ಭಾನುವಾರ, ಆಗಸ್ಟ್ 14, 2022
20 °C

ಒಟಿಟಿ ವೇದಿಕೆಯಲ್ಲಿ ‘ರಂಗಪ್ರವೇಶ’

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಟೆಂಟ್‌ ಒಳಗಿನ ಪ್ರವೇಶ ದ್ವಾರದ ಪರದೆ ಸರಿಸಿ ಒಳಹೋದಾಗ ಕವಿದ ಕತ್ತಲಿನ ವಾತಾವರಣ, ಆ ಕತ್ತಲಿನ ನಡುವೆ ಸೀಟುಗಳಿಗಾಗಿ ನಡೆಯುವ ಹುಡುಕಾಟ, ಕಬ್ಬಿಣದ ಕುರ್ಚಿ, ವೇದಿಕೆಗೆ ಎದುರಾಗಿ ಝಗಮಗಿಸುವ ದೀಪ, ಆಗೊಮ್ಮೆ, ಈಗೊಮ್ಮೆ ಪ್ರೇಕ್ಷಕರ ಮೇಲೆ ಬೆಳಕು ಬಿದ್ದಾಗ ಕಾಣುವ ಅಸ್ಪಷ್ಟ ಆಕೃತಿಗಳು...

ಚಿತ್ರಣ ಹೀಗಿದ್ದರೆ ಮಾತ್ರ ಅದು ನಾಟಕದ ಟೆಂಟ್‌ ಎನ್ನುವುದು ಮನಸ್ಸಿನಲ್ಲಿ ಅಚ್ಚೊತ್ತಿದೆ. ಸಾಂಪ್ರದಾಯಿಕತೆ ಉಳಿಸಿಕೊಂಡು ಬಂದಿರುವ ರಂಗಭೂಮಿ ನವಮಾಧ್ಯಮಗಳ ಪ್ರಭಾವದಿಂದಾಗಿ ಸ್ಪರ್ಧಾತ್ಮಕ ಸವಾಲು ಎದುರಿಸಲು ಪ್ರಯಾಸ ಪಡುತ್ತಿದೆ. ಅಂಗೈಯಲ್ಲಿಯೇ ಜಗತ್ತು ನೋಡುವಷ್ಟು ನಾವು ಶಕ್ತಿಶಾಲಿಯಾಗಿ ಬೆಳೆದರೂ ರಂಗಭೂಮಿಯ ಪಾತ್ರಗಳು, ಚಿತ್ರಗಳು ಸುಲಭವಾಗಿ ಕೈಗೆಟುಕುತ್ತಿಲ್ಲ. ಆದ್ದರಿಂದ ಈ ಕಲೆಯನ್ನು ಜನರಿಗೆ ಹತ್ತಿರ ಮಾಡಬೇಕು ಎನ್ನುವ ಕಾರಣಕ್ಕೆ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಹುಬ್ಬಳ್ಳಿಯಲ್ಲಿ ‘ಗುರು ಇನ್‌ಸ್ಟಿಟ್ಯೂಟ್‌ ಹುಬ್ಬಳ್ಳಿ’ ವೇದಿಕೆ ಮಾಡಿಕೊಂಡು, ನಾಟಕಗಳ ಪ್ರದರ್ಶನಕ್ಕೆ ಮತ್ತು ಸಾಂಸ್ಕೃತಿಕ ವಾತಾವರಣ ರೂಪಿಸಲು ಸ್ವಂತ ಖರ್ಚಿನಲ್ಲಿ ಥಿಯೇಟರ್‌ ನಿರ್ಮಿಸಿದ್ದಾರೆ.

ಮೊದಲಿನ ಹಾಗೆ ತಿಂಗಳಾನುಗಟ್ಟಲೆ ಹಗಲಿರುಳು ನಾಟಕದ ತಾಲೀಮು ಮಾಡಿ ನಿತ್ಯ ಪ್ರದರ್ಶನ ನೀಡುವುದು ಈಗ ಕಷ್ಟ ಮತ್ತು ವೆಚ್ಚದಾಯಕ. ಹಾಗಾಗಿ ಸರದೇಶಪಾಂಡೆ ನವ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕನ್ನಡದ ಒಟಿಟಿ ವೇದಿಕೆಯಲ್ಲಿ ಚೊಚ್ಚಲ ನಾಟಕ ಬಿಡುಗಡೆಗೆ ಸಜ್ಜಾಗಿದ್ದಾರೆ. ಡಾ. ಚಂದ್ರಶೇಖರ ಕಂಬಾರ ಅವರ ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕವನ್ನು ಚಿತ್ರೀಕರಣ ಮಾಡಲಾಗಿದ್ದು ಡಿಸೆಂಬರ್‌ 2ನೇ ವಾರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

‘ಬೆಪ್ಪುತಕ್ಕಡಿ ಬೋಳೆಶಂಕರ’ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದು, ವಿದ್ಯಾರ್ಥಿಗಳನ್ನು ಸುಲಭವಾಗಿ ತಲು‍ಪಲು ‘ಒಟಿಟಿ ರಂಗಪ್ರವೇಶ’ ಅನುಕೂಲವಾಗಲಿದೆ. ಇದಕ್ಕಾಗಿ ಹುಬ್ಬಳ್ಳಿಯ 30ರಿಂದ 35 ಜನ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಅಭಿನಯಿಸಿರುವ ಈ ನಾಟಕದಲ್ಲಿ ಬಹುತೇಕರು ಶಾಲಾ, ಕಾಲೇಜು ಹಂತಗಳಲ್ಲಿ ರಂಗಭೂಮಿಯ ನಂಟು ಹೊಂದಿದವರು. ಪ್ರಮೋದ ಶಿಗ್ಗಾಂವ ನಿರ್ದೇಶನ ಮಾಡಿದ್ದು, ಸರದೇಶಪಾಂಡೆ ಮತ್ತು ವಿನಯ ಅವರು ಟೆಲಿಪರದೆಗೆ ತಕ್ಕಂತೆ ನಿರ್ದೇಶಿಸಿದ್ದಾರೆ. ಕನ್ನಡ ಆ್ಯಪ್‌ ‘ಪ್ರಗುಣಿ’ಯಲ್ಲಿ ಈಗಾಗಲೇ ಕಿರು ಚಿತ್ರೋತ್ಸವ ನಡೆದಿದ್ದು, ಅಲ್ಲಿಯೂ ಈ ನಾಟಕ ತೆರೆ ಕಾಣಲಿದೆ. 18 ನಿಮಿಷಗಳ ಕಾಲ ಒಟಿಟಿಯಲ್ಲಿ ನಾಟಕ ಪ್ರದರ್ಶಿಸಲು ಕಲಾವಿದರು 15 ತಾಸು ಚಿತ್ರೀಕರಣ ಮಾಡಿದ್ದಾರೆ. ಇದಕ್ಕೆ ಒಂದೂವರೆ ತಿಂಗಳು ತಯಾರಿ ನಡೆದಿದೆ.

ಸಾಕಷ್ಟು ವಿದ್ಯಾರ್ಥಿಗಳಿಗೆ ಒಂದು ನಾಟಕ ಹೇಗೆ ರಚನೆಯಾಗುತ್ತದೆ ಎನ್ನುವ ಕಲ್ಪನೆಯೇ ಇಲ್ಲ. ಹೀಗಾಗಿ ಸರದೇಶಪಾಂಡೆ ಅವರು ನಾಟಕದಲ್ಲಿ ನಿರೂಪಕನ ಕೆಲಸ ಮಾಡಿ ನಾಟಕ ರಚನೆಯ ವಿವಿಧ ಮಗ್ಗುಲುಗಳ ಸಮಗ್ರ ಪರಿಚಯ ಮಾಡಿಕೊಡುತ್ತಾರೆ. ಚಂದ್ರಶೇಖರ ಕಂಬಾರರು ಕಾಣಿಸಿಕೊಳ್ಳುತ್ತಾರೆ. ನೋಡುಗರಿಗೆ ನಿರೂಪಕನ ಕೆಲಸದಿಂದ ಅಭಿನಯ, ಕಲಾವಿದರು, ಬೆಳಕಿನ ವ್ಯವಸ್ಥೆ, ತಂತ್ರಜ್ಞಾನದ ಬಳಕೆ, ಹಾಡು, ಸಂಗೀತ, ಧ್ವನಿ ಹೀಗೆ ಎಲ್ಲ ಸ್ತರಗಳ ಪರಿಚಯವಾಗುತ್ತದೆ. ತಮಿಳುನಾಡು ಮೂಲದ ನಾವೆಲ್ಲಿ ಲಿಗ್‌ನೆಟ್‌ ಕಾರ್ಪೊರೇಷನ್‌ ಈ ಕಾರ್ಯಕ್ಕೆ ಕೈ ಜೋಡಿಸಿದೆ.


ಹುಬ್ಬಳ್ಳಿಯ ಗುರು ಇನ್‌ ಸ್ಟಿಟ್ಯೂಟ್‌ , ಅದಿರಂಗ ಥೇಟರ್ಸ್‌ ವತಿಯಿಂದ ‘ಬೆಪ್ಪು ತಕಡಿ ಬೋಳೆ ಶಂಕರ’ ಶನಿವಾರ ನಾಟಕ ಪ್ರದರ್ಶನ ನೀಡಿದರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌

ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಕಲಾವಿದರು ಶಾಲೆಗೆ ಬಂದು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಈಗ ಮನೆಯಂಗಳಕ್ಕೆ ಒಟಿಟಿ ಮೂಲಕ ಮಕ್ಕಳ ಪಠ್ಯ ಆಧರಿತ ನಾಟಕಗಳು ಪ್ರದರ್ಶನವಾಗಲಿವೆ. ‘ಬೆಪ್ಪುತಕ್ಕಡಿ ಬೋಳೆಶಂಕರ’ ಯಶಸ್ಸು ಕಂಡರೆ ದ್ವಿತೀಯ ಪಿಯುಸಿಗೆ ಪಠ್ಯವಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡರ ಆನೆ’ ಕೂಡ ರಂಗ ಕಲಾವಿದರಿಂದ ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದೆ.

ಸಿನಿಮಾಗಳಲ್ಲಿ ಒಬ್ಬ ನಾಯಕ ಹತ್ತಾರು ಜನ ವಿಲನ್‌ಗಳನ್ನು ಒಟ್ಟಿಗೆ ಹೊಡೆಯುವ ದೃಶ್ಯಗಳನ್ನು ನೋಡಿ ಜನರಿಗೆ ಸಾಕಾಗಿದೆ. ಒಂದು ಘಟನೆಯನ್ನು ದಿನಪೂರ್ತಿ ತೋರಿಸುವ ಧಾರಾವಾಹಿಗಳ ಗೋಜಿನಿಂದಲೂ ಬೇಸರ ಮೂಡಿದೆ. ಹೀಗಾಗಿ ರಂಗಭೂಮಿಯ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿ‌ಗುತ್ತದೆ ಎನ್ನುವ ನಿರೀಕ್ಷೆ ಸರದೇಶಪಾಂಡೆ ಅವರದ್ದು. ಎಲ್ಲಕ್ಕಿಂತ ಹೆಚ್ಚಾಗಿ ವೇದಿಕೆ ಮೇಲೆ ಒಂದು ನಾಟಕ ಪ್ರದರ್ಶಿಸಿದರೆ ಗರಿಷ್ಠ 100ರಿಂದ 200 ಜನ ನೋಡಬಹುದು. ನವಮಾಧ್ಯಮದ ಮೂಲಕ ತೆರೆ ಕಂಡರೆ ಒಂದೇ ದಿನಕ್ಕೆ ಸಾವಿರಾರು ಪ್ರೇಕ್ಷಕರನ್ನು ತಲುಪಬಹುದು ಎನ್ನುವುದು ಅವರ ಆಶಯ.

ಸರದೇಶಪಾಂಡೆ ತಾವು ನಿರ್ಮಿಸಿರುವ ಥಿಯೇಟರ್‌ನಲ್ಲಿ ‘ಆದಿರಂಗ ಕ್ಲಬ್‌’ ಮಾಡುವ ಉದ್ದೇಶ ಹೊಂದಿದ್ದು ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ತಿಂಗಳಿಗೆ ಒಂದು ರಂಗಭೂಮಿಗೆ ಸಂಬಂಧಿಸಿದ ಲೈವ್ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದಾರೆ. ರಂಗಭೂಮಿ, ಸಿನಿಮಾ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ದೊಡ್ಡ ಗ್ರಂಥಾಲಯ ನಿರ್ಮಿಸುವ, ಅಭಿನಯದ ಕೋರ್ಸ್‌ಗಳನ್ನು ಹೇಳಿಕೊಡುವ ಗುರಿ ಹಾಕಿಕೊಂಡಿದ್ದಾರೆ.

ಹೊಸ ಅವಕಾಶಗಳ ಪ್ರಯತ್ನದಲ್ಲಿರುವ ಅವರು ಯಶಸ್ಸು ಕಂಡರೆ ಕನ್ನಡ ಒಟಿಟಿ ವೇದಿಕೆಯಲ್ಲಿ ಇನ್ನಷ್ಟು ನಾಟಕಗಳು ಕಾಣಿಸಿಕೊಳ್ಳಲಿವೆ. ಆಗ ಸಾಂಪ್ರದಾಯಿಕತೆಯ ‘ಅಂಕದ ಪರದೆ’ ಸರಿಸಿ ನವಮಾಧ್ಯಮದ ಮೂಲಕ ರಂಗಭೂಮಿ ಜನರಿಗೆ ಹತ್ತಿರವಾಗಲು ಸಹ ಅನುಕೂಲವಾಗುತ್ತದೆ.

ಪ್ರಾಯೋಜಕರಿದ್ದರೆ ಎಲ್ಲ ಪಠ್ಯಕ್ರಮ ರಂಗಭೂಮಿಗೆ
ನಾವೆಲ್ಲಿ ಲಿಗ್‌ನೆಟ್‌ ಕಾರ್ಪೊರೇಷನ್ ಸಂಸ್ಥೆಯು ಬುಡಕಟ್ಟು ಮತ್ತು ಜನಪದ ಕಲೆಗಳ ಉಳಿಕೆ ಹಾಗೂ ಬೆಳವಣಿಗೆಗಾಗಿ ದೇಣಿಗೆ ನೀಡುತ್ತದೆ. ಈ ಜನಪದ ಮೂಲದ ನಾಟಕ ಪ್ರಸ್ತುತಿಗೆ ಅವರು ಸಹಾಯ ಮಾಡಿದ್ದಾರೆ. ನಾಟಕವು ಹೆಚ್ಚು ಜನರಿಗೆ ತಲುಪಿದರೆ, ಪ್ರಾಯೋಜಕರು ಮುಂದೆ ಬಂದರೆ 10,11 ಹಾಗೂ 12ನೇ ತರಗತಿಯ ಪಠ್ಯದಲ್ಲಿನ ನಾಟಕಗಳನ್ನು ರಂಗರೂಪಕ್ಕೆ ಇಳಿಸಲು ಸಿದ್ಧರಿದ್ದೇವೆ.


ಯಶವಂತ ಸರದೇಶಪಾಂಡೆ

ಇದೊಂದು ಬಗೆಯಲ್ಲಿ ರಂಗಭೂಮಿಯ ಮೂಲಕ ಶಿಕ್ಷಣ ನೀಡಿದಂತೆ ಹಾಗೂ ರಂಗಭೂಮಿಯ ಶಿಕ್ಷಣ ನೀಡಿದಂತೆಯೂ ಆಗುತ್ತದೆ. ಪ್ರಾಯೋಜಕರು ಬೇಕು. ಶಿಕ್ಷಣ ಇಲಾಖೆಯವರೂ ಈ ಪರ್ಯಾಯ ವೇದಿಕೆ ಬಳಸುವತ್ತ ಗಮನಹರಿಸಬೇಕು ಎನ್ನುತ್ತಾರೆ ಯಶವಂತ ಸರದೇಶಪಾಂಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು