ಭಾನುವಾರ, ಡಿಸೆಂಬರ್ 8, 2019
25 °C

ಮಾನವತೆಯ ಬೆಳಗು

Published:
Updated:
Deccan Herald

ಜ.ಹೊ. ನಾರಾಯಣಸ್ವಾಮಿ ಅವರ ‘ನರಬಲಿ’, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ‘ಗುರುಮಾತೆ ಅಕ್ಕ ನಾಗಲಾಂಬಿಕೆ’, ಹನುಮಂತ ಹಾಲಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕಗಳು ಜಡ್ಡುಗಟ್ಟಿರುವ ಸಮಾಜವನ್ನು ಸಾಣೆ ಹಿಡಿದು ಮಾನವತೆಯ ಹಣತೆ ಹಚ್ಚಲು ಹೊರಟಿವೆ.

ನಾಟಕ ಎಂದರೆ ಮನೋರಂಜನೆಯಲ್ಲ. ಜಡ್ಡುಗಟ್ಟಿದ ಸಮಾಜಕ್ಕೆ ಸಾಣೆ ಹಿಡಿಯುವ ಪರಿಣಾಮಕಾರಿ ಕಲಾ ಮಾಧ್ಯಮವೆಂಬುದು ಈ ವರ್ಷದ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘ ಅಭಿನಯದ ಶಿವಸಂಚಾರದ ಜ.ಹೊ. ನಾರಾಯಣಸ್ವಾಮಿ ಅವರು ರಚಿಸಿರುವ ‘ನರಬಲಿ’ ನಾಟಕದಿಂದ ವ್ಯಕ್ತವಾಗುತ್ತದೆ. ನಾಟಕವು ಮಹಾಭಾರತ ಕಾಲದ ಅಂಗ ರಾಜ್ಯದ ವೇನ ಮಹಾರಾಜನಿಗೆ ಸಂಬಂಧಿಸಿದ್ದು.

ಸನಾತನಿಗಳು ವರ್ಣಾಶ್ರಮ ಧರ್ಮವನ್ನು ಪೋಷಿಸಿಕೊಂಡು ಜನಸಾಮಾನ್ಯರನ್ನು ಶೋಷಣೆಯ ಸಾಧನವನ್ನಾಗಿ ಮಾಡಿಕೊಂಡಿದ್ದಾಗ ಪ್ರಗತಿಪರನಾದ ವೇನನು ಎಲ್ಲರಿಗೂ ಶಿಕ್ಷಣ ನೀಡುವ ಆಜ್ಞೆ ವಿಧಿಸಿದ್ದಲ್ಲದೆ ಪ್ರಜೆಗಳನ್ನು ಧಾರ್ಮಿಕ ನೆಲೆಯಲ್ಲಿ ಭಯಪಡಿಸುವ, ಶಾಸ್ತ್ರಗಳೆಂಬ ಅಸ್ತ್ರದಿಂದ ಮುಗ್ಧರನ್ನು ಶೋಷಿಸುವವರಿಗೆ ಶಿರಚ್ಛೇದನದ ಶಿಕ್ಷೆ ವಿಧಿಸುತ್ತಾನೆ. ಇದರಿಂದ ವಿಚಲಿತರಾದ ಸನಾತನಿಗಳು ವೇನನ ಮಗನಾದ ಪೃಥುಕುಮಾರನನ್ನು ತಮ್ಮ ಉದ್ದೇಶ ಈಡೇರಿಕೆಗಾಗಿ ಸಾಧನವನ್ನಾಗಿ ಬಳಸಿಕೊಳ್ಳುತ್ತಾರೆ.

ವೈಚಾರಿಕತೆಯನ್ನು ಹತ್ತಿಕ್ಕಲು ಯಾವುದಕ್ಕೂ ಹಿಂಜರಿಯದ ಸನಾತನಿಗಳು ವಿಪ್ರನಾದ ಚಿದಂಬರನನ್ನು ಸಂಹರಿಸಿ, ಅವನ ಹೆಂಡತಿಯನ್ನು ಮುಂದುಮಾಡಿಕೊಂಡು ಯುವರಾಜನಾದ ಪೃಥುಕುಮಾರನನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳುತ್ತಾರೆ. ಸನಾತನಿಗಳ ಕೈಗೊಂಬೆಯಾದ ಅವನು ಮದಿರೆ, ಮಾನಿನಿಯರ ಗುಲಾಮನಾಗಿ, ಅವರ ತಾಳದ ಅಸ್ತ್ರವಾಗುತ್ತಾನೆ. ಸನಾತನಿಗಳು ರಾಜಮಾತೆ ಸುನೀತಾದೇವಿಯೊಂದಿಗೆ ವೇನನ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದಾನೆಂಬ ತಿದಿಗೆ ಕೆಂಡದಂಥಾಗಿ ವೇನನನ್ನು ಅವೇಳೆಯಲ್ಲಿ ಸಂಹರಿಸುತ್ತಾನೆ. ವೇನನ ದುರಂತವನ್ನು ಕಂಡ ರಾಜಮಾತೆ ಇಲ್ಲಿಯ ಕ್ರಾಂತಿಯ ಬೀಜದಲ್ಲಿ ಮುಂದೆ ಲಕ್ಷೋಪಲಕ್ಷ ವೇನನರು ಬರುತ್ತಾರೆಂಬ ಭರವಸೆಯನ್ನು ತಾಳುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ನರಬಲಿ ನಾಟಕವನ್ನು ನಿರ್ದೇಶನ ಮಾಡಿರುವ ಸವಿತಾ ಪ್ರಸನ್ನ ವಿಭಿನ್ನವಾಗಿ ವಿನ್ಯಾಸಿಸಿ ನಿರ್ದೇಶಿಸಿದ್ದಾರೆ. ನಾಟಕದ ಆಶಯಕ್ಕೆ ಪೂರಕವಾಗಿ ನಟರಿಗೆ ಸಮರ್ಥವಾದ ಆಂಗಿಕವಾದ ಚಲನೆಯನ್ನು ನೀಡಿದ್ದಾರೆ. ವಾಚ್ಯಕ್ಕಿಂತ ಆಂಗಿಕ ಅಭಿನಯವನ್ನು ಧ್ವನಿಯನ್ನಾಗಿಸಿಕೊಂಡಿರುವುದು ನಾಟಕದ ಉದ್ದೇಶಕ್ಕೆ ಸಹಕಾರಿಯಾಗಿದೆ. ಸನಾತನಿಯಾದ ವಿಶ್ವನಾಥಭಟ್ಟನಿಗೆ ಆವೇಗದ ನಡಿಗೆ ಹಾಗೂ ಸಂಜ್ಞೆಗಳನ್ನು ನೀಡಿದರೆ ವೇನನಿಗೆ ನದಿಯ ಸೊಬಗಿನ ತರಂಗಿಣಿಯಂತೆ ಪ್ರಶಾಂತತೆಯನ್ನು ನೀಡಿದ್ದಾರೆ.

ಪ್ರಾರಂಭದಲ್ಲಿ ಗಣೇಶನನ್ನು ತುಳಿತಕ್ಕೊಳಗಾದವರಿಂದು ಸಂವಿಧಾನದ ಆಶಯದ ನೆಲೆಯಲ್ಲಿ ಜಾಗೃತರಾಗಿರುವುದನ್ನು ಸಂಕೇತವಾಗಿ ತಂದಿರುವುದು ಪ್ರಶಂಸಾರ್ಹ. ನಾಟಕವನ್ನು ಲಂಬಿಸಿ ಅಡಕಗೊಳಿಸಿರುವ ನಿರ್ದೇಶಕರು ಎಲ್ಲಿಯೂ ವಾಚ್ಯವಾಗಿಸದೆ ಸಂಕೇತ ಮತ್ತು ಪ್ರತಿಮೆಗಳ ಮೂಲಕ ಬಿಗುವಿನಿಂದ ಕಟ್ಟಿಕೊಟ್ಟಿದ್ದಾರೆ. ನಾಟಕದಲ್ಲಿ ಬಳಸಿರುವ ರಂಗಪರಿಕರಗಳು ಸಂಕೇತಾತ್ಮಕವಾಗಿದ್ದು ನಾಟಕದ ಆಶಯವನ್ನು ಮತ್ತಷ್ಟು ವಿಸ್ತರಿಸಿವೆ.


ನರಬಲಿ ನಾಟಕದ ದೃಶ್ಯ

ರಂಗ ಸಂಗೀತದಲ್ಲಿ ತಟ್ಟೆ, ಲೋಟ, ಕೋಲು, ಡಬ್ಬಗಳನ್ನೇ ಬಳಸಿಕೊಳ್ಳಲಾಗಿದ್ದು, ತೀವ್ರತರವಾದ ಭಾವನೆಗಳ ಅಭಿವ್ಯಕ್ತಿಗೆ ತಮ್ಮಟೆ, ಡೋಲಿನ ಶಬ್ದದಲ್ಲಿ ಪರಿಣಾಮವನ್ನು ಉಂಟು ಮಾಡಿದ್ದಾರೆ. ಪಾತ್ರಧಾರಿಗಳಿಗೆ ಗೋಣಿ ಥಾಟಿನ ಸಾಮಾನ್ಯ ಉಡುಪನ್ನು ತೊಡಿಸಿ, ಪಾತ್ರಧಾರಿಗಳ ಬದಲಾವಣೆಗೆ ಪೂರಕವಾಗಿ ವಿಶ್ವನಾಥಭಟ್ಟನಿಗೆ ಮೇಲುವಸ್ತ್ರ ಮತ್ತು ಯಜ್ಞೋಪವೀತವನ್ನು ತೊಡಿಸಿದರೆ, ವೇನನಿಗೆ ರಾಜದಂಡವನ್ನು ಸಂಕೇತದ ಉಡುಗೆಗಳನ್ನು ಕೊಟ್ಟಿರುವಲ್ಲಿನ ನಿರ್ದೇಶಕರ ಔಚಿತ್ಯಪ್ರಜ್ಞೆ ಪ್ರಶಂಸನೀಯವಾದುದು.

ಶಿವಕುಮಾರ ಕಲಾ ಸಂಘದ ಇಪ್ಪತ್ತು ಕಲಾವಿದರು ಅತ್ಯಂತ ಸಮರ್ಥವಾಗಿ ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. ಸಂತೋಷ್ ಜಿ.ಎಚ್. ವಿಶ್ವನಾಥಭಟ್ಟನಾಗಿ ಆಂಗಿಕ ಅಭಿನಯದ ಸಾಧ್ಯತೆಗಳನ್ನು ಸಮರ್ಥವಾಗಿ ಅಭಿನಯಿಸಿದ್ದಾನೆ. ವೇನನಾಗಿ ಚೈತನ್ಯ ಕುಲಕರ್ಣಿ ಗಂಭೀರತೆಯಿಂದಲೂ ಮಾನವತೆಯ ಶಿಖರದಂತೆ ಆಂಗಿಕವಾಗಿ ಅಭಿನಯಿಸಿದ್ದಾನೆ. ಭಾಗವತನಾಗಿ ವಿನೋದ್ ಸಿ., ಸುನೀತಾದೇವಿಯಾಗಿ ವಿದ್ಯಾರಾಣಿ, ಚಿದಂಬರನ ಹೆಂಡತಿಯಾಗಿ ಜ್ಯೋತಿ ಬೆನಹಾಳ ಮೇಳದಲ್ಲಿ ವಿಠ್ಠಲ್ ದೊಡಮನಿ, ಶಿವಕುಮಾರ್ ಎಸ್., ವಿಪ್ರರಾಗಿ ಶ್ರೇಯಸ್, ದೇವಪ್ಪ ಕಮತದ, ಭರತ್ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಬೆಳಕು ನಿರ್ವಹಣೆಯಲ್ಲಿ ಮಧು, ಸಂಗೀತ ನಿರ್ವಹಣೆಯಲ್ಲಿ ಜೀವನ್ ಗೌಡ, ಶಿವಸಂಚಾರದ ವ್ಯವಸ್ಥಾಪಕರಾಗಿ ರಾಜು ಬಿ. ಅವರ ಶ್ರಮ ಸಾರ್ಥಕವಾಗಿದೆ.

ಸ್ವಾಮೀಜಿಗಳೆಂದರೆ ಒಂದು ಮಠೀಯ ವ್ಯವಸ್ಥೆಯೆನ್ನುವ ಸಂದರ್ಭದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಶಿವಕುಮಾರ ಕಲಾ ಸಂಘದ ಮೂಲಕ ರಂಗಭೂಮಿಗೆ ಕೊಡುತ್ತಿರುವ ಸೇವೆ ಅನನ್ಯವಾದುದು.

‘ಮನ ಮಾಸಿದಡೆ ಕೂಡಲ ಸಂಗನ ಶರಣರೊಡನೆ ಕೂಡಿ ಅನುಭಾವವ ಮಾಡುವುದು’ ಎಂದು ಬಸವಣ್ಣ ಅವರು ಹೇಳಿದಂತೆ ಸ್ಥಗಿತಗೊಂಡ ಸಮಾಜಕ್ಕೆ ಶಿವಸಂಚಾರದ ಜ.ಹೊ. ನಾರಾಯಣಸ್ವಾಮಿ ಅವರ ‘ನರಬಲಿ’, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ‘ಗುರುಮಾತೆ ಅಕ್ಕ ನಾಗಲಾಂಬಿಕೆ’, ಹನುಮಂತ ಹಾಲಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕಗಳು ಸಾಣೆ ಹಿಡಿದು ಮಾನವತೆಯ ಹಣತೆಯನ್ನು ನಾಡಿನಾದ್ಯಂತ ಹಚ್ಚಲು ಹೊರಟಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು