ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಜಪೇಯಿ ಸಂದರ್ಶನ: ಸೀಕ್ರೆಟ್ಸ್‌ ಸಾಕ್ಷ್ಯಸರಣಿಯ ‘ಕೊಹಿನೂರ್’ ರಹಸ್ಯ ಭೇದಿಸುತ್ತಾ!

Last Updated 30 ಜುಲೈ 2022, 4:18 IST
ಅಕ್ಷರ ಗಾತ್ರ

ಡಿಸ್ಕವರಿ ಪ್ಲಸ್‌ನ ‘ಸೀಕ್ರೆಟ್ಸ್‌’ ಸಾಕ್ಷ್ಯಸರಣಿಯ ಎರಡನೇ ಚಾಪ್ಟರ್‌ನಲ್ಲಿ ವಿಶ್ವದ ಅತಿ ದೊಡ್ಡ ವಜ್ರ ‘ಕೊಹಿನೂರ್‌’ ಹಿಂದಿರುವ ರಹಸ್ಯವನ್ನು ಬಿಚ್ಚಿಡಲು ನಟ ಮನೋಜ್‌ ಬಾಜಪೇಯಿ ಆಗಮಿಸುತ್ತಿದ್ದಾರೆ. ಆ.4ರಂದು ಈ ಸಾಕ್ಷ್ಯಸರಣಿ ಬಿಡುಗಡೆಯಾಗುತ್ತಿದೆ.

ಕೊಹಿನೂರ್‌ ಕಥೆಯನ್ನು ಹೇಳುವ ಉದ್ದೇಶ?
ಕೊಹಿನೂರ್‌ ಎನ್ನುವುದು ಭಾರತದ ಸಂಸ್ಕೃತಿಯ ಇತಿಹಾಸದ ಭಾಗ. ಇದರ ಕಥೆ ನಮ್ಮ ಜೀವನದ ಭಾಗವಾಗಿದೆ. ಭಾವನಾತ್ಮಕ ಸಂಬಂಧವೂ ಇದೆ. ಹೀಗಾಗಿ ಸಂಶೋಧನೆಗೆ ಬಹಳ ಆಕರ್ಷಕವಾದ ವಿಷಯವಿದು. ಪ್ರತಿಯೊಬ್ಬರೂ ಈ ವಜ್ರದ ಹಿಂದಿನ ಕಥೆಯನ್ನು ತಿಳಿದುಕೊಳ್ಳಬೇಕು. ಇದರಲ್ಲಿ ಡ್ರಾಮವೂ ಇದೆ. ಈ ಹಿಂದೆ ತೆರೆಕಂಡಿದ್ದ ‘ಸೀಕ್ರೆಟ್ಸ್‌ ಆಫ್‌ ಸಿನೌಲಿ’ಗಿಂತ ‘ಸೀಕ್ರೆಟ್ಸ್‌ ಆಫ್‌ ಕೊಹಿನೂರ್‌’ ವಿಷಯದಲ್ಲಿ ಹಾಗೂ ನಿರೂಪಣೆಯಲ್ಲೂ ಭಿನ್ನ. ಇದೊಂದು ಸಾಕ್ಷ್ಯಚಿತ್ರ. ಇಂಥ ವಿಷಯವಿರುವಾಗ ಯಾವುದೇ ಭಾವನೆಗಳನ್ನು ತುಂಬದೆ ನಾನು ನಿರೂಪಣೆ ಮಾಡಿದರೆ, ಪ್ರೇಕ್ಷಕನಿಗೂ ಹಿಡಿಸುವುದಿಲ್ಲ. ಜೊತೆಗೆ ಸ್ವಾರಸ್ಯವೂ ಇರುವುದಿಲ್ಲ. ಹಾಗೆಂದ ಮಾತ್ರಕ್ಕೆ ಡ್ರಾಮ ಎಂಬುವುದೂ ಅಧಿಕವಾಗಬಾರದು, ಸಾಕ್ಷ್ಯಚಿತ್ರದ ಘನತೆಯೂ ಇಳಿಯಬಾರದು. ಇಂಥ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಹೆಚ್ಚುತ್ತದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಕಥೆ ಹೇಳಿದ್ದೇನೆ.

ನಟನಾಗಿ ನಿರೂಪಣೆಯ ಸವಾಲು ಏನೇನಿತ್ತು?
ಈ ವಜ್ರಕ್ಕೆ ಕೊಹಿನೂರ್‌(ಪ್ರಭಾ ಪರ್ವತ) ಎಂಬ ಹೆಸರು ಹೇಗೆ ಬಂತು ಎನ್ನುವುದರಿಂದ ಹಿಡಿದು ಪ್ರತಿಯೊಂದು ವಿಷಯವೂ ನನಗೆ ಹೊಸದಾಗಿಯೇ ಇತ್ತು. ನಿರೂಪಣೆ ಜೊತೆಗೆ ಜ್ಞಾನವೂ ಸಿಕ್ಕಿತು. ನಾನು ಇತಿಹಾಸದ ವಿದ್ಯಾರ್ಥಿ. ಆದರೆ, ಇಷ್ಟವಿದ್ದು ಈ ಪದವಿಗೆ ಸೇರಿದವನಲ್ಲ. ಇತಿಹಾಸದ ಕಥೆಯನ್ನು ನಿರೂಪಣೆ ಮಾಡುವುದು ಸುಲಭ. ಆದರೆ ಕಲಿಕೆ ಬಹಳ ಕಷ್ಟ. ನನಗೆ ಎಲ್ಲ ರೀತಿಯ ದುಃಸ್ವಪ್ನಗಳನ್ನು ಈ ವಿಷಯ ನೀಡಿತ್ತು. ಹಲವು ದಿನಗಳನ್ನು ನೆನಪಿಡಬೇಕಿತ್ತು. ಎಲ್ಲರೂ ಯುಪಿಎಸ್ಸಿಗೆ ಸಿದ್ಧತೆ ನಡೆಸಲು, ಐಎಎಸ್‌ ಅಧಿಕಾರಿಗಳಾಗಲು ಇತಿಹಾಸದ ವಿಷಯ ಓದುತ್ತಿದ್ದರೆ, ನಾನೊಬ್ಬನೇ ನಟನಾಗಲು ಈ ವಿಷಯ ಓದಿದ್ದೆ.

ಒಂದು ಶೈಕ್ಷಣಿಕ ವಿಷಯವನ್ನು ಮನರಂಜನೆಯ ಕಥೆಯಾಗಿ ನಿರೂಪಿಸುವುದು ಅತಿ ದೊಡ್ಡ ಸವಾಲಾಗಿತ್ತು. ಕೊಹಿನೂರ್‌ ಎಂಬ ಕಥೆಯಲ್ಲೇ ಭಾವನೆಗಳಿವೆ. ನಿರ್ದೇಶಕ ರಾಘವ್‌, ಶೈಕ್ಷಣಿಕ ಮಾಹಿತಿ ನೀಡುವ ರೋಮಾಂಚನಕಾರಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ನಿರ್ದೇಶಕರ ಕೈಯಲ್ಲಿರುವ ಬೊಂಬೆಯಷ್ಟೇ. ಕೊಹಿನೂರ್‌ ಎಂಬ ವಜ್ರವನ್ನು ತನ್ನದಾಗಿಸಿಕೊಳ್ಳಲು ಹಲವರು ಪ್ರಯತ್ನಿಸಿದರು, ಯುದ್ಧಗಳೇ ನಡೆದವು ಎನ್ನುವುದೇ ಆಕರ್ಷಣೆಯ ವಿಷಯವಲ್ಲವೇ. ಹಲವು ಆಸಕ್ತಿಕರ ವಿಷಯಗಳು ಈ ವಜ್ರದ ಸುತ್ತ ಇವೆ. ಇವೆಲ್ಲವೂ ಈ ಸರಣಿಯಲ್ಲಿ ಅನಾವರಣಗೊಂಡಿದೆ. ‘I just hope that it comes back’ ಎಂದಷ್ಟೇ ಹೇಳಬಯಸುತ್ತೇನೆ.

ಕೊಹಿನೂರ್‌ ಸಾಕ್ಷ್ಯಸರಣಿಯ ವಿಶೇಷತೆಗಳೇನು?
ಈ ವಜ್ರದ ಮೂಲದಿಂದ ಹಿಡಿದು ಒಡೆತನದ ಬಗ್ಗೆ ಹಲವು ದಶಕದಿಂದ ಚರ್ಚೆ ನಡೆಯುತ್ತಲೇ ಇದೆ. ಈ ಅಂಶದ ಕುರಿತು ವಿವರಣೆಯೊಂದಿಗೆ, ಹೇಗೆ ಕೊಹಿನೂರ್‌ನ ಮೂಲ ವಿನ್ಯಾಸ ಬದಲಾಯಿತು, ವಜ್ರದ ಗಾತ್ರ ಹೇಗೆ 6 ಪಟ್ಟು ಕಮ್ಮಿಯಾಯಿತು? ಇತಿಹಾಸದಲ್ಲಿ ಉಲ್ಲೇಖಿಸಿದ್ದ ಮೂಲ ವಜ್ರ ಇದುವೇ? ಎಂಬ ಕುರಿತು ಆಸಕ್ತಿಯುಳ್ಳ ಮಾಹಿತಿ ಇದೆ. ಸಂಸದ, ಲೇಖಕ ಶಶಿ ತರೂರ್‌, ಖ್ಯಾತ ಪುರಾತತ್ತ್ವಜ್ಞ ಕೆ.ಕೆ. ಮುಹಮ್ಮದ್‌ ಸೇರಿದಂತೆ ಹಲವರ ಅಭಿಪ್ರಾಯಗಳೂ ಇಲ್ಲಿವೆ.

ಕೊಹಿನೂರ್‌ ವಜ್ರವನ್ನು ತಮ್ಮದಾಗಿಸಿಕೊಳ್ಳಲು ಬಯಸಿದ ರಾಜರ ಕಥೆಯ ಜೊತೆಗೆ ವಜ್ರದ ಬಗ್ಗೆ ಇದುವರೆಗೆ ಬಹಿರಂಗಗೊಳ್ಳದ ಕೆಲ ರಹಸ್ಯಗಳೂ ಇಲ್ಲಿವೆ.

‘ಭಾರತೀಯ ಚಿತ್ರರಂಗದ ಗೆಲುವು’
ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವುದರ ಕುರಿತು ಮಾತಿಗಿಳಿದ ಮನೋಜ್‌ ಬಾಜಪೇಯಿ, ‘ನಾನು ಇಡೀ ಭಾರತೀಯ ಚಿತ್ರರಂಗವನ್ನು ಒಂದಾಗಿ ನೋಡುತ್ತೇನೆ. ಯಾರು ಪ್ರಬಲವಾಗಿದ್ದಾರೆ, ಯಾರಿಲ್ಲ ಎಂಬ ವಿಂಗಡಣೆ ಮಾಡುವುದಿಲ್ಲ. ನಾನು ತೆಲುಗು, ತಮಿಳು ಸಿನಿಮಾದಲ್ಲೂ ನಟಿಸಿದ್ದೇನೆ. ನಾನು ಮನಸ್ಸಿನಲ್ಲೆಂದೂ ಇಂಡಸ್ಟ್ರಿಯ ನಡುವೆ ಭೇದ ಮಾಡಿಲ್ಲ, ಮಾಡುವುದೂ ಇಲ್ಲ. ದಕ್ಷಿಣ ಭಾರತದ ಸಿನಿಮಾಗಳು ಇಂದು ವಿಶ್ವದೆಲ್ಲೆಡೆ ರಾರಾಜಿಸುತ್ತಿವೆ ಎಂದರೆ, ಅದು ಭಾರತದ ಸಿನಿಮಾ. ನಾನು ಈ ರೀತಿ ನೋಡಬಯಸುತ್ತೇನೆ. ಎಲ್ಲ ಚಿತ್ರರಂಗದಲ್ಲೂ ನನಗೆ ಗೆಳೆಯರಿದ್ದಾರೆ. ಬೆಂಗಳೂರಿನಲ್ಲೂ ಇದ್ದಾರೆ. ಚೆನ್ನೈನಲ್ಲಿ ವಿಜಯ್‌ ಸೇತುಪತಿ, ವಿಕ್ರಮ್‌ ನನ್ನ ಗೆಳೆಯರು. ಯಾವುದೇ ಭಾಗದ ಒಂದು ಸಿನಿಮಾದ ಯಶಸ್ಸನ್ನು ನಾನು ಒಬ್ಬ ಕಲಾವಿದನಾಗಿ, ಭಾರತೀಯ ಚಿತ್ರರಂಗದ ಗೆಲುವಾಗಿ ನೋಡುತ್ತೇನೆ. ಇದನ್ನು ಹೊರತುಪಡಿಸಿಯೂ, ದಕ್ಷಿಣ ಭಾರತದ ಸಿನಿಮಾಗಳು ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಸಿನಿಮಾ ಕಥೆಗಳು ಭಾರತದ ಮಣ್ಣಿಗೆ ಹತ್ತಿರವಾಗಿರಬೇಕು. ನಮ್ಮ ಸಂಸ್ಕೃತಿಯ ಬೇರಿಗೆ ಅಂಟಿಕೊಂಡಿರಬೇಕು’ ಎಂದರು.

‘ಸ್ಯಾಂಡಲ್‌ವುಡ್‌ನಿಂದಲೂ ನನಗೆ ಆಫರ್‌ಗಳು ಬಂದಿದ್ದವು, ಆದರೆ ಕಥೆ ನನಗೆ ಹಿಡಿಸದ ಕಾರಣ ಒಪ್ಪಿಕೊಂಡಿರಲಿಲ್ಲ. ಅದ್ಭುತವಾದ, ಆಕರ್ಷಕ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲೂ ನಟಿಸುವೆ’ ಎನ್ನುತ್ತಾರೆ ಮನೋಜ್‌.

*

ಸಾಕ್ಷ್ಯಚಿತ್ರ ತಂಡವು ಇತಿಹಾಸ ತಜ್ಞರು, ಪ್ರಾಧ್ಯಾಪಕರು, ಲೇಖಕರ ಜೊತೆ ಚರ್ಚಿಸಿ ಇದನ್ನು ಪ್ರಸ್ತುತಪಡಿಸಿದೆ. ಲಾಹೋರ್‌ ಒಪ್ಪಂದವನ್ನೂ ಅಧ್ಯಯನ ನಡೆಸುವ ಅವಕಾಶ ನಮಗೆ ಸಿಕ್ಕಿತ್ತು. ಇತಿಹಾಸದಲ್ಲಿ ಹಲವು ಆಯಾಮಗಳು ಖಂಡಿತವಾಗಿಯೂ ಇರುತ್ತವೆ. ಇದು ಸಹಜ. ನಮಗೆ ಯಾವುದು ವಿಶ್ವಾಸಾರ್ಹ ಎಂದೆನಿಸಿತೋ ಅದನ್ನು ನಾವು ಪ್ರೇಕ್ಷಕರ ಎದುರಿಗಿರಿಸಿದ್ದೇವೆ. ಸಾವಿರ ವರ್ಷಗಳ ಇತಿಹಾಸವನ್ನು ಎರಡು ಕಂತುಗಳಲ್ಲಿ ಕೇವಲ 90 ನಿಮಿಷದಲ್ಲಿ ಹೇಳುವಾಗ ಖಂಡಿತವಾಗಿಯೂ ಕೆಲವು ವಿಷಯಗಳು ಬಿಟ್ಟುಹೋಗಿರಬಹುದು. ಒಟ್ಟಿನಲ್ಲಿ ಇದು ಕೊಹಿನೂರ್‌ ವಜ್ರದ ಪಯಣ.
–ರಾಘವ್‌ ಜೈರಾತ್‌, ನಿರ್ದೇಶಕ.

*

ಡಿಸ್ಕವರಿ ಪ್ಲಸ್‌ನಲ್ಲಿ ‘ಸೀಕ್ರೆಟ್ಸ್‌’ ಸಾಕ್ಷ್ಯಸರಣಿ ಮುಂದುವರಿಯಲಿದೆ. ಮತ್ತಷ್ಟು ಆಕರ್ಷಕ ಕಥೆಗಳನ್ನು ಹೊತ್ತು ತಂಡ ಮರಳಲಿದೆ.
–ಸಾಯಿ ಅಭಿಷೇಕ್‌, ಡಿಸ್ಕವರಿ ದಕ್ಷಿಣ ಏಷ್ಯಾದ ಫ್ಯಾಕ್ಚುವಲ್ ಮತ್ತು ಲೈಫ್‌ಸ್ಟೈಲ್ ಕ್ಲಸ್ಟರ್‌ ಮುಖ್ಯಸ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT