ಗುರುವಾರ , ಏಪ್ರಿಲ್ 9, 2020
19 °C

ಓದುಗರ ಬರಹ: ಜೋಗದ ಜಲಧಾರೆಯಲ್ಲಿ ಮೀಯುತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕಾಂಗಿ ಪ್ರವಾಸ

ಒಬ್ಬಂಟಿಯಾಗಿರುವುದು ನನಗೆ ಎಲ್ಲರ ಮಧ್ಯೆ ಇರುವಷ್ಟೇ ಖುಷಿಯ ವಿಚಾರ. ಸುಮಾರು ವರ್ಷಗಳು ಓದು ಮತ್ತು ವೃತ್ತಿಯ ಕಾರಣಗಳಿಂದ ರೂಮು ಮಾಡಿ, ಒಬ್ಬಂಟಿಯಾಗಿಯೇ ಇದ್ದಿದ್ದರಿಂದ ಏಕಾಂಗಿತನವೇ ನನಗಿಷ್ಟ. ಈ ಏಕಾಂಗಿತನವೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಗೀಳಿಗೆ ಹಚ್ಚಿದ್ದೂ ಹೌದು. ಹೀಗಾಗಿ ಕೆಲವೊಮ್ಮೆ ಏಕಾಂಗಿಯಾಗಿಯೇ ನನಗಿಷ್ಟವಾದ ಪ್ರವಾಸೀ ತಾಣಕ್ಕೆ ಹೊರಟುಬಿಡುತ್ತಿದ್ದೆ.

ಕೆಲವು ವರ್ಷಗಳ ಹಿಂದೆಯೂ ಕೂಡಾ ಒಮ್ಮೆ ಏಕಾಂಗಿಯಾಗಿಯೇ ನಾನು ಪ್ರವಾಸ ಕೈಗೊಂಡು, ಅದ್ಭುತ ಅನ್ನುವಂತಹ ಅನುಭವ ಪಡೆದದ್ದು, ವಿಶ್ವವಿಖ್ಯಾತ ಜೋಗಜಲಪಾತಕ್ಕೆ ಹೋದಾಗ.

ಬಸ್ಸಿನಲ್ಲಿ ಹತ್ತಿದ ನಾನು ಸಾಗರದಿಂದ ಹೊರಟ ಮೇಲೆ ತಾಳಗುಪ್ಪ ದಾಟಿದ ಮೇಲೆ ದಟ್ಟವಾಗುತ್ತಾ ಸಾಗುವ ಕಾಡಿನ ಮಧ್ಯದ ರಸ್ತೆಯಲ್ಲಿ ಕಳೆದುಹೋದೆ. ನಾನು ಮಲೆನಾಡಿನಲ್ಲಿಯೇ ಹುಟ್ಟಿದರೂ ಸಾಗರದಿಂದ ಮುಂದುವರಿದಂತೆ ಮಲೆನಾಡಿನ ಕಾಡಿನ ದಟ್ಟತೆ ತುಂಬಾ ಹೆಚ್ಚು. ಕಾಡಿನ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದುವರಿಯುತ್ತಿದ್ದಂತೆ ಜೋಗಜಲಪಾತವೆಂಬ ಭೂಲೋಕದ ಸ್ವರ್ಗಕ್ಕೆ ತಲುಪಿಯಾಯಿತು. ಆ ಬೆಟ್ಟದಿಂದ ನಾಲ್ಕು ಸೀಳುಸೀಳಾಗಿ, ರಾಜ, ರಾಣಿ, ರೋರಲ್, ರಾಕೆಟ್‌ಗಳಾಗಿ ಧುಮುಕುವ ಭರ್ಜರಿ ಜಲಪಾತವನ್ನು ಮನದಣಿಯೇ ವೀಕ್ಷಿಸಿ, ಅವುಗಳು ಬೀಳುವ ಗುಂಡಿಯ ಬಳಿಯೇ ಸಾರಿ ನೋಡಲು ಉತ್ಸುಕನಾಗಿ, ಹಿಂದೆ ಕೆಲವೊಮ್ಮೆ ಸ್ನೇಹಿತರ ಜೊತೆಗೂಡಿ ಹೋದ ಅನುಭವದಿಂದ ಮೆಟ್ಟಿಲಿಲ್ಲದ ತಗ್ಗಿನಲ್ಲಿ ಉತ್ಸಾಹದಿಂದಲೇ ಇಳಿದು, ಜಲಪಾತದ ಬುಡ ತಲುಪಿ, ಬುಡದಲ್ಲಿರುವ ದೈತ್ಯ ಬಂಡೆಯ ಮೇಲೆ ಕುಳಿತು, ಜಲಧಾರೆಗಳಲ್ಲಿ ಮಿಂದು ಪುಳಕಗೊಂಡೆ.

ಜೋಗ ಜಲಪಾತಕ್ಕೆ ನಮ್ಮೂರಿನಿಂದ ಎಪ್ಪತ್ತು ಕಿಲೋ ಮೀಟರು. ಜೂನ್‌ನಿಂದ ಅಕ್ಟೋಬರ್ -ನವೆಂಬರ್ ತಿಂಗಳವರೆಗೂ ಜೋಗಜಲಪಾತ ನೋಡಲು ಹೇಳಿಮಾಡಿಸಿದ ಕಾಲ. ನಾನು ಹೋದ ಸಮಯ ಮಳೆಗಾಲವಾದ್ದರಿಂದ ಶರಾವತಿ ನದಿ ಮೈದುಂಬಿ ಹರಿಯುತ್ತಿದ್ದಳು. 

ವೈಯಕ್ತಿಕವಾಗಿ ನನಗೆ ಆಗ ಡಿಸೆಂಬರ್-ಜನವರಿ ಸಮಯದಲ್ಲಿ ಜೋಗಜಲಪಾತಕ್ಕೆ ಹೋಗಲು ತುಂಬಾ ಇಷ್ಟ. ಯಾಕೆಂದರೆ ನೀರಿನ ಪ್ರಮಾಣವೂ ಕಡಿಮೆಯಿದ್ದು, ಜಲಪಾತದ ತೀರಾ ಕೆಳಗಿನವರೆಗೂ ಇಳಿದು ಹೋಗುವ ಅವಕಾಶವಿತ್ತು. ಈಗ ಕೆಳಗಿಳಿಯಲು ಅವಕಾಶವಿಲ್ಲ. 

ಜಲಪಾತದ ಕೆಳಗೆ ನಿಂತು ಕತ್ತೆತ್ತಿ ನೋಡಿದರೆ ಮೇಲಿನಿಂದ ಭೋರ್ಗರೆದು ಬೀಳುವ ನೀರಧಾರೆಗಳು ಮನಸೂರೆಗೊಂಡರೂ, ಒಮ್ಮೆ ಎದೆ ಝಲ್ಲೆನಿಸುತ್ತಿದ್ದವು. ನೀರಿನಲ್ಲಿ ಮಿಂದು ಮೈಮನ ತಣಿಸಿಕೊಂಡು, ಏಕಾಂಗಿ ಬಂಡೆಯ ಮೇಲೆ ನಾನೂ ಏಕಾಂಗಿಯಾಗಿ ಎಷ್ಟೋ ಹೊತ್ತು ಕುಳಿತಿದ್ದ ನನಗೆ, ಈ ಏಕಾಂಗಿ ಜಲಪಾತದ ಸೊಬಗಿನ ಮುಂದೆ ನಾನು ಸಣ್ಣವೆನಿಸಿಸಿತು.

ಸ್ನೇಹಿತರ ಜೊತೆ, ವಿದ್ಯಾರ್ಥಿಗಳ ಜೊತೆ ಅನೇಕ ಬಾರಿ ಹೋದರೂ ಅಂದು ಏಕಾಂಗಿಯಾಗಿ ಹೋಗಿ ಬಂದ ಆ ಸಂತೋಷವು ಅದೇನೋ ವಿಶಿಷ್ಟವೆನಿಸುತ್ತದೆ.

-ರಾಘವೇಂದ್ರ ಈ ಹೊರಬೈಲು, ಬಟ್ಲಹಳ್ಳಿ, ಚಿಕ್ಕಬಳ್ಳಾಪುರ
**
ಮಳೆಹಾಡು: ‘ಕೋಡಿ ಬಿದೈತೆ...ಕೋಡಿ

ನನ್ನೂರು ಕೋಟೆನಾಡಿನ ಚಿತ್ರದುರ್ಗ ಜಿಲ್ಲೆಯ ಹಳ್ಳಿಯಲ್ಲಿ ಮಳೆ ಅಷ್ಟಕ್ಕಷ್ಟೇ. ನನ್ನವರಿಗೆ 1982ರಲ್ಲಿ ದಾವಣಗೆರೆಯ ಹತ್ತಿರದ ಭರಮಸಾಗರ ಗ್ರಾಮಕ್ಕೆ ವರ್ಗಾವಣೆ ಆದಾಗ ಮಳೆಯನ್ನು ನೋಡುವಂತಾಯಿತು. ಅಲ್ಲಿ ನಾವಿದ್ದ ಮನೆ ಕರಿ ಹೆಂಚಿನದಾಗಿತ್ತು. ಒಮ್ಮೆ ಮಧ್ಯರಾತ್ರಿ ಮಳೆರಾಯನ ಅರ್ಭಟ ಹೆಚ್ಚಾದಂತೆ ಕರೆಂಟ್ ಹೋಗಿದ್ದರಿಂದ ಭಯಪಡುತ್ತಲೇ, ಬೆಳಗಾದ ಮೇಲೆ ನೋಡಿದರಾಯ್ತೆಂದು ಬೆಚ್ಚಗೆ ಹೊದ್ದುಕೊಂಡು ಮಲಗಿದೆ.

ಮುಂಜಾವಿನ ಬೆಳಕು ಹೆಂಚಿನ ಸಂದಿಯಿಂದ ಮನೆ ಒಳಗೆ ಬರುತ್ತಿದಂತೆ ನಿದ್ದೆಯಿಂದ ಎದ್ದು ನೋಡಿದರೆ, ಹಿಂದಿನ ದಿನ ತೊಳೆದು ಮನೆಯಲ್ಲಿ ಒಣಗಲೆಂದು ಹಾಕಿದ ಬಟ್ಟೆಗಳೆಲ್ಲಾ ಕರಿಬಣ್ಣದ ಕಲೆಯಿಂದ ಹಾಳಾಗಿದ್ದವು. ಮನೆಯಲ್ಲಿ ಅಲ್ಲಲ್ಲಿ ಕರಿ ಬಣ್ಣದ ಜೇಡ ಮಿಶ್ರಿತ ಮಣ್ಣಿನ ರಾಡಿ. ಇದೊಂದು ಹೊಸ ಅನುಭವ. ಮನೆಗೆ ಹಾಲು ತರುವ ಗೌಳಿಗ ಬಾಗಿಲು ತಟ್ಟುವ ಶಬ್ದ ಕೇಳಿ ಹೊರಕ್ಕೆ ಬಂದಾಗ ‘ಅಮ್ಮೊರೇ....ರಾತ್ರಿ ಎಲ್ಲಾ ಮಳೆ ಬಂದು ಕೋಡಿ ಬಿದೈತೆ...ಕೋಡಿ ನೋಡಂಗೈತ್ರೀ...’ ಎಂದು ಖುಷಿ ಖುಷಿಯಿಂದ ಹಾಲು ಹಾಕಿ ಹೋದ.

ಅಂತಹದು ಏನಿರಬಹುದೆಂದು ಕುತೂಹಲದಿಂದ ನನ್ನವರಿಗೆ ‘ಸಂಜೆ ಬ್ಯಾಂಕಿನಿಂದ ಬೇಗ ಬನ್ರೀ...ಅದೇನೋ..ಕೋಡಿ ಬಿದೈತೆ... ಕೋಡಿ ಅಂತಾ ಹಾಲಿನವ ಹೇಳಿದ್ನಲ್ಲಾ ನೋಡಲು ಹೋಗುವ..’ ಎಂದು ಕೇಳಿಕೊಂಡೆ. ರಾತ್ರಿಯ ಮಳೆಯಿಂದಾಗಿ ಮನೆಯಲ್ಲಾದ ಕಪ್ಪು ಬಣ್ಣದ ರಾಡಿ ಬಗೆಗೆ ಪಕ್ಕದ ಮನೆಯವರಿಗೆ ಕೇಳಿದರೆ, ಮಳೆಗೆ ಮುಂಚೆಯೇ ಮನೆಯ ಹೆಂಚು ಹೊದಿಸಬೇಕಿತ್ತೆಂದು ವಿವರಿಸಿ ಹೇಳಿದಾಗಷ್ಟೇ ಅರ್ಥವಾಯ್ತು.

ನಮ್ಮವರು ಬ್ಯಾಂಕಿನಲ್ಲಿ ಸಹೋದ್ಯೋಗಿಗಳಿಗೆ ಕೋಡಿ ಬಿದ್ದ ಬಗೆಗೆ ವಿಚಾರಿಸಿಕೊಂಡು ಮನೆಗೆ ಬೇಗನೆ ಬಂದರು. ಎರಡೂ ಕಿ.ಮಿ. ಕಾಲ್ನಡಿಗೆಯಲ್ಲಿ ಕೋಡಿ ಬಿದ್ದಲ್ಲಿಗೆ ಹೋಗಿ ನೋಡಲಾಗಿ 15 ಎಕರೆಯಷ್ಟು ವಿಶಾಲವಾದ ಕೆರೆಯಲ್ಲಿ ಮಳೆಯ ನೀರು ತುಂಬಿ ಹೆಚ್ಚಿನ ನೀರು ಉದ್ದನೆಯ ಕಟ್ಟೆಯ ಮೇಲಿಂದ ಹರಿದು ಹೋಗುವ ದೃಶ್ಯವೇ ಹಾಲಿನವನು ಹೇಳಿದ ‘ಕೋಡಿ ಬಿದೈತೆ’ ಎಂದು ಗೊತ್ತಾಯ್ತು.

ತುಂಗಭದ್ರಾ ಡ್ಯಾಂ ಗೇಟಿನಿಂದ ಬಿಡುವ ಹೆಚ್ಚಿನ ನೀರನ್ನು ನೋಡಿದ ನನಗೆ, ಕೋಡಿ ಬಿದ್ದಿದ್ದು ಅಷ್ಟೊಂದು ವಿಶೇಷ ಅನಿಸಲಿಲ್ಲ. ಆದರೇ, ಈ ಭಾಗದ ಗ್ರಾಮಸ್ಥರಿಗೆ ಇದುವೇ ವಿಶೇಷ. ನನಗೂ ಇದ್ದುದ್ದರಲ್ಲಿ ಈ ಹಳ್ಳಿಯಲ್ಲಿ ಕೋಡಿ ಮೂಲಕ ಹರಿಯುವ ನೀರನ್ನು ನೋಡಿ ವಿಶೇಷವಾಗಿತ್ತು. 

ಅನುರಾಧಾ ಟಿ.,  ಸಿದ್ದವೀರಪ್ಪ ಬಡಾವಣೆ, ದಾವಣಗೆರೆ
**
ನನ್ನ ಕನಸಿನ ಮದುವೆ: ನನ್ನಿಷ್ಟದಂತಾಗದ ನನ್ನ ಮದುವೆ

ಸರಳ ವಿವಾಹ ಆಗಬೇಕು ಎಂದು ನಾನು ಆಸೆಪಟ್ಟಿದ್ದೆ. ಆದ್ರೆ ಹುಡುಗನ ಮನೆಯವರು ಅಥವಾ ಹುಡುಗ ಅದಕ್ಕೆ ಒಪ್ತಾ ಇರ್ಲಿಲ್ಲ. ಕಳೆದ ಫೆಬ್ರುವರಿಯಲ್ಲಿ ನನ್ನ ಮದುವೆ ಆಯ್ತು. ಆದ್ರೆ ಯಾವ್ದೂ ಕೂಡ ನಾನಂದುಕೊಂಡ ಹಾಗೆ ನಡೀಲಿಲ್ಲ.

ಸರಳ ಮದುವೆ ಬಗ್ಗೆ ಹೇಳಬೇಕು ಅಂತಾ ಹುಡಗನೊಂದಿಗೆ ಮಾತನಾಡಕ್ಕೆ ಬಯಸಿದ್ದೆ. ಆದ್ರೆ ವರನ ಮನೆಯವರು ಹಿಂದಿನ ಕಾಲದಲ್ಲಿ ಫೋನ್-ಮೊಬೈಲ್ ಇತ್ತಾ, ಹಿಂದೆಲ್ಲಾ ಮದ್ವೆ ಆಗಿಲ್ವಾ ಅಂತೆಲ್ಲಾ ಹೇಳಿ ನಮ್ಮಮ್ಮನನ್ನ ಸುಮ್ಮನಾಗ್ಸಿದ್ರಂತೆ. ವರಪೂಜೆ, ಕಾಶೀಯಾತ್ರೆ, ಪಾದಪೂಜೆ ಹೀಗೆ ಎಲ್ಲವೂ ಬೇರೆಯವರ ಆಸೆಯಂತೆಯೇ ನಡೀತು. ನನ್ನ ಸರಳ ವಿವಾಹದ ಕನಸು ಕನಸಾಗೇ ಉಳೀತು. ಈಗ ಜೀವನ ಸರಳವಾಗಿ ನಡೀತಿದೆ. 
–ರಮ್ಯಾ.ಜಿ.ಎಸ್. ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)