ಗುರುವಾರ , ಏಪ್ರಿಲ್ 9, 2020
19 °C

ಮರೆಯಲಾಗದ ದಾಂಡೇಲಿ ಪ್ರವಾಸ

ವಿದ್ಯಾಶ್ರೀ ಗಾಣಿಗೇರ Updated:

ಅಕ್ಷರ ಗಾತ್ರ : | |

ದಾಂಡೇಲಿಗೆ ಹೋಗಿದ್ದಾಗಿನ ಪೋಟೊಗಳನ್ನು ಪರಿಚಿತರೊಬ್ಬರು  ಫೇಸ್‌ಬುಕ್‌ನಲ್ಲಿ ಹಾಕಿದ್ದರು.

ಸುಂದರವಾದ ಹತ್ತಾರು ಚಿತ್ರಗಳು. ಸಹಜವಾಗಿಯೇ ಕೇಳಿದ್ದೆ ಎಲ್ಲಿ,  ಕುಟುಂಬ ಕಾಣಿಸುತ್ತಿಲ್ಲಾ? ಎಂದು. ಅಷ್ಟೇ ಸಹಜವಾಗಿಯೇ ಅವರು, ಆಗಾಗ ಹೀಗೆ ಒಬ್ಬನೇ ಕೂಡಾ ಟೂರ್ ಹೊಡಿತೀನಿ ಎಂದು ತಣ್ಣಗೆ ಅಂದಾಗ ‘ಅಬ್ಬಾ ಗಂಡು ಜೀವವೇ! ನೀನೆ ಅದೃಷ್ಟ ಶಾಲಿ’ ಅನ್ನಿಸಿತು.

ಅಮ್ಮನಿಗೆ  ಹೇಳಿದೆ ನನಗೂ ಹಾಗೇ ಹೋಗಬೇಕೆನ್ನುವ ಆಸೆ, ಕೂಡಲೇ ಅಮ್ಮ, ‘ಬೇಡಮ್ಮಾ ನಮ್ಮ ಜನ ಸರಿಯಿಲ್ಲಾ. ಹೆಣ್ಣು ಮಕ್ಕಳು ಹಾಗೆಲ್ಲಾ ಹೋಗುವಂತಹ ವಾತಾವರಣವಿಲ್ಲ ನೋಡು’ ಎಂದಾಗ ಒಂದು ದೃಷ್ಟಿಯಿಂದ ಒಪ್ಪದೇ ಇರಲು ಸಾಧ್ಯವಾಗಲಿಲ್ಲ. 

‘ಪೀಕು’ ಹಿಂದಿ ಚಲನಚಿತ್ರ ನೋಡುವಾಗ ನಾಯಕಿಗೆ ನಾಯಕ ಹೇಳುವ ‘ಡ್ರೈವಿಂಗ್ ಲಿಬರೇಷನ್ ಎ ವುಮನ್’ ಮಾತು ಇದೇ ಜಾಯಮಾನದ್ದಿರಬಹುದು ಎಂದು ತಿಳಿದು ರಾತ್ರಿಯೆಲ್ಲಾ ಯೋಚನೆ ಮಾಡಿ ಏಕಾಂಗಿ ಪ್ರವಾಸ ಮಾಡಲೇಬೇಕೆಂದು ಪಣ ತೊಟ್ಟು ಮನೆಯಲ್ಲಿ  ಗೆಳತಿಯ ಮದುವೆ ಇದೆ ಎಂದು ಸುಳ್ಳು ಹೇಳಿ ಹೊರಟೆ.

ಒಂದು ಜೊತೆ ಬಟ್ಟೆ, ಫೋನ್, ದುಡ್ಡು, ನೀರಿನ ಬಾಟಲ್ ಮತ್ತು ಹಣ್ಣು–ಬಿಸ್ಕತ್‌  ಇಷ್ಟನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು  ವಿಜಯಪುರದಿಂದ  ಹೊರಟೆ. ದಾಂಡೇಲಿ ಬೆಳಗಾವಿ ಜಿಲ್ಲೆಯಲ್ಲಿದೆ ಎನ್ನುವುದಷ್ಟೇ ಗೊತ್ತಿತ್ತು. ಬೆಳಗಾವಿ ಬಸ್‌ಗೆ ಬೆಳಿಗ್ಗೆ 5ಕ್ಕೆ ಹೊರಟೆ. 

9ಗಂಟೆಗೆ ಬೆಳಗಾವಿ ಬಂದಿಳಿದೆ. ಮುಂದೆ ಬೆಳಗಾವಿಯಿಂದ ದಾಂಡೇಲಿಗೆ ಸುಮಾರು 86 ಕಿ.ಮೀ. ಇದ್ದು  ಅಲ್ಲಿಂದ ಮತ್ತೆ ದಾಂಡೇಲಿಗೆ ಬಸ್‌ನಲ್ಲಿ ಹೊರಟೆ. 11.30ಕ್ಕೆ ದಾಂಡೇಲಿಗೆ ತಲುಪಿದ ನಾನು ಹೊರಗೆ ಇಣುಕಿದಾಗ  ಎಲ್ಲಿ ನೋಡಿದರೂ ಹಸಿರು ಗುಡ್ಡ. ದಟ್ಟವಾದ ಅರಣ್ಯದ ಸುತ್ತಲೂ  ವನ ದೇವತೆ ಹಸಿರು ಸೀರೆ ಉಟ್ಟಂತೆ ಕಂಗೊಳಿಸುತ್ತಿದ್ದಳು. ಇದನ್ನು ಕಂಡ ನನ್ನ  ಮೈ ಒಂದು ಕ್ಷಣ ಪುಳಕಿತಗೊಂಡಿತು.

ಹಚ್ಚ ಹಸಿರಿನ ಒಡಲಲ್ಲಿ ಜಲಧಾರೆ. ಒಂದು ಕ್ಷಣ ಮೈ ಮರೆತು ನಿಂತೆ. ಅಲ್ಲಿಂದ ಘಾಟ್‌ನಲ್ಲಿ ಒಬ್ಬಳೇ ಹೊದಾಗ ಅದೆಂಥದ್ದೋ ಅನುಭವ. ಕಾಳಿನದಿಯಲ್ಲಿ ಕಾಯ್ ಕಿಂಗ್, ಕನೋಯಿಂಗ್ ಜಲಕ್ರೀಡೆಗಳಾಡಿದಾಗ  ಹಾಲಿವುಡ್‌ನಲ್ಲಿರುವಂತೆ ಭಾಸವಾಯಿತು. ಅಲ್ಲಿ  ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಹೋದೆ.

ಪಕ್ಷಿ ವೀಕ್ಷಣೆ, ಮೀನುಗಾರಿಕೆ, ಸೈಕಲ್ ಸವಾರಿ ಮತ್ತು  ಬೋಟಿಂಗ್ ಎಲ್ಲವೂ  ನನಗೆ ಹೊಸತಾಗಿದ್ದರಿಂದ ಮಜವಾಗಿತ್ತು. ಇಷ್ಟೆಲ್ಲಾ ಆದ ಮೇಲೆ ಹೊಟ್ಟೆ ಹಸಿಯಿತು. ತಿಂಡಿ ತಿಂದು ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ ಮತ್ತೆ ಪುನಃ ಹೊರಟೆ. ನೂರಾರು ರೀತಿಯ ಪಕ್ಷಿಗಳು ಕಂಡವು. ಜಿಂಕೆ, ಆನೆಗಳನ್ನು ನೋಡಿ ಅಲ್ಲಿಂದ ದಾಂಡೇಲಿ ಸಮೀಪದ ಉಳವಿಗೆ ಹೊರಟು ಅಲ್ಲಿ ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್ ಗುಹೆಗಳನ್ನು ನೋಡಿದೆ. ಅಲ್ಲಿ ಸಾಕಷ್ಟು ಬಾವಲಿಗಳು, ಕತ್ತಲು ಪ್ರದೇಶ ಒಂದು ರೀತಿ ದೊಡ್ಡ ಸಾಹಸಕ್ಕೆ ಇಳಿದ ಅನುಭವ.

ಒಂದು ದಿನ ಹೇಗೆ ಕಳೆಯಿತೊ ಗೊತ್ತಿಲ್ಲ. ಏನೋ ಸಂತಸ ಯಾವುದೋ ಸವಾಲಿಗೆ ಉತ್ತರ ಕೊಟ್ಟ ಹಾಗೆ. ಸಾಹಸದಲ್ಲಿ ವಿಜಯ ಪತಾಕೆ ಹಾರಿಸಿದ ಅನುಭವ, ಹೊಸ ಜನರನ್ನು ಭೇಟಿಯಾಗಿದ್ದು,  ಹೆಚ್ಚು ವಿಶ್ವಾಸ ಹೊಂದಿದ್ದು, ಮನಸ್ಸಿಗೆ ನೆಮ್ಮದಿ, ಶಾಂತಿ, ಆತ್ಮಸ್ಥೈರ್ಯ ಎಲ್ಲವು ಆ ದಿನ ಒಟ್ಟಾಗಿದ್ದವು.

ರಾತ್ರಿ 8 ಗಂಟೆಗೆ ಅಲ್ಲಿ ಹೊರಟ ನಾನು ಇನ್ನೇನು ಮನೆ ತಲುಪಲು ಅರ್ಧ ಗಂಟೆ ಇತ್ತು ಅಷ್ಟರಲ್ಲಿ ರಸ್ತೆಯಲ್ಲಿ ಅಪಘಾತವಾಗಿದ್ದರಿಂದ ಟ್ರಾಫಿಕ್ ಜಾಮ್ ಆಗಿಬಿಟ್ಟಿತ್ತು. ಅಲ್ಲಿ  ಸುಮಾರು 3 ಗಂಟೆಗಳ ಕಾಲ ಬಸ್‌ನಲ್ಲಿ ಕೂಡಬೇಕಾಯಿತು. ಅಮ್ಮ ಪೋನ್ ಮೇಲೆ ಫೋನ್ ಮಾಡುತ್ತಿದ್ದರು.

ಮನೆಗೆ ಬರುವಷ್ಟರಲ್ಲಿ ಬೆಳಗಿನ ಜಾವ 4  ಗಂಟೆ ಆಗಿಬಿಟ್ಟಿತ್ತು. ಇಡೀ ದಿನ ಸುತ್ತಾಡಿದ್ದರಿಂದ ಬೇಗನೆ ಕಣ್ಣು ಮುಚ್ಚಿ ಮಲಗಿದೆ. ಸಂಜೆ  ಎದ್ದು ಹೊರಗಡೆ ಹೊದಾಗ  ಗೆಳತಿಯರು ಸಿಕ್ಕರು ಅವರ ಜೊತೆ ನನ್ನ ಅನುಭವ ಹಂಚಿಕೊಂಡೆ ಅವರಿಗೂ ಹೇಳಿದೆ ಏಕಾಂಗಿ  ಪ್ರವಾಸ  ಒಮ್ಮೆ ಮಾಡಿ ನೋಡಿ ಅಂತಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)