ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಡು ಹಾಡಾಗುತ್ತ... ಹಾಡು ತಾನಾಗುತ್ತ

Last Updated 6 ಜುಲೈ 2020, 19:30 IST
ಅಕ್ಷರ ಗಾತ್ರ

‌ಬಿಳಿಯಂಗಿ, ಬಿಳಿ ಪೈಜಾಮಾ ಧರಿಸಿ ಬಂದ ಆ ತಂಡ, ನೀಲಿ ಬಣ್ಣದ ಕುರ್ತಾ ಧರಿಸಿದರು. ಹಳದಿ ಬಣ್ಣದ ಪೇಟ ಸುತ್ತಿಕೊಂಡರು. ನೋಡನೋಡುತ್ತಿದ್ದಂತೆ ಕೊರಳಿಗೆ ಕನ್ನಡಮ್ಮನ ಧ್ವಜದ ಪಟ್ಟಿಯೂ ಬಂದಿತು. ತಾಳ ಹಿಡಿದರಿಬ್ಬರು, ಡೋಲು ಸಿದ್ಧಪಡಿಸಿದರಿಬ್ಬರು. ಒಬ್ಬರು ದುಡಿಯನ್ನು, ಇನ್ನೊಬ್ಬರು ಚಪ್ಪಾಳೆ ತಟ್ಟಲು ಸಿದ್ಧರಾದರು. ಹತ್ನಿಮಿಷದಲ್ಲಿ ಇಡೀ ತಂಡ ಸಿದ್ಧವಾಯಿತು.

ತಂಡದ ನಾಯಕರು ಇಮಾಮ್‌ ಸಾಬ್‌ ವಲ್ಲೇಪುರ, ಅವರ ಹಾಡಿಗೆ, ತಾಳಹಾಕುತ್ತಲೇ ಹೋಯ್‌ ಹೋಯ್‌ ಅಂತ ಜೋಷ್‌ ತುಂಬುವ ರಾಜಾಸಾಬ ಚೌಕದಾರ, ಚಪ್ಪಾಳೆ ತಟ್ಟುತ್ತ ಧ್ವನಿಗೂಡಿಸುವ ಅಬ್ದುಲ್‌ ಖಾದರ್ ಸಾಬ್‌ ರಾಮದುರ್ಗ. ದುಡಿ ಬಾರಿಸುವ ಮೀರಾಬಾಯಿ ಬೀರಣ್ಣವರ; ಹೌದು.. ಅದ್ಹೆಂಗ.. ಅಗ್ದಿ ಖರೆ ಅಂತ ಧ್ವನಿಗೂಡಿಸುವ ದಾವಲಸಾಬ್‌ ವಲ್ಲೆಪ್ಪನವರ, ಡೊಳ್ಳು ಬಾರಿಸುವ ದ್ಯಾಮಪ್ಪ ಕರಿಯಪ್ಪ ಪೂಜಾರ ಇಡೀ ವಾತಾವರಣದಲ್ಲಿ ತಾಳಗಳ ನಾದ ಹರಡಿದರು. ನರನಾಡಿಗಳಲ್ಲಿ ಇವು ಭಾವತರಂಗವನ್ನು ಹರಡುತ್ತಿದ್ದವು. ಡೋಲಿನ ಬಡಿತವಂತೂ ನಮ್ಮ ಆಂತರ್ಯವನ್ನೇ ಸೀಳುವಂತಿತ್ತು.

‘ತಾಯ್ನಾಡಿನ ಋಣತೀರಿಸಬೇಕು. ಭಾರತಮಾತೆಗೆ ಏನಾದರೂ ಆದ್ರ ಒಗ್ಗಟ್ಟಿಲೆ ಹೋರಾಡೂನು.. ಕನ್ನಡತಾಯಿ ಹೊಟ್ಯಾಗ ಮತ್ತ ಹುಟ್ಟಿ ಬರೂನಂತ’ ಅಂತ ಕೆಚ್ಚೆದೆಯ ಹಾಡಿಗೆ ಹಿಮ್ಮೇಳದಲ್ಲಿ ಹೌದು... ಖರೇನೆ ಎಂದು ಜೋಷ್‌ ತುಂಬುತ್ತಿದ್ದರು.

‘ನಿನ್ನ ಹಡಿವಾಗ ಚೀರುವ ಅವ್ವನ ಆ ಅನ್ನುವ ನರಳುವುದರ ಋಣ ತೀರಿಸಲಾರೆ ನೀ.. ಆ ಋಣ ತೀರಿಸಬೇಕಂದ್ರ ಪ್ರೀತಿಲೆ ಇರಬೇಕು ನೀ... ಅಣ್ಣಾತಮ್ಮಂದಿರಹಂಗ ಇರಬೇಕು ನೀ’ ತಾಯ್ನೆಲದ ನಂತರ ತಾಯ್ತನದ ಋಣ ತೀರಿಸುವ ಬಗೆ ಹೇಳಿದರು ಇಮಾಮ್‌ ಸಾಬ್‌ ಅವರು.

ಅದೆಂಥ ಮೋಡಿಯೋ ಆ ಹಿಮ್ಮೇಳದ್ದು.. ಕಾಲ್ಬೆರಳು ಹೆಜ್ಜೆ ಹಾಕುವಂತೆ ಮಾಡುತ್ತಿದ್ದವು. ಆಷಾಢದ ಗಾಳಿಗೆ ತೆಂಗಿನಮರ ತೂಗಿದಂತೆ ತಲೆತೂಗುತ್ತಿದ್ದವು.

ಹೀಗೆ ಕೇಳುಗರ ಆಂತರ್ಯವನ್ನೇ ಪ್ರವೇಶಿಸುವ ಧ್ವನಿಗೆ.. ಒಳಧ್ವನಿಯು ಪ್ರಶ್ನಿಸುವಂತೆ ಇಮಾಮ್‌ ಸಾಬರಿಗೆ ದಾವಲ್‌ಸಾಬರ ಪ್ರಶ್ನಿಸುತ್ತಿದ್ದರು. ಬೌದ್ಧಿಕ ಬದುಕಿನ ಪ್ರಶ್ನೆಗಳು, ಭೌತಿಕ ಲೋಕದ ಸಮಸ್ಯೆಗಳು, ಆಧ್ಯಾತ್ಮಿಕ ಉತ್ತರಗಳ ಸಂವಾದ ನಮ್ಮೊಳಗಿನ ಲೋಕವನ್ನೇ ಅನಾವರಣಗೊಳಿಸುತ್ತಿತ್ತು.

ಜಾತಿಜಾತಿಯಂತ ಜಗಳಾಡತಾರ... ಹಾಡು ಮನುಷ್ಯನ ಸಣ್ಣತನವನ್ನು ಪ್ರದರ್ಶಿಸುತ್ತಲೇ ಜಾತಿಯಿಲ್ಲದೇ ವೃತ್ತಿಗಳು ನಮ್ಮ ಬದುಕನ್ನು ರೂಪಿಸಿರುವುದು ಹೇಳಿತು. ಕೊನೆಯ ಹಾಡು.. ನಾನಾರೆಂಬುದು ನಾನಲ್ಲ... ಶಿಶುನಾಳಧೀಷರ ತತ್ವಪದ ಈ ಹಾಡುಗಳ ಹಿನ್ನೆಲೆಯಲ್ಲಿ ಮೂಡಿ ಬಂತು. ಕೊನೆಗೆ ಆ ಪ್ರಶ್ನೆಯ ಗುಂಗಿಹುಳು, ನಮ್ಮೊಳಗೆ ಹೊಕ್ಕು ನಾನಾರೆಂಬುವ ಪ್ರಶ್ನೆಗೆ ಉತ್ತರ ಹುಡುಕುವಂತೆ ಮಾಡಿತು.

ಇಮಾಮ್‌ಸಾಬ್‌ ವಲ್ಲೇಪುರ ಅವರ ತಂಡ ‘ಪ್ರಜಾವಾಣಿ’ ಕಚೇರಿಯಿಂದ ಬೀಳ್ಕೊಡುವಾಗ ಆಚೆ ಸೋನೆ ಮಳೆ. ಇವರ ನಾದನದಿ ಹೃದಯ ತಂಪಾಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT