಸ್ಸಿನೊಳಗಿರುವ ಮಕ್ಕಳು ವೀಕ್ಷಿಸಲು ತಂದೆ–ತಾಯಿ ಇಲ್ಲವೇ ಪೋಷಕರ ಮಾರ್ಗದರ್ಶನದ ಅವಶ್ಯಕತೆ ಇದೆ.

ಹೊಸ ತಿದ್ದುಪಡಿ ಕಾಯ್ದೆಯು ಜಾರಿಗೆ ಬಂದಲ್ಲಿ. ಯು/ಎ ವಿಭಾಗದಲ್ಲಿ ಮೂರು ವಯೋಮಾನದ ವಿಭಾಗಗಳು ಇರಲಿವೆ. ಅಂತೆಯೇ, ಚಲನಚಿತ್ರಗಳನ್ನು ಪೈರಸಿ ಮಾಡುವವರಿಗೆ ಕನಿಷ್ಠ ಮೂರು ತಿಂಗಳಿನಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಈಗಾಗಲೇ ಪ್ರಮಾಣೀಕರಿಸಿದ ಚಲನಚಿತ್ರಗಳ ಬಗ್ಗೆ ದೂರು ಬಂದಲ್ಲಿ ಅಂಥ ಚಿತ್ರಗಳನ್ನು ಮರು ಪರಿಶೀಲಿಸುವಂಥ ಅಧಿಕಾರವನ್ನು ಸ್ಥಾಪಿಸಲು ಹೊಸ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸುವ ಕುರಿತು ಪ್ರಸ್ತಾಪಿಸಲಾಗಿದೆ.

ಆದರೆ, ಈಗಾಗಲೇ ಕರ್ನಾಟಕದ ಹೈಕೋರ್ಟ್‌ ಇಂಥ ನಿಬಂಧನೆಯನ್ನು ರದ್ದುಗೊಳಿಸಿದೆ. ಈಗಾಗಲೇ ಪ್ರಮಾಣೀಕರಿಸಲಾದ ಚಲನಚಿತ್ರವನ್ನು ಪರಿಷ್ಕರಿಸುವ ಅಧಿಕಾರ ಕೇಂದ್ರಕ್ಕಿಲ್ಲ ಎಂದು ಹೇಳಿದೆ. ಇದನ್ನು 2020ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಶಾಸಕಾಂಗವು ಸೂಕ್ತವಾದ ಶಾಸನವನ್ನು ಜಾರಿಗೆ ತರುವ ಮೂಲಕ ಈ ನಿಬಂಧನೆಯನ್ನು ರದ್ದುಗೊಳಿಸಬಹುದು ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು