ಭಾನುವಾರ, ಜುಲೈ 3, 2022
24 °C

ಜಾತಿ ಜಾಡ್ಯದ ಕೊಳಕು ಮುಖಗಳು

ದಯಾನಂದ Updated:

ಅಕ್ಷರ ಗಾತ್ರ : | |

Prajavani

ಹಿಮಾದಾಸ್ 2018ರ ವರ್ಲ್ಡ್‌ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಆಕೆಯ ಈ ಸಾಧನೆಯ ಜತೆಗೆ ಆಕೆಯ ಜಾತಿಯನ್ನು ಭಾರತೀಯರು ಅಂತರ್ಜಾಲದಲ್ಲಿ ಜಾಲಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಭಾರತದ ಮಟ್ಟಿಗೆ ಪ್ರತಿಭೆ, ಸಾಧನೆಗಳ ಜತೆಗೆ ಜಾತಿಯೂ ಸುತ್ತಿಕೊಳ್ಳುವುದು ಇಲ್ಲಿನ ಎಲ್ಲಕ್ಕಿಂತಲೂ ವಿಪರೀತವಾದ ಕಾಯಿಲೆ. ಈ ಕಾಯಿಲೆಯನ್ನು ಸೇನಾ ವಿಚಾರಣೆಯ ಭಿತ್ತಿಯಲ್ಲಿ ಬಿಚ್ಚಿಡುತ್ತಾ ಹೋಗುವ ನಾಟಕ ‘ಕೋರ್ಟ್‌ ಮಾರ್ಷಲ್‌’ ಈಚೆಗೆ (ಲಾಕ್‌ಡೌನ್‌ಗೂ ಮೊದಲು) ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿತು.

ಹಿಂದಿ ಲೇಖಕ ಸ್ವದೇಶ್ ದೀಪಕ್‌ ರಚನೆಯ ಮೂರು ದಶಕಗಳ ಹಿಂದಿನ ನಾಟಕ ‘ಕೋರ್ಟ್‌ ಮಾರ್ಷಲ್‌’ ಅನ್ನು ವರ್ತಮಾನದಲ್ಲಿ ನಮ್ಮ ಸಂದರ್ಭಕ್ಕೆ ಒಗ್ಗುವಂತೆ ವಿನ್ಯಾಸ ಮಾಡಿದ್ದು ನಿರ್ದೇಶಕ ಕೆ.ಪಿ. ಲಕ್ಷ್ಮಣ್. ‘ಹಳೆಯ’ ನಾಟಕಗಳನ್ನು ಹೊಸತೆನ್ನುವಂತೆ ಮರುರೂಪಿಸುವ ಲಕ್ಷ್ಮಣ್‌ ಈ ಹಿಂದೆ ‘ದಿ ಲೀಡರ್’, ‘ದ್ವೀಪ’ದಂತಹ ನಾಟಕಗಳನ್ನು ವರ್ತಮಾನಕ್ಕೆ ಒಪ್ಪುವಂತೆ ರೂಪಿಸಿರುವಂತೆಯೇ ‘ಕೋರ್ಟ್‌ ಮಾರ್ಷಲ್‌’ ನಾಟಕದಿಂದಲೂ ‘ಹಳೆಯ’ ಲೇಬಲ್‌ ಕಿತ್ತುಹಾಕಿದ್ದಾರೆ.

ಕಾಲದೇಶಗಳ ಮೇರೆ ಮೀರಿ ನಾಟಕ ಶಿಲ್ಪವನ್ನು ವಿಸ್ತರಿಸುವ ಲಕ್ಷ್ಮಣ್‌ರ ನಿರ್ದೇಶನದಲ್ಲಿ ಮೂಡಿದ ‘ಕೋರ್ಟ್ ಮಾರ್ಷಲ್‌’  ಕೂಡಾ ಇಂದಿನ ನಮ್ಮದೇ ಸಂದರ್ಭದ ಒಂದು ಘಟನೆಗೆ ನೋಡುಗರು ಪ್ರತ್ಯಕ್ಷದರ್ಶಿಗಳಾಗಿರುವಂತೆ ಮಾಡಿತ್ತು. ಅಭಿನಯ ತರಂಗದ ವಿದ್ಯಾರ್ಥಿನಿ/ವಿದ್ಯಾರ್ಥಿಗಳ ತಂಡವು ನುರಿತ ಕಲಾವಿದರಂತೆ ಅಭಿನಯಿಸಿದ್ದು ಕೂಡಾ ಈ ನಾಟಕದ ಪರಿಣಾಮವನ್ನು ಹೆಚ್ಚಿಸಿತ್ತು.

ಸೇನಾಧಿಕಾರಿ ಕ್ಯಾಪ್ಟನ್‌ ವರ್ಮಾನನ್ನು ಕೊಂದ, ಮತ್ತೊಬ್ಬ ಸೇನಾಧಿಕಾರಿ ಕ್ಯಾಪ್ಟನ್‌ ಕಪೂರ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ‘ಸವಾರ್’ ರಾಮಚಂದ್ರನ ವಿಚಾರಣೆ
ಯೊಂದಿಗೆ ಆರಂಭಗೊಳ್ಳುವ ನಾಟಕ, ವ್ಯವಸ್ಥೆಯಲ್ಲಿ ನಿಜವಾದ ಅಪರಾಧಿಗಳು ಯಾರು, ತಪ್ಪಿತಸ್ಥರ ಜಾಗದಲ್ಲಿ ನಿಲ್ಲಬೇಕಾದವರು ಯಾರು, ಯಾರ ಅಹಮ್ಮಿಗೆ, ಅಂತಸ್ತು-ಅಧಿಕಾರದ ಅಮಲಿಗೆ ಯಾರೆಲ್ಲಾ ಹೇಗೆ ಹೇಗೆ ಬಲಿಯಾಗುತ್ತಾರೆ ಎಂಬುದನ್ನು ತಣ್ಣಗೆ ತೆರೆದಿಡುಯುತ್ತಾ ಹೋಗುತ್ತದೆ.

ರಾಮಚಂದ್ರನ ಪ್ರತಿಭೆಯ ಭಯ ಕ್ಯಾಪ್ಟನ್‌ ಕಪೂರ್‌ನ ಅಸಹನೆಯನ್ನು ಹೆಚ್ಚಿಸಿರುತ್ತದೆ. ತನ್ನ ಮೇಲಾಗುವ ಶೋಷಣೆ-ಅಪಮಾನಗಳನ್ನು ಸಹಿಸಿಕೊಂಡು ಬರುವ ರಾಮಚಂದ್ರ ಒಂದು ಹಂತದಲ್ಲಿ ಸಹನೆಯ ಕಟ್ಟೆಯೊಡೆದು ಕ್ಯಾಪ್ಟನ್‌ ವರ್ಮಾ ಮತ್ತು ಕ್ಯಾಪ್ಟನ್‌ ಕಪೂರ್‌ ಮೇಲೆ ಗುಂಡು ಹಾರಿಸಿರುತ್ತಾನೆ. ಈ ಪ್ರಕರಣದ ವಿಚಾರಣೆಯಲ್ಲಿ ಸತ್ಯದ ಮೇಲೆ ಹೊದಿಸಿರುವ ಪೊರೆಗಳನ್ನು ಕಳಚುತ್ತಾ ಹೋಗುವುದು ನಾಟಕದ ಹೆಚ್ಚುಗಾರಿಕೆ.

ಸ್ವಾತಂತ್ರ್ಯಪೂರ್ವದ ಕಂಪೆನಿಯ ಸೇನಾ ವ್ಯವಸ್ಥೆಗಿಂತಲೂ ಹಿಂದೆ ಕೂಡಾ ಈ ದೇಶದ ಸಂಸ್ಥಾನಗಳ ಸೇನೆಯಲ್ಲಿ ಕಾಲಾಳುಗಳಾಗಿ ‘ಸೇವೆ’ಯಲ್ಲಿದ್ದ ಹೆಚ್ಚಿನವರು ಯಾರು, ಇವತ್ತಿಗೂ ಸೇನೆಯಲ್ಲಿ ‘ಜವಾನ’ರಾಗಿರುವ ಹೆಚ್ಚಿನವರು ಯಾರು ಎಂಬುದನ್ನು ನೋಡಿದರೆ ಸೇನೆಯ ಇತಿಹಾಸ ಹಾಗೂ ವರ್ತಮಾನ ಎರಡರಲ್ಲೂ ತಳಸಮುದಾಯಗಳ ಬಹುಜನರೇ ಕಾಣುತ್ತಾರೆ. ಸಾಮಾಜಿಕ-ಆರ್ಥಿಕ ಎಂಬುದು ಬೇರೆಬೇರೆಯಾಗಿಲ್ಲದ ಭಾರತದಲ್ಲಿ ಬಡತನದ ಕಾರಣಕ್ಕೆ ತಳಸಮುದಾಯಗಳ ಯುವಜನರು ಸೇನೆಯ ಕಾಲಾಳುಗಳಾಗುವ ‘ಸತ್ಯ’ವನ್ನು ಮುಚ್ಚಿಡುವ ಕುಯತ್ನಗಳ ಮಧ್ಯೆಯೇ ‘ಕೋರ್ಟ್‌ ಮಾರ್ಷಲ್‌’ ನಾಟಕ ಸೇನೆಯೊಳಗೂ ಇರುವ ಜಾತಿ ತಾರತಮ್ಯದ ಸತ್ಯವನ್ನು ಬಿಚ್ಚಿಡುವ ಪ್ರಯತ್ನ ಮಾಡುತ್ತದೆ.

ಮೇಲ್ವರ್ಗ ಎಂಬುದೂ ಪ್ರಬಲ ಜಾತಿಗಳ ಹಿಡಿತದಲ್ಲೇ ಇರುವ ಭಾರತದಲ್ಲಿ ಅಧಿಕಾರವೂ ಪ್ರಬಲ ಜಾತಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಸೇನೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಇಲ್ಲದೇ ಇದ್ದರೂ ಜಾತಿಯ ಕಾರಣಕ್ಕೆ ತಳಸಮುದಾಯಗಳ, ಅಸ್ಪೃಶ್ಯರ ಶೋಷಣೆಯು ಸೇನೆಯೊಳಗಿನ ಅಧಿಕಾರ ವ್ಯವಸ್ಥೆಯ ನೆರಳಲ್ಲೇ ತಣ್ಣಗೆ ನಡೆಯುತ್ತಿದೆ ಎಂಬುದನ್ನು ಈ ನಾಟಕ ಎತ್ತಿತೋರುತ್ತದೆ. ಬ್ರಿಟಿಷ್ ವ್ಯವಸ್ಥೆಯ ಕಲೋನಿಯಲ್‌ ಕುರುಹುಗಳು ಸೇನೆಯೊಳಗೆ ಹೇಗೆಲ್ಲಾ ಜೀವಂತವಾಗಿದ್ದು ದಲಿತರನ್ನು ಶೋಷಿಸುತ್ತಿವೆ ಎಂಬುದು ರಾಮಚಂದ್ರನ ವಿಚಾರಣೆಯ ಕಲಾಪದಲ್ಲಿ ಬಹಿರಂಗವಾಗುತ್ತಾ ಸಾಗುತ್ತದೆ. ಜತೆಜತೆಗೆ ಸೇನಾ ವ್ಯವಸ್ಥೆಯ ಆಚೆಗೂ ಇರುವ ಶೋಷಣೆಯ ಸ್ವರೂಪಗಳ ಕಡೆಗೂ ನಾಟಕ ವಿಸ್ತರಿಸಿಕೊಳ್ಳುತ್ತದೆ.

ನಾಟಕದಲ್ಲಿ ವಿಚಾರಣೆ ನಡೆಯುತ್ತಾ ಹೋಗುವುದು ಆರೋಪಿ ಸ್ಥಾನದಲ್ಲಿರುವ ರಾಮಚಂದ್ರನದ್ದಾದರೂ ನಾಟಕ ಬೆಳೆಯುತ್ತಾ ಹೋದಹಾಗೆ ಆತನ ಮೇಲೆ ಕೊಲೆಯ ಆರೋಪ ಹೊರಿಸಿರುವವರೇ ತಮ್ಮ ಬುದ್ಧಿಭಾವಗಳಲ್ಲಿ ಮಾನವೀಯತೆಯನ್ನು ಕೊಂದುಕೊಂಡು ಘೋರ ಪಾತಕ ಮಾಡಿದ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಅನಿವಾರ್ಯಕ್ಕೆ ಸಿಕ್ಕಿಬೀಳುತ್ತಾರೆ. 

ರಾಮಚಂದ್ರನ ಪರ ವಾದ ಮಾಡುವ ಕ್ಯಾಪ್ಟನ್‌ ಬಿಕಾಶ್ ರಾಯ್ ಪಾತ್ರ ಹಾಗೂ ಆರೋಪಿಯ ಸ್ಥಾನದಲ್ಲಿ ಕೂತು ನಿಸ್ತೇಜಗೊಳ್ಳುತ್ತಾ ಹೋಗುವ ರಾಮಚಂದ್ರನ ಪಾತ್ರ ಹೆಚ್ಚು ಕಾಡುತ್ತವೆ.

ಶೋಷಣೆಯ ವಿರುದ್ಧ ಹಿಂಸೆ ಅನಿವಾರ್ಯ ಅಲ್ಲ ಎಂದರೂ ವ್ಯಕ್ತಿಘನತೆಯನ್ನು ಇನ್ನಿಲ್ಲದಂತೆ ಕುಗ್ಗಿಸಿಬಿಡುವ ಸಂದರ್ಭದಲ್ಲಿ ನಡೆಯುವ ಹಿಂಸೆಗೆ ವ್ಯಾಖ್ಯಾನ ಕೊಡುವುದು ಕಷ್ಟ. ಇದನ್ನು ಪ್ರತೀಕಾರದ ನೆಲೆಯಲ್ಲಷ್ಟೇ ನೋಡಿದರೆ ಸಾಮಾಜಿಕ ಆಯಾಮಗಳ ಬೇರೆ ಬೇರೆ ಬಾಗಿಲುಗಳನ್ನು ಮುಚ್ಚಿದಂತೆಯೇ. ಜಾತಿ ಜಾಡ್ಯಕ್ಕೆ ಶಸ್ತ್ರಚಿಕಿತ್ಸೆಗಳ ಉದಾಹರಣೆಗಳು ನಮ್ಮ ಕಾಲದಲ್ಲೇ ನಡೆಯುತ್ತಿರುವಾಗ ಈ ನಾಟಕವನ್ನು ಕೇವಲ ನಾಟಕವಾಗಷ್ಟೇ ನೋಡಲು ಸಾಧ್ಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು