ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕಾಸುರನ ಅಬ್ಬರ

Last Updated 22 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ನಾನು ಯಾವುದೇ ಸಮುದಾಯಕ್ಕೆ ನೋವು ಮಾಡಿಲ್ಲ. ಅಂತಹ ಉದ್ದೇಶವೂ ನನಗಿಲ್ಲ. ಅಲೆಮಾರಿ ಸಮುದಾಯಗಳ ಸಂಕಷ್ಟದ ಬಗ್ಗೆ ನನಗೆ ಅರಿವಿದೆ. ಚಿತ್ರದಲ್ಲಿ ಅವರಿಗೆ ಗೌರವ ನೀಡಿದ್ದೇನೆ’

ಹೀಗೆಂದು ಸ್ಪಷ್ಟನೆ ನೀಡಿದ್ದು ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ. ಅವರು ನಿರ್ದೇಶಿಸಿರುವ ‘ತಾರಕಾಸುರ’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಬುಡಬುಡಿಕೆ ಸಮುದಾಯದ ಮುಖಂಡರೊಬ್ಬರು ಚಿತ್ರ ತೆರೆಕಾಣುವುದಕ್ಕೂ ಮೊದಲು ತಮಗೆ ತೋರಿಸುವಂತೆ ಕೇಳಿದರು. ಎಲ್ಲರಿಗೂ ತೋರಿಸುತ್ತಾ ಹೋದರೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಸೆನ್ಸಾರ್‌ ಮಂಡಳಿಯು ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ನೀಡಿದೆ’ ಎಂದು ವಿವರಿಸಿದರು.

ತಾರಕಾಸುರ ಒಬ್ಬ ಕ್ರೂರಿ. ಆತ ಸನ್ನಿವೇಶಗಳನ್ನು ಹೇಗೆ ತನ್ನ ಒಳಿತಿಗೆ ಬಳಸಿಕೊಳ್ಳುತ್ತಾನೆ ಎನ್ನುವುದೇ ಕಥಾಹಂದರ. ಇದನ್ನು ಅವರು ಕಮರ್ಷಿಯಲ್‌ ದಾಟಿಯಲ್ಲಿ ಹೇಳಿದ್ದಾರಂತೆ.

ನಾಯಕ ವೈಭವ್‌ಗೆ ಇದು ಪ್ರಥಮ ಚಿತ್ರ. ಮೊದಲ ಚಿತ್ರದಲ್ಲಿಯೇ ಅವರು ಮೂರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಐದು ತಿಂಗಳ ಕಾಲ ಅವರು ತಲೆಗೆ ಸ್ನಾನವನ್ನೇ ಮಾಡಿರಲಿಲ್ಲವಂತೆ.

‘ದೇಹದ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದೆ. ಯುವಕನ ಪಾತ್ರ ಮಾಡಲು ಮತ್ತೆ ತೂಕ ಇಳಿಸಿಕೊಂಡೆ’ ಎಂದರು ವೈಭವ್‌.

ಮಾನ್ವಿತಾ ಹರೀಶ್‌ ಈ ಚಿತ್ರದ ನಾಯಕಿ. ಅವರು ಕೆಎಎಸ್‌ ಅಧಿಕಾರಿ ಪಾತ್ರವನ್ನು ನಿಭಾಯಿಸಿದ್ದಾರೆ. ‘ನಾನು ಪ್ರಾಮಾಣಿಕ ಅಧಿಕಾರಿಯಾಗಿ ಅಕ್ರಮ ಮರಳು ಗಣಿಗಾರಿಕೆ ತಡೆಯುವ ಪಾತ್ರ ಮಾಡಿದ್ದೇನೆ’ ಎಂದರು.

ಎನ್. ನರಸಿಂಹಲು ಬಂಡವಾಳ ಹೂಡಿದ್ದಾರೆ. ಚಿತ್ರದ ಬಜೆಟ್‌ ಬಗ್ಗೆ ಕೇಳಿದಾಗ, ‘ಹೀರೊಯಿನ್‌ ವಯಸ್ಸು ಮತ್ತು ಚಿತ್ರದ ಬಜೆಟ್‌ ಬಗ್ಗೆ ಕೇಳಬಾರದು’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಧರ್ಮ ವಿಶ್ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ.ನಟ ಎಂ.ಕೆ. ಮಠ ಐದು ಭಿನ್ನ ಶೇಡ್‌ನಲ್ಲಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‍ನ ನಟ ಡ್ಯಾನಿ ಸಫಾನಿ ಕೂಡ ನಟಿಸಿದ್ದಾರೆ. ಸಾಧುಕೋಕಿಲ, ಜೈಜಗದೀಶ್, ಕರಿಸುಬ್ಬು ತಾರಾಗಣದಲ್ಲಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT