ಸ್ವಾಮೀಜಿಯ ಮೋಕ್ಷವೂ ಮಂದಾಕಿನಿಯ ಮೌನವೂ...

7

ಸ್ವಾಮೀಜಿಯ ಮೋಕ್ಷವೂ ಮಂದಾಕಿನಿಯ ಮೌನವೂ...

Published:
Updated:
‘ಮೋಕ್ಷ–ಮೌನಿ’ ನಾಟಕದ ದೃಶ್ಯ

‘ಒಂದು ಕ್ಷಣ ಸ್ವಾಮೀಜಿಗೆ ತಾವು ಮನುಷ್ಯನಾಗಿ ಬದುಕಿಲ್ಲ ಅನಿಸ್ತು. ಪೀಠಕ್ಕಂಟಿಕೊಂಡ ನಾಯಿ. ಊಟ ಹಾಕ್ತಾರೆ, ಅವರಿಗೆ ಬೇಕಾದಾಗ ಅವರಿಗೆ ಬೇಕಾದ್ದನ್ನು. ಯಾರದೋ ಹಣ, ಆಸ್ತಿ ನಿದ್ದೆಗೆಟ್ಟು ಕಾಯೋದಾಗುತ್ತೆ! ನಿಯತ್ತಿನ ನಾಯಿ!. ಈ  ಅಸ್ತಿತ್ವದೊಳಗೆ ಬೇಸರವಿರಲಿಲ್ಲ. ಆದ್ರಿವತ್ತು ಅಯೋಗ್ಯರು ಅಧಿಕಾರದಲ್ಲಿ ಕೇಳ್ತಾರೆ. ಏಕಾಂತದಲ್ಲಿ ಕೂರು, ಕದ್ದ ಕಾಸು ತುಂಬಿದ್ದೀವಿ ಅದನ್ನ ಕಾಯ್ತಾ ಏಕಾಂತದಲ್ಲಿ ಕೂರು.. ಅತಿಯಾಗಿ ತಿಂದು ಅಜೀರ್ಣ ಮಾಡ್ಕೊಂಡಿದ್ದೀವಿ.. ಅಂಡು ನೆಕ್ಕು ಅಂತಾರೆ... (ಮೋಕ್ಷ)

***

‘ಎಲ್ಲಾ ದೇವರಿಗೆ ಹುಟ್ಟಿದ ತರಹ.. ನಾನೊಬ್ಳು ಮನುಷ್ಯರ ತರಹಾ ಅನ್ನೋ ಹಾಗೆ ಆಡ್ತಿದ್ರು. ಒಂದು ಸಾರಿ ಜಾಡಿಸ್ದೆ ನೋಡು... ಒಮ್ಮೆ ಕುತ್ತಿಗೆ ಪಟ್ಟಿ ಹಿಡ್ದು ಕಪಾಳಕ್ಕೆ ಬಾರಿಸ್ದೆ ನೋಡು. ಎಲ್ಲಾ ಮನುಷ್ಯರಾದ್ರು...’ (ಮೌನಿ)

– ಇವು ಇಂದು ಪ್ರದರ್ಶನ ಕಾಣುತ್ತಿರುವ ‘ಮೋಕ್ಷ–ಮೌನಿ’ ನಾಟಕದ ದೃಶ್ಯಗಳು. ಪ್ರಸಿದ್ಧ ನಟ ಮತ್ತು ಕಥೆಗಾರ ಎಸ್‌.ಎನ್. ಸೇತುರಾಮ್ ಅವರ ‘ನಾವಲ್ಲ’ ಕಥಾಸಂಕಲನದ ಎರಡು ಕಥೆಗಳನ್ನು ರಂಗರೂಪಕ್ಕೆ ತಂದಿದ್ದಾರೆ ನಿರ್ದೇಶಕ ಎಸ್. ಭಗತ್‌ರಾಜ್.

ಸ್ಮಶಾನದಲ್ಲಿನ ಅನಾಥ ಶಿಶು ಅಚಲಮಠದ ಪೀಠಾಧಿಪತಿಯಾಗಿ ಅನುಭವಿಸುವ ತಲ್ಲಣಗಳನ್ನು ‘ಮೋಕ್ಷ’ ಅನಾವರಣ ಮಾಡಿದರೆ, ಗರ್ಭ ಧರಿಸುವ ಶಕ್ತಿಯಿಲ್ಲದ ಮಂದಾಕಿನಿಯ ಅಂತರಂಗವನ್ನು ‘ಮೌನಿ’ ತೆರೆದಿಡುತ್ತದೆ.

ರಂಗದಲ್ಲಿ ಒಂದು ಕಥೆಗೂ ಮತ್ತೊಂದು ಕಥೆಗೂ ಸಂಬಂಧವಿಲ್ಲ. ಎರಡನ್ನೂ ಬಿಡಿಬಿಡಿಯಾಗಿ ರಂಗದ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕರು.

‘ರುಚಿ ನೋಡದ ನಾಲಗೆ, ಹೆಣ್ಣನ್ನು ಸವಿಯದ ದೇಹ... ಹೊಟ್ಟೆ–ಬಟ್ಟೆ ಕಟ್ಟಿ ಮಠವನ್ನು ಬೆಳೆಸಿದ ಸ್ವಾಮೀಜಿ, ಅದೇ ಮಠದ ಟ್ರಸ್ಟಿಗಳ ಅಧಿಕಾರ ಮತ್ತು ಹಣದ ದಾಹಕ್ಕೆ ಬಲಿಯಾಗುವ ಕಥೆಯನ್ನು ‘ಮೋಕ್ಷ’ ಕಟ್ಟಿಕೊಡುತ್ತದೆ. ಇಂದಿನ ವಾಸ್ತವಾಂಶಕ್ಕೆ ಹತ್ತಿರವಾಗುವ ಕಥೆ ಇದು. ಹೆಣ್ಣಾದವಳು ತಾಯಿಯ ಹತ್ತಿರವೂ ಹೇಳಿಕೊಳ್ಳಲಾಗದ ಸಂಗತಿಗಳನ್ನು ‘ಮೌನಿ’ ಕಥೆ ಹೇಳುತ್ತದೆ. ಈ ಎರಡೂ ಕಥೆಗಳು ಹೊಸ ರೀತಿಯ ಸಂಗತಿಗಳನ್ನು ಹೇಳುತ್ತವೆ. ಹಾಗಾಗಿ, ಈ ಎರಡೂ ಕಥೆಗಳನ್ನು ರಂಗದ ಮೇಲೆ ತಂದರೆ ಚೆನ್ನಾಗಿರುತ್ತದೆ ಅಂತ ಅನಿಸಿತು. ಹಾಗಾಗಿ ಈ ಕಥೆಗಳನ್ನೇ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಭಗತ್‌ರಾಜ್.

‘ಬೇರೆ ಬೇರೆ ಕಥೆಗಳನ್ನಿಟ್ಟುಕೊಂಡು ನಾಟಕ ರೂಪದಲ್ಲಿ ಕಟ್ಟಿಕೊಡುವ ಕ್ರಿಯೆ ಈಗಾಗಲೇ ಮರಾಠಿ ರಂಗಭೂಮಿಯಲ್ಲಿ ವ್ಯಾಪಕವಾಗಿದೆ. ಅದೇ ಪ್ರಯತ್ನವನ್ನು ನಾನು ಈ ನಾಟಕದ ಮೂಲಕ ಮಾಡಲು ಪ್ರಯತ್ನಿಸಿದ್ದೇನೆ. ಎರಡೂ ಕಥೆಗಳ ನಡುವೆ ಸಂಪರ್ಕ ಕಲ್ಪಿಸಲು ಯತ್ನಿಸಿದ್ದೆ. ಆದರೆ, ಕಥೆಗಾರ ಸೇತುರಾಂ ಅವರು ಪ್ರತ್ಯೇಕವಾಗಿಯೇ ರಂಗರೂಪಕ್ಕೆ ತಂದರೆ ಚೆನ್ನಾಗಿರುತ್ತೆ ಅಂತ ಸಲಹೆ ನೀಡಿದರು. ಅವರ ಒಪ್ಪಿಗೆಯ ಮೇರೆಗೆ ಕಥಾರೂಪವನ್ನು ರಂಗರೂಪಕ್ಕೆ ತರುವಾಗ ತುಸು ಬದಲಾವಣೆ ಮಾಡಿಕೊಂಡಿದ್ದೇನೆ. ಅವರ ಕಥೆಗಳ ಆತ್ಮಕ್ಕೆ ಧಕ್ಕೆ ಬಾರದ ರೀತಿಯಲ್ಲಿ ರಂಗದ ಮೇಲೆ ಪ್ರಯತ್ನಿಸಿರುವೆ. ಈ ನಾಟಕದ ಪಾತ್ರಗಳು ನೇರವಾಗಿ ಪ್ರೇಕ್ಷಕರ ಮನಸಿನೊಂದಿಗೆ ಸಂವಾದ ನಡೆಸುವಂತಿವೆ. ಪಾತ್ರಗಳ ಸ್ವಗತ ಪ್ರೇಕ್ಷಕರ ಸ್ವಗತವೂ ಅನಿಸಬಹುದು... ಹೀಗೆ ಅನೇಕ ವಿಶಿಷ್ಟ ಗುಣಗಳನ್ನು ಈ ನಾಟಕ ಹೊಂದಿದೆ’ ಎಂಬ ವಿವರಣೆ ಅವರದ್ದು.

ಬಾಕ್ಸ್

‘ಮೋಕ್ಷ–ಮೌನಿ’ ನಾಟಕ ಪ್ರದರ್ಶನ: ಮೂಲ ಕಥೆ– ಎಸ್.ಎನ್. ಸೇತುರಾಮ್. ರಂಗರೂಪ ಮತ್ತು ನಿರ್ದೇಶನ–ಎಸ್. ಭಗತ್‌ರಾಜ್. ಪ್ರಸ್ತುತಿ–ಕಲಾರಂಗ ಟ್ರಸ್ಟ್, ಸ್ಥಳ–ಕೆ.ಎಚ್.ಕಲಾಸೌಧ, ಹನುಮಂತನಗರ. ಗುರುವಾರ ಸಂಜೆ 7.30. ಟಿಕೆಟ್ ದರ ₹ 100. bookmyshowನಲ್ಲೂ ಟಿಕೆಟ್ ಪಡೆಯಬಹುದು. ಟಿಕೆಟ್‌ಗಾಗಿ: 99804 77012

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !