ಭಾನುವಾರ, ಜೂನ್ 7, 2020
28 °C

ರಂಗಭೂಮಿಯಿಂದ ಕಿರುತೆರೆಯೆಡೆಗೆ ನಿನಾದನ ದನಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಎಳವೆಯಿಂದಲೇ ನಟನೆಯೆಂಬ ಕನಸಿನ ಬಳ್ಳಿಯನ್ನು ಸುತ್ತಿಕೊಂಡಿದ್ದ ಆ ಹುಡುಗ ತನ್ನ ಆರನೇ ವಯಸ್ಸಿಗೆ ಕಿರುತೆರೆಯ ಅಂಗಳಕ್ಕೆ ಕಾಲಿಡುತ್ತಾನೆ. ‘ಟೈಂ ಪಾಸ್ ತೆನಾಲಿ’ ಎಂಬ ಧಾರಾವಾಹಿಯ ಮೂಲಕ ಬಾಲನಟನಾಗಿ ಕಿರುತೆರೆ ಪ್ರವೇಶಿಸಿದ ಹುಡುಗ ನಿನಾದ್ ಹರಿತ್ಸ. ಸದ್ಯ ಜೀ ಕನ್ನಡ ವಾಹಿನಿಯ ‘ನಾಗಿಣಿ 2’ ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರಧಾರಿ.

ಬೆಂಗಳೂರಿನ ನಿನಾದ್ ಅವರಿಗೆ ನಟನಾ ಕಲೆ ಎಂಬುದು ತಂದೆ–ತಾಯಿಯಿಂದ ಬಂದ ಬಳುವಳಿ. ತಂದೆ–ತಾಯಿ ಇಬ್ಬರೂ ರಂಗಕಲಾವಿದರು. ಬಾಲ್ಯದಿಂದಲೂ ನಟನೆಯ ಅಂಗಳದಲ್ಲೇ ಆಟವಾಡಿಕೊಂಡು ಬೆಳೆದ ಹುಡುಗನಲ್ಲಿ ಕಲೆಯ ರುಚಿ ಬೆನ್ನು ಹತ್ತಿತ್ತು. ಬಾಲ್ಯದಲ್ಲಿ ಎರಡು ವರ್ಷಗಳ ಕಾಲ ನಟನೆಯಲ್ಲಿ ತೊಡಗಿದ್ದರೂ ಓದಿನಲ್ಲಿ ಹಿಂದೆ ಬೀಳುತ್ತಾನೆ ಎಂಬ ಕಾರಣಕ್ಕೆ ಪೋಷಕರು ನಟನೆಗೆ ಬ್ರೇಕ್ ಹಾಕಿಸಿದ್ದರು. ಆದರೂ ಆ ಹುಡುಗನಲ್ಲಿ ನಟನೆಯ ಕನಸಿನ ಚಿಗುರು ಬೆಳೆಯುತ್ತಾ ಮರವಾಗಿತ್ತು.

ಹೀಗೆ ಓದು ಮುಗಿಸಿದ ಮೇಲೆ ನೇರವಾಗಿ ರಂಗಭೂಮಿಗೆ ಕಾಲಿಟ್ಟರು. ಮೊದಲು ವೇದಿಕೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಾ ರಂಗಭೂಮಿಯ ಆಳ–ಅಗಲವನ್ನು ಅಭ್ಯಸಿಸತೊಡಗಿದ್ದ ನಿನಾದ್, ಮುಂದೆ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸುತ್ತಾರೆ. ‘ತಕ್ಷ್ ಥಿಯೇಟ್ರಿಕ್ಸ್‌’ ಎಂಬ ರಂಗತಂಡದ ಮೂಲಕ ಪರಿಚಿತರಾದ ಇವರು ಇನ್ನೂ ಅನೇಕ ರಂಗತಂಡಗಳಲ್ಲಿ ಗುರುತಿಸಿಕೊಂಡಿದ್ದರು.

ಹೀಗೆ ನಾಟಕಗಳ ಮೂಲಕ ಅಭಿನಯವನ್ನು ಕರಗತ ಮಾಡಿಕೊಂಡ ಇವರು ಮರಳಿ ಕಿರುತೆರೆಯೆಡೆಗೆ ಪಯಣ ಬೆಳೆಸುತ್ತಾರೆ. ಒಂದು ಕಾಲದಲ್ಲಿ ಮಗನ ಓದಿನ ಚಿಂತೆಗೆ ಬಿದ್ದು ನಟನೆ ನಿಲ್ಲಿಸಿದ್ದ ತಂದೆ–ತಾಯಿಗಳೇ ಮುಂದೆ ಮಗನ ನಟನಾ ಒಲವಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಸುಮಾರು 7 ವರ್ಷಗಳ ಕಾಲ ರಂಗಭೂಮಿಯಲ್ಲಿದ್ದ ನಿನಾದ್‌ ಮುಂದೆ ‘ಅರಮನೆ’ ಧಾರಾವಾಹಿಯ ಮೂಲಕ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಈ ಧಾರಾವಾಹಿಯಲ್ಲಿ ನಾಯಕಿಯ ತಮ್ಮನಾಗಿ ಕಾಣಿಸಿಕೊಂಡಿದ್ದ ಇವರು ಮುಂದೆ ‘ಬಿಳಿಹೆಂಡ್ತಿ’ ಧಾರಾವಾಹಿಗೂ ಬಣ್ಣ ಹಚ್ಚುತ್ತಾರೆ.

‘ಈ ಎರಡೂ ಧಾರಾವಾಹಿಯಲ್ಲಿ ನಾನು ನಟನೆಯ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡೆ. ನಟನೆಯ ಕೌಶಲ ಅಭಿವೃದ್ಧಿಗೆ ಈ ಎರಡೂ ಧಾರಾವಾಹಿಗಳ ಪಾತ್ರವು ನನಗೆ ಸಹಾಯ ಮಾಡಿದವು. ಮುಂದೆ ನಾನು ನಟಿಸಿದರೆ ಪೂರ್ಣ ಪ್ರಮಾಣದ ನಾಯಕನಾಗಿಯೇ ಕಾಣಿಸಿಕೊಳ್ಳಬೇಕು ಎಂದು ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿಕೊಂಡಿದ್ದೆ. ಆ ಛಲದಿಂದಲೇ ಆಡಿಷನ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಕೊನೆಗೆ ನಾಗಿಣಿ ಧಾರಾವಾಹಿಗೆ ಆಡಿಷನ್‌ ಕೊಟ್ಟು ಆಯ್ಕೆ ಆದೆ’ ಎಂದು ಖುಷಿಯಿಂದ ಹೇಳುತ್ತಾರೆ ನಾಗಿಣಿಯ ತ್ರಿಶೂಲ್‌.

‘ನಾಗಿಣಿ 2 ಧಾರಾವಾಹಿಯಲ್ಲಿನ ತ್ರಿಶೂಲ್‌ ತುಂಬಾ ಬುದ್ಧಿವಂತ, ಎಲ್ಲಾ ವಿಷಯವನ್ನು ತಿಳಿದುಕೊಂಡಿರುವ ಸೂಕ್ಷ್ಮ ಮನಸ್ಸಿನ ಲೋಕಲ್ ಹುಡುಗ. ತನ್ನ ಚಿಕ್ಕ ಯಜಮಾನ್ರು ತ್ರಿವಿಕ್ರಮ್‌ ಅವರಿಗೆ ಏನೇ ತೊಂದರೆ ಬಂದರೂ ಸಹಿಸಿಕೊಳ್ಳದೇ ಅವರನ್ನು ಕಾಪಾಡುವ ಹುಡುಗ ಪಾತ್ರ ಅದು’ ಎಂದು ಧಾರಾವಾಹಿಯಲ್ಲಿನ ತಮ್ಮ ಪಾತ್ರ ಪರಿಚಯ ಮಾಡುತ್ತಾರೆ ನಿನಾದ್‌.

ಧಾರಾವಾಹಿ ತಂಡದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಇವರು ’ನನಗೆ ಈ ಧಾರಾವಾಹಿ ತಂಡದ ಬಗ್ಗೆ ತುಂಬಾನೇ ಖುಷಿಯಿದೆ. ಇಲ್ಲಿ ಎಲ್ಲರೂ ನನಗೆ ತುಂಬಾನೇ ಸಹಕಾರ ನೀಡುತ್ತಾರೆ. ತಪ್ಪಿದ್ದರೆ ತಿದ್ದಿ ಹೇಳುತ್ತಾರೆ. ನಿರ್ಮಾಪಕರಾದ ರಾಮ್‌ಜಿ, ನಿರ್ದೇಶಕ ಮಹೇಶ್ ಹಾಸನ್, ಎಪಿಸೋಡ್ ಡೈರೆಕ್ಟರ್ ನಾಗೇಶ್ ಮಯ್ಯ ಎಲ್ಲರೂ ತುಂಬಾನೇ ಸಹಾಯ ಮಾಡುತ್ತಾರೆ. ಈ ತಂಡಕ್ಕೆ ನನ್ನನ್ನು ಕರೆಕೊಂಡಿದ್ದು ಕರಣ್ ಎನ್ನುವವರು. ಈ ಎಲ್ಲರ ಸಹಕಾರದಿಂದ ನನಗೆ ಇಂದು ಒಂದು ಉತ್ತಮ ಪಾತ್ರ ಸಿಕ್ಕಿದೆ. ಒಬ್ಬ ನಟನಾಗಿ ಇಂತಹ ಫ್ಯಾಂಟಸಿ ಹಿನ್ನೆಲೆಯುಳ್ಳ ಕತೆಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎನ್ನುತ್ತಾರೆ. 

‘ಅರಮನೆ, ಬಿಳಿಹೆಂಡ್ತಿ ಧಾರಾವಾಹಿಯ ಪಾತ್ರದ ಮೂಲಕ ಜನ ನನ್ನನ್ನು ಅಷ್ಟಾಗಿ ಗುರುತಿಸುತ್ತಿರಲಿಲ್ಲ. ಆದರೆ ಈಗ ತ್ರಿಶೂಲ್ ಪಾತ್ರದ ಮೂಲಕ ಜನ ನನ್ನನ್ನು ಹೆಚ್ಚು ಗುರುತಿಸುತ್ತಾರೆ. ಇಷ್ಟು ಬೇಗ ಈ ಪಾತ್ರ ಜನರ ಮನಸ್ಸಿಗೆ ತಲುಪಿದೆ ಎಂಬುದು ನನಗೆ ಖುಷಿಯ ವಿಚಾರ. ಜನರ ಪ್ರೀತಿ ಅಭಿಮಾನ ಸಿಗಲು ಈ ಪಾತ್ರವೇ ಕಾರಣ ಎನ್ನುವ ವಿಷಯವೇ ನನಗೆ ಖುಷಿ ಕೊಡುತ್ತದೆ’ ಎಂದು ಮನಸ್ಸಿನಾಳದಿಂದ ಹೇಳುತ್ತಾರೆ.

ಸದ್ಯಕ್ಕೆ ಧಾರಾವಾಹಿ ಮೇಲೆ ಗಮನಹರಿಸಿರುವ ನಿನಾದ್ ಮುಂದಿನ ದಿನಗಳಲ್ಲಿ ಉತ್ತಮ ಪ್ರಾಜೆಕ್ಟ್ ಸಿಕ್ಕರೆ ಸಿನಿಮಾಗಳಲ್ಲೂ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.