ಬುಧವಾರ, ಸೆಪ್ಟೆಂಬರ್ 23, 2020
20 °C

‘ರಂಗ ನಡಿಗೆ ನೂರರೆಡೆಗೆ’ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದಷ್ಟು ಉತ್ಸಾಹಿ ಯುವಕರು ಮತ್ತು ಅನುಭವಿ ರಂಗಕರ್ಮಿಗಳ ಸಮ್ಮಿಲನದ ‘ರಂಗಮಂಟಪ’ ತಂಡ ಇದೀಗ ನಾಟಕೋತ್ಸವಕ್ಕೆ ಸಜ್ಜಾಗಿದೆ. ಇದೇ ನವೆಂಬರ್‌ 20ರಿಂದ 22ರವರೆಗೆ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ರಂಗಪ್ರಯೋಗಗಳ ಪ್ರದರ್ಶನ ಏರ್ಪಡಿಸಿದೆ.

ಪ್ರಯೋಗಗೊಳ್ಳುತ್ತಿರುವ ಎಲ್ಲವೂ ತಂಡದ ಅತ್ಯಂತ ಯಶಸ್ವಿ ನಾಟಕಗಳು. ಕ್ರಮೇಣ 25, 50 ಮತ್ತು 75ನೇ ಪ್ರದರ್ಶನಗಳನ್ನು ಕಾಣುತ್ತಿರುವುದು ವಿಶೇಷ. 

ಎಚ್. ನಾಗವೇಣಿಯವರ ಕಾದಂಬರಿ ಆಧಾರಿತ ‘ಗಾಂಧಿ ಬಂದ’ ನಾಟಕದ ಮೂಲಕ ನಿರ್ದೇಶಕಿಯಾಗಿ ಗಮನಸೆಳೆದ ಚಂಪಾ ಶೆಟ್ಟಿ ಮೂಲತಃ ಡಬ್ಬಿಂಗ್‌ ಕಲಾವಿದೆ. ರಂಗಸಂಗಾತಿ ಪ್ರಕಾಶ್‌ ಶೆಟ್ಟಿ ಅವರನ್ನು ಬಾಳಸಂಗಾತಿಯಾಗಿಯೂ ಸ್ವೀಕರಿಸಿ ‘ರಂಗಮಂಟಪ’ ತಂಡ ಕಟ್ಟಿಕೊಂಡು ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ವೇಣು ಹೆಣ್ಣೂರು, ರಾಜ್‌ಕುಮಾರ್‌, ರಾಮಕೃಷ್ಣ, ಉರಾಳ, ಗೀತಾ ಸುರತ್ಕಲ್‌ ಮತ್ತಿತರ ಕ್ರಿಯಾಶೀಲರ ದೊಡ್ಡ ಪಡೆ ಇದು.

ಕೃಷ್ಣ ರಾಯಚೂರು ಅವರಂಥ ಸೃಜನಶೀಲ ಮನಸಿನ ನೇತೃತ್ವದ ‘ಪ್ರಸಂಗ’ದ ಸಹಯೋಗದೊಂದಿಗೆ ಪ್ರಕಾಶ್‌ ಶೆಟ್ಟಿ ನಿರ್ದೇಶಿಸಿದ ಡಾ. ಕೆ.ವೈ. ನಾರಾಯಣ ಸ್ವಾಮಿ ಅವರ ‘ಅನಭಿಜ್ಞ ಶಾಕುಂತಲಾ’ ಪ್ರಯೋಗ ತನ್ನ ತಾಜಾತನದಿಂದ ಪ್ರೇಕ್ಷಕರನ್ನು ಸೆಳೆಯಿತು. ‘ರಂಗಮಂಟಪ’ದ ಮತ್ತೊಂದು ಯಶಸ್ವಿ ನಾಟಕವಿದು. ಈ ಪ್ರಯೋಗ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಯಶಸ್ವಿ ಪ್ರದರ್ಶನಗಳನ್ನು ಕಂಡಿತು. 

ಲೇಖಕಿ ವೈದೇಹಿಯವರ ಸಣ್ಣ ಕತೆಗಳ ಆಧರಿಸಿದ ‘ಅಕ್ಕು’ ನಾಟಕ ಚಂಪಾ ಶೆಟ್ಟಿ ಅವರ ಕ್ರಿಯಾಶೀಲತೆಗೆ ಮತ್ತೊಂದು ಸಾಕ್ಷಿ. ಹಲವಾರು ಪ್ರದರ್ಶನಗಳನ್ನು ಕಂಡ ‘ಅಕ್ಕು’ ರಂಗಪ್ರಯೋಗವನ್ನು ಚಂಪಾ ಶೆಟ್ಟಿ ‘ಅಮ್ಮಚ್ಚಿ ಎಂಬ ನೆನಪು’ ಎನ್ನುವ ಸಿನಿಮಾ ಆಗಿಸಿದರು.

ಡಾ. ಕೆ,ವೈ ನಾರಾಯಣಸ್ವಾಮಿ ಅವರ ‘ಮಲ್ಲಿಗೆ’ ನಾಟಕ ಕೂಡ ಇದೇ ತಂಡದ ಮತ್ತೊಂದು ನಾಟಕ. ಈ ಎಲ್ಲ ನಾಟಕಗಳನ್ನು ಮತ್ತೆ ರಂಗದ ಮೇಲೆ ತರುವ ಪ್ರಯತ್ನವೇ ‘ರಂಗ ನಡಿಗೆ ನೂರರೆಡೆಗೆ’ ಎನ್ನುವ ನಾಟಕೋತ್ಸವ. ನ.20ರಿಂದ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಕಲರವ ಕಳೆಕಟ್ಟಲಿದೆ.

 ಕಾರ್ಯಕ್ರಮ ವಿವರ: ನ.20ರಂದು ‘ಮಲ್ಲಿಗೆ’ ನಾಟಕದ 25ನೇ ಪ್ರದರ್ಶನ– ಅತಿಥಿಗಳು: ನಾಗತಿಹಳ್ಳಿ ಚಂದ್ರಶೇಖರ್‌, ಡಾ. ಕೆ.ವೈ. ನಾರಾಯಣಸ್ವಾಮಿ, ಶ್ರೀನಿವಾಸ್‌ ಜಿ. ಕಪ್ಪಣ್ಣ, ಡಾ. ನರಸಿಂಹ ಶೆಟ್ಟಿ, ಶಶಿಧರ್‌ ಬಾರಿಘಾಟ್‌, ವಿಶ್ವನಾಥ್‌ ಶೆಟ್ಟಿ. ಸಂಜೆ. 5.30ಕ್ಕೆ.

ನ21ರಂದು ‘ಅಕ್ಕು’ ನಾಟಕದ 50ನೇ ಪ್ರದರ್ಶನ– ಅತಿಥಿಗಳು: ವೈದೇಹಿ, ಎಚ್‌.ಎಸ್‌. ವೆಂಕಟೇಶ್‌ಮೂರ್ತಿ, ಬಿ.ಸುರೇಶ್‌. ಸಂಜೆ 6.30ಕ್ಕೆ

ನ22ರಂದು ‘ಅನಭಿಜ್ಞ ಶಾಕುಂತಲಾ’ ನಾಟಕದ 75ನೇ ಪ್ರದರ್ಶನ– ಅತಿಥಿಗಳು: ಡಾ. ವಿಜಯಮ್ಮ, ಜಿ.ಎನ್‌. ಮೋಹನ್‌, ಶಶಿಧರ ಅಡಪ, ಡಾ. ಕೆ.ವೈ. ನಾರಾಯಣಸ್ವಾಮಿ ಮತ್ತು ವಿಶ್ವನಾಥ ಶೆಟ್ಟಿ. ಸಂಜೆ 5.30ಕ್ಕೆ.

 ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು