ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ: ಅಣ್ಣನ ನೆನಪು ಸಾಕ್ಷ್ಯ ನಾಟಕ ಇಂದು

Published 15 ಜೂನ್ 2024, 0:10 IST
Last Updated 15 ಜೂನ್ 2024, 0:10 IST
ಅಕ್ಷರ ಗಾತ್ರ

ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನಗಳನ್ನು ಕಂಡಿದ್ದು , ಜನಮೆಚ್ಚುಗೆ ಪಡೆಯುವುದರ ಜೊತೆಗೆ ಸಾಹಿತ್ಯಾಸಕ್ತರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರವರ ಥಿಯೇಟರ್‌ ಪ್ರಸ್ತುತ ಪಡಿಸುತ್ತಿರುವ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಜೂನ್‌ 15ರಂದು ಸಂಜೆ 7ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಅವರ ಜೀವನದ ಹಲವು ಮಹತ್ವದ ಅಧ್ಯಾಯಗಳು, ಒಂದರ್ಥದಲ್ಲಿ ತೇಜಸ್ವಿ ಅವರು ಹುಟ್ಟಿದಲ್ಲಿನಿಂದ ಇಲ್ಲಿವರೆಗಿನ ಕಥೆಯೂ ಹೌದು. ಹಾಗೆಯೇ ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೂ ಹೌದು. ಕುವೆಂಪು ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಹೌದು.

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ತಂದೆ ಕುವೆಂಪು ಅವರನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ‘ಅಣ್ಣನ ನೆನಪು’ (1996) ಕೃತಿಯಲ್ಲಿ ಸಂಗ್ರಹಗೊಂಡಿದೆ. ಕುವೆಂಪು ಅವರನ್ನು ಒಬ್ಬ ತಂದೆಯಾಗಿ, ಒಬ್ಬ ಮನುಷ್ಯನಾಗಿ ಚಿತ್ರಿಸಿ ಅಪರೂಪದ ಕೃತಿಯನ್ನು ತೇಜಸ್ವಿ ಬರೆದಿದ್ದಾರೆ.

ಈ ಕೃತಿಯಲ್ಲಿ ಬರುವ ಪ್ರತಿಯೊಂದು ಅಧ್ಯಾಯವೂ ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪು ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ರಾಷ್ಟ್ರಕವಿ ಕುವೆಂಪು ಅವರಂಥ ಅದ್ಭುತ ಸಾಹಿತಿಯ ಮಗನಾಗಿಯೂ ತೇಜಸ್ವಿಯವರು ತಂದೆಯ ಸಾಹಿತ್ಯದ ನೆರಳಿನಿಂದ ದೂರ ಸಾಗಿ ತಮ್ಮದೇ ಆದ ಪ್ರತ್ಯೇಕ ಶೈಲಿಯಿಂದ, ವೈವಿಧ್ಯಮಯ ಬರಹಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದವರು.

‘ಅಣ್ಣನ ನೆನಪು’ ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಯೋಚನೆ ತೇಜಸ್ವಿಯವರಂತೆಯೇ ನಮಗೂ ಕಾಡುತ್ತದೆ. ಅದು ಎಲ್ಲದರ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ. ಎಲ್ಲೂ ತಂದೆಯ ಗುಣಗಾನ ಮಾಡದೇ, ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ತೇಜಸ್ವಿ ಕಟ್ಟಿಕೊಡುತ್ತಾರೆ. ಕುವೆಂಪು ಅವರ ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ದತೆ, ವೈಜ್ಞಾನಿಕ ಮನೋಭಾವ, ನಿಷ್ಠುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ, ನಂತರ ಆ ಕಾಲದ ಸಾಹಿತ್ಯಕ ವಿಪ್ಲವಗಳನ್ನು ವಿವರಿಸುವಾಗ ಗಂಭೀರವಾದ ಭಾಷಾ ಪ್ರಯೋಗಕ್ಕೆ ಇಳಿಯುತ್ತಾರೆ.

ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪು ಅವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ. 

ಈ ಕೃತಿ ಸಾಕ್ಷ್ಯ ನಾಟಕದ ಮೂಲಕ ವೀಕ್ಷಕರ ಮುಂದೆ ಬಂದಿದೆ. ಹನು ರಾಮಸಂಜೀವ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಕರಣಂ ಪವನ್‌ ಪ್ರಸಾದ್‌ ರಂಗರೂಪ ನೀಡಿದ್ದಾರೆ. ಅಕ್ಷಯ್‌ ಭೋಂಸ್ಲೆ ಸಂಗೀತ, ಚೈತ್ರಾ ಪ್ರವೀಣ್‌ ಸಂಗೀತ ನಿರ್ವಹಣೆ, ಸೂರ್ಯಸಾಧಿ ಬೆಳಕು, ಹರ್ಷ ಕಾವೇರಿಪುರ ಅವರ ರೇಖಾಚಿತ್ರ, ಮಾಲತೇಶ್ ಬಡಿಗೇರ್‌ ಅವರ ಪ್ರಸಾಧನ ಇರಲಿದೆ.

ಮಾಹಿತಿಗೆ 9686869676, ವೆಬ್‌ಸೈಟ್‌: www.pravaratheatre.org ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT